More

    ಕರೊನಾ ವೈರಸ್ ಡಾಕ್ಟರ್​ಗಳ ಮುಂದಿಟ್ಟಿರುವ ಸವಾಲೇನು- ಹೇಗೆ ನಿಭಾಯಿಸ್ತಾರೆ?

    ‘ವೈದ್ಯೋ ನಾರಾಯಣ ಹರಿ’, ಇದು ಅನಾದಿ ಕಾಲದಿಂದಲೂ ಪ್ರಚಲಿತದಲ್ಲಿರುವ ಮಾತು. ಆದರೆ ಈಗಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಅದು ಖಂಡಿತವಾಗಿಯೂ ನಿಜವೆಂದು ತೋರುತ್ತದೆ. ವೈದ್ಯನು ದೇವರಿಗೆ ಸಮಾನ ಎಂಬುದು ಈಗ ದೃಢಪಟ್ಟ ವಿಚಾರ. ದೇವರು ನಮಗೆ ಜೀವವನ್ನು ಕೊಟ್ಟಿದ್ದರೆ, ಆ ಜೀವವನ್ನು ರಕ್ಷಿಸುವುದು ವೈದ್ಯನ ಕರ್ತವ್ಯವಾಗಿರುತ್ತದೆ. ಕರೊನಾ ಮಹಾಮಾರಿಯು ಪ್ರಪಂಚದಾದ್ಯಂತ ಭಾರಿ ಹಾನಿ ಉಂಟು ಮಾಡುತ್ತಿರುವ ಈ ಸಮಯದಲ್ಲಿ ವೈದ್ಯರ ಸೇವೆಯು ಅತೀ ಅವಶ್ಯ ಮತ್ತು ಪ್ರಾಮುಖ್ಯವಾಗಿದೆ. ಈ ನಡುವೆ ಕರೊನಾ ರೋಗಿಗಳ ಆರೈಕೆ ಮಾಡುತ್ತ ನೂರಾರು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಪ್ರಾಣತೆತ್ತಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ ಇಟಲಿಯಲ್ಲಿ 80 ವೈದ್ಯರು ಮತ್ತು 23 ನರ್ಸ್​ಗಳು, ಅಮೆರಿಕದಲ್ಲಿ 14 ವೈದ್ಯರು ಮತ್ತು 765 ಆರೋಗ್ಯ ಕಾರ್ಯಕರ್ತರು ಮೃತರಾಗಿದ್ದಾರೆ. ಇರಾನಿನಲ್ಲಿ 40 ವೈದ್ಯರು ಮತ್ತು 28 ವೈದ್ಯಕೀಯ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದರೆ, ಭಾರತದಲ್ಲಿಯೂ ಇಬ್ಬರು ವೈದ್ಯರು ಅಸುನೀಗಿದ್ದಾರೆ.

    ಕರೊನಾ ವೈರಸ್ ಡಾಕ್ಟರ್​ಗಳ ಮುಂದಿಟ್ಟಿರುವ ಸವಾಲೇನು- ಹೇಗೆ ನಿಭಾಯಿಸ್ತಾರೆ?ಚೀನಾದ ವುಹಾನ್ ಪಟ್ಟಣದಲ್ಲಿ ಮೊದಲು ಕರೊನಾ ಸೋಂಕಿನ ಇರುವಿಕೆಯನ್ನು ಪತ್ತೆ ಮಾಡಿದ ವೈದ್ಯ ಲಿಯೊಂಗ್ ವುಡೊಂಗ್ ಕರೊನಾ ರೋಗಕ್ಕೆ ಬಲಿಯಾಗಿದ್ದು, ದುರಂತವೇ ಸರಿ. ಅಷ್ಟೇ ಅಲ್ಲ, ಕರೊನಾ ಸೋಂಕಿಗೆ ಹಲವೆಡೆ ಪ್ರಖ್ಯಾತ ವೈದ್ಯರೂ ಮೃತಪಟ್ಟಿದ್ದಾರೆ. ಇಂಗ್ಲೆಂಡಿನ ಕಾರ್ಡಿಫ್ ಆಸ್ಪತ್ರೆಯಲ್ಲಿ ಪ್ರಖ್ಯಾತ ಹೃದಯ ಶಸ್ತ್ರಚಿಕಿತ್ಸಕರಾಗಿದ್ದ ಭಾರತೀಯ ಮೂಲದ ಜಿತೇಂದ್ರ ರಾಠೋಡ್ ಇತ್ತೀಚೆಗೆ ಕರೊನಾ ರೋಗಕ್ಕೆ ಬಲಿಯಾಗಿದ್ದಾರೆ. ಭೋಪಾಲ್​ದಲ್ಲಿ ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಡಾ.ಸಚಿನ್ ನಾಯಕ್ ತಮ್ಮ ಕಾರನ್ನೇ ಮನೆಯನ್ನಾಗಿಸಿಕೊಂಡು ವಾಸವಾಗಿದ್ದಾರೆ. ಸಮಯ ದೊರೆತಾಗ ವಿಡಿಯೋ ಕಾಲ್ ಮಾಡಿ ಮನೆಯವರೊಂದಿಗೆ ಮಾತನಾಡುತ್ತಾರೆ. ಜೈಪುರ್ ಖಾಸಗಿ ಆಸ್ಪತ್ರೆಯ ಐಸಿಯು ವಿಭಾಗದ ಉಸ್ತುವಾರಿ ಹೊತ್ತಿರುವ ಡಾ.ರಾಮಮೂರ್ತಿ ಇವರ ಕತೆಯೇ ಬೇರೆ. ಅವರ 93 ವರ್ಷದ ವೃದ್ಧೆತಾಯಿ ಇತ್ತೀಚೆಗೆ ಕೊನೆಯುಸಿರೆಳೆದರು. ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಡಾ.ರಾಮಮೂರ್ತಿ ಅವರಿಗೆ ತಾಯಿಯ ಅಂತಿಮ ದರ್ಶನವನ್ನು ಪಡೆಯಲು ಸಾಧ್ಯವಾಗಲಿಲ್ಲ. ವಿಡಿಯೋ ಕಾಲ್ ಮೂಲಕವೇ ಅಂತಿಮ ಸಂಸ್ಕಾರ ವೀಕ್ಷಿಸಿ, ತಾಯಿಗೆ ಅಂತಿಮ ನಮನ ಸಲ್ಲಿಸಬೇಕಾಯ್ತು. ಅಮ್ಮನನ್ನು ನೆನಪಿಸಿಕೊಂಡು ಕಣ್ಣೀರು ಸುರಿಸುತ್ತಲೇ ರೋಗಿಗಳ ಸೇವೆ ಮುಂದುವರಿಸಿದರು. ಇದೇ ರೀತಿಯಲ್ಲಿ, ‘ಮಿಸ್ ಇಂಗ್ಲೆಂಡ್ 2019’ ಕಿರೀಟ ಗೆದ್ದ ಭಾರತ ಮೂಲದ ಬ್ರಿಟನ್ ವೈದ್ಯೆ ಡಾ.ಭಾಷಾ ಮುಖರ್ಜಿ ಕರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಮಿಸ್ ಇಂಗ್ಲೆಂಡ್ ಕಿರೀಟ ಪಕ್ಕಕ್ಕಿಟ್ಟು, ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯಾಗಿ ಸೇವೆ ಮುಂದುವರಿಸಿದ್ದಾರೆ.

    ಒಂದು ಮೂಲದ ಪ್ರಕಾರ, ವೈದ್ಯರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡರೆ, ಮರಣ ಪ್ರಮಾಣವು ಶೇಕಡ 10-12ರಷ್ಟು ಇರುತ್ತದೆ. ಇದಕ್ಕೆ ಕಾರಣವೆಂದರೆ, ರೋಗಿಗಳ ಆರೈಕೆ ಸಂದರ್ಭದಲ್ಲಿ ವೈದ್ಯರ ದೇಹದೊಳಗೆ ಪ್ರವೇಶಿಸುವ ವೈರಸ್​ಗಳ ಸಂಖ್ಯೆಯು ಬೇರೆ ರೋಗಿಗಳಿಗಿಂತ ಗಣನೀಯವಾಗಿ ಹೆಚ್ಚಿರುತ್ತದೆ. ಇತರ ರೋಗಿಗಳ ಮರಣ ಪ್ರಮಾಣ ಶೇಕಡ 2-3ರಷ್ಟು ಮಾತ್ರ ಇರುತ್ತದೆ. ಅಲ್ಲದೆ, ಕಣ್ಣಿನ ತಜ್ಞರು, ಕಿವಿ, ಮೂಗು, ಗಂಟಲು, ತುರ್ತು ಚಿಕಿತ್ಸಾ ವಿಭಾಗದ ವೈದ್ಯರಿಗೆ ಕರೊನಾ ಸೋಂಕು ಹರಡುವ ಸಾಧ್ಯತೆ ಜಾಸ್ತಿ. ರೋಗಿ ಮತ್ತು ವೈದ್ಯರ ಸಾಮೀಪ್ಯವೇ ಇದಕ್ಕೆ ಕಾರಣ ಎನ್ನಬಹುದು. ಈ ಮೇಲೆ ತಿಳಿಸಿದ ವೈದ್ಯರು ಕೆಲವೇ ಇಂಚಿನಷ್ಟು ದೂರದಿಂದ ರೋಗಿಯನ್ನು ಪರೀಕ್ಷಿಸಬೇಕಾಗುತ್ತದೆ.

    ಹೀಗೆ ವೈದ್ಯರು ಅಪಾಯವನ್ನು ಲೆಕ್ಕಿಸದೆ ಕರೊನಾ ಸೋಂಕಿನ ವಿರುದ್ಧ ಹೋರಾಡುತ್ತಿದ್ದರೆ, ಮತ್ತೊಂದೆಡೆ ಭಾರತ ಸೇರಿ ಕೆಲವು ಕಡೆ ವೈದ್ಯರುಗಳ ಮೇಲೆ, ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆಗಳು ನಡೆಯುತ್ತಿರುವುದು ನಿಜಕ್ಕೂ ದುರದೃಷ್ಟವೇ ಸರಿ. ಇಂಥ ಘಟನೆಗಳು ವೈದ್ಯರಲ್ಲಿ ಮತ್ತು ಆರೋಗ್ಯ ಸಿಬ್ಬಂದಿಯಲ್ಲಿ ಖಿನ್ನತೆ, ನಿರಾಸೆಯನ್ನು ಉಂಟು ಮಾಡುತ್ತಿವೆ. ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಮೇಲಿನ ಹಲ್ಲೆಯಂಥ ಘಟನೆಗಳನ್ನು ತಡೆಯಲು ಅವಶ್ಯಕವಾದ ಎಲ್ಲ ಕ್ರಮಗಳನ್ನು ಸಂಬಂಧಪಟ್ಟವರು ಕೈಗೊಳ್ಳಬೇಕು. ಆಸ್ಟ್ರೇಲಿಯಾದಲ್ಲಿ ವೈದ್ಯರ ಮೇಲೆ ಕೈ ಎತ್ತಿದರೆ ಅಂಥ ವ್ಯಕ್ತಿಗೆ ಜೀವಾವಧಿ ಶಿಕ್ಷೆಗೆ ಗುರಿಪಡಿಸಲಾಗುತ್ತದೆ ಎಂಬುದು ಗಮನಾರ್ಹ.

    ಮತ್ತೊಂದೆಡೆ, ವೈದ್ಯರು ತಮ್ಮ ಜೀವರಕ್ಷಣೆಗೆ ಬೇಕಾದಂಥ ಸಲಕರಣೆಗಳಿಲ್ಲದೆ ವೃತ್ತಿಯನ್ನು ನಿರ್ವಹಿಸಬೇಕಿದೆ. ಮಾಸ್ಕ್, ಕೈಗವಸು ಮತ್ತು ಪಿ.ಪಿ.ಇ ಸೇರಿ ಅವಶ್ಯಕ ಸಲಕರಣೆಗಳ ಅಭಾವವು ತೀವ್ರವಾಗಿದೆ. ಭಾರತದಲ್ಲಿ ಈ ಕಾಯಿಲೆಯು ತೀವ್ರಗತಿಯಲ್ಲಿ ಹಬ್ಬಿದರೆ ವೆಂಟಿಲೇಟರ್​ಗಳ ಅಭಾವವೂ ತಲೆದೋರಲಿದೆ. ವೈದ್ಯರು ಮತ್ತು ಆರೋಗ್ಯ ವೃತ್ತಿಪರರು ಕರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿರುವುದರಿಂದ ಅವರಿಗೆ ಎಲ್ಲ ಸೌಲಭ್ಯ ಒದಗಿಸುವ ಮೂಲಕ ಸೂಕ್ತ ರಕ್ಷಣೆ ಒದಗಿಸಬೇಕು ಮತ್ತು ರಕ್ಷಣಾತ್ಮಕ ಕಿಟ್​ಗಳನ್ನು ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿರುವುದು ಸ್ವಾಗತಾರ್ಹ.

    ಭಾರತದಲ್ಲಿ ಕರೊನಾ ಸೋಂಕು ಹೆಚ್ಚುತ್ತಿದ್ದು, ವೈದ್ಯರ ಕೊರತೆ ಉಂಟಾಗಿದೆ. ಅದಕ್ಕಾಗಿ ಕೇಂದ್ರ ಸರ್ಕಾರ ಪ್ರಸಕ್ತ ಬೇರೊಂದು ಕಾರ್ಯಪಡೆಯನ್ನು ತಯಾರಿಸಲು ಪ್ರಯತ್ನಿಸುತ್ತಿದೆ. ವೈದ್ಯರು, ಶುಶ್ರೂಷಕರು, ಪ್ಯಾರಾ ಮೆಡಿಕಲ್ ಸಿಬ್ಬಂದಿ, ನೈರ್ಮಲ್ಯ ಸಿಬ್ಬಂದಿ, ತಂತ್ರಜ್ಞರು, ವಿಂಡ್​ವೈಫ್​ಗಳು, ವಿವಿಧ ಸರ್ಕಾರಿ ಅಧಿಕಾರಿಗಳು ಹಾಗೂ ನಾಗರಿಕ ಸಂರಕ್ಷಣಾಧಿಕಾರಿಗಳ ಪಡೆಯನ್ನು ನಿರ್ವಿುಸಿ ಅವರಿಗೆ ಆನ್​ಲೈನ್ ಮೂಲಕ ತರಬೇತಿ ನೀಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಕರೊನಾ ಆವರಿಸಿರುವ ಈ ಹೊತ್ತಲ್ಲಿ ತಮ್ಮೆಲ್ಲ ಬೇಕು-ಬೇಡಗಳನ್ನು ಬದಿಗೊತ್ತಿ ವೃತ್ತಿಧರ್ಮ ಪಾಲಿಸುತ್ತಿರುವ ವೈದ್ಯರಿಗೆ ಈ ಸಮಾಜ ಋಣಿಯಾಗಿರಬೇಕಿದೆ. ಇದು ನಮ್ಮ ನಿಮ್ಮೆಲ್ಲರ ಕರ್ತವ್ಯವೇ ಸರಿ.

    (ಲೇಖಕರು ಮಸ್ಕತ್​ನಲ್ಲಿ ನೆಲೆಸಿರುವ ಭಾರತೀಯ ಮೂಲದ ವೈದ್ಯರು)

    ಪುಷ್ಪಗಳಿಂದ ಮನಸೂರೆಗೊಂಡ ಕೇದಾರನಾಥ- ಮೋದಿ ಹೆಸರಲ್ಲಿ ಮೊದಲ ಪೂಜೆ: ಭಕ್ತರಿಗೆ ಸಿಗಲಿದೆಯೇ ದರುಶನ ಭಾಗ್ಯ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts