More

    ಬಿರಾದಾರ್ @ 500; ಕಲಾವಿದ ನೀರಿನ ತರಹ ಇರಬೇಕು..

    ಹಿರಿಯ ನಟ ವೈಜನಾಥ ಬಿರಾದಾರ್ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆದಿದ್ದಾರೆ. ಸದ್ಯದಲ್ಲೇ ಬಿಡುಗಡೆಯಾಗುತ್ತಿರುವ ‘90 ಬಿಡಿ ಮನೇಗ್ ನಡಿ’ ಚಿತ್ರದಲ್ಲಿ ಬಿರಾದಾರ್ ಮೊದಲ ಬಾರಿಗೆ ಹೀರೋ ಆಗಿ ನಟಿಸಿದ್ದಾರೆ. ಅಷ್ಟೇ ಅಲ್ಲ, ಇದು ಅವರು ಅಭಿನಯಿಸುತ್ತಿರುವ 500ನೇ ಚಿತ್ರವೂ ಹೌದು. ಮುಂದೆ ಸಹ ಅವರು ಹೀರೋ ಆಗಿ ಮುಂದುವರಿಯುತ್ತಾರಾ? ಗೊತ್ತಿಲ್ಲ. ಆದರೆ, ಈ ಚಿತ್ರದ ಬಗ್ಗೆ, ಇದುವರೆಗೂ ನಡೆದು ಬಂದ ಹಾದಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

    ‘ಬಿರಾದಾರ್ ಅಭಿನಯದ 500ನೇ ಚಿತ್ರ …’ ಎಂಬ ಹೆಗ್ಗಳಿಕೆಯೊಂದಿಗೆ ಬಿಡುಗಡೆಯಾಗುತ್ತಿದೆ ‘90 ಬಿಡಿ ಮನೇಗ್ ನಡಿ’. ಈ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದ್ದು, ಅದಕ್ಕೂ ಮುನ್ನ ‘ಸಿಂಗಲ್ ಕಣ್ಣ ಹಾರಿಸ್ತಿ …’ ಎಂಬ ಹಾಡೊಂದು ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಹಾಡನ್ನು ನೋಡಿ ಶರಣ್ ಸಹ ಖುಷಿಯಾಗಿ ಮಾತನಾಡಿದ್ದಾರೆ. ಬಿರಾದಾರ್ ಅವರ ಮಂಡಿ ಸ್ಟೆಪ್ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ.

    ಚಿತ್ರ ಮತ್ತು ಹಾಡಿನ ಕುರಿತು ಮಾತನಾಡುವ ಅವರು, ‘ಹೀರೊ ಆಗಿ ನಟಿಸಿದ್ದೇನೆ. ಜನ ಹೇಗೆ ಸ್ವೀಕರಿಸುತ್ತಾರೋ ಗೊತ್ತಿಲ್ಲ. ಇನ್ನು, ನಾನು ಡಾನ್ಸ್ ಕಲಿತಿಲ್ಲ. ಹಾಡು ಹಾಕಿದರೆ ಕುಣಿಯುವಷ್ಟು ನೃತ್ಯ ಮಾತ್ರ ಗೊತ್ತು. ನಿಜ ಹೇಳಬೇಕೆಂದರೆ, ಈ ನೃತ್ಯವನ್ನು ನಾನು ಮಾಡಿಲ್ಲ. ನನ್ನಿಂದ ಮಾಡಿಸಿದ್ದಾರೆ. ಅವರು ಏನು ಹೇಳಿಕೊಟ್ಟಿದ್ದಾರೋ, ಅದನ್ನು ಚಾಚೂತಪ್ಪದೇ ಮಾಡಿದ್ದೇನೆ. ಈ ಚಿತ್ರದಿಂದ ನಾನು ಅಪೇಕ್ಷಿಸುವುದು ಒಂದೇ. ನಿರ್ವಪಕರು ನನ್ನ ನಂಬಿ ಹಣ ಹಾಕಿದ್ದಾರೆ. ಅವರು ಮೊದಲು ಗೆಲ್ಲಬೇಕು. ಅವರು ಖುಷಿಯಾಗಿದ್ದರೆ ನಾವು ಖುಷಿಯಾದಂತೆ’ ಎನ್ನುತ್ತಾರೆ ಬಿರಾದಾರ್.

    ಪ್ರತಿ ಚಿತ್ರವೂ ಹೊಸದು: ಇಲ್ಲಿ ಎಷ್ಟೇ ಚಿತ್ರಗಳಲ್ಲಿ ನಟಿಸಿದ್ದರೂ, ಅದೆಷ್ಟೇ ಅನುಭವವಿದ್ದರೂ ಪ್ರತಿ ಚಿತ್ರವೂ ಹೊಸದು ಎನ್ನುವ ಬಿರಾದಾರ್, ‘ನಾನು 500 ಸಿನಿಮಾಗಳಲ್ಲಿ ನಟಿಸಿದರೂ, 501ನೇ ಚಿತ್ರ ಹೊಸದು. ಸಿನಿಮಾ ಎನ್ನುವುದು ನೆಲೆ ಇಲ್ಲದ ಜೀವನ. ಬೇರೆ ಕೆಲಸಗಳಲ್ಲಿ ಇದ್ದಂತೆ, ಇಲ್ಲಿ ತಿಂಗಳ ಸಂಬಳ ಇಲ್ಲ. ಪ್ರೇಕ್ಷಕರು ಸಂಬಳ ಕೊಡುತ್ತಾರೆ. ನಮ್ಮ ಪಾತ್ರ ಹಿಡಿಸಿದರೆ ಅವರು ಪ್ರೋತ್ಸಾಹಿಸುತ್ತಾರೆ. 500 ಸಿನಿಮಾ ಮಾಡಿದ್ದೇನೆ ಎಂದರೆ ಹಲವರು ಕಾರಣರು. ಒಬ್ಬ ಕಲಾವಿನ ಹಿಂದೆ ಹಲವು ಕಾಣದ ಕೈಗಳಿರುತ್ತವೆ. ಎಲ್ಲರ ಆಶೀರ್ವಾದದಿಂದ ನಟಿಸುವುದಕ್ಕೆ ಸಾಧ್ಯವಾಯಿತು’ ಎಂಬುದು ಅವರ ಅಭಿಪ್ರಾಯ.

    ಎಲ್ಲ ಪಾತ್ರಗಳನ್ನೂ ಗಮನಿಸಬೇಕು: ತಾನು ಇವತ್ತು ಇಲ್ಲಿರುವುದಕ್ಕೆ ಕಾರಣ ಗುರುಗಳು ಎನ್ನುವ ಅವರು, ‘ನಾನು ರಂಗಭೂಮಿಯಲ್ಲಿರುವಾಗ, ನಮ್ಮ ಗುರುಗಳು ಯಾವೊಂದು ಪಾತ್ರಕ್ಕೂ ಅಂಟಿಕೊಳ್ಳಬೇಡ ಎಂದು ಹೇಳಿಕೊಟ್ಟಿದ್ದರು. ‘ಎಲ್ಲ ಪಾತ್ರಗಳನ್ನು ಗಮನಿಸು. ಅವರು ಹೇಗೆ ವರ್ತಿಸುತ್ತಾರೆ, ಏನು ಮಾತನಾಡುತ್ತಾರೆ ಎಂಬುದನ್ನು ನೋಡುತ್ತಿರು. ಒಂದೊಮ್ಮೆ ಒಂದು ದಿನ ಆ ಪಾತ್ರ ಮಾಡಬೇಕಾಗಿ ಬಂದರೆ, ಅದರ ಬಗ್ಗೆ ಗೊತ್ತಿರಬೇಕು’ ಎಂದು ಹೇಳಿಕೊಟ್ಟಿದ್ದರು. ಅದರಂತೆ ನಾನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತೇನೆ. ಆಗ ಯಾವ ತರಹದ ಪಾತ್ರ ಸಿಕ್ಕರೂ ಸುಲಭವಾಗುತ್ತದೆ. ಒಬ್ಬ ಕಲಾವಿದ ನೀರಿನ ತರಹ ಇರಬೇಕು. ಯಾವ ಪಾತ್ರ ಕೊಟ್ಟರೂ ಮಾಡಬೇಕು. ನಿರ್ದೇಶಕರ ಕಲ್ಪನೆ ಅರ್ಥ ಮಾಡಿಕೊಂಡರೆ, ಎಂಥಾ ಪಾತ್ರವನ್ನು ಬೇಕಾದರೂ ನಿಭಾಯಿಸಬಹುದು’ ಎನ್ನುತ್ತಾರೆ.

    ಯೋಗಿ ಪಡೆದಿದ್ದು ಯೋಗಿಗೆ: ಇಷ್ಟು ವರ್ಷಗಳ ಚಿತ್ರಜೀವನದಿಂದ ಬಿರಾದರ್ ಖುಷಿಯಾಗಿದ್ದಾರಾ? ‘ನನ್ನ ಬಳಿ ಹಣ ಇಲ್ಲ. ನೆಮ್ಮದಿ ಇದೆ. ಎಲ್ಲವೂ ಬೇಕು ಎಂದು ನಿರೀಕ್ಷೆ ಮಾಡುವುದು ತಪು್ಪ. ನಮಗೆ ಏನು ಬರೆದಿದೆಯೋ, ಅದು ಸಿಗುತ್ತದೆ ಎಂದು ನಂಬಿದವನು ನಾನು. ಎಷ್ಟು ಬೇಕೋ ಅಷ್ಟು ಭಗವಂತ ಕೊಟ್ಟಿದ್ದಾನೆ. ಇದುವರೆಗೂ ಉಪವಾಸ ಬಿದ್ದಿಲ್ಲ. ಬೀಳೋಕೆ ನಮ್ಮ ಕನ್ನಡಿಗರು ಬಿಡುವುದಿಲ್ಲ. ನಾನು ಸಂತೋಷವಾಗಿರುವುದಕ್ಕೆ ಕಾರಣ ಆಧ್ಯಾತ್ಮ. ನನಗೆ ಅತಿ ಆಸೆ ಇಲ್ಲ. ನಾಟಕ ಕಂಪನಿಯಲ್ಲಿ ದಿನಕ್ಕೆ ಒಂದು ರೂಪಾಯಿ ಕೆಲಸಕ್ಕೆ ಸೇರಿದವನು ನಾನು. ಅಲ್ಲಿ ಅನುಭವಿಸಿದವರಿಗೆ ಇಲ್ಲಿ ಅಷ್ಟು ಕಷ್ಟ ಎಂದನಿಸುವುದಿಲ್ಲ’ ಎನ್ನುತ್ತಾರೆ ಬಿರಾದಾರ್.

    ಹಾಗೆಲ್ಲ ಅನ್ನಬೇಡಿ ಯಜಮಾನರೇ…

    ಬಿರಾದಾರ್ ಬಣ್ಣ ಹಚ್ಚುವುದಕ್ಕೆ ಪ್ರಾರಂಭಿಸಿದ್ದು 70ರ ದಶಕದಲ್ಲಿ. ಪಂಚಲಿಂಗೇಶ್ವರ ನಾಟಕ ಮಂಡಳಿಯ ‘ಗೌಡನ ಬಲ’ ಅವರ ಮೊದಲ ನಾಟಕ. ಮೂರನೇ ಕ್ಲಾಸು ಓದಿರುವ ಬಿರಾದಾರ್, ಈ ನಾಟಕದಲ್ಲಿ ಗೌಡನಾಗಿ ಬಣ್ಣ ಹಚ್ಚಿದರಂತೆ. ಗೌಡನ ಪಾತ್ರವನ್ನು ತಮ್ಮದೇ ಶೈಲಿಯಲ್ಲಿ ನಿರ್ವಹಿಸಿದರಂತೆ. ‘ಅಲ್ಲಿಂದ ಶುರುವಾಗಿದ್ದು, ಹಲವು ನಾಟಕಗಳಲ್ಲಿ ನಟಿಸಿದೆ. ಕಾಮಿಡಿ ಮತ್ತು ವಿಲನ್ ಪಾತ್ರಗಳೆರಡರಲ್ಲೂ ಕಾಣಿಸಿಕೊಂಡೆ. ‘ಬರ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದೆ. ಅಲ್ಲಿಂದ ಇಲ್ಲಿಯವರೆಗೂ ಕನ್ನಡ ಚಿತ್ರರರಂಗದ ಎಲ್ಲ ಜನಪ್ರಿಯ ನಟರೊಂದಿಗೂ ಅಭಿನಯಿಸಿದ್ದೇನೆ. ಕೆಲವು ವರ್ಷಗಳ ಹಿಂದೆ ಪುನೀತ್ ಸಿಕ್ಕಿದ್ದರು. ಅವರನ್ನು ಸಾರ್ ಎಂದು ಮಾತನಾಡಿಸಿದೆ. ‘ಹಾಗೆಲ್ಲ ಅನ್ನಬೇಡಿ ಯಜಮಾನ್ರೆ, ನೀವು ನಮ್ಮ ತಂದೆ ಜತೆಗೂ ನಟಿಸಿದವರು. ನಿಮ್ಮ ಪಾತ್ರಗಳನ್ನು ನೋಡಿ ನಾವೆಲ್ಲರೂ ಖುಷಿಪಟ್ಟವರು ಎಂದು ಅಭಿಮಾನದಿಂದ ಮಾತನಾಡಿಸಿದರು. ಕಲಾವಿದರ, ಅಭಿಮಾನಿಗಳ ಪ್ರೀತಿ ಸಿಕ್ಕಿದೆ. ಇದಕ್ಕಿಂತ ಇನ್ನೇನು ಬೇಕು?’ ಎನ್ನುತ್ತಾರೆ ಅವರು.

    ಖ್ಯಾತ ನಟನಿಗೆ ಕ್ಯಾನ್ಸರ್​, ಧನಸಹಾಯಕ್ಕಾಗಿ ಸಾರ್ವಜನಿಕರಲ್ಲಿ ಕೋರಿಕೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts