More

    ಸಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೇರಿಸಲು ಕ್ರಮ: ಸಚಿವ ಮಧು ಬಂಗಾರಪ್ಪ

    ಶಿವಮೊಗ್ಗ: ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಸಿಮ್ಸ್)ಯನ್ನು ಮೇಲ್ದರ್ಜೆಗೇರಿಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಪರಿವರ್ತಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಂಡು ಜನಸಾಮಾನ್ಯರಿಗೆ ಅತ್ಯಂತ ಕಡಿಮೆ ದರ ಹಾಗೂ ಗುಣಮಟ್ಟದ ಚಿಕಿತ್ಸಾ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ ಹೇಳಿದರು.

    ಸಿಮ್ಸ್‌ನ ಸಭಾಂಗಣದಲ್ಲಿ ಬುಧವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಹೃದಯ, ಕಿಡ್ನಿ, ಮಿದುಳು ಮುಂತಾದ ಗಂಭೀರ ಸ್ವರೂಪದ ಕಾಯಿಲೆಗಳಿಗೆ ಜನಸಾಮಾನ್ಯರು ಖರ್ಚುಗಳಿಗೆ ಹೆದರಿ ಚಿಕಿತ್ಸೆ ಪಡೆಯದೇ ನರಳಾಡುತ್ತಿದ್ದಾರೆ. ಅಂತಹವರಿಗೆ ಸುಲಭವಾಗಿ ಚಿಕಿತ್ಸೆ ದೊರೆಯುವಂತಾಗಬೇಕಿದೆ ಎಂದು ಹೇಳಿದರು.
    ಸಿಮ್ಸ್‌ಗೆ ಅಗತ್ಯವಿರುವ ಸೌಲಭ್ಯಗಳನ್ನು ಈಗಾಗಲೇ ಒದಗಿಸಲಾಗಿದೆ. ಮತ್ತಷ್ಟು ಭೌತಿಕ ಕಟ್ಟಡಗಳು, ಮಾನವ ಸಂಪನ್ಮೂಲ ಸೌಲಭ್ಯಗಳ ಒದಗಿಸುವುದರ ಜತೆಗೆ ಅತ್ಯಾಧುನಿಕ ಯಂತ್ರಗಳನ್ನು ಅಳವಡಿಸಿ, ಜನಸಾಮಾನ್ಯರಿಗೆ ಉತ್ತಮ ದರ್ಜೆಯ ಹಾಗೂ ಗುಣಮಟ್ಟದ ಸೇವೆಯನ್ನು ಒದಗಿಸುವ ಆಶಯ ತಮ್ಮದಾಗಿದೆ. ಆದ್ದರಿಂದ ಸಿಮ್ಸ್‌ನ ಆಡಳಿತಾಧಿಕಾರಿಗಳು ಅಗತ್ಯವಿರುವ ಕಟ್ಟಡಗಳು, ಮಾನವ ಸಂಪನ್ಮೂಲ ಹಾಗೂ ಯಂತ್ರಗಳನ್ನು ಕಲ್ಪಿಸಿಕೊಳ್ಳಲು ಕ್ರಿಯಾಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಿದರು.
    ಸಿಮ್ಸ್‌ನಲ್ಲಿ ಗುಣಮಟ್ಟದ ಸೇವೆ ಸಿಗುವಂತೆ ಮಾಡಿದರೆ, ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಬೆಲೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಜನಸಾಮಾನ್ಯರು ಸಿಮ್ಸ್‌ಗೆ ಧಾವಿಸುತ್ತಾರೆ. ಇದರಿಂದ ಜನರಿಗೆ ಕಡಿಮೆ ದರದಲ್ಲಿ ಉತ್ತಮ ಸೇವೆ ದೊರೆಯಲಿದೆ ಹಾಗೂ ಸಿಮ್ಸ್‌ನ ಆದಾಯ ಮೂಲವೂ ಹೆಚ್ಚಳವಾಗಿ ನಿರ್ವಹಣೆ ಸುಲಭವಾಗಲಿದೆ. ಈ ವಿಷಯದಲ್ಲಿ ಸಿಮ್ಸ್ ಆಡಳಿತಾಧಿಕಾರಿಗಳು ಹಾಗೂ ಸಿಬ್ಬಂದಿ ವಿಶೇಷ ಗಮನಹರಿಸುವ ಅಗತ್ಯವಿದೆ ಎಂದರು.
    ಪ್ರಸ್ತುತ ಸಿಮ್ಸ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯಾಧಿಕಾರಿಗಳು, ಪ್ರಶಿಕ್ಷಣಾರ್ಥಿಗಳು, ಆರೋಗ್ಯ ಸಿಬ್ಬಂದಿಗೆ ವಸತಿ ಗೃಹಗಳ ಅಗತ್ಯವಿದೆ. ಅದಕ್ಕಾಗಿ ಹೊಸದೊಂದು ವಸತಿ ಸಮುಚ್ಛಯ ನಿರ್ಮಿಸಬೇಕಿದೆ. ಇನ್ನೂ ಹಲವು ವೈದ್ಯಕೀಯ ವಿಭಾಗಗಳಿಗೆ ಪ್ರತ್ಯೇಕ ಹಾಗೂ ಹೆಚ್ಚುವರಿ ಕಟ್ಟಡಗಳ ಅಗತ್ಯವಿದೆ. ಡಿ ಗ್ರೂಪ್ ನೌಕರರ ಸೇವೆ ತುರ್ತಾಗಿ ಬೇಕಾಗಿದೆ ಎಂದು ಸಿಮ್ಸ್ ಆಡಳಿತಾಧಿಕಾರಿ ಡಾ. ಶಿವಕುಮಾರ್ ಸಚಿವರ ಗಮನ ಸೆಳೆದರು. ಆಗ ಈ ಎಲ್ಲ ಸೌಲಭ್ಯವನ್ನು ಆದ್ಯತೆಯ ಮೇರೆಗೆ ಒದಗಿಸಲು ಕ್ರಮ ವಹಿಸುವುದಾಗಿ ಸಚಿವರು ಭರವಸೆ ನೀಡಿದರು.
    ಸರ್ಕಾರಕ್ಕೆ ವಿವಿಧ ಬೇಡಿಕೆಗಳ ಪ್ರಸ್ತಾವನೆ ಜತೆಗೆ ತುರ್ತು ಹಾಗೂ ತೀವ್ರ ನಿಗಾ ಘಟಕದ ಸ್ಥಾಪನೆಗೂ ಕ್ರಿಯಾಯೋಜನೆಯನ್ನು ರೂಪಿಸಿ ಸಲ್ಲಿಸುವಂತೆ ಅವರು ಸಿಮ್ಸ್ ಆಡಳಿತಾಧಿಕಾರಿಗಳಿಗೆ ಸೂಚಿಸಿದರು.
    ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಡಿಎಚ್‌ಒ ಡಾ. ರಾಜೇಶ್ ಸುರಗೀಹಳ್ಳಿ, ಸಿಮ್ಸ್ ನಿರ್ದೇಶಕ ಡಾ. ವಿರುಪಾಕ್ಷಪ್ಪ, ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ತಿಮ್ಮಪ್ಪ ಸೇರಿದಂತೆ ಸಿಮ್ಸ್‌ನ ವಿವಿಧ ವಿಭಾಗಗಳ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts