More

    ಸ್ಮಾರ್ಟ್ ಗೀಳು ಭವಿಷ್ಯ ಹಾಳು!; ರಜೆಯಲ್ಲಿ ಹೆಚ್ಚಿದ ಸೋಷಿಯಲ್ ಮೀಡಿಯಾ ಬಳಕೆ

    ಕೆ.ಎಂ. ಪಂಕಜಾ ಬೆಂಗಳೂರು
    ಬೇಸಿಗೆ ರಜೆ ಬಂದಿದೆ, ಹೊರಗೆ ಆಟ ಆಡಲು ಕಳಿಸೋಣವೆಂದರೆ ರಣ ಬಿಸಿಲು. ಒಂದೆರಡು ತಿಂಗಳಷ್ಟೇ ಅಲ್ವಾ ? ಮನೆಯಲ್ಲಿ ಟಿ.ವಿ, ಮೊಬೈಲ್ ನೋಡಿಕೊಂಡು ಇರಲಿ ಬಿಡಿ ಪಾಪ…! ಮಕ್ಕಳ ವಿಚಾರದಲ್ಲಿ ನಿಮ್ಮ ನಿಲುವೂ ಇದೇ ಆಗಿದ್ದರೆ ಈಗಲೇ ಎಚ್ಚೆತ್ತುಕೊಳ್ಳಿ. ನಿಮ್ಮ ಒಂದೆರಡು ತಿಂಗಳ ಉದಾರತೆ ಅವರ ಭವಿಷ್ಯಕ್ಕೇ ಮುಳುವಾಗಬಹುದೆಂಬ ಗಂಭೀರ ಎಚ್ಚರಿಕೆಯನ್ನು ಮಕ್ಕಳ ತಜ್ಞರು, ಜಾಗತಿಕ ಅಧ್ಯಯನಗಳ ವರದಿ ನೀಡಿವೆ.

    ಜನರ ಇಂದಿನ ಜೀವನ ವರ್ಚುವಲ್ ಆಗಿ ಬಿಟ್ಟಿದೆ. ಕೋವಿಡ್ ಸಾಂಕ್ರಾಮಿಕ ಸೃಷ್ಟಿಸಿದ ಡಿಜಿಟಲ್ ಮಾಧ್ಯಮ ಬಳಕೆಯ ಅನಿವಾರ್ಯ ಬೆರಳ ತುದಿಯಲ್ಲಿ ಬಂಧಿಯಾಗಿಬಿಟ್ಟಿದೆ. ಎದ್ದು, ಬಿದ್ದು ಮೈಮುರಿದು ಆಟ ಆಡಬೇಕಿದ್ದ ಮಕ್ಕಳು ಮನೆಯ ನಾಲ್ಕು ಗೋಡೆಯೊಳಗೆ ಬಂಧಿಯಾಗುತ್ತಿದ್ದಾರೆ. ಮಾನಸಿಕ ಸಮಸ್ಯೆ ಜತೆಗೆ ದೇಹದ ಭಾರ ಹೆಚ್ಚಿಸುತ್ತಿರುವ ಈ ಡಿಜಿಟಲ್ ಪ್ರೇಮ ಮಕ್ಕಳ ಭವಿಷ್ಯಕ್ಕೆ ಮಾರಕ ಎಂದು ತಜ್ಞರು ಎಚ್ಚರಿಸಿದ್ದಾರೆ.

    ಮತ್ತೆ ಜೈಲು ಜೀವನ!: ಬಿಸಿಲ ನೆಪ ಹೇಳಿ ಮನೆಯಲ್ಲೇ ಕೂರುವ ಮಕ್ಕಳು ದಿನವಿಡೀ ಟಿವಿ, ವಿಡಿಯೋಗೇಮ್್ಸ, ಕಂಪ್ಯೂಟರ್, ಮೊಬೈಲ್ ಸೇರಿ ಗ್ಯಾಜೆಟ್​ಗಳ ಗೀಳಿಗೆ ಒಳಗಾಗುತ್ತಿದ್ದಾರೆ. ಪರಿಣಾಮ ನಾನಾ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಜತೆಗೆ ಭಾವನಾತ್ಮಕತೆಯನ್ನೂ ಕಳೆದುಕೊಳ್ಳುತ್ತಿದ್ದಾರೆ.

    ಬೆಳವಣಿಗೆಗೆ ಮಾರಕ: ಅತಿಯಾದ ಮೊಬೈಲ್ ಅಥವಾ ಕಂಪ್ಯೂಟರ್ ಬಳಕೆ ಮಕ್ಕಳನ್ನು ಸುತ್ತಮುತ್ತಲಿನ ಪರಿಸರದಿಂದ ದೂರವಿರಿಸುತ್ತಿದೆ. ಜತೆಗೆ ಚಟುವಟಿಕೆಗಳು ಮತ್ತು ನಡವಳಿಕೆಯಲ್ಲಿ ಬದಲಾವಣೆ ಉಂಟು ಮಾಡುತ್ತದೆ. ಒಂದು ಮಗು ವರ್ಚುವಲ್ ವರ್ಲ್ಟ್ ಸ್ಕ್ರೀನ್ ಎದುರು ಹೆಚ್ಚು ಸಮಯ ಕಳೆಯುತ್ತಿದ್ದರೆ, ದೃಷ್ಟಿ ಸಮಸ್ಯೆ ಉಂಟಾಗುತ್ತದೆ. ಆಗ ಮಗು ವ್ಯಾಯಾಮ, ಕ್ರೀಡಾ ಚಟುವಟಿಕೆಗಳಲ್ಲಿ ಹಿಂದೆ ಉಳಿಯುತ್ತದೆ. ಜನರೊಂದಿಗೆ ಬೆರೆಯುವುದನ್ನು ಅರಿಯದೆ ಸಾಮಾಜಿಕ ಸಂಪರ್ಕ ಕಡಿದುಕೊಳ್ಳುತ್ತದೆ. ಇದರಿಂದ ಮಗುವಿನಲ್ಲಿ ಆಟ, ಪಾಠ, ಕೌಶಲ್ಯಗಳನ್ನು ಕಡಿಮೆ ಮಾಡಿ ಒಟ್ಟಾರೆ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.

    ಶೈಕ್ಷಣಿಕವಾಗಿ ಹಿನ್ನಡೆ: ಅಧ್ಯಯನ ಒಂದರ ಪ್ರಕಾರ ಒಂದು ದಿನದಲ್ಲಿ 7 ಗಂಟೆ ಅಥವಾ ಅದಕ್ಕಿಂತ ಹೆಚ್ಚಿನ ಸಮಯ ಡಿಜಿಟಲ್ ಮಾಧ್ಯಮದಲ್ಲಿ ಕಳೆಯುವ ಮಕ್ಕಳ ಮೆದುಳಿನ ಭಾಗಗಳಲ್ಲಿ ಗಮನಾರ್ಹ ವ್ಯತ್ಯಾಸ ಕಂಡು ಬಂದಿದೆ. ಅಂದರೆ ದಿನದಲ್ಲಿ 2 ಗಂಟೆಗಳಿಗಿಂತ ಹೆಚ್ಚು ಸಮಯ ಮೊಬೈಲ್ ಅಥವಾ ಕಂಪ್ಯೂಟರ್ ಡಿಸ್ಪೇ ್ಲ ನೋಡುವ ಮಕ್ಕಳ ಭಾಷೆ ಮತ್ತು ಆಲೋಚನೆಯ ಮೇಲೆ ಪರಿಣಾಮ ಬೀರಲಿದೆ. ಮಕ್ಕಳು ಶೈಕ್ಷಣಿಕವಾಗಿ ಹಿನ್ನಡೆಗೆ ಸಿಲುಕುತ್ತಾರೆ ಎನ್ನುತ್ತಾರೆ ತಜ್ಞರು.

    ಜಾಗತಿಕ ಸಂಶೋಧನೆ ಎಚ್ಚರಿಕೆ: ಸ್ಮಾರ್ಟ್​ಫೋನ್ ಮತ್ತು ಸೋಷಿಯಲ್ ಮೀಡಿಯಾದ ಅತಿಯಾದ ಬಳಕೆಯಿಂದ ಯುವಪೀಳಿಗೆಯ ಮಾನಸಿಕ ಆರೋಗ್ಯ ಹೇಗೆಲ್ಲ ಹದಗೆಡುತ್ತಿದೆ ಎಂಬುದನ್ನು ಆಸ್ಟ್ರೇಲಿಯಾ, ಅಮೆರಿಕದಲ್ಲಿ ನಡೆದ ಸಂಶೋಧನೆ ಬಯಲಿಗೆಳೆದಿದೆ. ಇತ್ತೀಚಿನ ಮಾಹಿತಿ ಪ್ರಕಾರ ಆಸ್ಟ್ರೇಲಿಯಾದ ಜನರೇಷನ್ ಝೆಡ್ ಅಂದರೆ 16ರಿಂದ 24 ವರ್ಷ ವಯಸ್ಸಿನವರಲ್ಲಿ ಕಳೆದ 12 ತಿಂಗಳಲ್ಲಿ ಮಾನಸಿಕ ಅನಾರೋಗ್ಯ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದೆ. 2007ಕ್ಕೆ ಹೋಲಿಸಿದರೆ ಈ ಪ್ರಮಾಣ ಶೇ. 26ರಷ್ಟು ಏರಿಕೆ ಆಗಿದೆ. ಸ್ಮಾರ್ಟ್​ಫೋನ್ ಮತ್ತು ಸಾಮಾಜಿಕ ಮಾಧ್ಯಮಗಳಿಗೆ ಯುವಜನತೆ ಹೊಂದಿಕೊಂಡಿರುವುದು ಇದಕ್ಕೆ ಅತಿದೊಡ್ಡ ಕಾರಣ ಎಂದು ಹೇಳಲಾಗಿದೆ.

    ಆತ್ಮಹತ್ಯೆಗೂ ರಹದಾರಿ: ಆಟ, ಪಾಠ, ಆರೋಗ್ಯ ಸೇರಿ ಯಾವುದೇ ಆಗಿರಲಿ ಎಲ್ಲವನ್ನೂ ಕಷ್ಟಪಟ್ಟು ಪಡೆಯಬೇಕು. ಅದರಿಂದ ದೇಹ ಮತ್ತು ಮನಸ್ಸು ಎರಡೂ ಚಟುವಟಿಕೆಯಿಂದ ಕೂಡಿರುತ್ತವೆ. ಆದರೆ ಡಿಜಿಟಲ್ ಮಾಧ್ಯಮದ ಅತಿಯಾದ ಬಳಕೆಯಿಂದ ಇಂದಿನ ಮಕ್ಕಳು ಹಾಗೂ ಯುವಜನರು ಒತ್ತಡ ಎದುರಿಸುವ ಸಾಮರ್ಥ್ಯವನ್ನೇ ಕಳೆದುಕೊಳ್ಳುತ್ತಿದ್ದಾರೆ. ಸೋಲು ಗೆಲುವಿನ ಅರಿವಿಲ್ಲದೆ ಎಲ್ಲವೂ ಸುಲಭವಾಗಿ ಸಿಗಬೇಕು ಎನ್ನುವ ಹಠಕ್ಕೆ ಬೀಳುತ್ತಿದ್ದಾರೆ. ಕಷ್ಟವನ್ನು ಎದುರಿಸುವಲ್ಲಿ ವಿಫಲರಾಗಿ ಆತ್ಮಹತ್ಯೆಗೆ ಯೋಚಿಸುತ್ತಾರೆ.

    ಆರೋಗ್ಯ ಸಮಸ್ಯೆಗಳೇನು?: ಮಿದುಳು, ಮಾಂಸಖಂಡ, ಮನಸ್ಸು ಎಲ್ಲವೂ ಒಂದಕ್ಕೊಂದು ಪೂರಕವಾಗಿ ಮನುಷ್ಯನ ದೇಹವು ನಿರ್ವಣವಾಗಿರುತ್ತದೆ. ದೈಹಿಕ ಚಟುವಟಿಕೆ ಬುದ್ಧ ಬೆಳವಣಿಗೆ ಪರಸ್ಪರ ಪೂರಕವಾಗಿರುತ್ತದೆ. ಯಾವುದೇ ಆದರೂ ದೀರ್ಘಕಾಲದ ಅಭ್ಯಾಸದ ನಂತರವೇ ಅದು ದೇಹಕ್ಕೆ ಹೊಂದಿಕೊಳ್ಳುತ್ತದೆ. ಹಾಗಾಗಿ ಏಕಾಏಕಿ ಅತೀ ವೇಗವಾಗಿ ಮಾಡಿಕೊಳ್ಳುವ ಬದಲಾವಣೆಗಳಿಂದ ಹಾಮೋನ್, ನರಗಳು, ಕಣ್ಣು, ಮನಸ್ಸು, ಮಿದುಳಿನ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಡಿಜಿಟಲ್ ಮಾಧ್ಯಮ ಬಳಕೆಯಿಂದ ದೃಷ್ಟಿ ದೋಷ, ತಲೆ ನೋವು, ನರ ದೌರ್ಬಲ್ಯ, ಖಿನ್ನತೆ, ನಿದ್ರಾಹೀನತೆ, ಬೆನ್ನು ನೋವು, ಮಧುಮೇಹ, ಅಧಿಕ ರಕ್ತದೊತ್ತಡ ಸೇರಿ ನಾನಾ ಆರೋಗ್ಯ ಸಮಸ್ಯೆಗಳು ಎದುರಾಗಲಿವೆ.

    ಆಸ್ಟ್ರೇಲಿಯಾಗೆ ಆಘಾತ: ಹದಿಹರೆಯದವರಲ್ಲಿ ಶೇ.97 ಮಕ್ಕಳಿಗೆ ಸ್ಮಾರ್ಟ್ ಗೀಳು, 2013ರಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್, ಕನಿಷ್ಠ 4 ಸಾಮಾಜಿಕ ಜಾಲತಾಣದಲ್ಲಿ ಮಕ್ಕಳು ಆಕ್ಟೀವ್, ದಿನಕ್ಕೆ ಸರಾಸರಿ 3 ಗಂಟೆ ಸೋಷಿಯಲ್ ಮೀಡಿಯಾ ಬಳಕೆ, ಈ ಪೈಕಿ ಬಹುತೇಕ ಮಕ್ಕಳಿಗೆ ಕಾಡುತ್ತಿದೆ ಮಾನಸಿಕ ಖಿನ್ನತೆ, ದೈಹಿಕ, ಮಾನಸಿಕ ಸಮಸ್ಯೆಗಳಿಂದ ಮಕ್ಕಳ ಭವಿಷ್ಯಕ್ಕೆ ಆತಂಕ, ಸ್ಮಾರ್ಟ್​ಫೋನ್ ಬಳಕೆ ಸಮಸ್ಯೆ ಒಪ್ಪಿಕೊಳ್ಳಲು ಕೆಲವರ ಹಿಂದೇಟು, ಮಕ್ಕಳ ಅನಾರೋಗ್ಯಕ್ಕೆ ಕೋವಿಡ್ 10 ಸಾಂಕ್ರಮಿಕದ ದೂಷಣೆ

    ಡಿಜಿಟಲ್ ಗೀಳಿನ ಸಮಸ್ಯೆಗಳು

    • ಭಾಷೆ ಬಳಕೆ ಮತ್ತು ಗ್ರಹಿಕೆಯ ಮೇಲೆ ಪರಿಣಾಮ
    • ಓದುವಿಕೆಯಲ್ಲಿ ತೊಂದರೆ, ಏಕಾಗ್ರತೆಯ ಸಮಸ್ಯೆ
    • ವಾಸ್ತವದ ಅರಿವಿಲ್ಲದೆ ಭ್ರಮಾಲೋಕದಲ್ಲಿ ಬಂಧಿ
    • ದೈಹಿಕ ಚಟುವಟಿಕೆಗಳು ಇಲ್ಲದೆ ಬೊಜ್ಜು ಸಮಸ್ಯೆ
    • ಯಾವುದರಲ್ಲೂ ಆಸಕ್ತಿ ಇಲ್ಲದೆ, ಸೋಮಾರಿತನಕ್ಕೆ ಆಸ್ಪದ
    • ಮಕ್ಕಳಲ್ಲಿ ಆತ್ಮವಿಶ್ವಾಸ ಕುಸಿದು, ಹಠ ಸ್ವಭಾವ ಹೆಚ್ಚಳ
    • ಸಂವಹನದ ಕೊರತೆ, ಸಂಬಂಧಗಳಲ್ಲಿ ಬದಲಾವಣೆ

    ಪಾಲಕರ ಹೊಣೆ ಏನು?

    • ಮಕ್ಕಳನ್ನು ಒಂಟಿಯಾಗಿ ಬಿಡದೆ ಅವರೊಂದಿಗೆ ಸಮಯ ಕಳೆಯಬೇಕು
    • ಡಿಜಿಟಲ್ ಮಾಧ್ಯಮ ಬಳಕೆಗೆ ನಿರ್ದಿಷ್ಟ ಸಮಯವನ್ನು ನಿಗದಿ ಪಡಿಸಬೇಕು
    • ಬೆಳಗ್ಗೆ ಮತ್ತು ಸಂಜೆ ಮಕ್ಕಳನ್ನು ದೈಹಿಕ ಚಟುವಟಿಕೆಯಲ್ಲಿ ತೊಡಗಿಸಬೇಕು
    • ಮನೆಯಲ್ಲಿ ರುಚಿಯಾದ ಆಹಾರ ತಯಾರಿಸಿ ಒಟ್ಟಿಗೆ ಊಟ ಮಾಡಬೇಕು
    • ಮಕ್ಕಳಿಗೆ ಆಸಕ್ತಿ ಇರುವ ವಿಚಾರಗಳನ್ನು ತಿಳಿದು ಕಲಿಕೆಗೆ ಪ್ರೋತ್ಸಾಹಿಸಬೇಕು
    • ಅಜ್ಜ, ಅಜ್ಜಿ ಸೇರಿ ಸಂಬಂಧಿಕರೊಂದಿಗೆ ರಜೆ ಕಳೆಯಲು ಅವಕಾಶ ಕಲ್ಪಿಸಬೇಕು
    • ಭ್ರಮಾ ಲೋಕದಿಂದ ಹೊರತರಲು ಪ್ರಾಣಿ, ಪಕ್ಷಿ , ಪರಿಸರ ಪರಿಚಯಿಸಬೇಕು
    • ಆಟ, ಪಾಠಗಳಲ್ಲಿ ಮಕ್ಕಳೊಂದಿಗೆ ಪಾಲಕರು ಸಹ ಭಾಗಿಯಾಗಲೇಬೇಕು

    ವಿಶ್ವದ ಎಲ್ಲೆಲ್ಲಿ ಸ್ಮಾರ್ಟ್​ಫೋನ್ ನಿರ್ಬಂಧ?

    • ವಿಶ್ವದ ಹಲವೆಡೆ ಶಾಲೆಗಳಲ್ಲಿ ಸ್ಮಾರ್ಟ್​ಫೋನ್ ಬಳಕೆ ನಿಷೇಧ
    • ಆಸ್ಟ್ರೇಲಿಯಾದಲ್ಲಿ ತರಗತಿಗಳಲ್ಲಿ ಸ್ಮಾರ್ಟ್​ಫೋನ್ ನಿರ್ಬಂಧ
    • ಅಮೆರಿಕದ ಫ್ಲೋರಿಡಾದಲ್ಲಿ 14ವರ್ಷಕ್ಕಿಂತ ಕೆಳ ಮಕ್ಕಳಿಗೆ ಬ್ಯಾನ್
    • 14ರಿಂದ 15ರ ವಯಸ್ಸಿನವರ ಬಳಕೆಗೆ ಪಾಲಕರ ಒಪ್ಪಿಗೆ ಕಡ್ಡಾಯ
    • ಬ್ರಿಟನ್​ನಲ್ಲಿ ಸ್ಮಾರ್ಟ್​ಫೋನ್ ಮಾಲೀಕತ್ವಕ್ಕೆ ಶೀಘ್ರ ವಯೋಮಿತಿ
    • ಬ್ರಿಟನ್​ನಾದ್ಯಂತ ಅಭಿಯಾನ ಆರಂಭಿಸಿರುವ ಪಾಲಕರು 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts