ಹೊಸಪೇಟೆ: ವಿಜಯನಗರ ಕ್ಷೇತ್ರಕ್ಕೆ ಕೃಷಿ ವಿಶ್ವ ವಿದ್ಯಾಲಯ, ಮೆಡಿಕಲ್, ನಸಿರ್ಂಗ್ ಹಾಗೂ ಕಾನೂನು ಮಹಾವಿದ್ಯಾಲಯ ತರುವವರೆಗೂ ವಿರಮಿಸುವುದಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಸಿದ್ದಾರ್ಥಸಿಂಗ್ ಭರವಸೆ ನೀಡಿದರು.
ತಾಲೂಕಿನ ಕಾರಿಗನೂರು ಗ್ರಾಮದಲ್ಲಿ ಗುರುವಾರ ಚುನಾವಣೆ ಪ್ರಚಾರ ನಡೆಸಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಹೊಸಪೇಟೆಗೆ ಆಗಮಿಸಿ ವಿಜಯನಗರ ಕ್ಷೇತ್ರಕ್ಕೆ ಉಜ್ವಲ ಭವಿಷ್ಯವಿದ್ದು, ರೈತರನ್ನು ಉತ್ತೇಜಿಸುವ ದೂರದೃಷ್ಟಿಯಿಂದ ಕೃಷಿ ವಿಶ್ವ ವಿದ್ಯಾಲಯ ತರುವ ವಿಚಾರ ಪ್ರಸ್ತಾಪಿಸಿದ್ದಾರೆ. ವಿವಿಧ ಅಭಿವೃದ್ಧಿಗಳ ಜತೆಗೆ ಕೃಷಿ, ಶಿಕ್ಷಣ, ಆರೋಗ್ಯ ಕ್ಷೇತ್ರದ ಸಂಪನ್ಮೂಲಗಳ ಉನ್ನತೀಕರಣಕ್ಕೆ ಅವರಿತ ಶ್ರಮ ವಹಿಸುವುದಾಗಿ ಭರವಸೆ ನೀಡಿದರು.
ವಿಜಯನಗರ ಕ್ಷೇತ್ರದ ಅದೃಷ್ಟದ ಕ್ಷೇತ್ರವಾಗಿದೆ. ಒಂದೆಡೆ ಖನಿಜ ಸಂಪತ್ತು, ಇನ್ನೊಂದೆಡೆ ಐತಿಹಾಸಿಕ ಹಂಪಿ ಮತ್ತು ಮತ್ತೊಂದೆಡೆ ತುಂಗಭದ್ರಾ ಜಲಾಶಯ ಇರುವ ಪುಣ್ಯಭೂಮಿ. ಇಂತಹ ಪಾವನ ನೆಲೆದ ಸೇವಕನಾದ ಆನಂದ್ ಸಿಂಗ್‌ಗೆ ಆಶೀರ್ವಸಿದಂತೆ ನನಗೂ ಅಶೀರ್ವಾದ ಮಾಡಿದರೆ, ಮುಂದಿನ ದಿನಗಳಲ್ಲಿ ಅವರ ಮಾರ್ಗದರ್ಶನದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದರು.
ನಗರಸಭೆ ಸದಸ್ಯ ಪರಮೇಶಪ್ಪ ಮಾತನಾಡಿ, ಸಚಿವ ಆನಂದ್ ಸಿಂಗ್ ಅವರು ಕಾರಿಗನೂರಿನಲ್ಲಿ 75 ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಿದ್ದಾರೆ. ಶಾಲೆಗೆ ಕಾಂಪೌಂಡ್, ಓಣಿಗಳಲ್ಲಿ ಸಿಸಿ ರಸ್ತೆ ನಿರ್ಮಾಣ ಕುಡಿಯುವ ನೀರು, ಬೈಪಾಸ್ ರಸ್ತೆ ನಿರ್ಮಿಸಿಕೊಟ್ಟಿದ್ದಾರೆ ಎಂದರು.
ಇದನ್ನೂ ಓದಿ: ಕಾಂಗ್ರೆಸ್‌ನಿಂದ ಇಲ್ಲಸಲ್ಲದ ಆರೋಪ- ಬಿಜೆಪಿ ಅಭ್ಯರ್ಥಿ ಸಿದ್ದಾರ್ಥಸಿಂಗ್ ಅಸಮಾಧಾನ
ನಗರಸಭೆ ಸದಸ್ಯೆ ಗಂಗಮ್ಮ ನಾಗೇಂದ್ರ, ನಗರಸಭೆ ಸದಸ್ಯ ಜೀವರತ್ನಂ, ಪಕ್ಷದ ಹಿರಿಯರಾದ ರಾಮಕೃಷ್ಟ, ಖಂಡೋಜಿರಾವ್, ಬಜಾರಪ್ಪ, ಸಾಬಣ್ಣ, ಹೊನ್ನೂರು ಸ್ವಾಮಿ, ಮಂಜುನಾಥ, ವೆಂಕಟೇಶ್, ನಾಗರಾಜ ಇತರರಿದ್ದರು.
ಎಮ್ಮೆಲ್ಲೆ ಕೇಕ್: ಸಿದ್ದಾರ್ಥಸಿಂಗ್ ಶಾಸಕರಾಗುವ ವಿಶ್ವಾಸದಲ್ಲಿರುವ ಅಭಿಮಾನಿಗಳು ಕಾರಿಗನೂರಿನಲ್ಲಿ ಎಂಎಲ್‌ಎ ಎಂದು ಬರೆಯಲಾಗಿದ್ದ ದೊಡ್ಡ ಕೇಕ್ ಅನ್ನು ಬಿಜೆಪಿ ಅಭ್ಯರ್ಥಿ ಸಿದ್ಧಾರ್ಥ ಸಿಂಗ್ ಅವರಿಂದ ಕತ್ತರಿಸುವ ಮೂಲಕ ಅಭಿಮಾನ ಮೆರೆದರು.
ವಿವಿಧೆಡೆ ಮತ ಬೇಟೆ: ಇದೇ ವೇಳೆ ನಗರದ ಸಂಕ್ಲಾಪುರ, 21ನೇ ವಾರ್ಡ್‌ನ ಸುಡುಗಾಡು ಸಿದ್ಧರ ಆಶ್ರಯ ಕಾಲನಿ, ಸಿರಸಿನಕಲ್, ಗುರುಭವನ ಪ್ರದೇಶ, ಮೆಹಬೂಬ ನಗರ, ಜಂಬುನಾಥ ರಸ್ತೆಯ ಪ್ರದೇಶದಲ್ಲಿ ಸಿದ್ಧಾರ್ಥ ಸಿಂಗ್ ಮತಯಾಚನೆ ಮಾಡಿದರು.
ಕುದುರೆ ಏರಿದ ಸಿದ್ದಾರ್ಥ ಸಿಂಗ್
ಹೊಸಪೇಟೆ ನಗರಸಭೆ 22ನೇ ವಾರ್ಡ್ ವ್ಯಾಪ್ತಿಯ ಮೆಹಬೂಬ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಸಿದ್ಧಾರ್ಥಸಿಂಗ್ ಅವರನ್ನು ಪಕ್ಷದ ಕಾರ್ಯಕರ್ತರು ಕುದುರೆ ಮೇಲೆ ಕುಳ್ಳಿರಿಸಿ ಮೆರವಣಿಗೆ ನಡೆಸಿದರು. ವಿವಿಧ ಬಡಾವಣೆಗಳಲ್ಲಿ ಕುದುರೆಯಲ್ಲೇ ಸಂಚಿರಿಸಿದ ಸಿದ್ಧಾರ್ಥ ಸಿಂಗ್ ಮತಯಾಚನೆ ಮಾಡಿದರು.