More

    ಸ್ವದೇಶಿ ಜೀವನವೇ ನಮ್ಮ ಮಂತ್ರವಾಗಬೇಕು

    ಕರೊನಾ ಸೋಂಕಿನ ಕಂಟಕದಿಂದ ಪಾಠ ಕಲಿತ ಮೇಲಾದರೂ ನಮ್ಮ ಸ್ವಂತಿಕೆಯನ್ನು ಮರಳಿ ಪಡೆಯಬೇಕಾಗಿದೆ, ಸ್ವಾವಲಂಬಿ, ಸ್ವಾಭಿಮಾನಿಗಳಾಗಬೇಕಾಗಿದೆ. ಸ್ವಾವಲಂಬನೆಯ ಆಶಯ ಈಡೇರಬೇಕಾದರೆ ಭಾರತದ 130 ಕೋಟಿ ಪ್ರಜೆಗಳು ದೃಢಸಂಕಲ್ಪ ತಳೆದು, ಕಾರ್ಯಪ್ರವೃತ್ತರಾಗಬೇಕಿದೆ.

    ಸ್ವದೇಶಿ ಜೀವನವೇ ನಮ್ಮ ಮಂತ್ರವಾಗಬೇಕುಸ್ವದೇಶಿ ಎಂದರೆ ನಮ್ಮ ದೇಶದಲ್ಲಿ ತಯಾರಾದ ವಸ್ತುಗಳ ಬಳಕೆ ಮಾತ್ರ ಮಾಡಬೇಕು, ವಿದೇಶಿ ಕಂಪನಿಗಳಿಗೆ ತಕ್ಕ ಪಾಠ ಕಲಿಸಬೇಕು ಎನ್ನುವುದಲ್ಲ, ಪ್ರಪಂಚದಲ್ಲಿ ಒಂದು ದೇಶಕ್ಕೆ ಮತ್ತೊಂದು ದೇಶದ ಸಹಾಯ-ಸಹಕಾರ ಅವಶ್ಯ. ಆದರೆ ಭಾರತ ಸಾಂಸ್ಕೃತಿಕವಾಗಿ, ನೈತಿಕ, ಧಾರ್ವಿುಕ, ವಿಜ್ಞಾನ-ತಂತ್ರಜ್ಞಾನ, ಸಾಮಾಜಿಕ, ಆರ್ಥಿಕ, ರಾಜತಾಂತ್ರಿಕವಾಗಿಯೂ ಪ್ರಬಲ ರಾಷ್ಟ್ರ ಆಗಬೇಕಾದರೆ ಸ್ವದೇಶಿ ಜೀವನವೇ ನಮ್ಮೆಲ್ಲರ ಮೂಲಮಂತ್ರವಾಗಬೇಕು. ನಮ್ಮ ಮನೆಗೆ ಗಾಳಿ-ಬೆಳಕು ಹೊರಗಿನಿಂದ ಬರಲಿ ಆದರೆ ಹೊರಗಿನ ಗಾಳಿ-ಬೆಳಕು ನಮ್ಮ ಮನೆಯ ಮೂಲ ಸತ್ವ, ಸ್ವರೂಪವನ್ನು ಹಾಳು ಮಾಡುವಂತಿರಬಾರದು ಎನ್ನುವುದೇ ಸ್ವದೇಶಿ ವಿಚಾರದ ಮಹತ್ವವಾಗಿದೆ.

    ಗಾಂಧೀಜಿ, ಸ್ವಾತಂತ್ರ್ಯ ಹೋರಾಟಗಾರರಾದ ಬಾಲಗಂಗಾಧರ ತಿಲಕ್, ವೀರ ಸಾವರ್ಕರ್, ಪಂಡಿತ ದೀನದಯಾಳ್ ಉಪಾಧ್ಯಾಯ ಸೇರಿ ಅನೇಕರು ಸ್ವದೇಶಿ ಜೀವನವೇ ಮೂಲಮಂತ್ರ ಆಗಬೇಕು ಎಂಬುದನ್ನು ಅಂದೇ ಹೇಳಿದ್ದರು. ದೇಶದ ಗೃಹ, ಗುಡಿಕೈಗಾರಿಕೆ, ಸಣ್ಣ-ಅತಿಸಣ್ಣ, ಮಧ್ಯಮ ವರ್ಗದ ಕೈಗಾರಿಕೆಗಳಿಗೆ ಪ್ರಾಧಾನ್ಯ ನೀಡಬೇಕು, ಕೈಗಾರಿಕೆಗಳೆಲ್ಲವೂ ಗುಣಮಟ್ಟದ ವಸ್ತುಗಳನ್ನೇ ಉತ್ಪಾದಿಸಿ ಪ್ರಪಂಚದೆದರು ಸ್ಪರ್ಧೆಯೊಡ್ಡಬೇಕು ಎಂಬುದನ್ನು ಸಾರಿದ್ದರು. ನೀರಾವರಿ ಕ್ಷೇತ್ರದಲ್ಲಿ ಮಹತ್ವಪೂರ್ಣ ಕ್ರಾಂತಿಯಾಗಬೇಕು, ಕೆರೆ, ಕಟ್ಟೆ, ನದಿಗಳಿಂದ ದೇಶದ ಎಲ್ಲ ಕೃಷಿಭೂಮಿಗೆ ನೀರು ಸಿಗುವಂತಾಗಬೇಕು. ಅಂತರ್ಜಲ ಮಟ್ಟ ವೃದ್ಧಿಸಬೇಕು. ಇದರಲ್ಲಿ ರೈತರು ಸಹ ಸಕ್ರಿಯ ಪಾಲುದಾರರಾಗಬೇಕು. ಕೃಷಿಭೂಮಿಯಲ್ಲಿ ಒಂದು ಎಕರೆಯಲ್ಲಿ ಕನಿಷ್ಠ ಒಂದು ಮರವನ್ನಾದರೂ ಬೆಳೆಸಲೇಬೇಕು. ಇಲ್ಲವಾದಲ್ಲಿ ಭೂಮಿಯ ತೇವಾಂಶ ಆರಿ ಹೋಗಿ ಅಂತರ್ಜಲ ಮಟ್ಟ ಕಡಿಮೆಯಾಗುತ್ತದೆ ಹಾಗೂ ಹೊಲದ ಫಲವತ್ತತೆಯೂ ಕಡಿಮೆಯಾಗುತ್ತದೆ ಮತ್ತು ಭೂಮಿಯ ಸವಕಲು ಹೆಚ್ಚಾಗುತ್ತದೆ. ಸಾವಯವ ಕೃಷಿಯನ್ನು ನಾವಿಂದು ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ. ನಮಗೀಗ ಏನೆಲ್ಲ ರೋಗಗಳು ಬರುತ್ತಿವೆಯೋ ಅವೆಲ್ಲವೂ ನಾವು ಸೇವಿಸುವ ಆಹಾರದಿಂದಲೇ ಬರುತ್ತಿವೆ. ಆದ್ದರಿಂದ ನಾವು ರಾಸಾಯನಿಕ ಗೊಬ್ಬರದ ಬಳಕೆಯನ್ನು ಮಿತಗೊಳಿಸಬೇಕು. ಈ ಕುರಿತು ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ‘ಹರ್ ಹಾತ್ ಕೋ ಕಾಮ್ ಹರ್ ಖೇತ್ ಕೋ ಪಾನಿ’ ಎಂಬ ದೊಡ್ಡ ಯೋಜನೆ ರೂಪಿಸಿದ್ದರೆ, ಪಂಡಿತ್ ದೀನ್​ದಯಾಳರು ಯಾವಾಗಲೂ ಸ್ವದೇಶಿ, ಸಂಘಟನೆ ಮತ್ತು ನೈತಿಕತೆ ಎಂಬ ಮೂರು ಮೂಲಮಂತ್ರದ ಕುರಿತು ವಿವರಿಸುತ್ತಿದ್ದರು.

    ಇದನ್ನೂ ಓದಿ   ಹೆಲ್ತ್ ರಿಜಿಸ್ಟರ್​ ಅನುಷ್ಠಾನಕ್ಕೆ ಮುನ್ನುಡಿ ಬರೆದ ಸರ್ಕಾರ

    ನಗರಗಳು, ಕೈಗಾರಿಕೆ ಪ್ರದೇಶಗಳಿಂದ ಕೊಳಚೆನೀರನ್ನು ನದಿ, ಕೆರೆಗಳಿಗೆ ಬಿಡುವುದನ್ನು ನಿಲ್ಲಿಸಬೇಕು. ಬರಿ ಯಂತ್ರಗಳನಲ್ಲ, ಸಾಧ್ಯವಾದಷ್ಟು ಜನರ ಕೈಗಳಿಗೆ ಉದ್ಯೋಗ ನೀಡುವುದಕ್ಕೆ ಒತ್ತು ನೀಡಬೇಕು. ನಮ್ಮ ಅಡುಗೆಮನೆಯಿಂದ ಹಿಡಿದು, ಕಾರ್ಯನಿರ್ವಹಿಸುವ ಸ್ಥಳವಿರಬಹುದು, ಕೃಷಿಭೂಮಿ, ಯುದ್ಧಭೂಮಿ, ಶಾಲೆ-ಕಾಲೇಜು, ವಿಶ್ವವಿದ್ಯಾಲಯ, ಆಸ್ಪತ್ರೆ, ಕೈಗಾರಿಕೆ, ಆಟೋಮೊಬೈಲ್ ಕ್ಷೇತ್ರ, ವಿಮಾನಯಾನ, ವಿಜ್ಞಾನ-ತಂತ್ರಜ್ಞಾನ ಸೇರಿ ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿಯೂ ‘ಭಾರತ ಬ್ರಾ್ಯಂಡ್’ ಆಗಲೇಬೇಕು. (ಮೇಕ್ ಇನ್ ಇಂಡಿಯಾ- ಮೇಡ್ ಇನ್ ಇಂಡಿಯಾ)

    ಶಿಕ್ಷಣ ಕ್ಷೇತ್ರದಲ್ಲಿ ಸತ್ಕ್ರಾಂತಿಯಾಗಬೇಕು: ವಿಜ್ಞಾನ-ತಂತ್ರಜ್ಞಾನ, ಆರೋಗ್ಯ, ಕೃಷಿ, ಕೈಗಾರಿಕೆ ಕ್ಷೇತ್ರಗಳಲ್ಲಿ ಹೊಸ-ಹೊಸ ಸಂಶೋಧನೆಗಳಾಗಬೇಕು. ಅಲ್ಲದೆ ಶಿಕ್ಷಣ ಕ್ಷೇತ್ರಕ್ಕೆ ವಿಶೇಷವಾದ ಒತ್ತನ್ನು ನೀಡಬೇಕು. ಸ್ವಾಮಿ ವಿವೇಕಾನಂದರು ಹೇಳಿದಂತೆ ವ್ಯಕ್ತಿತ್ವ ನಿರ್ಮಾಣ ಹಾಗೂ ಸ್ವಂತ ಕಾಲ ಮೇಲೆ ನಿಲ್ಲಬಲ್ಲ, ಪರಾವಲಂಬಿಯಾಗದ ಶಿಕ್ಷಣವಂತೂ ನಮಗೆ ತೀರಾ ಅವಶ್ಯ.

    ಸ್ವದೇಶಿಯ ಮಹತ್ವ: ಸ್ವದೇಶಿ ವಿಚಾರ ಕಲ್ಪನೆ, ಆದರ್ಶ ಎಲ್ಲ ದೇಶಗಳಿಗೂ ಬೇಕು. ವಿಯೆಟ್ನಾಂ ನಾಯಕ ಹೊ.ಬಿ.ಮಿನ್ ಒಮ್ಮೆ ಹರಿದುಹೋದ ಅಂಗಿಗೆ ತಮ್ಮ ಕೈಯಿಂದಲೇ ಹೊಲಿಗೆ ಹಾಕಿಕೊಂಡು ಧರಿಸಿದ್ದರು. ಇದನ್ನು ಗಮನಿಸಿದ ಅವರ ಬೆಂಬಲಿಗನೊಬ್ಬ, ‘ಯಾಕೆ ಹರಿದು ಹೋದ ಬಟ್ಟೆ ಧರಿಸುತ್ತಿದ್ದೀರಿ?’ ಎಂದು ಕೇಳಿದ. ಅದಕ್ಕವರು-‘ನನ್ನ ದೇಶ ನನಗೆ ಒದಗಿಸುವ ಸ್ಥಿತಿಯಲ್ಲಿ ಇರುವುದು ಈ ಬಟ್ಟೆಯನ್ನು ಮಾತ್ರ, ಆದ್ದರಿಂದ ಇದರ ಬಳಕೆಯಲ್ಲಿ ನನಗೆ ಸಮಾಧಾನವೂ ಇದೆ, ಹೆಮ್ಮೆಯೂ ಇದೆ’ ಎಂದರು. ಈ ಹಿಂದೆ ಒಮ್ಮೆ ಇಂಗ್ಲೆಂಡ್​ನ ರಾಣಿ ಜರ್ಮನಿಯಲ್ಲಿ ತಯಾರಿಸಲ್ಪಟ್ಟ ಮರ್ಸಿಡೀಸ್ ಬೆಂಝ್ ಕಾರನ್ನು ಕೊಳ್ಳಲು ಇಷ್ಟಪಟ್ಟಾಗ ‘ಇದು ನಮ್ಮ ದೇಶಕ್ಕೆ ದೊಡ್ಡ ಅಪಮಾನ’ ಎಂದು ಇಂಗ್ಲೆಂಡ್​ನ ಜನತೆ ವಿರೋಧಿಸಿದ್ದರು.

    ಇದನ್ನೂ ಓದಿ   ಸಾವರ್ಕರ್ ಹೆಸರಿನ ವಿವಾದ: ಮೇಲ್ಸೇತುವೆ ಉದ್ಘಾಟನೆಯೇ ಮುಂದೂಡಿಕೆ!

    ನಮ್ಮ ಹಳ್ಳಿಯ ಜನರಿಗೆ ಬೇಕಾದ ಬಟ್ಟೆಗಳನ್ನು ಕೂಡ ಚೀನಾದಿಂದಲೇ ತರಿಸಿಕೊಳ್ಳಬೇಕಾ? ಎಲ್ಲ ವಿಚಾರಗಳಿಗೂ ಚೀನಾ, ಅಮೆರಿಕ, ಜಪಾನ್, ಜರ್ಮನಿ ಸೇರಿ ಇತರೆ ರಾಷ್ಟ್ರಗಳ ಮೇಲೆ ಅವಲಂಬನೆಯಾದಾಗ ಭಾರತ ಸ್ವಾವಲಂಬಿಯಾಗುವುದು ಯಾವಾಗ? ಭಾರತ ಸೇರಿ ಪ್ರಪಂಚದ ಎಲ್ಲ ಮಾರುಕಟ್ಟೆಯಲ್ಲೂ ಚೀನಾ, ಅಮೆರಿಕ ಜಪಾನ್ ವಸ್ತುಗಳೇ ಇದ್ದರೆ, ನಾವು ಅದನ್ನೇ ಉಪಯೋಗಿಸುವುದಾದರೆ ಭಾರತೀಯ ಉದ್ಯಮಿಗಳ ಪಾಡೇನಾಗಬಹುದು? ಯೋಚಿಸಬೇಕಲ್ಲವೇ!

    ಭಾರತ ಕರೊನಾದಿಂದ ಪಾಠ ಕಲಿಯಬೇಕು, ಸ್ವಾವಲಂಬಿಯಾಗಿ ಮೇಲೇಳಲೇಬೇಕು.

    ಮೀನು ಹಿಡಿಯುವುದನ್ನು ಕಲಿಸಿ ಅವನಿಗೆ ಉದ್ಯೋಗಾವಕಾಶ ಕಲ್ಪಿಸಿ ಆಹಾರ ಪಡೆಯುವುದನ್ನು ಕಲಿಸಬೇಕು. ಬದಲಾಗಿ ಬರೀ ತಿನ್ನುವುದನ್ನು ಕಲಿಸಬಾರದು.

    ಮರ ಹತ್ತುವುದನ್ನು ಕಲಿಸೋಣ, ಇದರಿಂದ ತಾನೇ ಮರ ಹತ್ತಿ ಹಣ್ಣುಗಳನ್ನು ಪಡೆಯುತ್ತಾನೆ, ಎಲ್ಲಿಯವರೆಗೆ ಮನುಷ್ಯನಿಗೆ ಬೇಕಾದ ಎಲ್ಲ ಸವಲತ್ತುಗಳನ್ನೂ ಅವನ ಬಾಯಿಯವರೆಗೆ ತೆಗೆದುಕೊಂಡು ಹೋಗುವುದು?

    ಎಷ್ಟು ಬಾರಿ ಭಾರತ ಸಾಲಕ್ಕಾಗಿ ಜಗತ್ತಿನ ದೇಶಗಳ ಮುಂದೆ ಕೈಚಾಚಿ ನಿಲ್ಲಬೇಕು?

    ಭಾರತದ ಅಂದಿನ ಪ್ರಧಾನಿಗಳಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿಯವರಿಂದ ಹಿಡಿದು ಈಗಿನ ಪ್ರಧಾನಿ ಮೋದಿ ಕೂಡ ‘ನಮ್ಮ ಗ್ರಾಮ, ನಗರ, ಜಿಲ್ಲೆ, ರಾಜ್ಯಗಳು ಸ್ವಾವಲಂಬಿಯಾಗಬೇಕು, ಆಗ ಮಾತ್ರ ದೇಶ ಸ್ವಾವಲಂಬಿ ಆಗುತ್ತದೆ’ ಎಂಬುದನ್ನು ಸಾರುತ್ತ ಬಂದಿದ್ದಾರೆ.

    ಇದನ್ನೂ ಓದಿ   ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ರಾಜ್ಯ ಹೈಕೋರ್ಟ್ ಗ್ರೀನ್ ಸಿಗ್ನಲ್

    ರಫ್ತು ಮಾಡುವುದು ಭಾರತಕ್ಕೆ ಹೊಸದಲ್ಲ: ‘ವಸುಧೈವ ಕುಟುಂಬಕಂ’ (ಇಡೀ ವಿಶ್ವವೇ ಒಂದು ಕುಟುಂಬ) ಎಂದು ವೇದಗಳ ಕಾಲದಿಂದ ನಂಬಿಕೊಂಡು ಬಂದಿರುವ ಭಾರತಕ್ಕೆ ಪಾಶ್ಚಾತ್ಯ ರಾಷ್ಟ್ರಗಳು ‘ಜಾಗತೀಕರಣ’ದ ಪಾಠ ಮಾಡುತ್ತಿರುವುದು ಹಾಸ್ಯಾಸ್ಪದ. ಶತಮಾನಗಳ ಹಿಂದೆಯೇ ಭಾರತ Export ದೇಶವಾಗಿತ್ತು. 1850ಕ್ಕಿಂತ ಮುಂಚೆ ಮಾರ್ಷೆಲ್ಸ್ ಅಂಗಡಿ ವಸ್ತುಗಳ ಪಟ್ಟಿಯಲ್ಲಿ ಮಿಕ್ಕೆಲ್ಲ ದೇಶಗಳ ವಸ್ತುಗಳಿಗಿಂತ ಭಾರತ ಮೂಲದ ಬಟ್ಟೆಯನ್ನು ಪ್ರಧಾನವಾಗಿ ನಮೂದಿಸಲಾಗುತ್ತಿತ್ತು. 19ನೇ ಶತಮಾನದ ಆರಂಭದಲ್ಲಿ ಭಾರತದ ರೇಷ್ಮೆ ಪ್ರಪಂಚದಾದ್ಯಂತ ಹೆಸರುವಾಸಿಯಾಗಿತ್ತು. ಕರೊನಾ ಸೋಂಕಿನ ಕಂಟಕದಿಂದ ಪಾಠ ಕಲಿತ ಮೇಲಾದರೂ ನಮ್ಮ ಸ್ವಂತಿಕೆಯನ್ನು ಮರಳಿ ಪಡೆಯಬೇಕಾಗಿದೆ, ಸ್ವಾವಲಂಬಿ, ಸ್ವಾಭಿಮಾನಿಗಳಾಗಬೇಕಾಗಿದೆ. ಇದು ಸಾಕಾರವಾಗಬೇಕಾದರೆ ಭಾರತದ 130 ಕೋಟಿ ಪ್ರಜೆಗಳ ಪಾತ್ರವಿದೆ ಎಂಬುದನ್ನು ಮರೆಯಬಾರದು.

    ಸ್ವಾವಲಂಬಿ ರಾಷ್ಟ್ರಗಳ ನಿದರ್ಶನಗಳು: ಇಸ್ರೇಲ್ ಸ್ವಾವಲಂಬಿ ರಾಷ್ಟ್ರಕ್ಕೊಂದು ಉದಾಹರಣೆ. ಈ ದೇಶ ಕುಡಿಯುವುದಕ್ಕೂ ಸಮುದ್ರದ ನೀರನ್ನೇ ಅವಲಂಬಿಸಿದೆ. ಸಮುದ್ರದ ನೀರನ್ನು ಶುದ್ಧ ನೀರನ್ನಾಗಿ ಮಾಡಿಕೊಂಡು ಕುಡಿಯಲು ಉಪಯೋಗಿಸುತ್ತದೆ. ಇಸ್ರೇಲ್ ಒಂದು ಕಾಲದಲ್ಲಿ ಆಕ್ರಮಣಕ್ಕೊಳಪಟ್ಟಿದ್ದಾಗ, ಸ್ವಾತಂತ್ರ್ಯ ಪಡೆಯಲು ಶತಮಾನಗಳ ಹೋರಾಟವನ್ನು ಮಾಡಿದೆ. ಮಾತನಾಡುವುದಕ್ಕೆ ತನ್ನದೇ ಭಾಷೆ ಇದ್ದರೂ ಪ್ರಪಂಚದಾದ್ಯಂತ ಇಸ್ರೇಲಿಗರು ಚೆಲ್ಲಾಪಿಲ್ಲಿಯಾಗಿ ಹರಿದು ಹಂಚಿ ಹೋಗಿದ್ದರು. ಅಂತಹ ರಾಷ್ಟ್ರದ ಜನರು ಆ ದೇಶದ ಜೋರ್ಡಾನ್ ನದಿಯ ದಡದಲ್ಲಿ ಇಸ್ರೇಲಿಗರ ನಾಯಕ ಬೆಲ್​ಗುರಿಯನ್ ನೇತೃತ್ವದಲ್ಲಿ ಸೇರಿ-‘ನಾವು ಸ್ವಾತಂತ್ರ್ಯ ಪಡೆಯಲೇಬೇಕು. ಪ್ರಪಂಚದಲ್ಲಿ ನಮ್ಮ ದೇಶದ ಹೆಸರನ್ನು ಮುಂದುವರಿದ ರಾಷ್ಟ್ರಗಳು ಹೇಳುವಂತೆ ಮಾಡಬೇಕು’ ಎನ್ನುವ ತೀರ್ಮಾನ ಕೈಗೊಂಡರು. ಇಸ್ರೇಲ್​ನ ಸುತ್ತಲೂ ಶತ್ರುರಾಷ್ಟ್ರಗಳೇ ತುಂಬಿವೆ. ಆದರೆ ಇಸ್ರೇಲ್ ಸ್ವಾವಲಂಬಿ ಮತ್ತು ಸ್ವಾಭಿಮಾನಿ ರಾಷ್ಟ್ರ ಆಗಿ ಹೊರಹೊಮ್ಮಿದೆ.

    ಇದನ್ನೂ ಓದಿ     VIDEO| ನಿನ್ನೆ ಮಂಡ್ಯ, ಇಂದು ಮೈಸೂರಿನಲ್ಲಿ ಮುಸ್ಸಂಜೆ ವೇಳೆ ದಿಢೀರ್​ ಬೆಳಕು: ಬೆರಗಾದ ಗ್ರಾಮಸ್ಥರು!

    ಜಪಾನ್ ಪ್ರಗತಿ: ಸ್ವಾಮಿ ವಿವೇಕಾನಂದರು ಮೊದಲ (1893) ಅಮೆರಿಕ ಪ್ರವಾಸದ ಸಂದರ್ಭದಲ್ಲಿ ಕೊಂಚಕಾಲ ಜಪಾನಿನಲ್ಲಿ ಉಳಿದಿದ್ದರು. ಅವರು ಜಪಾನಿನ ಪ್ರಗತಿಪರತೆಯನ್ನು ಮೆಚ್ಚಿದ್ದುಂಟು. ಸಾಧನೆಯ ಗುರಿಯನ್ನು ನಿರ್ಧರಿಸುವುದು ಆಯಾ ನಾಗರಿಕತೆಯ ಮೂಲಸ್ವಭಾವ. ಎಲ್ಲೆಡೆ ಯುರೋಪ್ ತನ್ನ ಪ್ರಭಾವ ಬೆಳೆಸಿಕೊಂಡಿದ್ದೂ ಅದರ ಮೂಲಗುಣ ವೈಶಿಷ್ಟ್ಯದಿಂದಲೇ. ಯುರೋಪ್ ತನ್ನ ವಿಸ್ತರಣೆ ಆರಂಭಿಸಿದಾಗ ಅದು ತನ್ನ ಸಮಾಜಗಳಿಗಿಂತ ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಕೃಷಿ ಎಲ್ಲದರಲ್ಲೂ ಹಿಂದೆ ಇತ್ತು. ಆದರೆ ಗಟ್ಟಿಸಂಕಲ್ಪದ ಫಲ ಅದು ಕಾಲಕ್ರಮೇಣ ಜಗತ್ತಿನ ಎಲ್ಲೆಡೆ ಪ್ರಭಾವ ಬೆಳೆಸಿಕೊಂಡಿತು. ಪ್ರಭಾವ ವಿಸ್ತರಣೆಗೆ ಬೇಕಾದ ಸಾಂಸ್ಥಿಕ ಹಂದರವನ್ನು ನಿರ್ವಿುಸಿಕೊಂಡಿತು. ಇಷ್ಟಾದ ಮೇಲೆ ಸಂಪನ್ಮೂಲಗಳನ್ನು ಕ್ರೋಡೀಕರಿಸಿಕೊಳ್ಳುವುದು ಜಪಾನ್​ಗೆ ಸುಲಭವಾಯಿತು. ಜಗತ್ತಿನ ಭೂಪಟದಲ್ಲಿ ಈಗ ಜಪಾನ್ ಪ್ರಬಲ ರಾಷ್ಟ್ರವಾಗಿದೆ.

    ಭಾರತಕ್ಕಿದೆ ಅವಕಾಶ: ಪ್ರಧಾನಿ ನರೇಂದ್ರ ಮೋದಿ ಆಡಳಿತದ ವೈಖರಿಯನ್ನು ಜಗತ್ತು ಕೊಂಡಾಡುತ್ತಿದೆ. ಮೋದಿಯವರಿಂದ ಆತ್ಮನಿರ್ಭರ ಭಾರತ ಪ್ಯಾಕೇಜ್ ಘೊಷಣೆಯು ಸ್ವದೇಶಿ-ಸ್ವಾವಲಂಬನೆಗೆ ಮಹತ್ವದ ಹೆಜ್ಜೆಯಾಗಲಿದೆ. ಕರೊನಾದಿಂದ ಭಾರತಕ್ಕೆ ದೊಡ್ಡ ಆರ್ಥಿಕ ಪೆಟ್ಟು ಬಿದ್ದಿದೆ. ಆದರೆ ಮೋದಿ ಕರೊನಾ ಸೋಂಕನ್ನು ನಿಯಂತ್ರಿಸುವಲ್ಲಿ ಬಹಳಷ್ಟು ಶ್ರಮ ವಹಿಸಿದ್ದಾರೆ. ಹಂತ-ಹಂತವಾಗಿ ಲಾಕ್​ಡೌನ್ ಜಾರಿಗೆ ತಂದು ಲಕ್ಷಾಂತರ ಜನರ ಪ್ರಾಣವನ್ನು ಉಳಿಸಿದರು. ಹಾಗಾಗಿಯೇ, ಪ್ರಧಾನಿ ನರೇಂದ್ರ ಮೋದಿ ಆಡಳಿತದ ವೈಖರಿಯನ್ನು ಅಂತಾರಾಷ್ಟ್ರೀಯ ವಲಯ ಕೊಂಡಾಡುತ್ತಿದೆ. ಆದರೆ ವಿರೋಧ ಪಕ್ಷಗಳು ಮಾತ್ರ ಪ್ರಧಾನಿ ವಿರುದ್ಧ ಸುಖಾಸುಮ್ಮನೆ ಆರೋಪ ಮಾಡುತ್ತಿವೆ. ‘ಪಿಎಂ ಕೇರ್ಸ್ ಫಂಡ್’ ಬಗ್ಗೆ ಕಾಂಗ್ರೆಸ್ಸಿಗರು ಇಲ್ಲಸಲ್ಲದ ಆರೋಪ ಮಾಡಿದರೂ, ಜನರು ಪ್ರಧಾನಿ ಮೇಲೆ ನಂಬಿಕೆ, ವಿಶ್ವಾಸವಿಟ್ಟು ದೇಣಿಗೆ ನೀಡಿದ್ದಾರೆ.

    ಆರೋಪಗಳಿಗೆ ತಲೆ ಕೆಡಿಸಿಕೊಳ್ಳದೆ ಮೋದಿ ‘ಆತ್ಮನಿರ್ಭರ ಭಾರತ ಕಟ್ಟೋಣ’ ಎಂದು ಜನರಿಗೆ ಕರೆ ನೀಡಿದ್ದಾರೆ. ಕೋವಿಡ್ ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿ, ದೇಶದ ಅರ್ಥವ್ಯವಸ್ಥೆ ಉತ್ತೇಜಿಸಲು ಅಗತ್ಯವಿರುವ 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಘೊಷಿಸಿ, ಸ್ವಾವಲಂಬಿ ಭಾರತ ನಿರ್ವಣದ ಕನಸು ಬಿತ್ತಿದ್ದಾರೆ. ಈ ಪ್ಯಾಕೇಜ್ ದೇಶದ ಸ್ವದೇಶಿ ಸ್ವಾವಲಂಬನೆಗೆ ಮಹತ್ವಪೂರ್ಣ ಹೆಜ್ಜೆ ಮತ್ತು ಮೈಲಿಗಲ್ಲಾಗಿದೆ. ಕರೊನಾ ಸಂಕಷ್ಟದ ಸಂದರ್ಭದಲ್ಲಿ ದೇಶದ ಆರ್ಥಿಕತೆ ಉತ್ತೇಜಿಸಲು ಸ್ವದೇಶಿ-ಸ್ವಾವಲಂಬನೆಯ ಚಳವಳಿಗೆ ಮುಂದಾಗೋಣ ಬನ್ನಿ.

    (ಲೇಖಕರು ಕರ್ನಾಟಕ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ವಿಧಾನ ಪರಿಷತ್ ಸದಸ್ಯರು) 

    ಅರ್ಚಕರಿಗೆ ನೆರವು ನೀಡುವುದಕ್ಕಾಗಿ ಹುಂಡಿ ಹಣ ಬಳಸಬಹುದೇ?: ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts