More

    ಪ್ಲಾಸ್ಟಿಕ್​ಗೆ ಪರ್ಯಾಯ ಸಸ್ಯಜನ್ಯ ಪಿಎಲ್​ಎ ಚೀಲ: ಪರಿಸರಸ್ನೇಹಿ ಕ್ಯಾರಿಬ್ಯಾಗ್; ಡಿಆರ್​ಡಿಒದಿಂದ ಅಭಿವೃದ್ಧಿ

    | ಗೋಪಾಲಕೃಷ್ಣ ಪಾದೂರು ಉಡುಪಿ
    ರಕ್ಷಣಾ ಇಲಾಖೆ ಅಧೀನದಲ್ಲಿರುವ ಡಿಆರ್​ಡಿಒ ಸಂಸ್ಥೆ ಪ್ಲಾಸ್ಟಿಕ್​ಗೆ ಪರ್ಯಾಯವಾಗಿ ಅಭಿವೃದ್ಧಿಪಡಿಸಿರುವ ಜೈವಿಕವಾಗಿ ಕೊಳೆಯುವ ಸಸ್ಯಜನ್ಯ ಪಾಲಿ ಲ್ಯಾಕ್ಟಿಕ್ ಆಸಿಡ್ ಪಾಲಿಮರ್ (ಪಿಎಲ್​ಎ) ಚೀಲಗಳ ಬಳಕೆಗೆ ಅನುಮತಿ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಪಿಎಲ್​ಎ ಬಳಸಿ ತಯಾರಿಸಿದ ಕೈಚೀಲ, ದಿನಸಿ ಚೀಲಗಳಿಂದ ಪರಿಸರಕ್ಕೆ ಹಾನಿ ಇಲ್ಲ ಎನ್ನುವುದು ಇದಕ್ಕೆ ಕಾರಣವಾಗಿದೆ.

    ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಾವಳಿ 2016ರಡಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಬಳಕೆ ನಿಷೇಧಿಸಲಾಗಿದೆ. ಪಿಎಲ್​ಎ ಚೀಲಗಳು ಮೇಲ್ನೋಟಕ್ಕೆ ಪ್ಲಾಸ್ಟಿಕ್ ಕವರ್​ನಂತೆಯೇ ಕಾಣುವುದರಿಂದ ಸ್ಥಳೀಯ ಆಡಳಿತ ಸಂಸ್ಥೆಗಳ ಅಧಿಕಾರಿಗಳು ಈ ಚೀಲಗಳ ಮಾರಾಟಕ್ಕೂ ಅನುಮತಿ ನಿರಾಕರಿಸುತ್ತಿದ್ದಾರೆ. ಅಂಗಡಿಗಳಲ್ಲಿದ್ದರೆ ದಂಡವನ್ನೂ ಹಾಕುತ್ತಿದ್ದಾರೆ. ಈ ಸಮಸ್ಯೆ ನಿವಾರಣೆಗೆ ಪರಿಸರ ಇಲಾಖೆ ಮುಂದಾಗಿದ್ದು, ನಿಯಮಾವಳಿಗಳಿಗೆ ಬದಲಾವಣೆ ತರಲು ಶೀಘ್ರದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಕೆಯಾಗಲಿದೆ.

    ಹಾಲಿನಂತಾಗುವ ಪಿಎಲ್​ಎ ಚೀಲ: ಪಾಲಿ ಲ್ಯಾಕ್ಟಿಕ್ ಆಸಿಡ್ ಚೀಲ 6 ತಿಂಗಳು ಬಾಳಿಕೆ ಬರಲಿದೆ. ನಂತರ ಇದು ಇಟ್ಟಲ್ಲೇ ಕರಗುತ್ತದೆ. ಮೆಕ್ಕೆಜೋಳದ ಸಾರದಿಂದ ತಯಾರಿಸುವ ಈ ಕೈಚೀಲವನ್ನು ದನಗಳು ತಿಂದರೂ, ಸಮಸ್ಯೆಯಾಗುವುದಿಲ್ಲ. ಇದರಲ್ಲಿರುವ ಪೆಟ್ರೋ ಕೆಮಿಕಲ್ ದೇಹಕ್ಕೆ ಹಾನಿಕಾರಕ ಅಲ್ಲ. ಹೀಗಾಗಿ ಹೋಟೆಲ್​ಗಳಲ್ಲಿ ಈ ಚೀಲಗಳಲ್ಲಿ ತಿಂಡಿ ಕಟ್ಟಿಕೊಡುವುದರಿಂದ ಆರೋಗ್ಯಕ್ಕೆ ತೊಂದರೆಯಾಗುವುದಿಲ್ಲ. ಮಿಥಿಲೀನ್ ಡೈಕ್ಲೋರೈಡ್ ದ್ರಾವಣಕ್ಕೆ ಈ ಚೀಲಗಳನ್ನು ಹಾಕಿದರೆ 5 ನಿಮಿಷದಲ್ಲಿ ಹಾಲಿನಂತಾಗುತ್ತದೆ. ಇದೇ ದ್ರಾವಣಕ್ಕೆ ಪ್ಲಾಸ್ಟಿಕ್ ಚೀಲ ಹಾಕಿದರೆ ಕರಗದೆ ಉಳಿದುಕೊಳ್ಳುತ್ತದೆ. ಸಿಐಪಿಇಟಿ (ಸೆಂಟ್ರಲ್ ಇನ್​ಸ್ಟಿಟ್ಯೂಟ್ ಆಫ್ ಪ್ಲಾಸ್ಟಿಕ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ) ಪ್ರಯೋಗಾಲಯ ಈ ಕೈಚೀಲ ಜೈವಿಕವಾಗಿ ಕೊಳೆಯುತ್ತದೆ ಎಂದು ವರದಿ ನೀಡಿದೆ. ಆದ್ದರಿಂದ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಪಿಎಲ್​ಎ ಚೀಲಗಳಿಗೆ ಅನುಮತಿ ನೀಡಿದೆ. ಈಗಾಗಲೇ ಗುಜರಾತ್ ಮತ್ತು ತೆಲಂಗಾಣದಲ್ಲಿ ಅನೇಕ ಉತ್ಪಾದಕರು ಡಿಆರ್​ಡಿಒನಿಂದ ತಾಂತ್ರಿಕ ಅನುಮತಿ ಪಡೆದು ಪಿಎಲ್​ಎ ಚೀಲಗಳನ್ನು ಉತ್ಪಾದಿಸುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಈ ಚೀಲಗಳ ಬಳಕೆ ಬಗ್ಗೆ ಪ್ರಚಾರ ಇಲ್ಲ. ಪಿಎಲ್​ಎ ಚೀಲ ತುಂಬ ದುಬಾರಿಯಲ್ಲ. ಪ್ಲಾಸ್ಟಿಕ್ ಚೀಲ ಕೆ.ಜಿ.ಗೆ 180 ರೂ.ಇದ್ದರೆ ಈ ಚೀಲಗಳಿಗೆ 200 ರೂ. ನಿಗದಿ ಮಾಡಲಾಗಿದ್ದು, ಗ್ರಾಹಕರ ಜೇಬಿಗೆ ಹೆಚ್ಚಿನ ಹೊರೆಯಾಗುವುದಿಲ್ಲ.

    ಪ್ಲಾಸ್ಟಿಕ್​ಗೆ ಜೈವಿಕವಾಗಿ ಕೊಳೆಯುವ ಪರ್ಯåಯ ಉತ್ಪನ್ನದ ಅಗತ್ಯ ಹೆಚ್ಚಾಗಿದೆ. ಜೈವಿಕವಾಗಿ ವಿಘಟನೆಯಾಗುವ ಸಸ್ಯಜನ್ಯ ಪಾಲಿ ಲ್ಯಾಕ್ಟಿಕ್ ಆಸಿಡ್ ಪಾಲಿಮರ್ ಸಂಶೋಧನೆ ಸ್ವಾಗತಾರ್ಹ. ಇವುಗಳಿಂದ ತಯಾರಿಸಿದ ಕ್ಯಾರಿ ಬ್ಯಾಗ್​ಗಳಿಗೆ ವಿನಾಯಿತಿ ನೀಡಿ ನಿಯಮಾವಳಿಗಳಿಗೆ ತಿದ್ದುಪಡಿ ಮಾಡುವ ಅಗತ್ಯವಿದೆ. ಈ ಬಗ್ಗೆ ಕ್ರಮ ವಹಿಸಲಾಗುವುದು.

    | ಈಶ್ವರ ಖಂಡ್ರೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ

    ಪಿಎಲ್​ಎ ಆಧಾರಿತ ಚೀಲಗಳು 180 ದಿನದೊಳಗೆ ಗೊಬ್ಬರವಾಗುತ್ತವೆ ಎಂದು ಸಂಶೋಧನಾ ವರದಿಗಳಲ್ಲಿ ಉಲ್ಲೇಖಿತವಾಗಿವೆ. ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಿದ್ದರೂ ರಾಜ್ಯದಲ್ಲಿ ಈ ಬಗ್ಗೆ ಅಧಿಕಾರಿಗಳಲ್ಲಿ ಮಾಹಿತಿ ಕೊರತೆ ಇದೆ. ಪ್ಲಾಸ್ಟಿಕ್ ಚೀಲಗಳ ವಿಲೇವಾರಿ ಬಹುದೊಡ್ಡ ಸಮಸ್ಯೆ. ಪರ್ಯಾಯ ಮಾರ್ಗಗಳನ್ನು ಉತ್ತೇಜಿಸುವುದು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ.

    | ಡಾ.ಚಂದ್ರಶೇಖರ ರಾವ್ ಆಯುರ್ವೆದ ಔಷಧ ಮಳಿಗೆ, ಉಡುಪಿ

    12 ವರ್ಷಗಳಿಂದ ಇನ್ಶೂರೆನ್ಸ್ ಇಲ್ಲದ ವಾಹನದಲ್ಲಿ ಪೊಲೀಸರ ಡ್ಯೂಟಿ; ಸ್ಥಳೀಯ ವ್ಯಕ್ತಿ ಅಧಿಕಾರಿಯನ್ನೇ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡ!

    ನಿಮ್ಮಲ್ಲಿ ಹಳೇ ಚಪ್ಲಿ ಇದ್ರೆ ಸಾಕು, ನೀವು ಈ ‘ನಡಿಗೆ’ಯಲ್ಲಿ ಪಾಲ್ಗೊಳ್ಳಬಹುದು: ಏನಿದು ಅಭಿಯಾನ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts