More

    ಪತ್ನಿಗೆ ಕರೆ ಮಾಡಿದಾಗಲೆಲ್ಲ ಬಿಜಿ: ಮುಂದಾಗಿದ್ದು ದುರಂತ ಅಂತ್ಯ, ಮಕ್ಕಳ ಪ್ರಾಣವೂ ಹೋಯ್ತು

    ವಿಜಯವಾಡ: ಗಂಡನ ಅನುಮಾನ ಎಂಬ ಭೂತಕ್ಕೆ ಪತ್ನಿ ಮತ್ತು ಇಬ್ಬರು ಮಕ್ಕಳು ದಾರುಣವಾಗಿ ಸಾವಿಗೀಡಾಗಿರುವ ಘಟನೆ ಆಂಧ್ರ ಪ್ರದೇಶದ ಚಿತ್ತೂರ್​ನಲ್ಲಿ ನಡೆದಿದೆ.

    ತಿರುಪತಿಯ ವಿದ್ಯುತ್​ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಕಿಶೋರ್​ಗೆ ಸ್ವಿಮ್ಸ್​ ಆಸ್ಪತ್ರೆಯಲ್ಲಿ ನರ್ಸ್​ ಆಗಿ ಕೆಲಸ ಮಾಡುತ್ತಿದ್ದ ನೀರಜ (32) ಎಂಬಾಕೆಯ ಪರಿಚಯವಾಗಿತ್ತು. ನೀರಜ ಆರಂಭಿಕ ವಯಸ್ಸಿನಲ್ಲೇ ತನ್ನ ಪಾಲಕರನ್ನು ಕಳೆಕೊಂಡಿದ್ದಳು. ತಿರುಪತಿಯ ಅಂಕಲ್​ ಮನೆಯಲ್ಲಿ ಉಳಿದುಕೊಂಡು ವಿದ್ಯಾಭ್ಯಾಸ ಮುಗಿಸಿ ಸ್ವಿಮ್ಸ್​ ಆಸ್ಪತ್ರೆಯಲ್ಲಿ ನರ್ಸ್​ ಆಗಿ ಕೆಲಸಕ್ಕೆ ಸೇರಿದ್ದಳು. ಈ ಸಂದರ್ಭದಲ್ಲಿ ಆದ ಇಬ್ಬರ ಪರಿಚಯ ಪ್ರೀತಿಗೆ ತಿರುಗಿ ಹಿರಿಯರ ಒಪ್ಪಿಗೆ ಮೇರೆಗೆ 9 ವರ್ಷಗಳ ಹಿಂದೆ ಮದುವೆ ಆಗಿದ್ದರು. ಇಬ್ಬರು ತಿರುಪತಿಯ ಕಪುರಮ್​ನಲ್ಲಿ ವಾಸವಿದ್ದರು.

    ಇಬ್ಬರ ವೈವಾಹಿಕ ಜೀವನಕ್ಕೆ ಸಾಕ್ಷಿಯಾಗಿ ಚಂದು (8) ಮತ್ತು ಚೈತ್ರ (2) ಹೆಸರಿನ ಇಬ್ಬರು ಮಕ್ಕಳಿದ್ದರು. ಕರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷವೇ ದಂಪತಿ ಗುಡ್ಯಾನಮ್​ಪಲ್ಲೆಗೆ ಬಂದು ನೆಲೆಸಿದ್ದರು. ಈ ನಡುವೆ ಕಿಶೋರ್​ ತನ್ನ ಕೆಲಸ ಬಿಟ್ಟು ಪೆನುಮುರು ವಲಯದಲ್ಲಿ ಕೋಳಿ ಫಾರ್ಮ್​ ಇಟ್ಟುಕೊಂಡಿದ್ದ.

    ಇತ್ತ ನೀರಜ ತಿರುಪತಿಯ ಸ್ವಿಮ್ಸ್ ಆಸ್ಪತ್ರೆಯಲ್ಲಿ ತನ್ನ ಕರ್ತವ್ಯ ನಿರ್ವಹಿಸುತ್ತಿದ್ದಳು. ಕಿಶೋರ್​ ಕರೆ ಮಾಡಿದಾಗಲೆಲ್ಲ ಆಕೆ ಬಿಜಿ ಆಗಿರುತ್ತಿದ್ದನ್ನು ನೋಡಿ ಸಂಶಯ ಮೂಡಲು ಆರಂಭಿಸಿತು. ತಿರುಪತಿಗೆ ಬನ್ನಿ ಎಂದು ಆಕೆ ಗಂಡನನ್ನು ಒತ್ತಾಯಿಲು ಆರಂಭಿಸಿದಳು. ಆದರೆ, ಕಿಶೋರ್​ಗೆ ಆತನ ತಾಯಿಗೂ ಇದು ಇಷ್ಟವಿರಲಿಲ್ಲ. ಇದೇ ವಿಚಾರವಾಗಿ ಕಳೆದ ಶನಿವಾರ ರಾತ್ರಿ ನೀರಜ ಮತ್ತು ಕಿಶೋರ್​ ನಡುವೆ ಜಗಳವು ನಡೆದಿತ್ತು. ಮೊದಲೇ ಅನುಮಾನ ಹೊಂದಿದ್ದ ಕಿಶೋರ್​, ನೀರಜಳನ್ನು ಮನಬಂದಂತೆ ಥಳಿಸಿ, ನಿಂದಿಸಿದ್ದ ಎನ್ನಲಾಗಿದೆ.

    ಇದರಿಂದ ಮನನೊಂದ ನೀರಜಾ ಭಾನುವಾರ ಬೆಳಗ್ಗೆ ತನ್ನಿಬ್ಬರು ಮಕ್ಕಳನ್ನು ಸ್ಕೂಟಿಯಲ್ಲಿ ಕರೆದೊಯ್ದಿದ್ದಾಳೆ. ಇತ್ತ ಪೆನುಮುರು ಪೊಲೀಸ್​ ಠಾಣೆಯಲ್ಲಿ ಕಿಶೋರ್​, ಪತ್ನಿ ಮತ್ತು ಮಕ್ಕಳು ಕಾಣೆಯಾಗಿರುವುದಾಗಿ ದೂರು ದಾಖಲಿಸಿದ್ದಾನೆ. ಶೋಧ ಕಾರ್ಯಾಚರಣೆಗೆ ಕೈಗೊಂಡ ಪೊಲೀಸರಿಗೆ ಮಂಗಳವಾರ ಬೆಳಗ್ಗೆ ರಾಮಚಂದ್ರಪುರಂ ವಲಯದ ಕಲ್ಲು ಕ್ವಾರಿಯ ಬಳಿ ಸ್ಕೂಟಿ ಪಾರ್ಕ್​ ಮಾಡಿರುವ ಮಾಹಿತಿಯನ್ನು ಮತ್ತು ನೀರಿನ ಹೊಂಡದಲ್ಲಿ ಮೃತದೇಹಗಳು ಪತ್ತೆಯಾಗಿದ್ದರ ಮಾಹಿತಿಯನ್ನು ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಹೋದಾಗ ನೀರಜಾ ತನ್ನ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ. (ಏಜೆನ್ಸೀಸ್​)

    ಹೀಗೂ ಇರ್ತಾರೆ! ತಲೆಬುರುಡೆ ಓಪನ್‌ ಮಾಡಿ ಕತ್ತರಿ ಹಾಕಿದರೂ ಜೋಕ್‌ ಮಾಡುತ್ತಿದ್ದ ರೋಗಿ…

    32 ಕರೊನೇತರ ರೋಗಿಗಳಲ್ಲಿ ಬ್ಲ್ಯಾಕ್​ ಫಂಗಸ್​ ಪತ್ತೆ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts