More

    ರಿವರ್ಸ್ ಡಯಾಬಿಟಿಸ್, ಮಧುಮೇಹದಿಂದ ಮುಕ್ತಿ

    ಸರಿಯಾದ ಊಟದ ಕ್ರಮವನ್ನು ಅಳವಡಿಸಿಕೊಂಡರೆ ಉತ್ತಮ ಆರೋಗ್ಯ ಹೊಂದಿ, ಮಧುಮೇಹವನ್ನು ಕೂಡ ದೂರ ಇಡಬಹುದಾಗಿದೆ. ಇದಲ್ಲದೆ, ಮಧುಮೇಹ ಹೊಂದಿರುವವರು ಔಷಧ ಹಾಗೂ ಇನ್ಸುಲಿನ್ ಸೇವನೆಯನ್ನು ನಿಲ್ಲಿಸಿ, ಮಧುಮೇಹ ಮುಕ್ತರಾಗುವುದನ್ನು ಸಾಧ್ಯವಾಗಿಸಿದೆ ನಾರಾಯಣ ನೇತ್ರಾಲಯದಲ್ಲಿನ ರಿವರ್ಸ್ ಡಯಾಬಿಟಿಸ್ ಕ್ಲಿನಿಕ್. ನಾರಾಯಣ ನೇತ್ರಾಲಯದ ಮುಖ್ಯಸ್ಥ ಡಾ. ಭುಜಂಗ ಶೆಟ್ಟಿ ಅವರು ‘ವಿಜಯವಾಣಿ’ ಆಯೋಜಿಸಿದ್ದ ಸಂವಾದದಲ್ಲಿ, ರಿವರ್ಸ್ ಡಯಾಬಿಟಿಸ್ ಪಾಲನೆ ಹೇಗೆ ಎಂಬುದರ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

    ಸರಿಯಾದ ಆಹಾರ ಪದ್ಧತಿ ಹಾಗೂ ವ್ಯಾಯಾಮದ ಮೂಲಕ ಡಯಾಬಿಟಿಸ್ ಅನ್ನು ರಿವರ್ಸ್ ಮಾಡಬಹುದು. ಅಂದರೆ, ಮಧುಮೇಹ ಪೂರ್ವ ಜೀವನಕ್ಕೆ ಮರಳಬಹುದು. ಯಾವುದೇ ಔಷಧ ಇಲ್ಲದೆ ಕೇವಲ ಅಹಾರ ಪದ್ಧತಿ ಮೂಲಕ ಮಧುಮೇಹವನ್ನು ನಿಯಂತ್ರಿಸಬಹುದಾಗಿದೆ. ಯಾರು ಬೇಕಾದರೂ ಈ ಪದ್ಧತಿಯನ್ನು ಅಳವಡಿಸಿಕೊಳ್ಳಬಹುದಾಗಿದ್ದು, ನಿತ್ಯ ಸೇವಿಸುವ ಆಹಾರದಲ್ಲಿಯೇ ಕೆಲ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ.

    ರೋಗಿಯ ಆರೋಗ್ಯ ತಪಾಸಣೆ ನಡೆಸಿ ಯಾವ ಯಾವ ಸಮಸ್ಯೆ ಹೊಂದ್ದಾರೆ, ಯಾವೆಲ್ಲ ಔಷಧ ಸೇವಿಸುತ್ತಿದ್ದಾರೆ, ರಕ್ತದಲ್ಲಿನ ಸಕ್ಕರೆ ಅಂಶ ಎಷ್ಟಿದೆ ಎಂಬಿತ್ಯಾದಿ ವಿವರ ಪಡೆದು, ಯಾವ ರೀತಿಯ ಆಹಾರ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂಬ ಬಗ್ಗೆ ಮಾಹಿತಿ ನೀಡುತ್ತಾರೆ. ಇದರಲ್ಲಿ ಪ್ರತಿ ರೋಗಿಗೂ ಪ್ರತ್ಯೇಕ ಆಹಾರ ಕ್ರಮಗಳಿರುತ್ತವೆ. ಹಾಗಾಗಿ ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ.

    ಇನ್ಸುಲಿನ್ ಹಾಗೂ ಔಷಧಮುಕ್ತರಾದವರು: ರಿವರ್ಸ್ ಡಯಾಬಿಟಿಸ್ ಕ್ಲಿನಿಕ್​ನಲ್ಲಿ ಕಳೆದೊಂದು ವರ್ಷದಲ್ಲಿ 3,408 ಮಂದಿ ನೋಂದಣಿಯಾಗಿದ್ದು 2,204 ಮಂದಿ ನಿಯಮಿತ ಪರಿಶೀಲನೆಗೆ ಒಳಗಾಗಿದ್ದಾರೆ. ಇವರಲ್ಲಿ ಕೆಲವರು ರಕ್ತದಲ್ಲಿನ ಸಕ್ಕರೆ ಅಂಶವನ್ನು ಗಣನೀಯವಾಗಿ ತಗ್ಗಿಸಿಕೊಂಡಿದ್ದಾರೆ. 1,199 ಮಂದಿ ಈ ಮೊದಲು ತೆಗೆದುಕೊಳ್ಳುತ್ತಿದ್ದ ಔಷಧ ಪ್ರಮಾಣವನ್ನು ಅರ್ಧದಷ್ಟು ಕಡಿಮೆ ಮಾಡಿಕೊಂಡಿದ್ದಾರೆ. ಇವರಲ್ಲಿ 91 ಮಂದಿ ಸಂಪೂರ್ಣವಾಗಿ ಇನ್ಸುಲಿನ್ ಮುಕ್ತರಾಗಿದ್ದಾರೆ. 498 ಮಂದಿ ಸಂಪೂರ್ಣ ಔಷಧ ತ್ಯಜಿಸಿದ್ದಾರೆ ಎಂದು ನಾರಾಯಣ ನೇತ್ರಾಲಯದ ಮುಖ್ಯಸ್ಥ ಡಾ. ಭುಜಂಗಶೆಟ್ಟಿ ತಿಳಿಸಿದ್ದಾರೆ.

    ಸಕ್ಕರೆ ಅಂಶ ಇರುವ ಆಹಾರ ತ್ಯಜಿಸಿ: ಸಕ್ಕರೆ ಮಾತ್ರವಲ್ಲ, ಸಕ್ಕರೆ ಅಂಶ ಇರುವ ಆಹಾರಗಳಿಂದಲೂ ಮಧುಮೇಹ ಬರುತ್ತದೆ. ಅಕ್ಕಿ, ಗೋಧಿ, ರಾಗಿ, ಜೋಳ, ಸಿರಿಧಾನ್ಯ, ಆಲೂಗಡ್ಡೆ ಸೇರಿ ಭೂಮಿಯೊಳಗೆ ಬೆಳೆಯುವ ಪದಾರ್ಥಗಳು, ಎಣ್ಣೆಯಲ್ಲಿ ಕರಿದ ಪದಾರ್ಥ, ಬಾಳೆಹಣ್ಣು, ಸೇಬು, ದ್ರಾಕ್ಷಿ ಇತ್ಯಾದಿ ಸಕ್ಕರೆ ಅಂಶ ಹೆಚ್ಚಿರುವ ಹಣ್ಣುಗಳು, ಒಣಹಣ್ಣುಗಳು, ಬಿಸ್ಕೆಟ್ ಸೇರಿ ಬೇಕರಿ ಪದಾರ್ಥ, ತಂಪು ಪಾನೀಯ, ಸಂಸ್ಕರಿಸಿದ ಹಂದಿ ಮಾಂಸ, ಎಣ್ಣೆ ಬೀಜ ಇತ್ಯಾದಿ. ಹೀಗೆ ಹೆಚ್ಚು ಸಕ್ಕರೆ ಅಂಶ ಇರುವ ಪದಾರ್ಥಗಳ ಸೇವನೆ ತ್ಯಜಿಸುವುದು ಸೂಕ್ತ.

    ಸ್ವತಃ ಪ್ರಯೋಗಕ್ಕೆ ಒಳಪಟ್ಟರು: ನಾರಾಯಣ ನೇತ್ರಾಲಯದಲ್ಲಿ ರಿವರ್ಸ್ ಡಯಾಬಿಟಿಸ್ ಕ್ಲಿನಿಕ್​ನ ಸ್ಥಾಪಕರಾದ ಡಾ. ಭುಜಂಗಶೆಟ್ಟಿ ಅವರು, ಸ್ವತಃ ಮಧುಮೇಹ ರೋಗಿಯಾಗಿದ್ದು, ಕಳೆದ 27 ವರ್ಷಗಳಿಂದ ಎಲ್ಲರಂತೆ ಅವರು ಕೂಡ ಮಾತ್ರೆಗಳನ್ನು ಸೇವಿಸುತ್ತಿದ್ದರು. ಇದರಿಂದ ಹೈರಾಣಾಗಿದ್ದ ಅವರು, ಆಹಾರದ ಮೂಲಕ ಮಧುಮೇಹ ನಿಯಂತ್ರಿಸಿಕೊಳ್ಳಲು ಮುಂದಾದರು. ಇದಕ್ಕಾಗಿ ಅವರು ತಮ್ಮನ್ನು ತಾವೇ ಪ್ರಯೋಗಕ್ಕೆ ಒಳಪಡಿಸಿಕೊಂಡರು. ಅದರಂತೆ ಯಾವ ಆಹಾರವನ್ನು ಹೇಗೆ?, ಎಷ್ಟು? ತನ್ನಿಬೇಕು ಎಂಬ ಬಗ್ಗೆ ಪ್ರಯೋಗ ಮಾಡುತ್ತಾ ಹೋದರು. ಅದರ ಫಲವಾಗಿ ಅವರೀಗ ಮಧುಮೇಹ ಗೆದ್ದಿದ್ದಾರೆ.

    ನಾನು ಮತ್ತು ಪತ್ನಿ ಇಬ್ಬರೂ ಮಧುಮೇಹದಿಂದ ಬಳಲುತ್ತಿದ್ದು, ರಿವರ್ಸ್ ಡಯಾಬಿಟಿಸ್ ಕ್ಲಿನಿಕ್ ಬಗ್ಗೆ ತಿಳಿದು ಇಲ್ಲಿಗೆ ಬಂದಾಗ ಯಾವುದೇ ಔಷಧ, ಇಂಜೆಕ್ಷನ್ ಇಲ್ಲದೆ ಯಾವ ರೀತಿಯ ಅಹಾರ ಕ್ರಮ, ವ್ಯಾಯಾಮ ಮಾಡಬೇಕೆಂದು ತಿಳಿಸಿದರು. ಪಾಲಿಸಿದ್ದರ ಪರಿಣಾಮ ಸಕ್ಕರೆ ಅಂಶ ಕಡಿಮೆಯಾಗಿದೆ. ಈ ಮೊದಲು ಸೇವಿಸುತ್ತಿದ್ದ ಔಷಧ ಪ್ರಮಾಣ ಅರ್ಧ ತಗ್ಗಿಸಿದ್ದೇನೆ. ಕೆಲವೇ ದಿನಗಳಲ್ಲಿ ಸಂಪೂರ್ಣ ಮಧುಮೇಹಮುಕ್ತರಾಗುತ್ತೇವೆ.

    | ಸಿದ್ದರಾಮಯ್ಯ ದಂಪತಿ ತುಮಕೂರು

    ಆರೋಗ್ಯಕರ ಆಹಾರ ಸೇವಿಸಿ: ಉತ್ತಮ ಕೊಬ್ಬು ದೇಹಕ್ಕೆ ಅಗತ್ಯ. ಕೆನೆಭರಿತ ಹಾಲು, ಚೀಸ್, ಪನ್ನೀರ್, ಕೆನೆ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ, ಸೋಯಾ ಹಾಲು, ತೆಂಗಿನ ಎಣ್ಣೆ, ಆಲಿವ್ ಎಣ್ಣೆ, ಕಡಲೆಕಾಯಿ ಎಣ್ಣೆ, ಸಾಸಿವೆ ಎಣ್ಣೆ ಬಳಕೆ ಉತ್ತಮ. ಮೊಟ್ಟೆ, ಮೀನು, ಕೋಳಿ, ಏಡಿ, ಸೀಗಡಿ , ಹಸಿರು ಸೊಪು್ಪ ಮತ್ತು ತರಕಾರಿ, ಬಾದಾಮಿ, ವಾಲ್​ನಟ್, ಅಗಸೆ ಬೀಜ, ಕುಂಬಳ ಕಾಯಿಬೀಜ, ಸೂರ್ಯಕಾಂತಿ ಬೀಜ, ತುಳಸಿ ಬೀಜ, ಕಲ್ಲಂಗಡಿ ಬೀಜ, ಎಳ್ಳು, ಸಾಂಬಾರ ಪದಾರ್ಥಗಳು, ಬಾದಾಮಿ ಹಿಟ್ಟು, ತೆಂಗಿನ ಹಿಟ್ಟು, ಬೆಟ್ಟದ ನೆಲ್ಲಿಕಾಯಿ, ನೇರಳೆ, ತಾಳೆ ಹಣ್ಣು ಇತ್ಯಾದಿಗಳನ್ನು ಸೇವಿಸಬೇಕು.

    ಉಪವಾಸದ ಉಪಯೋಗ: ಹಬ್ಬ ಹಾಗೂ ವಿಶೇಷ ದಿನಗಳು ಸೇರಿದಂತೆ ಆಗಾಗ್ಗೆ ಜನರು ಉಪವಾಸ ಮಾಡುವುದನ್ನು ರೂಢಿಸಿಕೊಳ್ಳುವುದು ಉತ್ತಮ. ಹೆಚ್ಚುವರಿ ಆಹಾರ ಸೇವನೆಯಿಂದ ಪಚನ ಕ್ರಿಯೆ ಮೇಲಾಗುವ ಒತ್ತಡವನ್ನು ಉಪವಾಸದಿಂದ ತಗ್ಗಿಸಬಹುದಾಗಿದೆ. ಹಿಂದಿನಿಂದಲೂ ಭಾರತೀಯರು ಏಕಾದಶಿ, ರಂಜಾನ್ ಸೇರಿದಂತೆ ವಿಶೇಷ ದಿನಗಳಲ್ಲಿ ಉಪವಾಸ ಮಾಡುವುದನ್ನು ರೂಢಿಸಿಕೊಂಡಿದ್ದಾರೆ. ದಿನಕ್ಕೆ 2-3 ಬಾರಿ ಮಿತ ಆಹಾರ ಸೇವನೆ ಆರೋಗ್ಯಕ್ಕೆ ಉತ್ತಮ. ಮಧುಮೇಹಿಗಳು ಸೇರಿದಂತೆ ಜನರು ಪದೇಪದೆ ಆಹಾರ ಸೇವಿಸುವುದು (ದಿನಕ್ಕೆ 4ಕ್ಕಿಂತ ಹೆಚ್ಚು ಬಾರಿ) ಆರೋಗ್ಯಕ್ಕೆ ಒಳಿತಲ್ಲ ಎಂದು ಡಾ. ಭುಜಂಗ ಶೆಟ್ಟಿ ತಿಳಿಸಿದರು.

    ಮಾಂಸಾಹಾರದಿಂದ ಉತ್ತಮ ಫ್ಯಾಟ್: ದೇಹಕ್ಕೆ ಅಗತ್ಯವಿರುವ ಆರೋಗ್ಯಕರ ಫ್ಯಾಟ್​ಗಾಗಿ ಮಾಂಸಾಹಾರ ಸೇವನೆ ಮಾಡುವುದು ತಪ್ಪಲ್ಲ. ಆದರೆ, ಅತಿಯಾದರೆ ಅಮೃತವೂ ವಿಷ ಎಂಬ ಮಾತು ನೆನಪಿರಲಿ. ಮಾಂಸಾಹಾರದಲ್ಲಿ ಮೊಟ್ಟೆ, ನಾಟಿ ಕೋಳಿ, ಮಾಂಸ, ಮೀನುಗಳನ್ನು ಧಾರಾಳವಾಗಿ ಸೇವಿಸಬಹುದು. ನಿತ್ಯ ತರಕಾರಿ ಜೊತೆಗೆ ಮೊಟ್ಟೆ ಸೇವನೆ ಉತ್ತಮ. ಸಂಸ್ಕರಿಸಿದ ಹಾಗೂ ಹಂದಿ ಮಾಂಸ ಬಳಕೆ ಮಾಡಬಾರದು. ಹಾಗೆಯೇ ಮಾಂಸಾಹಾರದ ಜೊತೆಗೆ ಅಧಿಕ ಪ್ರಮಾಣದಲ್ಲಿ ಕಾಬೋಹೈಡ್ರೇಟ್ ಅಂಶ ಇರುವ ಮುದ್ದೆ, ಚಪಾತಿ, ಅನ್ನ ಸೇವನೆ ಮಿತವಾಗಿರಲಿ.

    ರಿವರ್ಸ್ ಡಯಾಬಿಟಿಸ್, ಮಧುಮೇಹದಿಂದ ಮುಕ್ತಿಉತ್ತಮ ಆಹಾರ ಕ್ರಮದಿಂದ ಮಧುಮೇಹದ ವಿರುದ್ಧ ಗೆಲುವು

    • ನಾರಾಯಣ ನೇತ್ರಾಲಯದ ಕ್ಲಿನಿಕ್​ನಲ್ಲಿ ಚಿಕಿತ್ಸೆ ಲಭ್ಯ
    • ರಿವರ್ಸ್ ಡಯಾಬಿಟಿಸ್ ಪದ್ಧತಿಯಿಂದ ಮಧುಮೇಹ ಮುಕ್ತ
    • ಸಕ್ಕರೆಯನ್ನು ಸಂಪೂರ್ಣ ತ್ಯಜಿಸುವುದು ಉತ್ತಮ
    • ಕಾಬೋಹೈಡ್ರೇಟ್ ಪದಾರ್ಥ ಬಳಕೆ ನಿಯಂತ್ರಣ ಅಗತ್ಯ
    • ಹಣ್ಣಿನ ಜ್ಯೂಸ್ ಬದಲು ಇಡೀ ಹಣ್ಣನ್ನು ಸೇವಿಸುವುದು ಉತ್ತಮ
    • ಹೊರಗಡೆ ಆಹಾರ ಸೇವನೆ ಬದಲು ಮನೆಯಲ್ಲಿ ಸಿದ್ಧಪಡಿಸಿದ ಊಟ ಚೆನ್ನ

    ಸಿನಿಮಾ ಹೀರೋಯಿನ್​ಗೆ ಹೋಲಿಸಿದ್ದಕ್ಕೆ ಪತಿಗೆ ಊಟ ಹಾಕಲ್ಲ ಎಂದ ಪತ್ನಿ!

    ರೇಸ್‌ಕೋರ್ಸ್ ರಸ್ತೆಗೆ ರೆಬೆಲ್ ಸ್ಟಾರ್​ ಅಂಬರೀಷ್ ಹೆಸರು; ಮುಖ್ಯಮಂತ್ರಿ ಬೊಮ್ಮಾಯಿ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts