More

    ಕರ್ತವ್ಯ ಲೋಪ ಎಸಗಿದರೆ ಕ್ರಮ

    ನರಗುಂದ: ಪ್ರವಾಹ ಎದುರಿಸಲು ಸರ್ಕಾರಕ್ಕೆ ಯಾವುದೇ ಆರ್ಥಿಕ ಸಮಸ್ಯೆ ಇಲ್ಲ. ಜಿಲ್ಲಾ, ತಾಲೂಕು ಮಟ್ಟದ ಎಲ್ಲ ಇಲಾಖೆ ಅಧಿಕಾರಿಗಳು ದಿನದ 24 ಗಂಟೆಗಳ ಕಾಲ ಜನ, ಜಾನುವಾರುಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಆಕಸ್ಮಾತ್ ಪ್ರವಾಹದ ವೇಳೆ ಕರ್ತವ್ಯ ಲೋಪ ಎಸಗಿದರೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

    ಪಟ್ಟಣದ ಎಪಿಎಂಸಿ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಟಾಸ್ಕ್​ಪೋರ್ಸ್ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ‘ವಿಪರೀತ ಮಳೆಯಿಂದ ಮಲಪ್ರಭಾ ನದಿ, ಬೆಣ್ಣೆಹಳ್ಳ, ಮುಂಡರಗಿ ತಾಲೂಕಿನ ಹಮ್ಮಿಗಿ ಬ್ಯಾರೇಜ್​ಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಮಲಪ್ರಭಾ ನದಿಗೆ 18 ಸಾವಿರ ಕ್ಯೂಸೆಕ್, ಹಮ್ಮಿಗಿ ಬ್ಯಾರೇಜ್​ನಿಂದ 1 ಲಕ್ಷ 29 ಸಾವಿರ ಕ್ಯೂಸೆಕ್ ನೀರನ್ನು ಈಗಾಗಲೇ ಹರಿಬಿಡಲಾಗಿದೆ. ಮಲಪ್ರಭಾ ನದಿ ಪ್ರವಾಹದಿಂದ ನರಗುಂದ ತಾಲೂಕಿನ ಲಖಮಾಪೂರ, ವಾಸನ, ಬೆಳ್ಳೇರಿ, ಕೊಣ್ಣೂರ, ಬೂದಿಹಾಳ, ಕಪ್ಪಲಿ, ಕಲ್ಲಾಪೂರ, ಶಿರೋಳ ಗ್ರಾಮಗಳು, ರೋಣ ತಾಲೂಕಿನ ಮೆಣಸಗಿ, ಹೊಳೆಆಲೂರ, ಕುರುಗೋವಿನಕೊಪ್ಪ, ಅಮರಗೋಳ ಗ್ರಾಮ ಹಾಗೂ ಹಮ್ಮಿಗಿ ಬ್ಯಾರೇಜ್​ನಿಂದ ಮುಂಡರಗಿ ತಾಲೂಕಿನ 11 ಹಳ್ಳಿಗಳಿಗೆ ಆತಂಕ ಎದುರಾಗಿದೆ. ಜೂ. 1ರಿಂದ ಇಲ್ಲಿಯವರೆಗೆ ಶೇ. 46 ರಷ್ಟು ಹೆಚ್ಚುವರಿ ಮಳೆಯಾಗಿದೆ. ಇದರಿಂದ ಏಕಾಏಕಿ ನೆರೆಯ ಆತಂಕ ಕಾಡುತ್ತಿದೆ’ ಎಂದರು.

    ಜಿಲ್ಲೆಯಲ್ಲಿ 52 ಕಾಳಜಿ ಕೇಂದ್ರ: ಗದಗ ಜಿಲ್ಲೆಯಲ್ಲಿ ಒಟ್ಟು 52 ಕಾಳಜಿ ಕೇಂದ್ರ ತೆರೆಯಲು ನಿರ್ಧರಿಸಲಾಗಿದೆ. ಮುಂಜಾಗ್ರತೆ ಕ್ರಮವಾಗಿ ರೋಣ ತಾಲೂಕಿನ ಅಮರಗೋಳ, ಕುರುಗೋವಿನಕೊಪ್ಪ, ಹೊಳೆಆಲೂರ ನದಿಪಾತ್ರದ ಜನ, ಜಾನುವಾರುಗಳ ಸ್ಥಳಾಂತರಕ್ಕೆ ಸೂಚಿಸಬೇಕು. ನರಗುಂದ ತಾಲೂಕಿನ ಬೆಳ್ಳೇರಿ ಕೃಷಿ ಡಿಪ್ಲೊಮಾ ಕಾಲೇಜ್​ನಲ್ಲಿ ಲಖಮಾಪೂರ ಗ್ರಾಮಸ್ಥರಿಗಾಗಿ ಈಗಾಗಲೇ ಒಂದು ಕಾಳಜಿ ಕೇಂದ್ರ ಆರಂಭಿಸಲಾಗಿದೆ. 156 ಜನರು, 76 ಜಾನುವಾರು ಸ್ಥಳಾಂತರ ಮಾಡಲಾಗಿದೆ. ಸಂತ್ರಸ್ತರಿಗೆ ಪ್ರತಿನಿತ್ಯ ಬೆಳಗ್ಗೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಬಿಸಿಬಿಸಿ ತಯಾರಿಸಿರುವ ಗುಣಮಟ್ಟದ ಆಹಾರ, ಶುದ್ಧ ಕುಡಿಯುವ ನೀರು ಕೊಡಬೇಕು. ಇದಕ್ಕಾಗಿ ಒಬ್ಬ ನೋಡಲ್ ಅಧಿಕಾರಿ ನೇಮಿಸಬೇಕು. ಸಂತ್ರಸ್ತರು, ಗರ್ಭಿಣಿ, ಬಾಣಂತಿಯರಿಗೆ ಗುಣಮಟ್ಟದ ಆಹಾರ, ಬಿಸಿನೀರು ಪೂರೈಸದಿದ್ದರೆ, ಅಧಿಕಾರಿಗಳು ಸರ್ಕಾರಿ ಮೊಬೈಲ್ ಸಂಖ್ಯೆ ಬಂದ್ ಮಾಡಿದ್ದರೆ ಅಂಥವರನ್ನು ತಕ್ಷಣವೇ ಅಮಾನತು ಮಾಡುತ್ತೇನೆ. ಕಾಳಜಿ ಕೇಂದ್ರಕ್ಕೆ ದಾಖಲಾದ ಸಂತ್ರಸ್ತರಿಗೆ ಕೋವಿಡ್ ಲಸಿಕೆ, ಮಾಸ್ಕ್, ಸ್ಯಾನಿಟೈಸರ್ ಪ್ರತಿನಿತ್ಯ ಸಂತ್ರಸ್ತರ ಆರೋಗ್ಯ ತಪಾಸಣೆ ನಡೆಸಬೇಕು ಎಂದು ಸಚಿವ ಸಿ.ಸಿ. ಪಾಟಿಲ ಹೇಳಿದರು.

    ಅಪಾರ ಪ್ರಮಾಣದ ಬೆಳೆ ಹಾನಿ: ಮಲಪ್ರಭಾ ಮತ್ತು ಬೆಣ್ಣೆಹಳ್ಳದ ಪ್ರವಾಹದಿಂದ ನರಗುಂದ ತಾಲೂಕಿನಲ್ಲಿ 7755 ಹೆಕ್ಟೇರ್ ಹೆಸರು, 280 ಹೆಕ್ಟೇರ್ ಈರುಳ್ಳಿ, ಪೇರಲ, ಮುಂತಾದ ಬೆಳೆಗಳು ಹಾನಿಯಾಗಿವೆ. 51 ಮನೆಗಳು ಭಾಗಶಃ ಬಿದ್ದಿವೆ. ಬೆಳ್ಳೇರಿ ಕಾಳಜಿ ಕೇಂದ್ರದಲ್ಲಿರುವ ಜಾನುವಾರುಗಳಿಗೆ 2 ಮೆಟ್ರಿಕ್ ಟನ್ ಮೇವು ಸಂಗ್ರಹಿಸಿದ್ದು, ದನದ ಕೊಟ್ಟಿಗೆ ನಿರ್ವಿುಸಲಾಗುತ್ತದೆ. ಜಿಲ್ಲೆಯಲ್ಲಿ ಬೆಳೆ ಹಾನಿ, ಮನೆಗಳು ಬಿದ್ದಿದ್ದರೆ ತಕ್ಷಣವೇ ಹರಿಹಾರ ಕಾರ್ಯಕ್ಕೆ ಮುಂದಾಗಬೇಕು. ಶೇ. 100 ರಷ್ಟು ಬೆಳೆನಷ್ಟ ಉಂಟಾಗಿದ್ದರೆ ರೈತರಿಂದ ಅರ್ಜಿ ಪಡೆದುಕೊಳ್ಳಬೇಕು. ಈ ಬಗ್ಗೆ ಸಂಬಂಧಪಟ್ಟ ಇನ್ಯೂರೆನ್ಸ್ ಕಂಪನಿ ಅಧಿಕಾರಿಗಳ ಜತೆಗೆ ರ್ಚಚಿಸಿ ಸೂಕ್ತ ಪರಿಹಾರ ನೀಡುವಂತೆ ಸೂಚಿಸುತ್ತೇನೆ ಎಂದು ಸಚಿವ ಸಿ.ಸಿ. ಪಾಟೀಲ ಹೇಳಿದರು.

    ಜಿಲ್ಲಾಧಿಕಾರಿ ಸುಂದರೇಶ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ ಎನ್, ಜಿಪಂ ಸಿಇಒ ಭರತ್ ಎಸ್, ಅಪರ ಜಿಲ್ಲಾಧಿಕಾರಿ ಸತೀಶಕುಮಾರ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ತಹಸೀಲ್ದಾರ್ ಎ.ಡಿ. ಅಮರವದಗಿ, ರೋಣ ತಹಸೀಲ್ದಾರ್ ಜೆ.ಬಿ. ಜಕ್ಕನಗೌಡ್ರ, ತಾಪಂ ಇಒ ಸಂತೋಷಕುಮಾರ ಪಾಟೀಲ, ಚಂದ್ರಶೇಖರ ಕುರ್ತಕೋಟಿ, ರೇಣುಕಾ ಕೊರವನವರ, ಗ್ರೇಡ್-2 ತಹಸೀಲ್ದಾರ್ ಎಸ್.ಎಚ್. ಭಜಂತ್ರಿ, ಮೈತ್ರಿ ವಿನೋದ, ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ, ಎಂ.ಡಿ. ತೂಗುಣಸಗಿ, ರೂಪಾ ಗಂಧದ, ಆನಂದ ಭೋವಿ, ಡಿವೈಎಸ್ಪಿ ಶಂಕರ ರಾಗಿ, ಸಿಪಿಐ ನಂದೀಶ ಕುಂಬಾರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts