More

    ಅಕ್ರಮ ಮರಳು ಗಣಿಗಾರಿಕೆ; ನಿಷೇಧವಿದ್ದರೂ ಎತ್ತಿನ ಬಂಡಿ, ಟ್ರ್ಯಾಕ್ಟರ್ ಬಳಕೆ

    ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ

    ಮರಳು ಸಾಗಾಟ ಮಾಡಲು ಯಾವುದೇ ಕಾರಣಕ್ಕೂ ಎತ್ತುಗಳನ್ನು ಹಾಗೂ ಟ್ರ್ಯಾಕ್ಟರ್ ಬಳಸಬಾರದು ಎಂದು ಜಿಲ್ಲಾಡಳಿತ ಹಲವು ವರ್ಷಗಳ ಹಿಂದೆಯೇ ಆದೇಶ ಹೊರಡಿಸಿದೆ. ಆದರೆ, ಅಕ್ರಮ ದಂಧೆಕೋರರು ಮಾತ್ರ ಇಂದಿಗೂ ಎತ್ತಿನ ಬಂಡಿ ಹಾಗೂ ಟ್ರ್ಯಾಕ್ಟರ್ ಮೂಲಕ ನದಿಪಾತ್ರದಲ್ಲಿನ ಮರಳು ಲೂಟಿ ಮಾಡುತ್ತಿದ್ದಾರೆ.

    ಯಾರಾದರೂ ಎತ್ತಿನ ಬಂಡಿಯಲ್ಲಿ ಏಕೆ ಮರಳನ್ನು ಸಾಗಿಸುತ್ತಿದ್ದೀರಿ ಎಂದು ಕೇಳಿದರೆ ‘ಮನೆ ಸಲುವಾಗಿ ಸ್ವಲ್ಪ ತೆಗೆದುಕೊಂಡು ಹೋಗುತ್ತಿದ್ದೇವೆ’ ಎಂದು ಹೇಳಿ ಸಲೀಸಾಗಿ ಜಾರಿಕೊಳ್ಳುವ ಉತ್ತರ ನೀಡುತ್ತಿದ್ದಾರೆ. ಆದರೆ, ಎತ್ತಿನ ಬಂಡಿ ಮೂಲಕ ಮರಳನ್ನು ಲೂಟಿ ಮಾಡುತ್ತಿರುವ ದಂಧೆಕೋರರು ಅದನ್ನು ಲಾರಿ ಮಾಲೀಕರಿಗೆ ಮಾರಾಟ ಮಾಡುತ್ತಿದ್ದಾರೆ.

    ಮರಳು ಸಾಗಾಟ ಮಾಡಲು ಟ್ರ್ಯಾಕ್ಟರ್​ಗಳಿಗೆ ಅವಕಾಶವಿಲ್ಲ. ಹೀಗಾಗಿ ಮರಳಿನ ಪಾಯಿಂಟ್ ಗುತ್ತಿಗೆ ನೀಡಿದ ಸಮಯದಲ್ಲಿ ಟಿಪ್ಪರ್, ಲಾರಿ, ಕ್ಯಾಂಟರ್​ಗಳಿಗೆ ಮಾತ್ರ ಪಾಸ್ ನೀಡಲಾಗುತ್ತದೆ. ಆದರೆ, ಅಕ್ರಮ ಮರಳು ದಂಧೆಕೋರರು ನಿತ್ಯವೂ ಐದಾರು ಜನರು ಸೇರಿ ಟ್ರ್ಯಾಕ್ಟರ್ ತೆಗೆದುಕೊಂಡು ನೇರವಾಗಿ ನದಿ ಒಡಲಿಗೆ ಇಳಿದು ಲೂಟಿ ಮಾಡುತ್ತಿದ್ದಾರೆ. ಇವರಿಗೆ ಹೇಳುವವರೂ, ಕೇಳುವವರೂ ಇಲ್ಲದಂತಾಗಿದೆ.

    ಪೊಲೀಸರ ನಡೆ ಅನುಮಾನಕ್ಕೆ ಎಡೆ…

    ಎತ್ತಿನ ಬಂಡಿ ಹಾಗೂ ಟ್ರ್ಯಾಕ್ಟರ್ ಮೂಲಕ ಹಗಲು ಹೊತ್ತಿನಲ್ಲಿಯೇ ರಾಜಾರೋಷವಾಗಿ ಮರಳು ಲೂಟಿ ಮಾಡಲಾಗುತ್ತಿದೆ. ಆದರೆ, ಅಧಿಕಾರಿಗಳು ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ನದಿಪಾತ್ರದ ಗ್ರಾಮಗಳ ಜನರು ಆರೋಪಿಸುತ್ತಾರೆ. ಪ್ರತಿ ಗ್ರಾಮಗಳಿಗೂ ಇದೀಗ ಬೀಟ್ ಪೊಲೀಸರಿದ್ದಾರೆ. ಅಲ್ಲದೆ, ಪೊಲೀಸ್ ಠಾಣೆಯ ಜೀಪ್​ನಲ್ಲಿ ಅಧಿಕಾರಿಗಳು ಹಲವು ಬಾರಿ ಈ ರಸ್ತೆಗಳಲ್ಲಿ ಓಡಾಡುತ್ತಾರೆ. ಗಸ್ತು ವಾಹನಗಳು ಅಕ್ರಮವಾಗಿ ಮರಳು ಸಾಗಿಸುವ ರಸ್ತೆಯಲ್ಲಿಯೇ ಓಡಾಡುತ್ತವೆ. ಆದರೆ, ಯಾವೊಬ್ಬ ಅಧಿಕಾರಿಗಳೂ ಈ ದಂಧೆ ತಡೆಯಲು ಮುಂದಾಗುತ್ತಿಲ್ಲ. ಕೆಲ ಬಾರಿ ಪೊಲೀಸರಿಗೆ ಮಾಹಿತಿ ನೀಡಿದರೆ ಅದು ಆಗಲೇ ಅಕ್ರಮ ಮರಳು ದಂಧೆಕೋರರ ಕಿವಿಗೆ ಬಿದ್ದಿರುತ್ತದೆ. ಇದರಿಂದ ತಾಲೂಕಿನಲ್ಲಿ ಬೇಲಿಯೇ ಎದ್ದು ಹೊಲ ಮೇಯುತ್ತಿದೆಯೇ ಎನ್ನುವ ಅನುಮಾನ ಕಾಡತೊಡಗಿದೆ.

    ತಾಲೂಕಿನಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸುವ ಅಡ್ಡೆಗಳ ಮೇಲೆ ಕಂದಾಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಹಿಡಿಯುತ್ತಿದ್ದಾರೆ. ಆದರೆ, ಈ ಕೆಲಸವನ್ನು ಪೊಲೀಸರು ಏಕೆ ಮಾಡುತ್ತಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆ.

    ಕೋಟಿಹಾಳದಲ್ಲಿ ಅತಿಹೆಚ್ಚು

    ಕೋಟಿಹಾಳ ಗ್ರಾಮದಲ್ಲಿ ಅತಿಹೆಚ್ಚು ಟ್ರ್ಯಾಕ್ಟರ್​ಗಳನ್ನು ಬಳಸಿ ಅಕ್ರಮವಾಗಿ ಮರಳು ಲೂಟಿ ಮಾಡಲಾಗುತ್ತಿದೆ. ಅಲ್ಲದೆ, ಮರಳನ್ನು ನದಿ ಪಾತ್ರದಲ್ಲಿಯೇ ಸೋಸಿ ಆನೆಕಲ್ಲುಗಳನ್ನು ಬೇರ್ಪಡಿಸಿ ಮರಳು ಬೇರೆ ಹಾಗೂ ಆನೆಕಲ್ಲುಗಳನ್ನು ಪುಡಿ ಮಾಡಿ ಎಂಸ್ಯಾಂಡ್ ಎಂದು ಮಾರಾಟ ಮಾಡಲಾಗುತ್ತಿದೆ. ಆದರೆ, ಈ ಬಗ್ಗೆ ಗಮನ ಹರಿಸಿ ಸರ್ಕಾರದ ಸಂಪತ್ತು ಲೂಟಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮೌನವಹಿಸಿರುವುದು ವಿಪರ್ಯಾಸವೇ ಸರಿ.

    ನರಕಯಾತನೆ ಅನುಭವಿಸುವ ಎತ್ತುಗಳು

    ಎತ್ತುಗಳನ್ನು ಬಂಡಿಗೆ ಕಟ್ಟಿ ನೇರವಾಗಿ ನದಿಪಾತ್ರಕ್ಕೆ ತೆಗೆದುಕೊಂಡು ಹೋಗಿ ಮರಳು ತುಂಬಲಾಗುತ್ತಿದೆ. ಆದರೆ, ಈ ಮರಳನ್ನು ಹೊತ್ತ ಬಂಡಿಯನ್ನು ಎಳೆಯಲು ಎತ್ತುಗಳು ಹರಸಾಹಸ ಪಡುತ್ತಿವೆ. ಅಕ್ರಮವಾದ ದಾರಿಯಲ್ಲಿಯ ಗುಂಡಿಯಲ್ಲಿ ಸಿಲುಕುವ ಚಕ್ರ ಕೀಳಲು, ನದಿಯ ದಿಬ್ಬ ಹತ್ತಲು ಎಲ್ಲಿಲ್ಲದ ನೋವು ಅನುಭವಿಸುತ್ತಿವೆ. ಎತ್ತುಗಳು ಬಂಡಿ ಎಳೆಯದೆ ನಿಂತರೆ ಮನಬಂದಂತೆ ಹೊಡೆಯಲಾಗುತ್ತಿದೆ. ಈ ದೃಶ್ಯ ನೋಡಿದ ಅನೇಕರು ಎತ್ತನ ಬಂಡಿ ಮಾಲೀಕರಿಗಷ್ಟೆ ಅಲ್ಲ, ಅಕ್ರಮದ ವಿರುದ್ಧ ಕ್ರಮ ಕೈಗೊಳ್ಳದ ಸರ್ಕಾರಿ ಅಧಿಕಾರಿಗಳಿಗೂ ಹಿಡಿಶಾಪ ಹಾಕುತ್ತಿದ್ದಾರೆ.

    ಎತ್ತಿನ ಬಂಡಿ, ಟ್ರ್ಯಾಕ್ಟರ್ ಮೂಲಕ ಮರಳು ಸಾಗಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಾವು ತಹಸೀಲ್ದಾರ್​ರು ಸಭೆ ಮಾಡಿ ಈಗಾಗಲೇ ನಮ್ಮ ಪಿಎಸ್​ಐಗಳಿಗೆ ಸೂಚಿಸಿ, ನೋಟಿಸ್ ಕೂಡ ಕೊಟ್ಟಿದ್ದೇನೆ. ಅದಕ್ಕೆ ಅವರು ಉತ್ತರ ಸಹ ಕೊಡಬೇಕು. ಅಲ್ಲದೆ ಈಗಾಗಲೇ ನಾವು ಸಹ ಅಕ್ರಮ ಮರಳು ಸಾಗಿಸುವವರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದೇವೆ.

    | ಡಾ. ಗಿರೀಶ ಬೋಜಣ್ಣನವರ, ಡಿವೈಎಸ್ಪಿ ರಾಣೆಬೆನ್ನೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts