More

    ಅಗ್ನಿಪಥ್ ವಿರೋಧಿಸುವ ನೆಪದಲ್ಲಿ ಕೆಲ ರಾಜಕೀಯ ಶಕ್ತಿಗಳು ಬೇಳೆ ಬೇಯಿಸಿಕೊಳ್ಳುತ್ತಿವೆ: ಬಿ.ವೈ.ರಾಘವೇಂದ್ರ

    ಶಿವಮೊಗ್ಗ: ಅಗ್ನಿಪಥ್ ಯೋಜನೆ ಐತಿಹಾಸಿಕ ಕಾರ್ಯಕ್ರಮ. ಈ ಯೋಜನೆಯನ್ನು ವಿರೋಧಿಸುವ ನೆಪದಲ್ಲಿ ಕೆಲ ರಾಜಕೀಯ ಶಕ್ತಿಗಳು ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿವೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಕಿಡಿಕಾರಿದರು.

    ಯುವ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಮಹತ್ವದ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಆದರೆ ಕೆಲ ಕಾಣದ ಕೈಗಳು ಪ್ರಾಯೋಜಿತ ಅಜೆಂಡಾ ರೂಪಿಸಿಕೊಂಡು ಹೋರಾಟ ಮಾಡುತ್ತಿವೆ. ಕಳೆದೆರಡು ದಿನಗಳಿಂದ ಹೋರಾಟ ತಣ್ಣಗಾಗಿದ್ದು ಜನರಿಗೂ ಯೋಜನೆ ಬಗ್ಗೆ ಮನವರಿಕೆ ಆಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಅಗ್ನಿಪಥದಲ್ಲಿ ತರಬೇತಿ ಪಡೆದು ಬಂದವರಿಗೆ ಕೆಲಸ ಕೊಡುವುದಕ್ಕೆ ಕಾರ್ಪೋರೇಟ್ ಸಂಸ್ಥೆಗಳು ಮುಂದೆ ಬಂದಿವೆ. ವಿದ್ಯಾಭ್ಯಾಸಕ್ಕೂ ಅವರಿಗೆ ಅವಕಾಶ ಕಲ್ಪಿಸಲಾಗುತ್ತದೆ. ರಾಜ್ಯ ಸರ್ಕಾರವೂ ಶೇ.10ರಷ್ಟು ಮೀಸಲಾತಿ ನೀಡಲು ನಿರ್ಧರಿಸಿವೆ. ಆದರೂ ಅಗ್ನಿಪಥ ವಿರುದ್ಧದ ಹೋರಾಟ ರಾಜಕೀಯ ಪ್ರೇರಿತವಾಗಿದೆ ಎಂದು ದೂರಿದ ಅವರು, ಅಗ್ನಿಪಥ ಯೋಜನೆ ಅತ್ಯುತ್ತಮ ಕಾರ್ಯಕ್ರಮವಾಗಿದ್ದು ಯುವ ಶಕ್ತಿಯನ್ನು ಹಾಳುಗೆಡಹುವ ಷಡ್ಯಂತ್ರವನ್ನು ಪ್ರತಿಪಕ್ಷಗಳು ಮಾಡುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ, ಬಿಜೆಪಿ ಸರ್ಕಾರಕ್ಕೆ ಇರಿಸುಮುರಿಸು ಮಾಡುವ ಹುನ್ನಾರ ಇದಾಗಿದೆ ಎಂದು ಆರೋಪಿಸಿದರು.

    ಸಿದ್ದರಾಮಯ್ಯ ಮಾತನಾಡುವ ನೈತಿಕ ಹಕ್ಕಿಲ್ಲ: ರಾಷ್ಟ್ರಪತಿ ಸ್ಥಾನಕ್ಕೆ ಎನ್‌ಡಿಎಸ್ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಆಯ್ಕೆ ಮಾಡಲಾಗಿದೆ. ಎನ್‌ಡಿಎ ಅಭ್ಯರ್ಥಿ ಬಗ್ಗೆ ಮಾತನಾಡುವ ನೈತಿಕ ಹಕ್ಕು ಸಿದ್ದರಾಮಯ್ಯ ಅವರಿಗಿಲ್ಲ ಎಂದು ಬಿ.ವೈ.ರಾಘವೇಂದ್ರ ಹೇಳಿದರು.

    2014ರ ನಂತರ ದೇಶದ ಅಭಿವೃದ್ಧಿ, ಬೆಳವಣಿಗೆ ಕುರಿತು ಎಲ್ಲರಿಗೂ ಗೊತ್ತಿದೆ. ಅಬ್ದುಲ್ ಕಲಾಂ, ಪ್ರಣಬ್ ಮುಖರ್ಜಿ ಹಾಗೂ ಹಾಲಿ ರಾಮನಾಥ ಕೋವಿಂದ ಅವರು ಗೌರವಾನ್ವಿತ ಹುದ್ದೆಯನ್ನು ಮುನ್ನಡೆಸಿದ್ದಾರೆ. ಹಾಗಾಗಿ ಅಂತಹ ಹುದ್ದೆ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದರು. ಮುಂದಿನ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ನಾಮಪತ್ರ ಸಲ್ಲಿಕೆ ನನ್ನನ್ನೂ ಸೂಚಕರನ್ನಾಗಿ ಮಾಡಿದ್ದಾರೆ. ಅದಕ್ಕೆ ಕೇಂದ್ರ ಸರ್ಕಾರಕ್ಕೆ ಆಭಾರಿಯಾಗಿದ್ದೇನೆ ಎಂದರು.

    ಎಐಸಿಸಿ ನಾಯಕ ರಾಹುಲ್ ಗಾಂಧಿ ಇಡಿ(ಜಾರಿ ನಿರ್ದೇಶನಾಲಯ) ವಿಚಾರಣೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಂವಿಧಾನದಲ್ಲಿ ಎಲ್ಲರಿಗೂ ಒಂದೇ ಕಾನೂನು. ಕಾಂಗ್ರೆಸ್ ಅವಧಿಯಲ್ಲೂ ಬಿಜೆಪಿ ನಾಯಕರನ್ನು ಹಲವು ಬಾರಿ ಇಡಿ ವಿಚಾರಣೆಗೊಳಪಡಿಸಿದೆ. ಆಗ ನಾವು ಶಾಂತಿಯುತವಾಗಿ ವರ್ತಿಸಿದ್ದೇವೆ. ಇದೀಗ ಕಾಂಗ್ರೆಸ್‌ನವರು ಪ್ರತಿಭಟನೆ ಹೆಸರಲ್ಲಿ ಗಲಭೆ ಸೃಷ್ಟಿಸುತ್ತಿದ್ದಾರೆ. ಕಾನೂನಿನಿಂದ ವಿನಾಯಿತಿ ಯಾರಿಗೂ ಇಲ್ಲ ಎಂದರು.

    ಸಾಕು ನಾಯಿಗೆ ಸೀಮಂತ ಮಾಡಿದ ರಂಗಭೂಮಿ ಕಲಾವಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts