More

    ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಜಾಗ ಹುಡುಕಾಟ: ಪ್ರಸ್ತಾವನೆ ಸಲ್ಲಿಕೆಗೆ ನಡೆದಿದೆ ಸಿದ್ಧತೆ

    ವಿ.ಕೆ.ರವೀಂದ್ರ ಕೊಪ್ಪಳ

    ಜಿಲ್ಲೆಯ ಆರೋಗ್ಯ ಕ್ಷೇತ್ರ ಸುಧಾರಣೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಬೇಕೆಂಬುದು ಬಹುದಿನಗಳ ಬೇಡಿಕೆ. ಆರ್ಥಿಕ ಸ್ಥಿತಿಗತಿ ನೋಡಿಕೊಂಡು ಆಸ್ಪತ್ರೆ ಮಂಜೂರು ಮಾಡುವುದಾಗಿ ಇತ್ತೀಚೆಗೆ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಇದರ ಬೆನ್ನಲ್ಲೇ ವೈದ್ಯಕೀಯ ಶಿಕ್ಷಣ ಇಲಾಖೆ ಜಾಗ ಹುಡುಕಾಟಕ್ಕೆ ಮುಂದಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

    ಅಖಂಡ ರಾಯಚೂರು ಜಿಲ್ಲೆಯಿಂದ ಬೇರ್ಪಟ್ಟ ಕೊಪ್ಪಳ; ಸದ್ಯ ರಜತ ಮಹೋತ್ಸವದ ಸಂಭ್ರಮದಲ್ಲಿದೆ. ಜಿಲ್ಲೆಯಾಗಿ 25 ವಸಂತಗಳನ್ನು ಪೂರೈಸಿದ್ದರೂ ಆರೋಗ್ಯ ಕ್ಷೇತ್ರ ನಿರೀಕ್ಷಿತ ಪ್ರಗತಿ ಕಂಡಿಲ್ಲ. 2013-14ರಲ್ಲಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಆರಂಭವಾಗಿದೆ. ಆಗಿನಿಂದಲೂ ಜನರಿಗೆ ಉತ್ತಮ ಆರೋಗ್ಯ ಸೇವೆಗಳು ಲಭ್ಯವಾಗುತ್ತಿವೆ. ಜಿಲ್ಲೆ ಅಷ್ಟೇ ಅಲ್ಲದೆ ಹೊರ ಜಿಲ್ಲೆಗಳಿಂದಲೂ ರೋಗಿಗಳು ಚಿಕಿತ್ಸೆಗಾಗಿ ಕೊಪ್ಪಳಕ್ಕೆ ಆಗಮಿಸುತ್ತಿರುವುದು ವಿಶೇಷ. ರೋಗಿಗಳ ಸಂಖ್ಯೆ ದಿನೇದಿನೆ ಹೆಚ್ಚಳವಾಗುತ್ತಿದೆ. ಕಿಮ್ಸ್ಗಾಗಿಯೇ 450 ಹಾಸಿಗೆಗಳ ಪ್ರತ್ಯೇಕ ಆಸ್ಪತ್ರೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಕಾಮಗಾರಿ ಪ್ರಗತಿ ನಿಧಾನವಾಗಿದ್ದು ಲೋಕಾರ್ಪಣೆ ವಿಳಂಬವಾಗುತ್ತಿದೆ.

    ಕಿಮ್ಸ್ನಲ್ಲಿ ಎಂಬಿಬಿಎಸ್ ಪದವಿಯೊಂದಿಗೆ ನಾಲ್ಕು ವಿಭಾಗಗಳಲ್ಲಿ ಎಂಡಿ ಕೋರ್ಸ್‌ಗಳನ್ನು ಆರಂಭಿಸಲಾಗಿದೆ. ಇದರಿಂದ ಸ್ಥಳೀಯವಾಗಿಯೇ ವೈದ್ಯರು ಲಭ್ಯವಾಗುವಂತಾಗಿದ್ದು ಜಿಲ್ಲಾಸ್ಪತ್ರೆಯ ಕರ್ತವ್ಯ ಸರಿದೂಗಿಸಲು ಅನುಕೂಲವಾಗಿದೆ. ರೋಗಿಗಳ ಸಂಖ್ಯೆ ಅಧಿಕವಾಗಿದ್ದು ಬೆಡ್ ಸೇರಿ ಇತರ ಸೌಲಭ್ಯಗಳು ಇನ್ನಷ್ಟು ಸುಧಾರಿಸಬೇಕಿದೆ. ಇದರೊಂದಿಗೆ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಬೇಕೆಂಬುದು ಜನರ ಬಹುದಿನಗಳ ಕನಸುಗಳಲ್ಲಿ ಒಂದಾಗಿದೆ. ಇತ್ತೀಚೆಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆಗೆ ಜಿಲ್ಲೆಗೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದೆ ಸಂಸದ ಸಂಗಣ್ಣ ಕರಡಿ, ಶಾಸಕ ರಾಘವೇಂದ್ರ ಹಿಟ್ನಾಳ್ ಆಸ್ಪತ್ರೆ ಮಂಜೂರು ಮಾಡಬೇಕೆಂಬ ಬೇಡಿಕೆ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ್ದ ಸಿಎಂ, ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಆಸ್ಪತ್ರೆ ಮಂಜೂರು ಮಾಡಿಸಲು ಕ್ರಮ ಕೈಗೊಳ್ಳುವುದಾಗಿ ವಿಶ್ವಾಸದ ಮಾತುಗಳನಾಡಿದ್ದರು.

    ಇದಾಗಿ ಕೆಲ ದಿನಗಳಲ್ಲೇ ವೈದ್ಯಕೀಯ ಶಿಕ್ಷಣ ಇಲಾಖೆ ಸೂಚನೆಯಂತೆ ಕಿಮ್ಸ್ ನಿರ್ದೇಶಕ ಡಾ.ವಿಜಯನಾಥ ಇಟಗಿ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಸದ್ಯ 20 ಎಕರೆ ಪ್ರದೇಶದಲ್ಲಿ ಕಿಮ್ಸ್ ಕಟ್ಟಡ, ತರಗತಿ ಕೊಠಡಿಗಳು, ಹಾಸ್ಟೆಲ್, ಸಿಬ್ಬಂದಿ ವಸತಿ ನಿಲಯಗಳಿವೆ. ಇದೇ ಆವರಣದಲ್ಲಿ ಸೂಪರ್ ಸ್ಪೆಷಾಲಿಲಟಿ ಆಸ್ಪತ್ರೆ ನಿರ್ಮಾಣ ಸಾಧ್ಯವಿಲ್ಲ. ಪ್ರತ್ಯೇಕ 5-10 ಎಕರೆ ಭೂಮಿ ಮಂಜೂರು ಮಾಡುವಂತೆ ಕೋರಿಕೆ ಸಲ್ಲಿಸಿದ್ದಾರೆ. ಕಿಮ್ಸ್ ಕಟ್ಟಡದ ಸಮೀಪದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಗೊಂಡಲ್ಲಿ ಆಡಳಿತ ಹಾಗೂ ಇತರ ಕೆಲಸಗಳಿಗೆ ಅನುಕೂಲವಾಗಲಿದೆ. ಇದೇ ಉದ್ದೇಶದಿಂದ ಕಿಮ್ಸ್ ಅಕ್ಕಪಕ್ಕದಲ್ಲೇ ಜಾಗ ಮಂಜೂರು ಗೊಳಿಸುವಂತೆ ಬೇಡಿಕೆ ಸಲ್ಲಿಸಿದ್ದಾರೆ. ಜಿಲ್ಲಾಡಳಿತವು ಜಾಗ ಹುಡುಕಾಟದಲ್ಲಿದೆ. ಕಿಮ್ಸ್ ಕಟ್ಟಡ ಹಿಂಭಾಗದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಿಸಿದ ಭೂಮಿಯಿದ್ದು ಅದನ್ನು ನೀಡಿದಲ್ಲಿ ಆಸ್ಪತ್ರೆ ನಿರ್ಮಾಣ ಕಾರ್ಯ ಇನ್ನಷ್ಟು ಸರಳವಾಗಲಿದೆ. ಇಲ್ಲದಿದ್ದಲ್ಲಿ ಖಾಸಗಿ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಬೇಕಾಗುತ್ತದೆ. ಇದಕ್ಕೆ ಸರ್ಕಾರ ಅನುಮತಿಸಬೇಕಿದೆ.

    ವರದಿ ಸಲ್ಲಿಸಲು ಕಿಮ್ಸ್ ಆಡಳಿತ ತಯಾರಿ
    ಜಾಗ ಗುರುತಿಸಿದ ಬಳಿಕ ಜಿಲ್ಲೆಯಲ್ಲಿನ ಆರೋಗ್ಯ ಪರಿಸ್ಥಿತಿ, ರೋಗಿಗಳ ಸರಾಸರಿ ಸಂಖ್ಯೆ, ಅಗತ್ಯವಿರುವ ಆರೋಗ್ಯ ಸೇವೆಗಳು, ಬೇಕಾದ ಮೂಲ ಸೌಕರ್ಯ, ತಗಲುವ ವೆಚ್ಚ, ಈಗಿರುವ ಅನುಕೂಲಗಳು ಹಾಗೂ ಭಾರತೀಯ ವೈದ್ಯಕೀಯ ಸಂಸ್ಥೆ ನಿಯಮಗಳು ಇನ್ನಿತರ ಮಾಹಿತಿಯನ್ನು ಒಳಗೊಂಡ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಕಿಮ್ಸ್ ಆಡಳಿತ ತಯಾರಿ ಮಾಡಿಕೊಳ್ಳುತ್ತಿದೆ.


    ಕಿಮ್ಸ್ ಕಟ್ಟಡ ನಿರ್ಮಾಣಕ್ಕೆ 20 ಎಕರೆ ಖರೀದಿಸಲಾಗಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ 5-10 ಎಕರೆ ಜಾಗ ಬೇಕು. ನಮ್ಮ ಕಟ್ಟಡಕ್ಕೆ ಹತ್ತಿರದಲ್ಲೇ ಜಾಗ ನೀಡುವಂತೆ ಜಿಲ್ಲಾಡಳಿತಕ್ಕೆ ಕೋರಿಕೆ ಸಲ್ಲಿಸಲಾಗಿದೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಹುಡುಕಾಟದಲ್ಲಿದ್ದಾರೆ. ಸಂಸದ ಸಂಗಣ್ಣ ಕರಡಿ ಸಹ ಸರ್ಕಾರಕ್ಕೆ ಸಾಕಷ್ಟು ಒತ್ತಡ ಹಾಕುತ್ತಿದ್ದು, ಜಾಗ ಮಂಜೂರಾಗುವ ಭರವಸೆ ಇದೆ.
    | ಡಾ.ವಿಜಯನಾಥ ಇಟಗಿ, ಕಿಮ್ಸ್ ನಿರ್ದೇಶಕ, ಕೊಪ್ಪಳ

    ಕೊಪ್ಪಳದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅವಶ್ಯವಿದೆ. ಈ ಬಗ್ಗೆ ಸಿಎಂ ಬೊಮ್ಮಾಯಿಗೆ ಮನವರಿಕೆ ಮಾಡಲಾಗಿದೆ. ನಿರ್ಮಾಣಕ್ಕೆ ಸರ್ಕಾರವೂ ಉತ್ಸುಕವಾಗಿದ್ದು, ಜಾಗ ಗುರುತಿಸಲು ಸೂಚನೆ ನೀಡಿದೆ. ಶೀಘ್ರವೇ ಆಸ್ಪತ್ರೆ ಆರಂಭವಾಗುವ ಭರವಸೆ ಇದೆ.
    | ಸಂಗಣ್ಣ ಕರಡಿ, ಕೊಪ್ಪಳ ಸಂಸದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts