More

    ಶೇ.95ರಷ್ಟು ಮಕ್ಕಳಿಗೆ ಲಸಿಕೆ

    ಮೈಸೂರು: ಮಕ್ಕಳನ್ನು ಮಾರಕ ಪೊಲೀಯೋ ಕಾಯಿಲೆಯಿಂದ ದೂರವಿಡಲು ಜಿಲ್ಲೆಯಲ್ಲಿ ಭಾನುವಾರ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

    ಜಿಲ್ಲೆಯನ್ನು ಪೊಲೀಯೋ ಮುಕ್ತಗೊಳಿಸಲು ಪಣತೊಟ್ಟಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲೆಯಲ್ಲಿ ಒಟ್ಟು 2,43,951 ಲಕ್ಷ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಗುರಿ ಹೊಂದಿತ್ತು. ಭಾನುವಾರ ಒಟ್ಟು 2,31,994 ಮಕ್ಕಳಿಗೆ ಲಸಿಕೆ ಹಾಕಲಾಗಿದ್ದು, ಶೇ.95.10ರಷ್ಟು ಗುರಿ ಸಾಧನೆ ಮಾಡಲಾಗಿದೆ.

    ತಮ್ಮ ಮಕ್ಕಳಿಗೆ ಪೋಲಿಯೋ ಹನಿ ಹಾಕಲು ಸಾಧ್ಯವಾಗದೆ ಇರುವ ಪಾಲಕರು ಆತಂಕಕ್ಕೆ ಒಳಗಾಗುವ ಅವಶ್ಯಕತೆ. ಪೊಲೀಯೋ ಹನಿ ಹಾಕಲು ಆರೋಗ್ಯ ಸಿಬ್ಬಂದಿ ನಿಮ್ಮ ಮನೆ ಬಾಗಿಲಿಗೆ ಬರಲಿದ್ದಾರೆ.
    ಮಾಹಿತಿ ಕೊರತೆ ಅಥವಾ ಸಮಯದ ಅಭಾವದಿಂದ ಯಾವುದೇ ಮಕ್ಕಳು ಪೋಲಿಯೋ ಹನಿಯಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಆರೋಗ್ಯ ಇಲಾಖೆ ಸಿಬ್ಬಂದಿ ನಗರದಲ್ಲಿ ಜ.20ರಿಂದ 23ರವರೆಗೆ ಹಾಗೂ ಗ್ರಾಮೀಣ ಭಾಗದಲ್ಲಿ ಜ.20ರಿಂದ 22ರವರೆಗೆ ಮನೆ ಮನೆಗಳಿಗೆ ತೆರಳಿ ಲಸಿಕೆ ಹಾಕಲಿದ್ದಾರೆ.

    ಕಾರ್ಯಕ್ರಮಕ್ಕೆ ಚಾಲನೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಭಾನುವಾರ ಜಯನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಸಕ ಎಸ್.ಎ. ರಾಮದಾಸ್ ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ ನೀಡಿದರು.

    ನಂತರ ಮಾತನಾಡಿದ ಅವರು, ದೇಶವನ್ನು ಪೋಲಿಯೋ ಮುಕ್ತಗೊಳಿಸುವ ಸಲುವಾಗಿ ಪ್ರತಿ ವರ್ಷ ಎರಡು ಬಾರಿ ಮಕ್ಕಳಿಗೆ ಪೋಲಿಯೋ ಹನಿ ಹಾಕಲಾಗುತ್ತದೆ. ಪ್ರತಿಯೊಂದು ಮಕ್ಕಳಿಗೆ ಪೋಲಿಯೋ ಹನಿಯನ್ನು ಪಾಲಕರು ತಪ್ಪದೆ ಹಾಕಿಸಬೇಕು ಎಂದು ಮನವಿ ಮಾಡಿದರು.
    ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಸಂದರ್ಭ ದೇಶವನ್ನು ಪೋಲಿಯೋ ಮುಕ್ತಗೊಳಿಸಬೇಕೆಂದು ಪಣತೊಟ್ಟು ಪೋಲಿಯೋ ಲಸಿಕೆಯನ್ನು ಒಂದು ಆಂದೋಲನವಾಗಿ ಪ್ರಾರಂಭಿಸಿದರು. ಈ ಆಂದೋಲನ ಶೇ.99ರಷ್ಟು ಯಶಸ್ಸು ಕಂಡಿದೆ . ದೇಶದಲ್ಲಿ ಪ್ರತಿದಿನ ಸರಾಸರಿ 40ರಿಂದ 50 ಸಾವಿರ ಮಕ್ಕಳು ಜನಿಸುತ್ತಿದ್ದಾರೆ. ಆ ಮಕ್ಕಳ ಆರೋಗ್ಯವನ್ನು ಕಾಪಾಡುವ ಸಲುವಾಗಿ ಪಲ್ಸ್ ಪೋಲಿಯೋ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೆಂಕಟೇಶ್ ಮಾತನಾಡಿ, ಲಸಿಕಾ ಕಾರ್ಯಕ್ರಮಕ್ಕೆ ಒಟ್ಟು 338 ಮೇಲ್ವಿಚಾರಕರು ಹಾಗೂ 6,484 ವ್ಯಾಕ್ಸಿನೇಟರ್‌ಗಳನ್ನು ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ 742 ಪ್ರದೇಶಗಳನ್ನು ಹೈರಿಸ್ಕ್ ಏರಿಯಾ ಎಂದು ಗುರುತಿಸಿದ್ದು, ಈ ಪ್ರದೇಶಗಳಲ್ಲಿ 72 ಸಾವಿರ ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಪಲ್ಸ್ ಪೋಲಿಯೋ ಲಸಿಕೆ ಅತ್ಯಂತ ಸುರಕ್ಷಿತ ಲಸಿಕೆಯಾಗಿದ್ದು, ಪಾಲಕರು ಲಸಿಕೆ ಕುರಿತು ಯಾವುದೇ ಆತಂಕಕ್ಕೆ ಒಳಗಾಗದೆ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸಬೇಕೆಂದು ಮನವಿ ಮಾಡಿದರು.

    2.43 ಲಕ್ಷ ಗುರಿ: ಮೈಸೂರು ಗ್ರಾಮಾಂತರದಲ್ಲಿ 31,709, ಮೈಸೂರು ನಗರದಲ್ಲಿ 90,157, ತಿ.ನರಸೀಪುರ ತಾಲೂಕಿನಲ್ಲಿ 18,806, ನಂಜನಗೂಡಿನಲ್ಲಿ 23,968, ಹುಣಸೂರಿನಲ್ಲಿ 20,811, ಎಚ್.ಡಿ. ಕೋಟೆಯಲ್ಲಿ 20,336, ಪಿರಿಯಾಪಟ್ಟಣದಲ್ಲಿ 19,319, ಕೆ.ಆರ್.ನಗರದಲ್ಲಿ 18,845 ಮಕ್ಕಳು ಸೇರಿದಂತೆ ಜಿಲ್ಲೆಯಲ್ಲಿ ಐದು ವರ್ಷದೊಳಗಿನ ಒಟ್ಟು 2,43,951 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಸಾರ್ವಜನಿಕ ಪ್ರದೇಶಗಳು, ಆಸ್ಪತ್ರೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ವಿವಿಧ ಭಾಗಗಳಲ್ಲಿ ಒಟ್ಟು 1,652 ಲಸಿಕಾ ಬೂತ್‌ಗಳನ್ನು ತೆರೆದು ಲಸಿಕೆ ಹಾಕಲಾಯಿತು.

    ಕಾರ್ಯಕ್ರಮದಲ್ಲಿ ಮೇಯರ್ ತಸ್ನಿಂ, ಶಾಸಕರಾದ ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಪಾಲಿಕೆ ಸದಸ್ಯೆ ಶೋಭಾ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಆರ್.ರಾಜು, ಪಾಲಿಕೆ ಆರೋಗ್ಯಾಧಿಕಾರಿ ಜಯಂತ್, ಆರ್‌ಸಿಎಚ್‌ಒ ಡಾ.ರವಿ, ಆಸ್ಪತ್ರೆ ಸಮಿತಿ ಸದಸ್ಯರಾದ ಶಾಂತವೀರಪ್ಪ, ಸುಜಾತ ರಾಮಪ್ರಸಾದ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts