More

  ಸರ್ವಜ್ಞ ಪ್ರಾಧಿಕಾರದ ಅಭಿವೃದ್ಧಿಗೆ ಒತ್ತಾಯ

  ರಟ್ಟಿಹಳ್ಳಿ: ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿ ಮಾಸೂರು ಗ್ರಾಪಂ ಸದಸ್ಯರು ಸರ್ವಜ್ಞ ಹೋರಾಟ ಸಮಿತಿ ಮೂಲಕ ಪಟ್ಟಣದಲ್ಲಿ ತಹಸೀಲ್ದಾರ್ ಕೆ. ಗುರುಬಸವರಾಜ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

  ಗ್ರಾಪಂ ಅಧ್ಯಕ್ಷೆ ಪ್ರಮೇಳಾ ನಡುವಿನಮನಿ ಮಾತನಾಡಿ, ಕನ್ನಡ ನಾಡು ಕಂಡಂತಹ ಮಹಾನ್ ಮಾನವತಾವಾದಿ, ತ್ರಿಪದಿ ಬ್ರಹ್ಮ ಸರ್ವಜ್ಞರು ವಚನಗಲ ಮೂಲಕ ಸಮಾಜಕ್ಕೆ ಮತ್ತು ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಮಾಸೂರಿನಲ್ಲಿ 1975ರಲ್ಲಿ ಸರ್ವಜ್ಞ ಕವಿಯ 4ನೇ ಶತಮಾನತೋತ್ಸವವನ್ನು ಕರ್ನಾಟಕ ಸರ್ಕಾರ ಅದ್ದೂರಿಯಾಗಿ ಆಚರಿಸಿದೆ. ಸರ್ವಜ್ಞರ ಪ್ರತಿಮೆಯನ್ನು ಇತ್ತೀಚೆಗೆ ಸ್ಥಾಪನೆ, ಐಕ್ಯ ಮಂಟಪಕ್ಕೆ ಗ್ರಾಮ ಪಂಚಾಯಿತಿ ಅನುದಾನದಿಂದ ತಾತ್ಕಾಲಿಕವಾಗಿ ಮೇಲ್ಛಾವಣಿ ನಿರ್ಮಿಸಿದ್ದನ್ನು ಬಿಟ್ಟರೆ ಯಾವುದೇ ಅಭಿವೃದ್ಧಿ ಕಾರ್ಯವಾಗಿಲ್ಲ. 2012ರಲ್ಲಿ ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರ ಘೋಷಣೆಯಾಗಿದೆ. ಈ ಪ್ರಾಧಿಕಾರ ಕೇವಲ ಘೋಷಣೆಗೆ ಸೀಮಿತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

  ಗ್ರಾಮಸ್ಥರಾದ ಮಲ್ಲೇಶಣ್ಣ ಗುತ್ತ್ಯಣ್ಣನವರ ಮಾತನಾಡಿ, ರಾಜ್ಯ ಸರ್ಕಾರ 50 ಕೋಟಿ ರೂಪಾಯಿ ವಿಶೇಷ ಅನುದಾನ ನೀಡಿ, ಮಾಸೂರಿನ ಸರ್ವಜ್ಞನ ಐಕ್ಯಸ್ಥಳದಲ್ಲಿ ಈಗಾಗಲೇ ಪ್ರಾಧಿಕಾರಿದಿಂದ ಖರೀದಿಸಿದ ಭೂಮಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸರ್ವಜ್ಞ ಐಕ್ಯಮಂಟಪ ನಿರ್ಮಿಸಬೇಕು. ಪ್ರಾಧಿಕಾರದ ಕೇಂದ್ರ ಕಚೇರಿ ಮಾಸೂರಿನಲ್ಲಿ ಸ್ಥಾಪಿಸಬೇಕು. ಪ್ರಾಧಿಕಾರಕ್ಕೆ ಬಿಡುಗಡೆಯಾಗುವ ಅನುದಾನದಲ್ಲಿ ಮಾಸೂರಿಗೆ ಹೆಚ್ಚಿನ ಅನುದಾನ ಮೀಸಲಿಡಬೇಕು ಎಂು ಒತ್ತಾಯಿಸಿದರು.

  ಶರಣರು, ಸಂತರು ನೆಲೆಸಿದ ಕ್ಷೇತ್ರಗಳನ್ನು ಕೇಂದ್ರ ಸ್ಥಾನವಾಗಿರಿಸಿ, ಅಭಿವೃದ್ಧಿ ಮಾಡಬೇಕೆ ವಿನಃ, ಬೇರೆಡೆ ಅಲ್ಲ. ಕೂಡಲಸಂಗಮ, ಅಕ್ಕಮಹಾದೇವಿಯ ಉಡುತಡಿ, ಕಾಗಿನೆಲೆ, ಕಿತ್ತೂರು ಸೇರಿದಂತೆ ವಿವಿಧಡೆ ಅಭಿವೃದ್ಧಿ ಪ್ರಾಧಿಕಾರಗಳನ್ನು ಮಹನೀಯರ ಐಕ್ಯಸ್ಥಳವನ್ನೇ ಕೇಂದ್ರ ಸ್ಥಾನವನ್ನಾಗಿಸಿ ಅಭಿವೃದ್ಧಿಪಡಿಸಲಾಗಿದೆ. ಈ ಮಾದರಿಯಲ್ಲಿ ಜಿಲ್ಲೆಯ ಸರ್ವಜ್ಞನ ನೆಲೆಯಾದ ಮಾಸೂರು ಗ್ರಾಮ ಅಭಿವೃದ್ಧಿಪಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

  ಬೇಡಿಕೆಗಳನ್ನು ಸರ್ಕಾರ ಫೆ. 15ರೊಳಗೆ ಈಡೇರಿಸಬೇಕು. ಇಲ್ಲವಾದರೆ ಮುಂಬರುವ ಲೋಕಸಬಾ ಚುನಾವಣೆ ಬಹಿಷ್ಕಾರ ಮಾಡಲಾಗುವುದು. ಮಾಸೂರು ಗ್ರಾಪಂನ 26 ಸದಸ್ಯರು ಸಾಮೂಹಿಕವಾಗಿ ರಾಜೀನಾಮೆ ನೀಡಿ, ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

  ಗ್ರಾಪಂ ಉಪಾಧ್ಯಕ್ಷ ರೇಣುಕಪ್ಪ ಸಜ್ಜನಶೆಟ್ಟರ, ಸದಸ್ಯರಾದ ಕಾವ್ಯ ಹಿತ್ತಲಮನಿ, ಅಬ್ದುಲರಶೀದ ಕರೀಂಸಾಬ ಕುಪ್ಪೇಲೂರ, ನಾರಾಯ ಗಾಯಕವಾಡ, ಬಸವರಾಜ ಬುಡ್ಡಣ್ಣನವರ, ಪಾರ್ವತಿ ಅಸುಂಡಿ, ರವಿಂದ್ರ ಗೌರಕ್ಕನವರ, ಗಿರೀಶ ಪಾಟೀಲ, ಪೂರ್ಣಿಮಾ ಹೊನ್ನಾಳಿ, ರಾಜು ಸುಣಗಾರ, ಸಾವಿತ್ರಾ ಹಿರೇಮಠ ಹಾಗೂ ಇತರ ಸದಸ್ಯರು ಮತ್ತು ಗ್ರಾಮಸ್ಥರಾದ ಸುರೇಶ ಬಡಗೇರ, ನಾಗನಗೌಡ ಪಾಟೀಲ, ಶಂಕ್ರಗೌಡ ಸುತ್ತಕೋಟಿ, ಈರನಗೌಡ ಬೇವಿನಮರದ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts