More

    ಗಣಿ ಮಾಲೀಕರು ಸಮರ್ಪಿಸಿದ ಚೆಕ್ ಹರಿದು, ಲಾರಿ ಮಾಲೀಕರ ಚಳಿ ಬಿಡಿಸಿದ ಸಿರಿಗೆರೆ ಶ್ರೀಗಳು!

    ಕೊಟ್ಟೂರು: ಈ ಬಾರಿ ಕೊಟ್ಟೂರಿನಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಕೊನೆಯ ದಿನದ ಸಭೆಯಲ್ಲಿ ಅನಿರೀಕ್ಷಿತ ಘಟನೆಯೊಂದು ವೇದಿಕೆಯಲ್ಲಿಯೇ ನಡೆಯಿತು.

    ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ದಯಪಾಲಿಸುತ್ತಿರುವಾಗ ಗಣಿ ಲಾರಿಗಳಿಂದ ಸಿರಿಗೆರೆ ಸಾಸಲು ಮಾರ್ಗದಲ್ಲಿ ಗಂಭೀರ ಅಪಘಾತಗಳು ಸಂಭವಿಸುತ್ತಿರುವ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದರು.

    ಹುಣ್ಣಿಮೆಯ ಕೊನೆಯ ದಿನದಂದೇ ಸಾಸಲು ಭಾಗದ ಲಾರಿ ಮಾಲೀಕರು ತರಳಬಾಳು ಹುಣ್ಣಿಮೆಗೆ ಒಂದು ಲಕ್ಷ ರೂ.ಗಳ ದೇಣಿಗೆ ಕೊಟ್ಟಿದ್ದಾರೆ. ಇದನ್ನು ಸ್ವೀಕರಿಸಲು ನಮ್ಮ ಮನಸ್ಸು ಒಪ್ಪುತ್ತಿಲ್ಲ ಎಂದು ವಿಷಯ ಪ್ರಸ್ತಾಪಿಸಿದ ಶ್ರೀಗಳು, ಗಣಿ ವಾಹನಗಳಿಗೆ ಸಿಲುಕಿ ಹಲವರು ಸಾವನ್ನಪ್ಪಿದ್ದಾರೆ. ಅವರಿಗೆ ಗಣಿಗಳ ಮಾಲೀಕರು ಪರಿಹಾರ ನೀಡಿಲ್ಲ. ಹೀಗಾಗಿ ತಾವು ದೇಣಿಗೆ ಸ್ವೀಕರಿಸುವುದಿಲ್ಲ ಎಂದರು. ಅದಲ್ಲದೇ ಕೊಟ್ಟೂರು ತರಳಬಾಳು ಹುಣ್ಣಿಮೆಗೆ ನೀಡಿರುವ ಒಂದು ಲಕ್ಷದ ದೇಣಿಗೆಯ ಚೆಕ್ ಹರಿಯುವ ಮೂಲಕ ಆಕ್ರೋಶ ಹೊರ ಹಾಕಿದರು.

    ಸಾಸಲು ಭಾಗದಲ್ಲಿ ನಡೆದಿರುವ ಅಪಘಾತಗಳೆಲ್ಲಾ ಗಣಿ ಲಾರಿಗಳಿಂದ ಸಂಭವಿಸಿವೆಯೇ ಹೊರತು ಸಾರ್ವಜನಿಕ ವಾಹನಗಳಿಂದಲ್ಲ. 15- 20 ಅಪಘಾತಗಳು ನಡೆದಿದ್ದು ನಾಲ್ಕಾರು ವಿದ್ಯಾರ್ಥಿಗಳು ಅಪಘಾತದಿಂದ ಸಾವನ್ನಪ್ಪಿದ್ದಾರೆ.
    ಹತ್ತಾರು ಜನರು ಕೈ ಕಾಲುಗಳನ್ನು ಮುರಿದುಕೊಂಡಿದ್ದಾರೆ. ಕಳೆದ ವರ್ಷ ಸಿರಿಗೆರೆ ತರಳಬಾಳು ವಿದ್ಯಾಸಂಸ್ಥೆಯ ಶಾಲೆಯ ಗುಮಾಸ್ತರೊಬ್ಬರು ಚಿಕ್ಕಜಾಜೂರಿಗೆ ಕರ್ತವ್ಯಕ್ಕೆ ಹೋಗುವಾಗ ಗಣಿಲಾರಿಯ ವೇಗದ ಅಪಘಾತದಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಸಿರಿಗೆರೆಯ ಶಾಲೆಗೆ ಪೋಷಕರೋರ್ವರು ತಮ್ಮ ಮಗಳನ್ನು ದಾಖಲಿಸಲು ಬರುತ್ತಿರುವಾಗ ಲಾರಿ ಅಪಘಾತದಲ್ಲಿ ಮೃತಪಟ್ಟರು. ಆ ವಿದ್ಯಾರ್ಥಿನಿಯು ಗಾಯಗೊಂಡಿದ್ದಾರೆ. ಈ ಎರಡು ಕುಟುಂಬದವರಿಗೆ ತಲಾ ಒಂದು ಕೋಟಿ ರೂ. ನೀಡುವಂತೆ ಚಿತ್ರದುರ್ಗ ಜಿಲ್ಲಾಧಿಕಾರಿಗೆ ತಿಳಿಸಲಾಗಿತ್ತು. ಗಣಿ ಮಾಲೀಕರಿಂದ 25 ಲಕ್ಷ ರೂ.ಗಳನ್ನು, ಇನ್ಸೂರೆನ್ಸ್ ಮೂಲಕ 50 ಲಕ್ಷ ರೂ.ಗಳನ್ನು ನೀಡುವಂತೆ ಕ್ರಮ ವಹಿಸುವ ಬಗ್ಗೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಇನ್ನೂರೆನ್ಸ್ ಪರಿಹಾರದ ನಿರೀಕ್ಷೆಯಲ್ಲಿದ್ದೇವೆ. ಘಟನೆ ಕಳೆದ ವರ್ಷ ನಡೆದಿದ್ದರೂ  ಮೃತರಾದವರಿಗೆ ಗಣಿ ಮಾಲೀಕರಿಂದ ಯಾವುದೇ ಪರಿಹಾರ ತಲುಪಿಲ್ಲ. ಮೃತ ನೌಕರನಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ ಎಂದು ಶ್ರೀಗಳು ವಿವರಿಸಿದರು.

    ದೇಣಿಗೆ ನೀಡಿದ ಗಣಿ ಲಾರಿ ಮಾಲೀಕರಿಗೆ ಒಂದು ವಾರದೊಳಗೆ ಎರಡೂ ಕುಟುಂಬಗಳಿಗೆ ತಲಾ 25 ಲಕ್ಷ ರೂ.ಗಳ ಪರಿಹಾರ ಜಮಾ ಆಗಬೇಕು ಎಂದು ಸೂಚಿಸಿದರು. ತಬ್ಬಿಬ್ಬಾದ ಗಣಿ ವ್ಯಾಪ್ತಿಯ ಲಾರಿ ಮಾಲೀಕರು ತಮ್ಮ ಸಮಕ್ಷಮದಲ್ಲಿ ಒಂದು ವಾರದೊಳಗೆ ಪರಿಹಾರ ನೀಡುತ್ತೇವೆ ಎಂದು ತಿಳಿಸಿದರು. ಒಪ್ಪದ ಶ್ರೀಗಳು, ನಮ್ಮನ್ನು ಕಾಯಬೇಡಿ, ಹಣವನ್ನು ಮೃತರ ಮತ್ತು ಸಂತ್ರಸ್ತರ ಕೆನರಾ ಬ್ಯಾಂಕ್ ಖಾತೆಗೆ ಜಮಾ ಮಾಡಿಸಿ, ಜಮಾ ಮಾಡಿದ ಮಾಹಿತಿಯನ್ನು ನಮಗೆ ಸಲ್ಲಿಸಿ ಎಂದು ತಾಕೀತು ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts