More

    ಶ್ರುತಿ ಎಂಬ ಲೇಡಿ ವಿಲನ್; ನಾಯಕಿಯನ್ನು ಹೀಗೂ ತೋರಿಸುವ ಪ್ರಯತ್ನ..

    ‘ಹಲವು ನಿರ್ದೇಶಕರು ಹಲವು ಹೀರೋಗಳನ್ನು ಹುಟ್ಟುಹಾಕಿದ್ದಾರೆ. ವಿಲನ್​ಗಳನ್ನು ಯಾರಾದರೂ ಹುಟ್ಟುಹಾಕುತ್ತಾರೆ ಎಂದರೆ ಅದು ಹರ್ಷ ಮಾತ್ರ …’ ಶ್ರುತಿ ಹಾಗೆ ಹೇಳುವುದಕ್ಕೂ ಕಾರಣವಿದೆ. ಹೊಸಹೊಸ ವಿಲನ್​ಗಳನ್ನು ಪರಿಚಯ ಮಾಡುವುದರಲ್ಲಿ ಹರ್ಷ ಬಹಳ ಜನಪ್ರಿಯರು. ‘ಭಜರಂಗಿ 2’ ಚಿತ್ರದ ಮೂಲಕ ಅವರು ಮೂವರು ಹೊಸ ವಿಲನ್​ಗಳನ್ನು ಪರಿಚಯ ಮಾಡಿದ್ದಾರೆ. ಅದರ ಜತೆಗೆ, ನಾಯಕಿಯಾಗಿದ್ದ ಶ್ರುತಿ ಅವರನ್ನೂ ವಿಲನ್ ಆಗಿ ಪರಿಚಯಿಸುತ್ತಿದ್ದಾರೆ. ವಿಭಿನ್ನ ಗೆಟಪ್, ಕೈಯಲ್ಲೊಂದು ಚುಟ್ಟ, ಹೆದರಿಸುವಂತಹ ಮುಖಭಾವ … ನಿಜಕ್ಕೂ ಅದು ಶ್ರುತಿ ಅವರೇನಾ? ಎಂದು ಪ್ರಶ್ನಿಸುವಂತಿದೆ. ‘ಹರ್ಷ ನನಗೆ ಈ ಪಾತ್ರದ ಬಗ್ಗೆ ಹೇಳಿದಾಗ, ಈ ತರಹದ್ದೊಂದು ಪಾತ್ರವನ್ನು ನಾನು ಮಾಡಬೇಕು ಎಂಬ ಕಲ್ಪನೆ ಯಾಕೆ ಬಂತು ಎಂದು ಕೇಳಿದೆ. ನೀವು ಮಾಡಿದರೆ ವಿಭಿನ್ನವಾಗಿರುವುದರಿಂದ ನೀವೇ ಮಾಡಬೇಕು ಎಂದರು. ಏನೋ ಧೈರ್ಯ ಮಾಡಿ ಈ ಚಿತ್ರವನ್ನು ಒಪ್ಪಿಕೊಂಡುಬಿಟ್ಟೆ. ಪಾತ್ರ ಖಡಕ್ ಆಗಿರುತ್ತದೆ ಎಂದು ಹರ್ಷ ಹೇಳಿದ್ದರು. ಆದರೆ, ಈ ತರಹದ ಎಫೆಕ್ಟ್​ಗಳಿರುತ್ತದೆ ಎಂದು ಹೇಳಿರಲಿಲ್ಲ. ಮನೆಗೆ ಅಡ್ವಾನ್ಸ್ ಬರುತ್ತದೆ ಎಂದುಕೊಂಡಿದ್ದೆ. ಒಂದು ಕವರ್ ಬಂತು. ಅದರಲ್ಲಿ ಚುಟ್ಟ ಕಳಿಸಿದ್ದರು. ದಯವಿಟ್ಟು ಚಿತ್ರಕ್ಕಾಗಿ ಅಭ್ಯಾಸ ಮಾಡಿ ಎಂದು ಹೇಳಿದರು’ ಎಂದು ನೆನಪಿಸಿಕೊಳ್ಳುತ್ತಾರೆ ಶ್ರುತಿ.

    ಮೊದಲ ದಿನ ಆ ಗೆಟಪ್ ಹಾಕಿಕೊಂಡಾಗ ಬಹಳ ಟೆನ್ಶನ್ ಆಗಿತ್ತಂತೆ. ‘ನನ್ನನ್ನು ನೋಡಿದವರು ಹೆದರುವ ಬದಲು ಎಲ್ಲಿ ನಗುತ್ತಾರೋ ಎಂಬ ಭಯವಿತ್ತು. ಆದರೆ, ಹರ್ಷಗೆ ವಿಶ್ವಾಸವಿತ್ತು. ಖಂಡಿತಾ ಯಾರೂ ನಗುವುದಿಲ್ಲ ಎಂದು ಹೇಳಿದ್ದರು. ಕ್ಯಾರಾವಾನ್ ಇಳಿದು ಬರುತ್ತಿದ್ದಂತೆಯೇ, ಶಿವಣ್ಣ ನೋಡಿ ಎಷ್ಟು ವಿಭಿನ್ನವಾಗಿ ಕಾಣ್ತಿದ್ದೀಯಾ ಎಂದರು. ಬಹುಶಃ ಅವರೆಲ್ಲ ವಿಶ್ವಾಸ ತುಂಬದಿದ್ದರೆ, ಈ ಪಾತ್ರ ಮಾಡುವುದಕ್ಕೆ ಸಾಧ್ಯವಾಗುತ್ತಿರಲೇ ಇಲ್ಲ. 30 ವರ್ಷವಾಯಿತು ನಾನು ಚಿತ್ರರಂಗಕ್ಕೆ ಬಂದು. ಒಬ್ಬ ನಾಯಕಿಯನ್ನು ಹೀಗೆ ತೋರಿಸಬಹುದು ಅಂತ ಯಾರೂ ಪ್ರಯತ್ನ ಮಾಡಲಿಲ್ಲ. ಆದರೆ, ಹರ್ಷ ತೋರಿಸಿದ್ದಾರೆ’ ಎನ್ನುತ್ತಾರೆ ಶ್ರುತಿ.

    ವಿಲನ್ ಆಗುವುದಕ್ಕೆ ವರ್ಕೌಟ್: ಈ ಪಾತ್ರ ಮಾಡುವುದಕ್ಕೆ ಶ್ರುತಿ ಏನೆಲ್ಲ ಮಾಡಿದರು ಎಂದು ಬಹಳ ಹತ್ತಿರದಿಂದ ನೋಡಿದ್ದಾಗಿ ಪ್ರೀ ರಿಲೀಸ್ ಇವೆಂಟ್​ನಲ್ಲಿ ಯಶ್ ಹೇಳಿದ್ದಾರೆ. ‘ಶ್ರುತಿ ಅಕ್ಕ ನಮ್ಮ ಕಿಟ್ಟಿ ಜಿಮ್ೆ ಬರುತ್ತಿದ್ದರು. ನಾವು ವರ್ಕೌಟ್​ಗೆ ಹೋಗುವಷ್ಟರಲ್ಲಿ ಅವರು ಬೆವತು ಹೋಗಿರುತ್ತಿದ್ದರು. ಏನು ಇಷ್ಟೊಂದು ಕಷ್ಟಪಡುತ್ತಿದ್ದೀರಾ? ಸ್ಲಿಮ್ ಆಗಬೇಕು ಎಂಬ ಪ್ರಯತ್ನವಾ? ಎಂದು ಕೇಳಿದೆ. ಸ್ಲಿಮ್ ಆಗುವುದಕ್ಕಲ್ಲ, ವಿಲನ್ ಆಗುವುದಕ್ಕೆ ಎಂದರು. ಆಗಲೇ ಗೊತ್ತಾಗಿದ್ದು, ಅವರು ಬಾಟಲ್ ಮಣಿ ಎಂಬ ಪಾತ್ರ ಮಾಡುತ್ತಿದ್ದಾರೆ’ ಎಂದರು ಯಶ್.

    ‘ನನ್ನ ಹಾಗೂ ಮಗು ಲೈಫ್ ಹಾಳು ಮಾಡಿದ್ದಿ’ ಎಂದು ವಾಟ್ಸ್​​ಆ್ಯಪ್​ ಸ್ಟೇಟಸ್​ ಹಾಕಿ, 6 ತಿಂಗಳ ಮಗು ಜತೆ ನದಿಗೆ ಹಾರಿದ ತಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts