ಬಾಲಿವುಡ್, ಹಾಲಿವುಡ್ ಆಳುತ್ತೇವೆ! ‘ಅನಿಮಲ್’ ಕಾರ್ಯಕ್ರಮದಲ್ಲಿ ನಗೆಪಾಟಲಿಗೀಡಾದ ತೆಲಂಗಾಣ ಸಚಿವ

1234 (3)
Published on

ತೆಲುಗಿನ ‘ಅರ್ಜುನ್ ರೆಡ್ಡಿ’ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಆ್ಯಕ್ಷನ್-ಕಟ್ ಹೇಳಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಅನಿಮಲ್’. ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಬಾಬಿ ಡಿಯೋಲ್, ಅನಿಲ್ ಕಪೂರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರ ಇದೇ ಶುಕ್ರವಾರ ತೆರೆಗೆ ಬರಲಿದೆ. ಹೀಗಾಗಿಯೇ ಭಾನುವಾರ (ನ. 26) ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಚಿತ್ರತಂಡ, ಸೋಮವಾರ ತೆಲಂಗಾಣದಲ್ಲಿ ಪ್ರಿ-ರಿಲೀಸ್ ಕಾರ್ಯಕ್ರಮ ಆಯೋಜಿಸಿತ್ತು.

ತೆಲಂಗಾಣ ಕಾರ್ಮಿಕ ಸಚಿವ ಮಲ್ಲಾರೆಡ್ಡಿ, ನಿರ್ದೇಶಕ ರಾಜಮೌಳಿ, ನಟ ಮಹೇಶ್ ಬಾಬು ಸೇರಿ ಹಲವಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಗ ಮಲ್ಲಾರೆಡ್ಡಿ, ‘ಇನ್ನು ಐದು ವರ್ಷಗಳಲ್ಲಿ ಬಾಲಿವುಡ್, ಹಾಲಿವುಡ್‌ಅನ್ನೂ ತೆಲುಗರೇ ಆಳಲಿದ್ದೇವೆ. ಹೀಗಾಗಿ ಒಂದು ವರ್ಷದೊಳಗೆ ನೀವು ಹೈದರಾಬಾದ್‌ಗೆ ಶ್‌ಟಿ ಆಗಿಬಿಡಿ’ ಎಂದು ರಣಬೀರ್ ಕಪೂರ್‌ಗೆ ಕಿವಿಮಾತು ಹೇಳಿದ್ದಾರೆ.

ಅಷ್ಟಕ್ಕೇ ಸುಮ್ಮನಾಗದೇ, ‘ಮುಂಬೈ ಹಳೆಯದಾಯಿತು. ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ. ಹೈದರಾಬಾದ್ ಭಾರತೀಯ ಚಿತ್ರರಂಗವನ್ನು ಆಳಲಿದೆ. ರಾಜಮೌಳಿ, ದಿಲ್ ರಾಜು, ಬುದ್ಧಿವಂತರು. ಅದೇ ಸಾಲಿಗೆ ಸಂದೀಪ್ ರೆಡ್ಡಿ ವಂಗ ಕೂಡ ಸೇರಿದ್ದಾರೆ. ರಶ್ಮಿಕಾ ಮಂದಣ್ಣ ಕೂಡ ಬುದ್ಧಿವಂತೆ. ‘ಪುಷ್ಪ’ ಸಿನಿಮಾ ಸೆನ್ಸೇಷನ್ ಸೃಷ್ಟಿಸಿತ್ತು. ‘ಅನಿಮಲ್’ 500 ಕೋಟಿ ರೂ. ಗಳಿಕೆ ಮಾಡಿಕೊಳ್ಳುತ್ತದೆ’ ಎಂದೆಲ್ಲಾ ವೇದಿಕೆ ಮೇಲೆ ಮಾತನಾಡಿದ್ದಾರೆ. ಅವರ ಭಾಷಣದ ವಿಡಿಯೋ ವೈರಲ್ ಆಗಿದ್ದು, ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net