More

    ಸುಳ್ಳು ದಾಖಲೆ ನೀಡಿ ಗುತ್ತಲ ಗ್ರಾಪಂಗೆ ಸ್ಪರ್ಧಿಸಿದ್ದವಳಿಗೆ ಏಳು ವರ್ಷ ಜೈಲು ಶಿಕ್ಷೆ; ಖೊಟ್ಟಿ ಜಾತಿ ಪ್ರಮಾಣಪತ್ರ ನೀಡಿದ ಹಿನ್ನೆಲೆ; 37 ಸಾವಿರ ರೂ. ದಂಡ ವಿಧಿಸಿದ ಕೋರ್ಟ್

    ಹಾವೇರಿ: ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದು ಗುತ್ತಲ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ವಿಜೇತಳಾಗಿದ್ದ ಮುಕ್ತಾಬಾಯಿ ರಂಗಪ್ಪ ಬೀಸೆ ಎಂಬ ಮಹಿಳೆ ಹಾಗೂ ಆಕೆಗೆ ಸಹಾಯ ಮಾಡಿದ್ದ ಭರಡಿ ಗ್ರಾಮದ ಮಾರುತಿ ಹನುಮಂತಪ್ಪ ಕಿಳ್ಳಿಕ್ಯಾತರ ಎಂಬುವರಿಗೆ ಏಳು ವರ್ಷ ಕಾರಾಗೃಹ ಶಿಕ್ಷೆ ಹಾಗೂ 37 ಸಾವಿರ ರೂ. ದಂಡ ವಿಧಿಸಿ ಇಲ್ಲಿನ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
    ಗುತ್ತಲ ಗ್ರಾಮದ ಮುಕ್ತಾಬಾಯಿ ರಂಗಪ್ಪ ಬೀಸೆ ಹಿಂದೂ ಗೊಂದಳಿ ಪ್ರವರ್ಗ-01ಕ್ಕೆ ಸೇರಿದ್ದರು. ಆದರೆ, ಕಳಕಪ್ಪ ತಳವಾರ ಹಾಗೂ ಮಾರುತಿ ಹನುಮಂತಪ್ಪ ಕಿಳ್ಳಿಕ್ಯಾತರ ಎಂಬುವರ ಸಹಕಾರ ಪಡೆದು, ಸುಳ್ಳು ವ್ಯಾಸಂಗ ಪ್ರಮಾಣಪತ್ರ ಹಾಗೂ ಇತರೆ ದಾಖಲಾತಿಗಳನ್ನು ಸೃಷ್ಟಿಸಿದ್ದರು. ಹಾವೇರಿ ತಹಸೀಲ್ದಾರ್ ಕಚೇರಿಗೆ ಸುಳ್ಳು ದಾಖಲೆ ಸಲ್ಲಿಸಿ, ಪರಿಶಿಷ್ಟ ಜಾತಿಯ ಪ್ರಮಾಣಪತ್ರ ಪಡೆದಿದ್ದರು.
    2010ರಲ್ಲಿ ಗುತ್ತಲ ಗ್ರಾಮ ಪಂಚಾಯಿತಿಯ ವಾರ್ಡ್ ನಂ.10ರ ಪರಿಶಿಷ್ಟ ಜಾತಿಗೆ ಮೀಸಲಿದ್ದ ಸ್ಥಾನಕ್ಕೆ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಈ ಕುರಿತು ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ತನಿಖಾಧಿಕಾರಿ ಬೆಳಗಾವಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪಿಐ ಎ.ಬಿ.ಹಪ್ಪಳಿ ಪ್ರಕರಣದ ತನಿಖೆ ನಡೆಸಿ, ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
    ವಿಚಾರಣೆ ನಡೆಸಿದ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಿ.ಎಲ್.ಲಕ್ಷ್ಮೀನಾರಾಯಣ ಅವರು, ಅಪರಾಧಿಗಳಿಗೆ ಶಿಕ್ಷೆ ಹಾಗೂ ದಂಡ ವಿಧಿಸಿ ಬುಧವಾರ ತೀರ್ಪು ನೀಡಿದ್ದಾರೆ.
    ಸರ್ಕಾರದ ಪರವಾಗಿ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕಿ ಸರೋಜಾ ಕೂಡಲಗಿಮಠ ವಾದ ಮಂಡಿಸಿದ್ದರು. ಗ್ರಾಪಂ ಸದಸ್ಯತ್ವ ರದ್ದಾಗಿತ್ತು
    2010ರಲ್ಲಿ ಗ್ರಾಪಂ ಚುನಾವಣೆಯಲ್ಲಿ ಮುಕ್ತಾಬಾಯಿ ವಿಜೇತಳಾಗಿದ್ದರೂ ಆಕೆಯ ವಿರುದ್ಧ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಅಂದಿನ ತಹಸೀಲ್ದಾರ್ ಆಕೆಯ ಸದಸ್ಯತ್ವ ಸ್ಥಾನವನ್ನು ರದ್ದು ಮಾಡಿದ್ದರು. ಎರಡನೇ ಆರೋಪಿ ನೂಕಾಪುರ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಕಳಕಪ್ಪ ತಳವಾರ ಮೃತಪಟ್ಟಿದ್ದಾರೆ ಎಂದು ಸರ್ಕಾರಿ ಅಭಿಯೋಜಕಿ ಸರೋಜಾ ಕೂಡಲಗಿಮಠ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts