More

    ಮದುವೆಯ ಅನುಬಂಧ…: ಆ ಕ್ಷಣ..

    ಮದುವೆಯ ಅನುಬಂಧ…: ಆ ಕ್ಷಣ..ಮಹಾನಗರವೊಂದರಲ್ಲಿದ್ದ ರಾಹುಲ್ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದು ಕೈ ತುಂಬಾ ಸಂಬಳ ಪಡೆಯತ್ತಿದ್ದ. 2006ರಲ್ಲಿ ಆತನಿಗೆ ಪಾರ್ಟಿಯೊಂದರಲ್ಲಿ ಮಧು ಎನ್ನುವ ಯುವತಿ ಪರಿಚಿತಳಾದಳು. ಲವಲವಿಕೆಯಿಂದ ಎಲ್ಲರೊಡನೆಯೂ ಬೆರೆಯುತ್ತಿದ್ದ ಮಧು ಸ್ತ್ರೀ ರೋಗ ತಜ್ಞೆಯಾಗಿದ್ದು ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಮೊದಲ ನೋಟಕ್ಕೇ ರಾಹುಲ್ ಮತ್ತು ಮಧು ಆಕರ್ಷಿತರಾದರು. ಒಂದೆರಡು ತಿಂಗಳು ಭೇಟಿಯಾದ ಬಳಿಕ ಮದುವೆಯಾಗುವ ತೀರ್ವನಕ್ಕೆ ಬಂದರು. ಇಬ್ಬರ ನಡುವಿನ ಜಾತಿ ವ್ಯತ್ಯಾಸ ಮದುವೆಗೇನೂ ಅಡ್ಡಿಬರಲಿಲ್ಲ. 2007ರಲ್ಲಿ ಲಗ್ನವಾದರು. ಆನಂತರ ಮಧುಳ ಆಸ್ಪತ್ರೆಗೆ ಹತ್ತಿರದಲ್ಲಿದ್ದ ಮನೆಯೊಂದನ್ನು ಬಾಡಿಗೆಗೆ ಪಡೆದು ಅಲ್ಲಿ ವಾಸಿಸತೊಡಗಿದರು. 2009ರಲ್ಲಿ ಅವರಿಗೆ ಅರ್ಜುನ್ ಎಂಬ ಮಗ ಜನಿಸಿದ. ಹೆರಿಗೆಯ ನಂತರ ಮಧು ಆರು ತಿಂಗಳ ರಜೆ ಪಡೆದು ಮನೆಯಲ್ಲಿಯೇ ಮಗನ ಪಾಲನೆ ಮಾಡತೊಡಗಿದಳು. ಮನೆ ಕೆಲಸಗಳಿಗಾಗಿ ರಾಹುಲ್ ಆಳುಕಾಳುಗಳನ್ನು ಇಟ್ಟಿದ್ದರೂ, ಮಗುವನ್ನು ಪಾಲಿಸುವುದು ಕಷ್ಟವಾದಾಗ ಮಧು ಸಹಾಯಕ್ಕಾಗಿ ತನ್ನ ತಾಯಿ ಪಂಕಜಳನ್ನು ಮನೆಗೆ ಕರೆಸಿಕೊಂಡಳು. ಪಂಕಜಳಿಗೆ ಮಂಡಿನೋವಲ್ಲದೇ ಹಲವಾರು ಇತರ ಕಾಯಿಲೆಗಳಿದ್ದ ಕಾರಣ ಆಕೆಗೆ ಮಗು ಮತ್ತು ಬಾಣಂತಿಯನ್ನು ಸಂಭಾಳಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಮಾತುಮಾತಿಗೂ ಸಿಡುಕುತ್ತಿದ್ದಳು. ಪಂಕಜಳ ಸಾರ್ವಕಾಲಿಕ ಗೊಣಗುವಿಕೆಯಿಂದ ರಾಹುಲ್ ಬೇಸತ್ತು ಆದಷ್ಟು ಸಮಯ ಮನೆಯಿಂದ ಹೊರಗಿರುತ್ತಿದ್ದ.

    ಪತ್ನಿಯ ಜೊತೆಗೆ ಏಕಾಂತದಲ್ಲಿದ್ದಾಗಲೆಲ್ಲಾ ರಾಹುಲ್ ಪಂಕಜಳನ್ನು ಟೀಕಿಸುತ್ತಾ ಆದಷ್ಟು ಶೀಘ್ರ ಅವಳನ್ನು ವಾಪಸ್ ಕಳಿಸಲು ತಾಕೀತು ಮಾಡುತ್ತಿದ್ದ. ಪ್ರತಿದಿನವೂ ಟೀಕೆ ಕೇಳಿ ರೋಸಿದ ಮಧು, ಇನ್ನು ಮುಂದೆ ತನ್ನ ತಾಯಿಯನ್ನು ಟೀಕಿಸಿದರೆ ತಾನು ಮನೆಬಿಟ್ಟು ಹೋಗುತ್ತೇನೆ ಎಂದಳು. ಒಂದೆರಡು ವಾರ ರಾಹುಲ್ ಸುಮ್ಮನಿದ್ದ. ಆದರೆ, ಪಂಕಜಳ ಗೊಣಗಾಟ ತಡೆಯಲು ಸಾಧ್ಯವಾಗದಾದಾಗ ಮತ್ತೊಮ್ಮೆ ಪತ್ನಿಗೆ ದೂರಿತ್ತ. ಗಂಡ ಹೆಂಡಿರ ನಡುವೆ ಅಂದು ಭಾರಿ ಜಗಳವೇ ನಡೆಯಿತು. ನಂತರ ಪಂಕಜಳೇ ತನ್ನ ಮನೆಗೆ ಹೊರಟುಹೋದಳು. ಇದರಿಂದ ಇಬ್ಬರ ನಡುವಿನ ವಿರಸ ತೀವ್ರವಾಯಿತು.

    ಕೆಲಕಾಲದ ನಂತರ ಬಾಣಂತಿಯರಿಗೆ ಉಂಟಾಗುವಂತಹ ಡಿಪ್ರೆಷನ್​ಗೆ ಮಧು ಜಾರಿದಳು. ಅವಳ ನಡವಳಿಕೆಯೇ ಬದಲಾದಾಗ ರಾಹುಲ್ ಅವಳನ್ನು ವೈದ್ಯರಿಗೆ ತೋರಿಸಿದ. ಅವರು ಔಷಧಿಗಳನ್ನು ಕೊಟ್ಟರೂ ಮಧುವಿನ ಖಿನ್ನತೆ ಹೋಗಲಿಲ್ಲ. ಆದರೆ, ರಾಹುಲ್ ತಾಳ್ಮೆ ಕಳೆದುಕೊಳ್ಳಲಿಲ್ಲ. ಮಗನೊಡನೆ ಕಾಲಕಳೆಯುತ್ತಾ ಮನಸ್ಸನ್ನು ತಿಳಿಮಾಡಿಕೊಂಡಿದ್ದ. ಕೆಲಕಾಲದ ನಂತರ ಮಧು ಕ್ಷುಲ್ಲಕ ಕಾರಣಗಳಿಗೆ ಗಂಡನೊಡನೆ ಜಗಳವಾಡಲು ಆರಂಭಿಸಿದಳು. ಇನ್ನು ಮುಂದೆ ಹೆಂಡತಿಯ ಜತೆ ಜೀವನ ಮಾಡಲು ಸಾಧ್ಯವಿಲ್ಲವೆಂದು ರಾಹುಲ್ ಭಾವಿಸಿದ. ಆತ ತನ್ನ ಮಿತ್ರರ ಸಲಹೆ ಕೋರಿದ. ಸ್ವಲ್ಪ ಸಮಯದ ನಂತರ ಮಧು ಸರಿಯಾಗಬಹುದು ಎಂದು ಸೂಚಿಸಿದ ಅವರು ತಾಳ್ಮೆಯಿಂದಿರಲು ಹೇಳಿದರು. ಒಂದು ತಿಂಗಳ ನಂತರವೂ ಪರಿಸ್ಥಿತಿ ಬದಲಾಗದಿದ್ದಾಗ ರಾಹುಲ್ ವಕೀಲರನ್ನು ಸಂರ್ಪಸಿ ತಾನು ಮಧುವಿಗೆ ವಿಚ್ಛೇದನ ನೀಡಲು ತೀರ್ವನಿಸಿರುವುದಾಗಿ ತಿಳಿಸಿದ. ಅವನ ವಕೀಲರೂ ತಾಳ್ಮೆಯಿಂದಿರಲು ಸೂಚಿಸಿದರೂ ರಾಹುಲ್ ಹಠ ಮಾಡಿದ್ದರಿಂದ ಅವರು ಅವನ ವಿಚ್ಛೇದನದ ಅರ್ಜಿಯನ್ನು ನ್ಯಾಯಾಲಯದಲ್ಲಿ ಸಲ್ಲಿಸಿದರು. ಅರ್ಜಿಯ ನೋಟೀಸ್ ಕೈಗೆ ಬಂದಕೂಡಲೇ ಮಧು ಗಂಡನ ಬಗ್ಗೆ ರೋಸಿಹೋಗಿ ಅರ್ಜುನ್​ನನ್ನು ಕರೆದುಕೊಂಡು ತೌರುಮನೆಗೆ ಹೊರಟುಹೋದಳು.

    ನಂತರ ಆಕೆ ತನ್ನ ವಕೀಲರ ಮೂಲಕ ವಿಚ್ಛೇದನದ ಅರ್ಜಿಗೆ ಉತ್ತರ ಕೊಟ್ಟಳು. ತನ್ನ ವಿರುದ್ಧ ರಾಹುಲ್ ಇಲ್ಲಸಲ್ಲದ ಅಪಾದನೆಗಳನ್ನು ಮಾಡಿದ್ದಾನೆಂದು ಹೇಳಿದ ಆಕೆ ಅವೆಲ್ಲವನ್ನೂ ಅಲ್ಲಗಳೆದಳು. ತನ್ನ ಮನೆಯ ಬಳಿಯಲ್ಲಿರುವ ಪೊಲೀಸ್ ಠಾಣೆಗೆ ಹೋಗಿ ರಾಹುಲ್​ನ ವಿರುದ್ಧ ವರದಕ್ಷಿಣೆ ಕಿರುಕುಳದ ದೂರನ್ನು ಕೊಟ್ಟಳು. ಈ ಬಗ್ಗೆ ಕ್ರಿಮಿನಲ್ ಕೇಸ್ ದಾಖಲಾಯಿತು. ಇದು ಸಾಲದೆಂಬಂತೆ ಎರಡು ವಾರಗಳ ನಂತರ ತನ್ನ ಗಂಡ ಕೌಟುಂಬಿಕ ಕಿರುಕುಳ ಕೊಟ್ಟನೆಂದು ಮಧು ಇನ್ನೊಂದು ಪ್ರಕರಣ ದಾಖಲಿಸಿದಳು. ಹೀಗಾಗಿ ಪೊಲೀಸರು ರಾಹುಲ್​ನನ್ನು ವಿಚಾರಣೆಗೆ ಪದೇಪದೆ ಠಾಣೆಗೆ ಕರೆಯಲಾರಂಭಿಸಿದರು. ಈ ಜೋಡಿಯ ಕುಟುಂಬದವರು, ಸ್ನೇಹಿತರು, ಮತ್ತು ಆಳು ಕಾಳುಗಳನ್ನು ಪೊಲೀಸರು ವಿಚಾರಿಸಿದಾಗ ಮಧುಳ ಕುಟುಂಬದ ಹೊರತಾಗಿ ಪ್ರತಿಯೊಬ್ಬರೂ ಮಧುಳ ದೂರುಗಳು ಸುಳ್ಳೆಂದು ಪೊಲೀಸರಿಗೆ ತಿಳಿಸಿದರು. ಆದರೆ, ತನ್ನ ಪರಿಚಯದ ಹಿರಿಯ ಐಪಿಎಸ್ ಅಧಿಕಾರಿಣಿಯೊಬ್ಬಳ ಸ್ನೇಹದ ದುರ್ಬಳಕೆ ಮಾಡಿದ ಮಧು, ಪೊಲೀಸರು ಎರಡು ದಿನಗಳಿಗೊಮ್ಮೆ ರಾಹುಲ್​ನನ್ನು ಠಾಣೆಗೆ ಕರೆಸುವಂತೆ ಮಾಡಿದಳು.

    ಏತನ್ಮಧ್ಯೆ ನ್ಯಾಯಾಲಯದಲ್ಲಿ ವಿಚ್ಛೇದನದ ಅರ್ಜಿ ವಿಚಾರಣೆಗೆ ಬಂದಾಗ ಮಧು ಮಗನನ್ನು ನೋಡಿಕೊಳ್ಳಲು ತನಗೆ ಪ್ರತಿ ತಿಂಗಳು 10,000 ರೂಪಾಯಿ ಮಾಸಾಶನವನ್ನು ರಾಹುಲ್​ನಿಂದ ಕೊಡಿಸಬೇಕು ಎಂದು ಅರ್ಜಿ ಸಲ್ಲಿಸಿದಳು. ನ್ಯಾಯಾಲಯವು ಇದಕ್ಕೊಪ್ಪಿತು. ಮುಂದಿನ ವಿಚಾರಣೆಯ ದಿನ ಇನ್ನೊಂದು ಅರ್ಜಿ ಕೊಟ್ಟು ತಾವಿಬ್ಬರೂ ಒಂದು ಕೊಟಿ ರೂ. ವೆಚ್ಚದಲ್ಲಿ ಒಂದು ಫ್ಲಾಟ್ ಖರೀದಿಸಿದ್ದು ಅದಕ್ಕಾಗಿ ಬ್ಯಾಂಕಿನಿಂದ ಸಾಲ ಮಾಡಿದ್ದು ಅದರ ಇ.ಎಂ.ಐ ತನ್ನ ಬ್ಯಾಂಕ್ ಖಾತೆಯಿಂದಲೇ ಹೋಗುತ್ತಿದೆ; ಅಲ್ಲಿಯವರೆಗೆ ತಾನು ತುಂಬಿರುವ ಸಾಲದ ಕಂತನ್ನು ಕೂಡಲೇ ರಾಹುಲ್​ನಿಂದ ತನಗೆ ಕೊಡಿಸಬೇಕೆಂದು ಕೋರಿದಳು. ಮುಂದೆಯೂ ತಾನೇ ಇ.ಎಂ.ಐ ತುಂಬುವುದರಿಂದ ಮನೆಯನ್ನು ಜಂಟಿ ಹೆಸರಿನಿಂದ ತೆಗೆದು ತನ್ನ ಹೆಸರಿಗೆ ಮಾಡಿಸಿಕೊಳ್ಳಲು ಅನುಕೂಲ ಮಾಡಿಕೊಡಬೇಕೆಂದಳು.

    ಅವುಗಳ ಬಗ್ಗೆ ತೀರ್ವನವಾಗುವಷ್ಟರಲ್ಲಿ ಮಧು ಇನ್ನೊಂದು ಅರ್ಜಿ ಸಲ್ಲಿಸಿ ತಮ್ಮಿಬ್ಬರ ಬ್ಯಾಂಕಿನ ಜಂಟಿ ಖಾತೆಯಿಂದ ರಾಹುಲ್ ತನಗೆ ಹೇಳದೆ ಕೇಳದೇ ತೆಗೆದಿರುವ ಅಷ್ಟೂ ಹಣವನ್ನೂ ತನಗೆ ಹಿಂತಿರುಗಿಸಲು ನಿರ್ದೇಶನ ನೀಡಲು ಕೋರಿದಳು. ಅದಾದ ನಂತರ ತನ್ನ ಕೆಲವು ಒಡವೆ ವಸ್ತುಗಳನ್ನು ರಾಹುಲ್ ತನಗೆ ಗೊತ್ತಿಲ್ಲದೆ ದುರುಪಯೋಗ ಮಾಡಿಕೊಂಡಿದ್ದು ಆ ಹಣವನ್ನು ಕೊಡಿಸಬೇಕೆಂದು ನಾಲ್ಕನೆಯ ಅರ್ಜಿ ಸಲ್ಲಿಸಿದಳು. ಒಂದಾದಮೇಲೊಂದರಂತೆ ಮಧು ಸಲ್ಲಿಸುತ್ತಿದ್ದ ಅರ್ಜಿಗಳಿಂದ ರಾಹುಲ್ ಕಂಗಾಲಾದ. ಅವನಿಗೆ ಏನು ಮಾಡುವುದೆಂದೇ ತೋಚದಾಯಿತು. ಮಧುವಾದರೋ ತಾನು ರೋಗಿಗಳ ಶುಶ್ರೂ›ಷೆಯಲ್ಲಿ ನಿರತಳಾಗಿರುವೆ ಎನ್ನುತ್ತಾ ವಿಚ್ಛೇದನ ಪ್ರಕರಣದ ಅರ್ಜಿಯ ವಿಚಾರಣೆಗೆ ಹಾಜರಾಗುತ್ತಲೇ ಇರಲಿಲ್ಲ. ಹೀಗಾಗಿ ವಿಚಾರಣೆ ಮುನ್ನಡೆ ಯದೆ 2 ವರ್ಷ ಕಳೆದರೂ ಪ್ರಕರಣಕ್ಕೆ ತೆರೆ ಬೀಳಲಿಲ್ಲ. ಇದರಿಂದ ಬೇಸತ್ತ ನ್ಯಾಯಾಧೀಶರು ವಿಚಾರಣೆಗೆ ತೀವ್ರಗತಿಯನ್ನು ನೀಡಿ ತಿಂಗಳೊಳಗೆ ವಿಚಾರಣೆ ಮುಗಿಸಿದರು. ರಾಹುಲ್​ನ ಅರ್ಜಿಯನ್ನು ಪುರಸ್ಕರಿಸಿ ವಿವಾಹ ವಿಚ್ಛೇದನವನ್ನು ಮಂಜೂರು ಮಾಡಿದರು. ರಾಹುಲ್-ಮಧು ವಿವಾಹವನ್ನು ರದ್ದುಗೊಳಿಸುವ ಆದೇಶವನ್ನು ನೀಡಿದರು. ಇನ್ನೂ 5 ವರ್ಷ ತುಂಬಿರದಿದ್ದ ಬಾಲಕ ಅರ್ಜುನ್​ನನ್ನು ಮಧುಳ ಸುಪರ್ದಿಗೆ ಒಪ್ಪಿಸಿ ವಾರಕ್ಕೊಮ್ಮೆ ಮಧುಳ ಮನೆಗೆ ಹೋಗಿ ಅವನನ್ನು 2 ಗಂಟೆಗಳ ಕಾಲ ನೋಡುವ ಅವಕಾಶವನ್ನು ರಾಹುಲ್​ಗೆ ನೀಡಿದರು.

    ಈ ತೀರ್ಪಿನಿಂದ ಅತೃಪ್ತಳಾದ ಮಧು ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದಳು. ಅದು ವಿಚಾರಣೆಗೆ ಸ್ವೀಕೃತವಾಯಿತು. ಏತನ್ಮಧ್ಯೆ ರಾಹುಲ್ ಪ್ರತಿವಾರವೂ ಮಧುಳ ಮನೆಗೆ ಹೋಗಿ ಮಗನನ್ನು ತನ್ನ ಜತೆಗೆ ಹೊರಗೆ ಕರೆದುಕೊಂಡು ಹೋಗುತ್ತಾ ಅವನೊಡನೆ ಒಂದೆರಡು ಗಂಟೆ ಸಂತಸದಿಂದ ಕಾಲ ಕಳೆಯುತ್ತಿದ್ದ. ಕೆಲ ತಿಂಗಳ ತರುವಾಯ ರಾಹುಲ್​ನ ಬಂಧು ಮಿತ್ರರು ಅವನಿಗೆ ಮರುಮದುವೆಯಾಗಲು ಸೂಚಿಸಿದರು. ಅದಕ್ಕಾತ ಒಪ್ಪಿದ. ಆದರೆ ಕೌಟುಂಬಿಕ ನ್ಯಾಯಾಲಯವು ರಾಹುಲ್-ಮಧುರ ವಿವಾಹವನ್ನು ರದ್ದುಪಡಿಸಿದ ಆದೇಶಕ್ಕೆ ಹೈಕೋರ್ಟು ತಡೆಯಾಜ್ಞೆ ನೀಡಿದ್ದ ಕಾರಣ ರಾಹುಲ್​ನ ಮರುಮದುವೆ ಸಾಧ್ಯವಿಲ್ಲವೆಂದು ವಕೀಲರು ತಿಳಿಸಿದರು.

    ಇಷ್ಟರಲ್ಲಿ ಒಂದು ದಿನ ಅರ್ಜುನ್ ತಾನು ಕೇವಲ ಅಮ್ಮನೊಂದಿರುವುದು ತನಗಿಷ್ಟವಿಲ್ಲವೆಂದು ತಿಳಿಸಿ ಅಪ್ಪ, ಅಮ್ಮ ಇಬ್ಬರೂ ಒಂದಾಗಿರುವುದು ತನಗೆ ಬೇಕೆಂದು ರಾಹುಲ್ ಬಳಿ ಹೇಳಿದ. ತಾಯಿಯ ಮುಂದೆಯೂ ಅಪ್ಪನೂ ತಮ್ಮ ಜತೆಗಿರಬೇಕೆಂದು ಪ್ರತಿದಿನವೂ ಕೋರುತ್ತಿದ್ದ. ಮೂರು ವರ್ಷಗಳ ಕಾಲ ಪತ್ನಿಯಿಂದ ಬೇರೆಯಾಗಿದ್ದ ರಾಹುಲ್​ನಿಗೆ ಒಂಟಿತನ ಕಾಡತೊಡಗಿತ್ತು. ತಾನು ಕ್ಷುಲ್ಲಕ ಕಾರಣಕ್ಕಾಗಿ ವಿಚ್ಛೇದನದ ಅರ್ಜಿ ಹಾಕಿದನೆಂಬ ಪಾಪಪ್ರಜ್ಞೆ ಅವನಿಗೆ ಬಂದಿತ್ತು. ಇಷ್ಟರಲ್ಲಿ ಒಂದು ದಿನ ರಾಹುಲ್ ಮಗನನ್ನು ಕಾಣಲು ಬಂದಾಗ ಮಧು ಮನೆಯಲ್ಲಿಯೇ ಇದ್ದಳು. ಆಗ ಆತ ಅವಳೊಡನೆ ಅರ್ಜುನ್ ಮಾಡಿದ ಸಲಹೆಯ ಬಗ್ಗೆ ರ್ಚಚಿಸಿದ. ದೀರ್ಘಕಾಲ ಇಬ್ಬರೂ ರ್ಚಚಿಸಿದ ನಂತರ ವಿವಾಹ ವಿಚ್ಛೇದನ ಪಡೆದು ತಪ್ಪು ಮಾಡಿರುವುದಾಗಿ ಮನಗಂಡರು. ಕೂಡಲೇ ಒಂದಾಗಲು ತೀರ್ವನಿಸಿದರು. ಮಾರನೆಯ ದಿನವೇ ಮಧು ಮಗನೊಡನೆ ಗಂಡನ ಮನೆಗೆ ವಾಪಸಾದಳು. ಆನಂತರ ತನ್ನ ಪ್ರಭಾವವನ್ನು ಬಳಸಿ ರಾಹುಲ್ ವಿರುದ್ಧ ತಾನು ಸಲ್ಲಿಸಿದ್ದ ಕ್ರಿಮಿನಲ್ ಪ್ರಕರಣಗಳು ಜೀವಿತವಾಗಿರುವಂತೆ ನೋಡಿಕೊಂಡಿದ್ದ ಮಧು ದೂರುಗಳನ್ನು ಹಿಂಪಡೆದಳು.

    ಇಬ್ಬರ ವೈವಾಹಿಕ ಜೀವನ ಸುಸೂತ್ರವಾಗಿಯೇ ಸಾಗಿತ್ತು. ಆದರೆ ಪ್ರಕರಣಕ್ಕೆ ತೆರೆ ಬಿದ್ದಿರಲಿಲ್ಲ. ಏಕೆಂದರೆ ಉಚ್ಚ ನ್ಯಾಯಾಲಯದಲ್ಲಿ ಮಧು ಸಲ್ಲಿಸಿದ್ದ ಮೇಲ್ಮನವಿ ಇನ್ನೂ ವಿಚಾರಣೆಗೇ ಬಂದಿರಲಿಲ್ಲ. ಅದು ಇತ್ಯರ್ಥವಾಗದಿದ್ದಾರೇನಾಯಿತು, ನಾವಿಬ್ಬರೂ ಒಂದಾಗಿದ್ದೇವಲ್ಲ ಎಂದು ಅವರಿಬ್ಬರೂ ಸುಮ್ಮನಾಗಿದ್ದರು. ಆದರೆ, ಕೌಟುಂಬಿಕ ನ್ಯಾಯಾಲಯವು ಕೊಟ್ಟಿರುವ ಡಿವೋರ್ಸ್ ತೀರ್ವನವನ್ನು ರದ್ದು ಮಾಡದಿದ್ದರೆ ನಿಮಗೆ ಮತ್ತು ನಿಮ್ಮ ಮಕ್ಕಳಿಗೆ ಮುಂದೆ ತೊಂದರೆ ಬರುತ್ತದೆ ಎಂದು ವಕೀಲರೊಬ್ಬರು ತಿಳಿಸಿದರು. ಆಗ ಇಬ್ಬರೂ ಜಂಟಿ ಅರ್ಜಿಯೊಂದನ್ನು ಹೈಕೋರ್ಟಿಗೆ ಸಲ್ಲಿಸಿ ತಾವಿಬ್ಬರೂ ಒಟ್ಟಿಗೆ ಜೀವಿಸುತ್ತಿರುವುದಾಗಿಯೂ ಪತಿ-ಪತ್ನಿಯರಾಗಿ ಮುಂದುವರಿಯಲು ಇಷ್ಟಪಡುತ್ತೇವೆಂದೂ ತಮ್ಮ ವಿವಾಹವನ್ನು ಊರ್ಜಿತಗೊಳಿಸಬೇಕೆಂದೂ ಕೋರಿದರು. ಕಾರಣಾಂತರಗಳಿಂದ ಆ ಅರ್ಜಿ ಎರಡು ವರ್ಷಗಳಾದರೂ ವಿಚಾರಣೆಗೇ ಬರಲಿಲ್ಲ.

    ಆಗ ಪತಿ ಪತ್ನಿ ಸಿವಿಲ್ ನ್ಯಾಯಾಲಯದಲ್ಲಿ ಮರುವಿವಾಹವಾಗಲು ಸಿದ್ಧತೆಗಳನ್ನು ನಡೆಸಿಕೊಳ್ಳಲಾರಂಭಿಸಿದರು. ಅಷ್ಟರಲ್ಲಿಯೇ ಉಚ್ಚ ನ್ಯಾಯಾಲಯವು ಅವರ ಜಂಟಿ ಅರ್ಜಿಯನ್ನು ಪುರಸ್ಕರಿಸಿ ರದ್ದಾಗಿದ್ದ ಅವರ ವಿವಾಹವನ್ನು ಊರ್ಜಿತಗೊಳಿಸಿತು. ಪತಿ-ಪತ್ನಿಯರ ದುಡುಕುತನದಿಂದ ಈ ಪ್ರಹಸನವಾಗದಂತೆ ಅನುಭವಿ ಹಿರಿಯರು ನೋಡಿಕೊಳ್ಳದಿದ್ದದ್ದು ತಪ್ಪಾಯಿತು. ಹೀಗಾಗಿಯೇ ಲೇಖಕಿ ರೀತು ಘಟೌರಿ ಹೇಳಿದ್ದಾಳೆ, ‘ಅನುಭವದಿಂದಲೇ ಉತ್ತಮ ತೀರ್ವನಗಳು ಮೂಡುತ್ತವೆ ಹಾಗೂ ಕೆಟ್ಟ ತೀರ್ವನಗಳಿಂದಲೇ ಅನುಭವವು ಮೂಡುತ್ತದೆ’ ಎಂದು.

    (ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

    ಯಾವ ಸಮಯದಲ್ಲಿ ವ್ಯಾಯಾಮ ಒಳ್ಳೆಯದು?; ಈ ಅವಧಿಯೇ ಸೂಕ್ತವಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts