More

    ಸಂಪಾದಕೀಯ: ಅಮೆರಿಕದ ಉದ್ಧಟತನ

    ಭಾರತ ಜಗತ್ತಿನಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿನ ಕಾನೂನು ಪ್ರಕ್ರಿಯೆಗಳೆಲ್ಲ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯಡಿ ನಿಷ್ಪಕ್ಷಪಾತವಾಗಿ ನಿರ್ವಹಿಸಲ್ಪಡುತ್ತವೆ. ಇಲ್ಲಿನ ಕಾನೂನು ಪ್ರಕ್ರಿಯೆ ಅಥವಾ ನ್ಯಾಯಾಂಗ ವ್ಯವಸ್ಥೆಯ ಮೇಲೆ ಅನುಮಾನ ವ್ಯಕ್ತಪಡಿಸುವಂಥ ಯಾವುದೇ ಬೆಳವಣಿಗೆಗಳನ್ನು ಸಹಿಸಲು ಸಾಧ್ಯವಿಲ್ಲ. ಅಷ್ಟಕ್ಕೂ, ಇತರ ಪ್ರಜಾಪ್ರಭುತ್ವ ರಾಷ್ಟ್ರಗಳು, ಮತ್ತೊಂದು ಪ್ರಜಾತಂತ್ರದ ದೇಶದೊಂದಿಗೆ ಸೌಹಾರ್ದವಾಗಿ, ಗೌರವಯುತವಾಗಿ ನಡೆದುಕೊಳ್ಳಬೇಕೆ ಹೊರತು ಯಾವುದೋ ಅಪೂರ್ಣ ಮಾಹಿತಿಯನ್ನು ಇರಿಸಿಕೊಂಡು, ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಜರ್ಮನಿ ಮತ್ತು ಅಮೆರಿಕದ ಇಂಥ ಉದ್ಧಟತನದ ಧೋರಣೆ ಖಂಡನಾರ್ಹ. ಭಾರತದ ಆಂತರಿಕ ವ್ಯವಹಾರಗಳಲ್ಲಿ ಮೂಗು ತೂರಿಸುವ ಅಧಿಕಾರ ಹೊರಗಿನ ಯಾವುದೇ ಶಕ್ತಿಗಳಿಗೆ ಇಲ್ಲ. ನಮ್ಮ ದೇಶದೊಳಗಿನ ಬೆಳವಣಿಗೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಇಲ್ಲಿನ ಸರ್ಕಾರ, ನ್ಯಾಯಾಂಗ ವ್ಯವಸ್ಥೆ ಬಲಶಾಲಿಯಾಗಿದೆ ಎಂಬುದನ್ನು ಜರ್ಮನಿ ಮತ್ತು ಅಮೆರಿಕ ಅರ್ಥ ಮಾಡಿಕೊಳ್ಳಬೇಕು.

    ಭಾರತದಲ್ಲಿ ಜಾರಿಯಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಗ್ಗೆ ಕಳವಳ ವ್ಯಕ್ತಪಡಿಸುವ ಮೂಲಕ, ಅಮೆರಿಕ ಅನವಶ್ಯಕವಾಗಿ ರಾಜತಾಂತ್ರಿಕ ಸೀಮೆಯನ್ನು ದಾಟಿತ್ತು. ಪೌರತ್ವ ನೀಡುವ ಅಧಿಕಾರ ಆಯಾ ರಾಷ್ಟ್ರಕ್ಕೆ ಸಂಬಂಧಿಸಿದ್ದು ಎಂಬುದರ ಅರಿವು ಅಮೆರಿಕಕ್ಕೆ ಇಲ್ಲ ಎಂದೇನಲ್ಲ. ಆದರೂ, ಯಾವುದೋ ಒತ್ತಡಕ್ಕೆ ಮಣಿದು ಅದು ಹೇಳಿಕೆ ನೀಡಿದಂತಿತ್ತು. ಈ ಬೆಳವಣಿಗೆಯ ಕೆಲ ದಿನಗಳಲ್ಲೇ, ಮತ್ತೆ ಅಧಿಕಪ್ರಸಂಗ ಪ್ರದರ್ಶಿಸಿರುವ ಅಮೆರಿಕ ‘ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಂಧನ ಪ್ರಕರಣದ ಮೇಲೆ ನಿಗಾ ಇರಿಸಿದ್ದೇವೆ’ ಎಂದು ಹೇಳುವ ಮೂಲಕ, ಇಲ್ಲಿನ ಕಾನೂನು ವ್ಯವಸ್ಥೆಯನ್ನು ಅನುಮಾನದಿಂದ ನೋಡುವ ಧಾಷ್ಟ್ಯ ಪ್ರದರ್ಶಿಸಿದೆ. ಜರ್ಮನಿ ಕೂಡ, ‘ಅರವಿಂದ ಕೇಜ್ರಿವಾಲ್ ಪ್ರಕರಣದಲ್ಲಿ ಅವರಿಗೆ ಎಲ್ಲ ಕಾನೂನು ನೆರವು ಸಿಗುವ ಭರವಸೆಯನ್ನು ಬಯಸುತ್ತೇವೆ’ ಎಂದು ಕೆಲ ದಿನಗಳ ಹಿಂದೆ ಹೇಳಿತ್ತು. ಕೇಜ್ರಿವಾಲ್ ವಿಷಯದಲ್ಲಿ ಮಾತನಾಡುವ ಅವಶ್ಯಕತೆ ಜರ್ಮನಿ ಅಥವಾ ಅಮೆರಿಕಕ್ಕೆ ಇರಲಿಲ್ಲ.

    ಕೆಲ ವರ್ಷಗಳ ಮುಂಚೆ ಈ ರಾಷ್ಟ್ರಗಳು ಜಮ್ಮು-ಕಾಶ್ಮೀರ ವಿಷಯ ಇರಿಸಿ ಕೊಂಡು ಭಾರತದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದವು. ಶಾಂತಿ ಕಾಯ್ದುಕೊಳ್ಳುವಂತೆ ಪುಕ್ಕಟೆ ಸಲಹೆ ನೀಡುತ್ತಿದ್ದವು. ಸಂವಿಧಾನದ 370ನೇ ವಿಧಿಯನ್ನು ಹಿಂಪಡೆದ ಬಳಿಕ ಜಮ್ಮು-ಕಾಶ್ಮೀರ ಅಭಿವೃದ್ಧಿಯತ್ತ ಮುಖ ಮಾಡಿದ್ದು, ವಿವಾದಗಳಿಂದ ಮುಕ್ತವಾಗಿದೆ. ಆದರೂ, ಸಿಎಎ, ಕೇಜ್ರಿವಾಲ್ ಬಂಧನ ಮತ್ತಿತರ ವಿಷಯಗಳನ್ನು ಇರಿಸಿಕೊಂಡು ಅನವಶ್ಯಕ ಹೇಳಿಕೆ ನೀಡಿದ ಈ ಎರಡೂ ರಾಷ್ಟ್ರಗಳಿಗೆ ಕೇಂದ್ರ ವಿದೇಶಾಂಗ ಸಚಿವಾಲಯ ತಕ್ಕ ಪ್ರತ್ಯುತ್ತರವನ್ನೇ ನೀಡಿದೆ. ಅಮೆರಿಕ ರಾಯಭಾರಿಗೆ ಭಾರತ ಸಮನ್ಸ್ ನೀಡಿದ್ದಲ್ಲದೆ, ಅವರೊಂದಿಗೆ ನಡೆದ 40 ನಿಮಿಷಗಳ ಮಾತುಕತೆಯಲ್ಲಿ ವಾಸ್ತವವನ್ನು ಮನಗಾಣಿಸಿದೆ ಎಂಬುದು ಗಮನಾರ್ಹ. ಭಾರತವನ್ನು ದುರ್ಬಲ ರಾಷ್ಟ್ರ ಎಂದು ಭಾವಿಸಿದರೆ ಅದು ಆ ರಾಷ್ಟ್ರಗಳ ಮೂರ್ಖ ತನವಷ್ಟೇ. ಅಂತಾರಾಷ್ಟ್ರೀಯ ಸಮಸ್ಯೆಗಳಿಗೂ ಪರಿಹಾರದ ದಾರಿ ತೋರಿಸಿರುವ ಭಾರತ ತನ್ನ ಆಂತರಿಕ ವಿಷಯಗಳನ್ನು ಬಗೆಹರಿಸಿಕೊಳ್ಳುವಲ್ಲಿ ಸಮರ್ಥವಾಗಿದೆ.

    ಎರಡನೇ ಇನ್ನಿಂಗ್ಸ್​ ಆರಂಭಿಸಲಿರುವ ಮೂಗುತಿ ಸುಂದರಿ ಸಾನಿಯಾ ಮಿರ್ಜಾ? ಹೈದರಾಬಾದ್​ನಲ್ಲಿ ಬಿಸಿ ಬಿಸಿ ಚರ್ಚೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts