ನೀವ್ಯಾಕೆ 'ಪವಿತ್ರ ರಿಶ್ತಾ 2' ಮಾಡಬಾರದು? ಏಕ್ತಾಗೆ ಅಂಕಿತಾ ಪ್ರಶ್ನೆ ...

Ankitha - Final
Published on

ಕಳೆದ ತಿಂಗಳು ಆತ್ಮಹತ್ಯೆಯಿಂದ ನಿಧನರಾದ ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ಗೆ ದೊಡ್ಡ ಬ್ರೇಕ್​ ನೀಡಿದ್ದು ಕಿರುತೆರೆಯಲ್ಲಿ ಪ್ರಸಾರವಾದ 'ಪವಿತ್ರ ರಿಶ್ತಾ' ಧಾರಾವಾಹಿ. ಈ ಧಾರಾವಾಹಿಯಿಂದಲೇ ಸುಶಾಂತ್​ ಅವರನ್ನು ನಾಲ್ಕು ಜನ ಗುರುತಿಸಿದ್ದು ಮತ್ತು ಈ ಧಾರಾವಾಹಿಯ ಜನಪ್ರಿಯತೆಯಿಂದಲೇ ಅವರು ಕಿರುತೆರೆಯಿಂದ ಹಿರಿತೆರೆಗೆ ಜಂಪ್​ ಮಾಡಿದ್ದು.

ಈಗ ಸುಶಾಂತ್​ ಬದುಕುಳಿದಿಲ್ಲ. ಆದರೆ, ಆ ಜನಪ್ರಿಯ ಧಾರಾವಾಹಿಯ ಎರಡನೇ ಸೀಸನ್​ ನಿರ್ಮಿಸುವುದರ ಮೂಲಕ ಯಾಕೆ ಸುಶಾಂತ್​ಗೆ ಗೌರವ ಸೂಚಿಸಬಾರದು ಎಂದು ನಟಿ ಅಂಕಿತಾ ಲೋಖಂಡೆ, ಆ ಧಾರಾವಾಹಿಯ ನಿರ್ಮಾಪಕಿ ಏಕ್ತಾ ಕಪೂರ್​ ಅವರನ್ನು ಕೇಳಿದ್ದಾರೆ.

ಅಂಕಿತಾ ಲೋಖಂಡೆ, ಸುಶಾಂತ್ ಜತೆಗೆ 'ಪವಿತ್ರ ರಿಶ್ತಾ' ಧಾರಾವಾಹಿಯಲ್ಲಿ ಜತೆಯಾಗಿ ನಟಿಸಿದ್ದರು. ಅಷ್ಟೇ ಅಲ್ಲ, ಅವರು ಸುಶಾಂತ್​ರ ಮಾಜಿ ಪ್ರೇಯಸಿ ಎಂದು ಗುರುತಿಸಿಕೊಂಡಿದ್ದರು. ಈಗ ಸುಶಾಂತ್​ ಇಲ್ಲ. ಅವರ ನೆನಪಿನಲ್ಲಿ, ಅವರಿಗೆ ಗೌರವ ಸೂಚಿಸುವುದಕ್ಕೆ ಯಾಕೆ ಸೀಸನ್​ 2 ಶುರು ಮಾಡಬಾರದು ಎಂದು ಕೇಳಿದ್ದಾರೆ.

'ಆ ಧಾರಾವಾಹಿ ಸುಶಾಂತ್​ ಅವರ ಹೃದಯಕ್ಕೆ ಬಹಳ ಹತ್ತಿರವಾಗಿತ್ತು ಮತ್ತು ಅವರಿಗೆ ದೊಡ್ಡ ಬ್ರೇಕ್​ ನೀಡಿತ್ತು. ಅವರ ನೆನಪಿನಲ್ಲಿ 'ಪವಿತ್ರ ರಿಶ್ತಾ 2' ಮಾಡಿ, ಅದನ್ನು ಅವರಿಗೆ ಅರ್ಪಿಸಿ' ಎಂದು ಅಂಕಿತಾ, ಏಕ್ತಾಗೆ ಸಲಹೆ ನೀಡಿದ್ದಾರೆ.

ಈ ಸಲಹೆಯನ್ನು ಸ್ವೀಕರಿಸಿರುವ ಏಕ್ತಾ, ಇದೊಂದು ಒಳ್ಳೆಯ ಐಡಿಯಾ ಆಗಿದ್ದು, ತಮ್ಮ ಬರಹಗಾರರ ತಂಡದ ಜತೆಗೆ ಚರ್ಚಿಸಿ, ಕಾರ್ಯರೂಪಕ್ಕೆ ತರುವುದಾಗಿ ಅವರು ಹೇಳಿದ್ದಾರೆ.

ಈ ಹಿಂದೆ ಸಹ, ಏಕ್ತಾ ಅವರು ತಮ್ಮ ಹಳೆಯ ಜನಪ್ರಿಯ ಧಾರಾವಾಹಿಗಳ ಸೀಕ್ವೆಲ್​ಗಳನ್ನು ನಿರ್ಮಿಸಿದ್ದರು. 'ಹಮ್​ ಪಾಂಚ್​', 'ಕಸೌತಿ ಜಿಂದಗೀ ಕೇ', 'ನಾಗಿನ್​' ಮುಂತಾದ ಧಾರಾವಾಹಿಗಳ ಸೀಕ್ವೆಲ್​ ನಿರ್ಮಾಣ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಅದೇ ರೀತಿ, ಮುಂದಿನ ದಿನಗಳಲ್ಲಿ 'ಪವಿತ್ರ ರಿಶ್ತಾ' ಧಾರಾವಾಹಿಯ ಸೀಕ್ವೆಲ್​ ಬಂದರೂ ಅದರಲ್ಲಿ ಆಶ್ಚರ್ಯವೇನಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net