ಅನಂತ್ ಅಂಬಾನಿ ಜನ್ಮದಿನಕ್ಕೆ ಕಾಸ್ಟ್ಲೀ ಗಿಫ್ಟ್​! ಸ್ನೇಹಿತ ಕೊಟ್ಟ ಈ ಉಡುಗೊರೆ ವಾಚ್, ಕಾರಿ​​ಗಿಂತಲು ದುಬಾರಿ

WhatsApp Image 2024-04-12 at 10.46.21 AM
Published on

ನವದೆಹಲಿ: ಕಳೆದ ತಿಂಗಳಷ್ಟೇ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ರಿಲಯನ್ಸ್ ಸಂಸ್ಥಾಪಕ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಅವರ ಪೂರ್ವ ವಿವಾಹ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಇದರ ಬೆನ್ನಲ್ಲೇ ಏಪ್ರಿಲ್ 10ರಂದು ಜನ್ಮದಿನ ಆಚರಿಸಿಕೊಂಡ ಅನಂತ್​ಗೆ ಹುಟ್ಟುಹಬ್ಬದ ಸಂಭ್ರಮ ತಿಳಿಸಲು ವಿಶೇಷ ಹಾಗೂ ಗ್ರ್ಯಾಂಡ್ ಪಾರ್ಟಿ ಏರ್ಪಡಿಸಲಾಗಿತ್ತು. ಈ ವೇಳೆ ಅವರ ಆಪ್ತ ಸ್ನೇಹಿತರೊಬ್ಬರು ಕೊಟ್ಟ ಉಡುಗೊರೆ ಭಾರೀ ದುಬಾರಿಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ನೋಡುಗರ ಗಮನಸೆಳೆದಿದೆ.

ಮುಕೇಶ್ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿ ಈ ವರ್ಷ 29ನೇ ವಸಂತಕ್ಕೆ ಕಾಲಿಟ್ಟಿದ್ದು, ಜಾಮ್‌ನಗರದಲ್ಲಿ ಸ್ಟಾರ್-ಸ್ಟಡ್ ಪಾರ್ಟಿಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಸಲ್ಮಾನ್ ಖಾನ್ ಸೇರಿದಂತೆ ಹಲವಾರು ಜನಪ್ರಿಯ ಸೆಲೆಬ್ರಿಟಿಗಳು ಅನಂತ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಇದರ ವಿಡಿಯೋ, ಫೋಟೋಗಳು ಈಗ ಇಂಟರ್ನೆಟ್‌ನಲ್ಲಿ ವ್ಯಾಪಕವಾಗಿ ಹರಿದಾಡಿವೆ.

ಹೆಸರಾಂತ ಸಾಮಾಜಿಕ ಕಾರ್ಯಕರ್ತ ಮತ್ತು ರಾಧಾ ಮೀರಾ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಭರತ್ ಮೆಹ್ರಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅನಂತ್ ಅಂಬಾನಿ ಅವರೊಂದಿಗಿರುವ ಫೋಟೋ ಹಂಚಿಕೊಂಡಿದ್ದು, ಫೋಟೋದಲ್ಲಿ ಅನಂತ್​ಗೆ ಗಣೇಶನ ವರ್ಣಚಿತ್ರವನ್ನು ಉಡುಗೊರೆಯಾಗಿ ನೀಡುತ್ತಿರುವುದು ಕಂಡುಬಂದಿದೆ. ಇದು ಸಾಮಾನ್ಯ ಗಿಫ್ಟ್​ ಇರಬೇಕು ಎಂದುಕೊಂಡರೆ ಅದು ನಿಮ್ಮ ತಪ್ಪು ಕಲ್ಪನೆ. ಈ ಪೇಂಟಿಂಗ್ ಬಹಳ ವಿಶೇಷತೆಯಿಂದ ಕೂಡಿದೆ.

ಅನಂತ್ ಅಂಬಾನಿಗೆ ಉಡುಗೊರೆಯಾಗಿ ನೀಡಿದ ಪೇಂಟಿಂಗ್ ಸಾಮಾನ್ಯವಾದದ್ದಲ್ಲ. ಭಗವಾನ್ ಗಣೇಶನ ಚಿತ್ರಕಲೆ ಎಂಎಫ್ ಹುಸೇನ್ ಅವರ ಕಲಾಕೃತಿಯಾಗಿದೆ. 20ನೇ ಶತಮಾನದ ಅತ್ಯಂತ ಪ್ರಸಿದ್ಧ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಭಾರತೀಯ ಕಲಾವಿದರಲ್ಲಿ ಅವರು ಸಹ  ಒಬ್ಬರು. ಭರತ್ ಮೆಹ್ರಾ ಉಲ್ಲೇಖಿಸಿದಂತೆ, ಚಿತ್ರಕಲೆ ಸೊಕೊಟ್ರಾ ಡ್ರ್ಯಾಗನ್ ಯೆಮೆನ್ ಮರದಿಂದ ಮಾಡಲ್ಪಟ್ಟಿದೆ.

ಚಿತ್ರಕಲೆಯ ನಿಖರ ಬೆಲೆ ಸ್ಪಷ್ಟವಾಗಿಲ್ಲ. ಆದರೆ ಎಂಎಫ್ ಹುಸೇನ್ ಅವರ ಮೇರುಕೃತಿಯಾಗಿರುವುದರಿಂದ ಇದು ಬಹಳ ಅಪರೂಪ ಮತ್ತು ದುಬಾರಿ ಎಂಬುದನ್ನು ಊಹಿಸಬಹುದು,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net