

ವಿಜಯವಾಡ: ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಪೊಲೀಸ್ ಸಬ್ಇನ್ಸ್ಪೆಕ್ಟರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಗುಡಿವಾಡದಲ್ಲಿ ನಡೆದಿದೆ.
ಗುಡಿವಾಡ ಠಾಣೆಯ ಎಸ್ಐ ವಿಜಯ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡವರು. ತಮ್ಮ ಅಪಾರ್ಟ್ಮೆಂಟ್ನಲ್ಲಿ ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಯ ಹಿಂದೆ ವಿವಾಹೇತರ ಸಂಬಂಧವಿರುವ ಶಂಕೆಯನ್ನು ಸಹೋದ್ಯೋಗಿಗಳು ವ್ಯಕ್ತಪಡಿಸಿದ್ದಾರೆ.
ವೆಸ್ಟ್ ಗೋದಾವರಿ ಜಿಲ್ಲೆಯ ಏಳೂರಿನ 2012ನೇ ಬ್ಯಾಚ್ ಎಸ್ಐ ಆಗಿದ್ದ ವಿಜಯ್ಕುಮಾರ್, ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ನೋಜೀಡು ಮೂಲದ ಬ್ಯೂಟಿಷಿಯನ್ ಜತೆಗೆ ವಿವಾಹೇತರ ಸಂಬಂಧ ಹೊಂದಿದ್ದ ಆರೋಪದ ಮೇಲೆ ವಿಜಯ್ ಕುಮಾರ್ ಒಮ್ಮೆ ಅಮಾನತ್ತು ಶಿಕ್ಷೆಗೆ ಗುರಿಯಾಗಿದ್ದರು.
ಶಿಕ್ಷೆ ಅವಧಿ ಮುಗಿದ ಬಳಿಕ ಗುಡಿವಾಡ ಉಪವಲಯದ ಅನೇಕ ಠಾಣೆಗಳಲ್ಲಿ ಎಸ್ಐ ಆಗಿ ವಿಜಯ್ ಕಾರ್ಯ ನಿರ್ವಹಿಸಿದ್ದರು. ಮೂರು ತಿಂಗಳ ಹಿಂದಷ್ಟೇ ಏಳೂರು ಮೂಲದ ಮಹಿಳೆಯೊಬ್ಬರನ್ನು ಮದುವೆಯಾಗಿದ್ದರು. ವಿವಾಹವಾದರೂ ಪತ್ನಿಯನ್ನು ಕರೆತರದೆ ಕಪೂರಾದಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಬ್ಯೂಟಿಷಿಯನ್ ಜತೆಯಲ್ಲೇ ಉಳಿದುಕೊಂಡಿದ್ದರು.
ಇದೀಗ ಸಾವಿಗೀಡಾಗಿದ್ದು, ಬ್ಯೂಟಿಷಿಯನ್ ಒತ್ತಡದಿಂದಲೇ ಮೃತಪಟ್ಟಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ವಿಜಯ್ ಮೃತದೇಹವನ್ನು ಗುಡಿವಾಡ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್)