

ನವದೆಹಲಿ: ನಟಿ ಜಿಯಾ ಖಾನ್ ಆತ್ಮಹತ್ಯೆ ಪ್ರಕರಣದಲ್ಲಿ ನಟ ಸೂರಜ್ ಪಾಂಚೋಲಿ ಅವರನ್ನು ಮುಂಬೈನ ಸಿಬಿಐ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ.
ಜಿಯಾ ಖಾನ್ ಅವರ ಬಾಯ್ಫ್ರೆಂಡ್ ಆಗಿದ್ದ ಸೂರಜ್ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ಆರೋಪವಿತ್ತು. ಆದರೆ, ಯಾವುದೇ ಸೂಕ್ತ ಸಾಕ್ಷ್ಯಾಧಾರ ಲಭ್ಯವಿರದ ಕಾರಣ ನ್ಯಾಯಾಲಯ ಖಲಾಸೆಗೊಳಿಸಿ ಆದೇಶ ಹೊರಡಿಸಿದೆ.
ಜಿಯಾ ಖಾನ್ (25) 2013ರ ಜೂನ್ 3ರಂದು ಮುಂಬೈನ ಜುಹು ಮನೆಯಲ್ಲಿ ನೇಣಿಗೆ ಶರಣಾಗಿದ್ದಳು. ಜಿಯಾ ಬರೆದಿದ್ದಾಳೆ ಎನ್ನಲಾದ ಆರು ಪುಟಗಳ ಡೆತ್ನೋಟ್ ಆಧಾರದ ಮೇಲೆ ಸೂರಜ್ನನ್ನು ಪೊಲೀಸರು ಬಂಧಿಸಿದ್ದರು. ಆತನ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪವನ್ನು ದಾಖಲಿಸಲಾಗಿತ್ತು. ಜಿಯಾ ಖಾನ್ ತಾಯಿ ರಬಿಯಾ ಖಾನ್ ಆತ್ಮಹತ್ಯೆಯಲ್ಲ ಕೊಲೆ ಎಂದು ವಾದಿಸಿದ್ದರು.
ಇದೀಗ ಮುಂಬೈನ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎಎಸ್ ಸಯ್ಯದ್, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಸೂರಜ್ ಪಾಂಚೋಲಿ ಅವರನ್ನು ಖುಲಾಸೆಗೊಳಿಸಲಾಗಿದೆ ಎಂದು ಆದೇಶಿಸಿದ್ದಾರೆ.
ಅಂದಹಾಗೆ ಸೂರಜ್ ಪಾಂಚೋಲಿ ಅವರು ತಾರಾದಂಪತಿ ಆದಿತ್ಯ ಪಾಂಚೋಲಿ ಮತ್ತು ಜರೀನಾ ವಾಹಬ್ ದಂಪತಿಯ ಪುತ್ರ. ಒಂದು ವೇಳೆ ಅಪರಾಧ ಸಾಬೀತಾಗಿದ್ದರೆ, 10 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಿತ್ತು. ಪಾಂಚೋಲಿಯನ್ನು 2013ರ ಜೂನ್ ತಿಂಗಳಲ್ಲಿ ಬಂಧಿಸಲಾಗಿತ್ತು. ಬಳಿಕ 2013ರ ಜುಲೈ ತಿಂಗಳಲ್ಲಿ ಜಾಮೀನಿನ ಮೇಲೆ ಬಿಡಗಡೆಯಾಗಿದ್ದರು.
ಪ್ರಕರಣದ ಪ್ರಮುಖ ಪ್ರಾಸಿಕ್ಯೂಷನ್ ಸಾಕ್ಷಿಯಾಗಿರುವ ಜಿಯಾ ಅವರ ತಾಯಿ ರಬಿಯಾ ಖಾನ್, ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ನಂಬಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದರು. ಪ್ರಕರಣದ ಕುರಿತು ಹೊಸದಾಗಿ ತನಿಖೆ ನಡೆಸುವಂತೆ ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಕಳೆದ ವರ್ಷ ವಜಾಗೊಳಿಸಿತ್ತು. (ಏಜೆನ್ಸೀಸ್)