More

    ಅನಿಸಿಕೆ| ಪೊಲೀಸರಿಗೆ ಮಾರಕವಾದ ಕರೋನಾ ಸೋಂಕು

    ಅನಿಸಿಕೆ| ಪೊಲೀಸರಿಗೆ ಮಾರಕವಾದ ಕರೋನಾ ಸೋಂಕುದೇಶದಲ್ಲಿ 15 ಸಾವಿರಕ್ಕಿಂತಲೂ ಹೆಚ್ಚು ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಈಗಾಗಲೇ ಕರೊನಾ ಸೋಂಕು ತಗುಲಿದ್ದು, ಅವರಲ್ಲಿ 700 ಜನರು ಸಾವನ್ನಪ್ಪಿರುವುದು ಕೇವಲ ಪೊಲೀಸ್ ಇಲಾಖೆಗಷ್ಟೇ ಅಲ್ಲ, ಇಡೀ ಸಮಾಜಕ್ಕೇ ಆತಂಕ ತರುವ ವಿಷಯವಾಗಿದೆ. ಕರೊನಾ ಹೋರಾಟದಲ್ಲಿ ಮೊದಲ ಹಂತದ ವಾರಿಯರ್​ಗಳಾಗಿರುವ ಪೊಲೀಸರಿಗೆ ಸೋಂಕು ತಗುಲಿ ಆಸ್ಪತ್ರೆಗಳಲ್ಲಿ ಹಾಗೂ ಕ್ವಾರಂಟೈನ್​ಗಳಲ್ಲಿ ಇರಲೇಬೇಕಾದ ಕಾರಣ ಕಾನೂನು ಸುವ್ಯವಸ್ಥೆ, ಅಪರಾಧ ನಿಯಂತ್ರಣ ಮತ್ತಿತರ ಕೆಲಸಕಾರ್ಯಗಳಿಗೆ ಧಕ್ಕೆ ಉಂಟಾಗುತ್ತಿರುವುದಲ್ಲದೆ ಸಿಬ್ಬಂದಿಯಲ್ಲಿ ಭಯದ ವಾತಾವರಣ ಮೂಡಿದೆ.

    ಪೊಲೀಸರು ಸದಾಕಾಲವೂ ಸಾರ್ವಜನಿಕರ ಜೊತೆ ಸಂಪರ್ಕದಲ್ಲಿ ಇರಲೇಬೇಕಾದ್ದರಿಂದ ಅವರು ‘ದೈಹಿಕ ಅಂತರ’ವನ್ನು ಕಾಯ್ದುಕೊಳ್ಳುವುದು ಬಹುತೇಕ ಅಸಾಧ್ಯ. ಅಪರಾಧಿಗಳ ಬೆನ್ನಟ್ಟುವಾಗ, ಬಂಧಿಸುವಾಗ, ನ್ಯಾಯಾಲಯಗಳಿಗೆ ಕರೆದುಕೊಂಡು ಹೋಗುವಾಗ ದೈಹಿಕ ಸಂಪರ್ಕವು ಅನಿವಾರ್ಯವಾಗುತ್ತದೆ. ಸಂಚಾರ ವ್ಯವಸ್ಥೆ ಪಾಲನೆ ಮಾಡುವ ಸಮಯದಲ್ಲಿಯೂ, ಹಾಗೂ ಅಪರಾಧ ತಪ್ಪಿಸಲು ಬೀಟ್ ಹೋಗುವಾಗಲೂ ಪೊಲೀಸರು ಸಾರ್ವಜನಿಕರ ಸನಿಹಕ್ಕೆ ಬರಲೇಬೇಕು. ಹೀಗಾಗಿ ವೈದ್ಯರಂತೆಯೇ ಪೊಲೀಸರಿಗೆ ಕರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚು.

    ಇಡೀ ದೇಶವೇ ಲಾಕ್​ಡೌನ್ ಆಗಿದ್ದಾಗ ಪೊಲೀಸರಿಗೆ ಹೆಚ್ಚಿನ ಸಮಸ್ಯೆ ಇರಲಿಲ್ಲ. ಏಕೆಂದರೆ ರಸ್ತೆಯಲ್ಲಿ ಜನರಿರಲಿಲ್ಲ, ಟ್ರಾಫಿಕ್ ಇರಲಿಲ್ಲ. ಒಬ್ಬರೋ ಇಬ್ಬರೋ ಹೊರಗೆ ಬಂದರೆ ಲಾಠಿಯ ರುಚಿಗೆ ಹೆದರಿ ಪೊಲೀಸರ ಸನಿಹಕ್ಕೇ ಬಾರದೇ ಓಡುತ್ತಿದ್ದರು. ಹೀಗಾಗಿ ದೇಶದ ನಗರಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದಾಗ ಅಪರಾಧಗಳ ಪ್ರಮಾಣ ಶೇಕಡ 60 ರಿಂದ 90ರಷ್ಟು ಕಡಿಮೆಯಾಯಿತು. ಪತ್ತೆಯ ಕೆಲಸವೂ ಹಗುರಾಗಿತ್ತು. ಆದ್ದರಿಂದ ಪೊಲೀಸರು ತಮ್ಮ ಕೆಲಸಗಳ ಜತೆಗೆ ಕರೊನಾ ವಾರಿಯರ್ಸ್ ಕಾರ್ಯಗಳನ್ನು ಸುಸೂತ್ರವಾಗಿ ನಿಭಾಯಿಸಲು ಸಾಧ್ಯವಾಯಿತು.

    ಆದರೆ ಲಾಕ್​ಡೌನ್ ತೆಗೆದನಂತರ ಅಪರಾಧಗಳ ಸಂಖ್ಯೆಯು ಕರೊನಾಗೆ ತುತ್ತಾಗುತ್ತಿರುವವರ ಸಂಖ್ಯೆಯಂತೆ ಮೇಲೇರುತ್ತಲೇ ಬರುತ್ತಿದೆ. ಈ ಕಾರಣದಿಂದ ಪೊಲೀಸರಿಗೂ ಮತ್ತು ಸಾರ್ವಜನಿಕರಿಗೂ ಉಂಟಾಗುವ ಸಂಪರ್ಕವೂ ಮೊದಲಿನ ಸ್ಥಿತಿಗೇ ಬಂದಿದೆ. ಅಪರಾಧಗಳನ್ನು ವರದಿ ಮಾಡಲು ಸಾರ್ವಜನಿಕರು ಪೊಲೀಸ್ ಠಾಣೆಗಳಿಗೆ ಬರತೊಡಗಿದ ಪರಿಣಾಮವಾಗಿ ಠಾಣೆಯ ಹಲವಾರು ಸಿಬ್ಬಂದಿಗೆ ಸೋಂಕು ತಗುಲಲಾರಂಭಿಸಿತು. ಇದಲ್ಲದೆ ಬೀಟ್​ಗೆ ಹೋಗುವಾಗ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಗಳನ್ನು ಹಿಡಿಯಲು ಹೋಗಿ ಕೆಲವು ಪೊಲೀಸರು ಸೋಂಕನ್ನು ತಗುಲಿಸಿಕೊಂಡರು.

    ಕಳ್ಳರು ಪೊಲೀಸರ ಹಿಡಿತಕ್ಕೆ ಬಾರದಿರಲು ಓಡಿಹೋಗುವಾಗ ಅವರನ್ನು ಬೆನ್ನಟ್ಟಿ ಹಿಡಿಯಬೇಕಾದ್ದು ಅನಿವಾರ್ಯ. ಒಂದು ವೇಳೆ ಅಂತಹವನು ಸೋಂಕಿತನಾಗಿದ್ದಲ್ಲಿ ಪೊಲೀಸರಿಗೆ ರೋಗ ತಗುಲುವುದು ನಿಶ್ಚಿತ. ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಕರೊನಾ ತಗುಲಿದ್ದ ಅಪರಾಧಿಯೊಬ್ಬ ತಾನು ದಾಖಲಾಗಿದ್ದ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಓಡಿಹೋಗುವಾಗ ತನ್ನನ್ನು ಬೆನ್ನಟ್ಟಿದ ಕೆಲವು ಪೊಲೀಸರ ಮೇಲೆ ಉಗುಳಿದ ಎನ್ನಲಾಗಿದೆ. ಕಡೆಗೂ ಅವನನ್ನು ಮರುಬಂಧಿಸಿದಾಗ 13 ಜನ ಪೊಲೀಸರು ಕ್ವಾರಂಟೈನ್​ಗೆ ಹೋಗಬೇಕಾಯಿತು.

    ಸಧ್ಯ ನಮ್ಮ ರಾಜ್ಯದಲ್ಲಿಯೇ 500ಕ್ಕೂ ಹೆಚ್ಚು ಪೊಲೀಸರು ಕ್ವಾರಂಟೈನ್​ನಲ್ಲಿದ್ದಾರೆ ಇಲ್ಲವೇ ಕರೊನಾದ ಸೋಂಕಿತರಾಗಿ ಆಸ್ಪತ್ರೆಯಲ್ಲಿದ್ದಾರೆ. ಈ ಕಾರಣದಿಂದಾಗಿ ದೈನಂದಿನ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಸಿಬ್ಬಂದಿ ಕೊರತೆ ಕಾಡುತ್ತಿದೆ. ಈಗಾಗಲೇ ದೇಶದಲ್ಲಿ ಐದು ಲಕ್ಷಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯ ಕೊರತೆಯಿದ್ದು ಈ ಸಂಖ್ಯೆಗೆ ಕರೊನಾಗೆ ತುತ್ತಾಗುತ್ತಿರುವ ಸಾವಿರಾರು ಸಂಖ್ಯೆಯ ಪೊಲೀಸರು ಸೇರುತ್ತಿರುವ ಕಾರಣ ಕರ್ತವ್ಯಕ್ಕೆ ಸಿಗುವ ಪೊಲೀಸರು ತೀರಾ ಕಡಿಮೆಯಾಗಿದ್ದಾರೆ.

    ಇಷ್ಟೇ ಸಾಲದಂತೆ ತಮಗೆ ಸೋಂಕು ತಗುಲಬಹುದು ಎನ್ನುವ ಭಯದಿಂದ ಬಹುತೇಕ ಪೊಲೀಸರು ಗಾಬರಿಗೊಂಡಿದ್ದಾರೆ. ಅವರು ರಸ್ತೆಗೆ ಇಳಿದು ತಮ್ಮ ಕರ್ತವ್ಯವನ್ನು ಪಾಲಿಸಲು ಹಿಂಜರಿಯುತ್ತಿದ್ದಾರೆ. ಕರ್ನಾಟಕದಲ್ಲಿ ಇಬ್ಬರು ಸಹಾಯಕ ಸಬ್ ಇನ್ಸ್​ಪೆಕ್ಟರ್​ಗಳು ಮತ್ತು ಹಲವಾರು ಕಾನ್ಸ್​ಟೇಬಲ್​ಗಳು ಕರೊನಾಗೆ ಬಲಿಯಾದ ನಂತರ ಪೊಲೀಸರಲ್ಲಿ ಆತಂಕ ಹೆಚ್ಚಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಹೆಡ್-ಕಾನ್ಸ್​ಟೇಬಲ್ ಒಬ್ಬರು ತಮಗೆ ಕರೊನಾ ಬಂದಿದೆ ಎಂದು ಖಿನ್ನರಾಗಿ ಆಸ್ಪತ್ರೆಗೆ ಹೋಗುವ ಹಾದಿಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಪೊಲೀಸರ ಸ್ಥೈರ್ಯದ ಕುಸಿಯುವಿಕೆಯ ಒಂದು ನಿದರ್ಶನ.

    ಇದನ್ನೂ ಓದಿ: ಗ್ರಾಪಂ ಚುನಾವಣೆ ಅಕ್ಟೋಬರ್​ನಲ್ಲಿ?

    ಪೊಲೀಸ್ ಹಿರಿಯ ಅಧಿಕಾರಿಗಳಿಗೆ ಎರಡು ಸಮಸ್ಯೆಗಳು ಎದುರಾಗಿವೆ. ತಮ್ಮ ಕೈ ಕೆಳಗಿನ ಸಿಬ್ಬಂದಿಯ ಸಂಖ್ಯೆ ಕಡಿಮೆ ಆಗುತ್ತಿರುವ ಕಾರಣ ದೈನಂದಿನ ಕರ್ತವ್ಯಗಳಿಗೆ ಪೊಲೀಸರು ಸಿಗದೇ ಕೆಲಸಕಾರ್ಯಗಳು ಕುಂಠಿತವಾಗುತ್ತಿವೆ. ಒಂದೊಮ್ಮೆ ಸಿಬ್ಬಂದಿ ಕರ್ತವ್ಯಕ್ಕೆ ಸಿಕ್ಕರೂ ಕರೊನಾದ ಹೆದರಿಕೆಯ ಕಾರಣ ಸೂಕ್ತ ರೀತಿಯಲ್ಲಿ ಅವರುಗಳು ತಮ್ಮ ಕರ್ತವ್ಯ ನಿಭಾಯಿಸುತ್ತಿಲ್ಲ. ಅವರನ್ನು ಹುರಿದುಂಬಿಸಿ ಕೆಲಸ ಮಾಡಿಸಲು ಹಿರಿಯ ಅಧಿಕಾರಿಗಳು ಹೆಣಗುತ್ತಿದ್ದಾರೆ.

    ಪೊಲೀಸ್ ಸಿಬ್ಬಂದಿಗೆ ಫೇಸ್ ಮಾಸ್ಕ್, ಸ್ಯಾನಿಟೈಸರ್ ಮುಂತಾದುವನ್ನು ನೀಡಿ ಪೊಲೀಸ್ ಠಾಣೆಗೆ ಜನರು ಬರುವುದನ್ನು ತಪ್ಪಿಸಲು ಠಾಣೆಯ ಹೊರಗೆ ಶಾಮಿಯಾನ ಹಾಕಿಸಲಾಗಿದೆ. ಐವತ್ತು ವರ್ಷ ದಾಟಿದ ಪೊಲೀಸರಿಗೆ ಸಾರ್ವಜನಿಕ ಸಂಪರ್ಕವನ್ನು ಕಡಿತಗೊಳಿಸಿ ಸಿಬ್ಬಂದಿಗೆ ಧೈರ್ಯ ತುಂಬುವ ಕೆಲಸ ನಡೆಯುತ್ತಿದೆ. ತಮಿಳುನಾಡು ಪೊಲೀಸರು ತಾವು ಬಂಧಿಸಿದ ಆರೋಪಿಗಳಿಗೆಂದೇ ವಿಶೇಷ ಬಂಧನ ಕೇಂದ್ರಗಳನ್ನು ಮಾಡಿದ್ದಾರೆ. ಇವೇನೇ ಮಾಡಿದರೂ ಪೊಲೀಸ್ ಸಿಬ್ಬಂದಿಗೆ ತಮ್ಮ ಮತ್ತು ಕುಟುಂಬದ ಆರೋಗ್ಯದ ಬಗ್ಗೆ ಆತಂಕ ಕಡಿಮೆಯಾಗಿಲ್ಲ.

    ಎರಡನೆಯದಾಗಿ ಏರುತ್ತಿರುವ ಅಪರಾಧಗಳನ್ನು ತಡೆಗಟ್ಟಲು ಮತ್ತು ಪತ್ತೆ ಮಾಡಲು ಹೆಚ್ಚಿನ ಪೊಲೀಸರ ಅವಶ್ಯಕತೆಯಿದೆ. ಜೊತೆಗೆ ಕರೊನಾಗೆ ಸಂಬಂಧಿಸಿದ ಕೆಲಸ ಕಾರ್ಯಗಳೂ ಏರುತ್ತಿವೆ. ಹೀಗಾಗಿ ಕೆಲಸದ ಒತ್ತಡವು ಹೆಚ್ಚಾಗಿದ್ದು ಯಾವ ಕರ್ತವ್ಯಕ್ಕೆ ಹೆಚ್ಚು ಗಮನ ಕೊಡಬೇಕು, ಎನ್ನುವುದೇ ಸಮಸ್ಯೆಯಾಗುತ್ತಿದೆ. ಲಾಕ್​ಡೌನ್/ಸೀಲ್​ಡೌನ್ ಕೆಲಸಗಳಿಗೂ ಸಿಬ್ಬಂದಿ ಸಿಗುತ್ತಿಲ್ಲ. ಸಾಮಾನ್ಯವಾಗಿ ಪೊಲೀಸರಿಗೆ ಕಾನೂನು ಸುವ್ಯವಸ್ಥೆ ಮತ್ತಿತರ ಕೆಲಸಗಳ ಒತ್ತಡವುಂಟಾದಾಗ ಹಾಗೂ ಸಿಬ್ಬಂದಿಯ ಕೊರತೆಯಾದಾಗ ಅಪರಾಧ ತಡೆ ಹಾಗೂ ಪತ್ತೆಗೆ ಸಂಬಂಧಿಸಿದ ಕೆಲಸಗಳು ಆದ್ಯತೆ ಕಳೆದುಕೊಳ್ಳುತ್ತವೆ.

    ಹೀಗಾಗಿ ಸಾರ್ವಜನಿಕರು ಕಳ್ಳತನ ಮುಂತಾದ ಸ್ವತ್ತಿನ ಅಪರಾಧಗಳ ತಡೆಯಲ್ಲಿ ‘ಆತ್ಮನಿರ್ಭರ’ರಾಗಬೇಕಾದ ಪರಿಸ್ಥಿತಿ ಬರುತ್ತಿದೆ. ಜನರು ಬಡಾವಣೆಗಳಲ್ಲಿ ತಾವೇ ರಾತ್ರಿ ಗಸ್ತು ತಿರುಗಿಯೋ ಇಲ್ಲವೇ ಖಾಸಗಿ ಸೆಕ್ಯೂರಿಟಿಯನ್ನು ನೇಮಿಸಿಕೊಂಡೋ ಇಲ್ಲವೇ ನಿವಾಸಗಳಿಗೆ ಸಿಸಿಟಿವಿ ಮುಂತಾದ ಉಪಕರಣಗಳನ್ನು ಬಳಸಿಯೋ ಆಸ್ತಿಪಾಸ್ತಿಯ ರಕ್ಷಣೆ ಮಾಡಿಕೊಳ್ಳಬೇಕಾಗಿದೆ. ಇನ್ಮುಂದೆ ಇಂತಹ ಪ್ರಕರಣಗಳು ಏರುವುದರಿಂದ ಹೆಚ್ಚಿನ ಎಚ್ಚರಿಕೆ ಅವಶ್ಯ. ರಸ್ತೆಯಲ್ಲಿ ಒಬ್ಬಂಟಿಯಾಗಿ ಓಡಾಡುವಾಗ, ಬ್ಯಾಂಕಿಗೆ ಹೋಗಿ ಬರುವಾಗ ಕಳ್ಳರಿಂದ ಪಾರಾಗಲು ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸಬೇಕಾಗಿದೆ. ಮೋಸಗಾರರು ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಸೈಬರ್ ಕಳ್ಳರ ಬಗ್ಗೆ ಎಚ್ಚರವಹಿಸಬೇಕಾಗಿದೆ.

    ಪೊಲೀಸರೂ ಹಂತಹಂತವಾಗಿ ಕರೊನಾ ನಿಯಂತ್ರಣದ ಕೆಲಸಕಾರ್ಯಗಳಿಂದ ಹಿಂದೆ ಸರಿದು ಮೂಲಭೂತ ಕರ್ತವ್ಯಗಳತ್ತ ಗಮನ ಹರಿಸಿದ ನಂತರ ಇಲ್ಲವೇ ಇಲಾಖೆಯಲ್ಲಿರುವ ಖಾಲಿ ಹುದ್ದೆಗಳನ್ನು ತುಂಬಿದಾಗ ಸ್ವಲ್ಪ ಮಟ್ಟಿಗೆ ಪರಿಸ್ಥಿತಿ ಸುಧಾರಿಸುತ್ತದೆ. ಅಲ್ಲಿಯವರೆಗೆ ಎಚ್ಚರಿಕೆ ಅವಶ್ಯ.

    (ಲೇಖಕರು ನಿವೃತ್ತ ಪೊಲೀಸ್ ಮಹಾನಿರ್ದೇಶಕರು)

    VIDEO: ಕೂಲಿ ಕಾರ್ಮಿಕರ ಜಾಗ ತುಂಬೋದಕ್ಕೆ ಬರ್ತಿವೆ ರೊಬಾಟ್​​ಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts