More

    Animal Movie Review: ರಕ್ತದೋಕುಳಿಯಲ್ಲಿ ನೆನೆದ ಸಂಬಂಧ

    ಚಿತ್ರ: ಅನಿಮಲ್
    ನಿರ್ದೇಶನ: ಸಂದೀಪ್ ರೆಡ್ಡಿ ವಂಗ
    ನಿರ್ಮಾಣ: ಭೂಷಣ್ ಕುಮಾರ್
    ತಾರಾಗಣ: ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಬಾಬಿ ಡಿಯೋಲ್, ಶಕ್ತಿ ಕಪೂರ್, ಅನಿಲ್ ಕಪೂರ್ ಮುಂತಾದವರು
    ಸ್ಟಾರ್: 3.5

    | ಪ್ರಮೋದ ಮೋಹನ ಹೆಗಡೆ

    ತಂದೆ ಮತ್ತು ಮಗನ ನಡುವಿನ ಸಂಬಂಧ ಹೇಗಿರಬಹುದು? ಒಬ್ಬರಿಗೆ ಒಬ್ಬರ ಮೇಲೆ ಪ್ರೀತಿಯಿದ್ದರೂ ಅದು ವ್ಯಕ್ತವಾಗುವುದು ಕಡಿಮೆ. ಮಾತುಗಳೆಲ್ಲ ಅಮ್ಮನ ಮೂಲಕವೇ ಹೆಚ್ಚು. ಆದರೆ, ಇಂತಹ ಮೌನದೊಳಗೂ ಮಗನಿಗೆ ತಂದೆ ಮೇಲಿನ ಪ್ರೀತಿ, ತಂದೆಗೆ ಮಗನ ಮೇಲಿನ ವ್ಯಾಮೋಹ ಕಡಿಮೆಯಾಗಿರುವುದಿಲ್ಲ. ತಂದೆಯನ್ನು ಅತಿಯಾಗಿ ಪ್ರೀತಿಸುವ, ಅವರಿಗೆ ಏನೂ ಆಗಬಾರದು ಎಂದು ಕಾಳಜಿವಹಿಸುವ ಮಗನ ಕಥೆಯಿದು. ತಂದೆ ಎಷ್ಟೇ ಬೈದರೂ, ತಿರಸ್ಕರಿಸಿದರೂ ಅವರಿಗೆ ನೋವು ನೀಡಿದವರ ವಿರುದ್ಧ ಮಗ ಏನೆಲ್ಲಾ ಮಾಡುತ್ತಾನೆ? ಅದಕ್ಕಾಗಿ ಯಾವ ಮಟ್ಟಕ್ಕೆ ಹೋಗುತ್ತಾನೆ? ಎನ್ನುವ ಕಥೆಯೇ ‘ಅನಿಮಲ್’. ಈ ಬಾಂಧವ್ಯದ ಕಥೆಯನ್ನು ಹೇಳಲು ವಿಭಿನ್ನ ವಾತಾವರಣವನ್ನು ಸೃಷ್ಟಿಸಿ, ಹಸಿಹಸಿಯಾದ ಸನ್ನಿವೇಶಗಳನ್ನು ಆಯ್ಕೆ ಮಾಡಿಕೊಂಡು ಬಂದಿದ್ದಾರೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗ.

    ಈ ಹಿಂದೆ ‘ಅರ್ಜುನ್ ರೆಡ್ಡಿ’ ಅಥವಾ ‘ಕಬೀರ್ ಸಿಂಗ್’ ನೋಡಿದವರಿಗೆ ಸಂದೀಪ್ ಸಿನಿಮಾಗಳ ಬಗ್ಗೆ ಸಣ್ಣ ಸುಳಿವಿರುತ್ತದೆ. ಸಂಭಾಷಣೆಗಳು ಮತ್ತು ದೃಶ್ಯಗಳು ರಾ ಆಗಿ ತೋರಿಸುವುದು ಅವರ ಶೈಲಿ. ಈ ಚಿತ್ರದಲ್ಲಿ ಅದು ಇನ್ನೊಂದು ಹಂತ ತಲುಪಿದೆ. ತಂದೆಯ ಪರವಾಗಿ ನಿಲ್ಲುವ ಮಗ ಯಾರನ್ನು ಕೊಲ್ಲಲೂ ಹೇಸುವುದಿಲ್ಲ. ಯಾರೆಲ್ಲಾ ಆ ಮಗನ ಶತ್ರುಗಳಾಗುತ್ತಾರೆ? ಜತೆಗಾರರಾಗುತ್ತಾರೆ? ಎನ್ನುವುದನ್ನು 3 ಗಂಟೆ 21 ನಿಮಿಷಗಳಲ್ಲಿ ಎಲ್ಲಿಯೂ ಬೋರ್ ಆಗದಂತೆ ತೋರಿಸುವುದರಲ್ಲಿ ಸಂದೀಪ್ ಗೆದ್ದಿದ್ದಾರೆ. ಆದರೆ, ಅಲ್ಲಲ್ಲಿ ಕೆಲವು ಅನವಶ್ಯಕ ಫಿಲಾಸಫಿ, ಜಗಳ, ಮಾತುಗಳು, ಸನ್ನಿವೇಶಗಳಿಂದ ಕಥೆಯು ಮೂಲಭೂತ ಭಾವನೆಯಿಂದ ಚೂರು ಹಳಿ ತಪ್ಪಿದಂತೆ ಭಾಸವಾಗುತ್ತದೆ. ಕೆವೊಮ್ಮೆ ಮೇಲ್ ಇಗೊ ಮತ್ತು ಕ್ರೌರ್ಯವನ್ನು ವೈಭವೀಕರಿಸಿದಂತೆ ಕಂಡರೂ ಆಶ್ಚರ್ಯವಿಲ್ಲ. ಕಥೆಯ ಮುಖ್ಯ ಪಾತ್ರ ಮಗ. ಆ ಮಗನಿಗೆ ಪೊಸೆಸಿವ್‌ನೆಸ್ ನೆತ್ತಿಗೇರಿ, ತಾನು ಮಾಡುತ್ತಿರುವುದು ಸರಿ ಎನ್ನುವ ಭಾವ ಹುಟ್ಟಿರುವುದು ಅವನ ನಡೆಗಳಿಗೆ ಸಮರ್ಥನೆ. ಅಂತಹ ಮಗನ ಪಾತ್ರದಲ್ಲಿ ರಣಬೀರ್ ಕಪೂರ್ ಅದ್ಭುತವಾಗಿ ನಟಿಸಿದ್ದಾರೆ. ವಿಭಿನ್ನ ಶೇಡ್‌ಗಳಲ್ಲಿ ರಣಬೀರ್ ನೋಡುವುದೇ ಹಬ್ಬ! ಇಡೀ ಕಥೆಗೆ ಮತ್ತು ಪಾತ್ರಕ್ಕೆ ಜೀವ ತುಂಬಿರುವ ರಣಬೀರ್, ಚಿತ್ರದ ಹೈಲೈಟ್. ದ್ವಿತೀಯಾರ್ಧದಲ್ಲಿ ಬರುವ ಬಾಬಿ ಡಿಯೋಲ್ ಇನ್ನಷ್ಟು ತೆರೆಯ ಮೇಲೆ ಇರಬೇಕಿತ್ತು ಅನಿಸುವಂತೆ ಅಭಿನಯಿಸಿದ್ದಾರೆ. ರಶ್ಮಿಕಾ ಮಂದಣ್ಣ ಪರವಾಗಿಲ್ಲ. ಆದರೆ, ಅವರ ಕೆಲವು ಮಾತುಗಳಿಗೆ ಸಬ್‌ಟೈಟಲ್ ಇದ್ದಿದ್ದರೆ ಅರ್ಥಮಾಡಿಕೊಳ್ಳಲು ಸುಲಭವಾಗುತ್ತಿತ್ತು.

    ಉಳಿದ ಪಾತ್ರವರ್ಗದ ನಟನೆ ಜತೆಗೆ ಇಂಟರ್‌ವಲ್ ಬ್ಲಾಕ್‌ನಲ್ಲಿರುವ ಭರ್ಜರಿ ಆ್ಯಕ್ಷನ್ ಸನ್ನಿವೇಶ, ಹಾಡುಗಳು, ದೃಶ್ಯಗಳನ್ನು ಇನ್ನೊಂದು ಹಂತಕ್ಕೆ ಏರಿಸುವ ಹರ್ಷವರ್ಧನ್ ಹಿನ್ನಲೆ ಸಂಗೀತ, ಮುಖಕ್ಕೆ ಹೊಡೆಯುವಂತಿರುವ ಸೌರಭ್ ಗುಪ್ತಾ ಪವರ್‌ುಲ್ ಡೈಲಾಗ್‌ಗಳು, ಅಮಿತ್ ರಾಯ್ ಛಾಯಾಗ್ರಹಣ, ಕ್ಲೈಮ್ಯಾಕ್ಸ್‌ನಲ್ಲಿ ರಣಬೀರ್ ಲುಕ್ ಖುಷಿಕೊಡುತ್ತವೆ. ‘ಅನಿಮಲ್’ ರಣಬೀರ್ ಜೀವನದ ಅತ್ಯುತ್ತಮ ಸಿನಿಮಾ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts