More

    ಕೊಲೆಯಾದವನ ಗುರುತು ಪತ್ತೆಹಚ್ಚಿದ ಮದ್ಯದ ಬಾಟಲಿ ಲೇಬಲ್ ; ಅಕ್ರಮ ಸಂಬಂಧಕ್ಕಾಗಿ ಗಂಡನನ್ನೇ ಕೊಲೆ ಮಾಡಿಸಿದ ಪತ್ನಿ

    ಕುಣಿಗಲ್ : ಕೊಲೆಯಾದ ವ್ಯಕ್ತಿಯ ಪ್ಯಾಂಟ್‌ಗೆ ಅಂಟಿಕೊಂಡಿದ್ದ ಮದ್ಯದ ಬಾಟಲಿಯ ಲೇಬಲ್ ಜಾಡು ಹಿಡಿದು ಹೊರಟ ಹುಲಿಯೂರುದುರ್ಗ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

    ತುಮಕೂರಿನ ಎಸ್.ಆರ್.ರಾಘವೇಂದ್ರ ಡಿ.10ರಂದು ಹುಲಿಯೂದುರ್ಗ-ಮಾಗಡಿ ರಸ್ತೆಯ ರಾಜೇಂದ್ರಪುರ ಅರಣ್ಯದಲ್ಲಿ ಶವವಾಗಿ ಪತ್ತೆಯಾಗಿದ್ದರು. ಪ್ರಕರಣ ಸಂಬಂಧ ಪತ್ನಿ ನಾಗಮಂಗಲ ತಾಲೂಕು ದೇವಲಾಪುರ ಸಮೀಪದ ತಿಬ್ಬನಹಳ್ಳಿ ವಾಸಿ ಟಿ.ಎನ್.ದಿವ್ಯಾ (24) ಹಾಗೂ ಅದೇ ಗ್ರಾಮದ ಆಟೋ ಡ್ರೈವರ್ ಕೃಷ್ಣ (32)ನನ್ನು ಬಂಧಿಸಲಾಗಿದೆ.

    ಕೊಲೆಯಾದ ವ್ಯಕ್ತಿಯ ವಿಳಾಸ ಪತ್ತೆಯಾಗಿರಲಿಲ್ಲ. ಸಿಪಿಐ ಗುರುಪ್ರಸಾದ್ ಹಾಗೂ ಪಿಎಸ್‌ಐ ವೆಂಕಟೇಶ್ ಮತ್ತು ಸಿಬ್ಬಂದಿ ಮೃತನ ಪ್ಯಾಂಟಿನ ಮೇಲಿದ್ದ ಮದ್ಯದ ಬಾಟಲಿ ಲೇಬಲ್ ನೋಡಿ ಅಬಕಾರಿ ಇಲಾಖೆ ಅಧಿಕಾರಿಗಳಿಂದ ಪರಿಶೀಲಿಸಿದಾಗ ಯಾವ ವೈನ್ ಸ್ಟೋರ್‌ನಲ್ಲಿ ಮದ್ಯ ಖರೀದಿಸಲಾಗಿದೆ ಎಂಬುದು ತಿಳಿದುಬಂದಿತ್ತು. ವೈನ್ ಸ್ಟೋರ್‌ನ ಸಿಸಿ ಟಿವಿ ವಿಡಿಯೋ ಪರಿಶೀಲಿಸಿದಾಗ ತುಮಕೂರಿನ ಎಸ್.ಆರ್.ರಾಘವೇಂದ್ರ ಎಂದು ತಿಳಿದುಬಂದಿದೆ. ಪೊಲೀಸರು ತನಿಖೆ ಮುಂದುವರಿಸಿದಾಗ ಮೃತ ರಾಘವೇಂದ್ರನ ಪತ್ನಿ ದಿವ್ಯಾ ಹಾಗೂ ಆಟೋ ಚಾಲಕ ಕೃಷ್ಣ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ಇದಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಕೃಷ್ಣನ ಮೂಲಕ ಕೊಲೆ ಮಾಡಿಸಿರುವುದು ಬೆಳಕಿಗೆ ಬಂದಿದೆ. ಕೃತ್ಯಕ್ಕೆ ಬಳಸಿದ್ದ ಆಟೋ, ದೊಣ್ಣೆ ಹಾಗೂ ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಕುಣಿಗಲ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಎಸ್‌ಪಿ ವಂಶಿಕೃಷ್ಣ ತಿಳಿಸಿದರು.

    ಡಬಲ್ ಮರ್ಡರ್ ಆರೋಪಿ ಕೊಂದವರ ಬಂಧನ

    ಕುಣಿಗಲ್: ಡಬಲ್ ಮರ್ಡರ್ ಮಾಡಿದ್ದ ಆರೋಪಿ ಹಾಗೂ ರೌಡಿಶೀಟರ್‌ನನ್ನು ಕೊಲೆ ಮಾಡಿದ್ದ ನಾಲ್ವರ ಪೈಕಿ ಮೂವರನ್ನು ಹುಲಿಯೂರುದುರ್ಗ ಪೊಲೀಸರು ಬಂಧಿಸಿದ್ದಾರೆ. ಅಮೃತೂರು ಹೋಬಳಿ ಕೀಲಾರ ಗ್ರಾಮದ ವಾಸಿ ಪ್ರಕಾಶ್ (41), ಬೆಂಗಳೂರಿನ ಕಸ್ತೂರಿ ಬಾ ನಗರದ ವಾಸಿ ಸತೀಶ್ (19), ಕೀಲಾರ ಗ್ರಾಮದ ವಾಸಿ ಶಶಿಕಲಾ (36) ಬಂಧಿತರು.ಕೊಲೆ ಆರೋಪಿ ಶಶಿಕಲಾಳ ಪತಿ ನಿಂಗೇಗೌಡ ತಲೆಮರೆಸಿಕೊಂಡಿದ್ದು, ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಕೊಲೆಯಾದ ರೌಡಿಶೀಟರ್ ವಿನಯ್ ಈ ಹಿಂದೆ ಇದೇ ಕೀಲಾರ ಗ್ರಾಮದ ನಿಂಗೇಗೌಡ ಅವರ ತಂದೆ ಗಂಗಾಧರಯ್ಯ ಹಾಗೂ ಸೋದರನನ್ನು ಕೊಲೆ ಮಾಡಿದ್ದ. ನಿಂಗೇಗೌಡ ಈ ಸೇಡು ತೀರಿಸಿಕೊಳ್ಳಲು ಪತ್ನಿಯ ಮೂಲಕವೇ ಸಂಚು ರೂಪಿಸಿದ್ದ. ಶಶಿಕಲಾ ಮೊಬೈಲ್ ಮೂಲಕ ವಿನಯ್ ಜತೆ ಸಂಭಾಷಣೆ ನಡೆಸಿ ಅಕ್ರಮ ಸಂಬಂಧಕ್ಕೆ ಒತ್ತಾಯಿಸಿದ್ದಾರೆ. ಶಶಿಕಲಾ ಮೂಲಕ ಕೀಲಾರ ಗ್ರಾಮಕ್ಕೆ ವಿನಯ್‌ನನ್ನು ಕರೆಸಿಕೊಂಡು ಡಿ.21ರ ರಾತ್ರಿ ಕೀಲಾರ ಗ್ರಾಮದ ವಿನಯ್‌ನ ಜಮೀನಿನ ಬಳಿಯೇ ಪ್ರಕಾಶ್ ಹಾಗೂ ಸತೀಶ್ ಅವರ ಸಹಕಾರದಿಂದ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ತನಿಖೆ ಕೈಗೊಂಡ ಹುಲಿಯೂರುದುರ್ಗ ಪೊಲೀಸರು ಆರೋಪಿಗಳನ್ನು ಬಂಧಿಸಿ, ಕಾರು, ಮಚ್ಚು ಹಾಗೂ ಚಾಕುಗಳನ್ನು ವಶಪಡಿಸಿಕೊಂಡಿದ್ದಾರೆ.

    ಎಸ್‌ಪಿ ನೇತೃತ್ವದಲ್ಲಿ ತಂಡ ರಚನೆ : ಎರಡೂ ಕೊಲೆ ಪ್ರಕರಣ ಪತ್ತೆ ಮಾಡಲು ಎಸ್‌ಪಿ ಡಾ.ವಂಶಿಕೃಷ್ಣ, ಎಎಸ್‌ಪಿ ಉದೇಶ್, ಡಿವೈಎಸ್‌ಪಿ ಜಗದೀಶ್, ಸಿಪಿಐ ಗುರುಪ್ರಸಾದ್ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು. ಹುಲಿಯೂರುದುರ್ಗ ಪಿಎಸ್‌ಐ ವೆಂಕಟೇಶ್, ಎಎಸ್‌ಐ ರಾಮಚಂದ್ರಯ್ಯ, ಸಿಬ್ಬಂದಿ ನರಸಿಂಹರಾಜು, ಪುಟ್ಟರಾಮು, ವೆಂಕಟೇಶಮೂರ್ತಿ, ರಂಗಸ್ವಾಮಿ, ರಜನಿಕಾಂತ್ ಹಾಗೂ ವೆಂಕಟೇಶ್ ಕಾರ್ಯಾಚರಣೆಯಲ್ಲಿದ್ದರು. ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಹುಲಿಯೂರುದುರ್ಗ ಪೊಲೀಸರಿಗೆ ಎಸ್‌ಪಿ ನಗದು ಬಹುಮಾನ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts