More

    ಅಭಿಮಾನಿಗಳು ದೇವರಾದ ಕಥೆ: ಇಂದು ಡಾ.ರಾಜ್​ಕುಮಾರ್ ಅವರ 15ನೇ ಪುಣ್ಯಸ್ಮರಣೆ

    ಏಪ್ರಿಲ್ ಎಂದರೆ ಡಾ. ರಾಜ್​ಕುಮಾರ್ ಅಭಿಮಾನಿಗಳಿಗೆ ತುಂಬ ವಿಶೇಷ. ಏ.12ರಂದು ಮೇರುನಟನ ಪುಣ್ಯಸ್ಮರಣೆ. ಏ.24ರಂದು ಅವರ ಜನ್ಮದಿನ. ಈ ಎರಡೂ ದಿನಗಳ ನಡುವಿನ 12 ದಿನ ಅಣ್ಣಾವ್ರ ಕುರಿತು ಕೆಲವು ಆಸಕ್ತಿಕರ ಲೇಖನಗಳನ್ನು ವಿಜಯವಾಣಿ ಪ್ರಕಟಿಸುತ್ತಿದೆ. ಮೊದಲಾರ್ಥವಾಗಿ ಅಭಿಮಾನಿಗಳೇ ದೇವರು ಎಂದು ಡಾ. ರಾಜ್ ಮೊದಲು ಹೇಳಿದ್ದು ಯಾವಾಗ? ಎಲ್ಲಿ? ಆ ಬಗ್ಗೆ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರೇ ಮಾಹಿತಿ ನೀಡಿದ್ದಾರೆ…

    ಡಾ.ರಾಜಕುಮಾರ್ ತಮ್ಮ ಅಭಿಮಾನಿಗಳನ್ನು ‘ಅಭಿಮಾನಿ ದೇವರುಗಳು’ ಎಂದು ಸಂಬೋಧಿಸುತ್ತಿದ್ದು ಎಲ್ಲರಿಗೂ ಗೊತ್ತೇ ಇದೆ. ಅಭಿಮಾನಿಗಳಿಗೆ ದೇವರ ಸ್ಥಾನ ನೀಡಿದ ಮೊದಲ ನಟರೆಂದರೆ ಅದು ಡಾ. ರಾಜಕುಮಾರ್. ಇಷ್ಟಕ್ಕೂ ಅವರ್ಯಾಕೆ ತಮ್ಮ ಅಭಿಮಾನಿಗಳಿಗೆ ದೇವರ ಸ್ಥಾನ ನೀಡಿದರು ಎಂಬ ಪ್ರಶ್ನೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಅಷ್ಟೇ ಅಲ್ಲ, ಎಲ್ಲಿ ಮತ್ತು ಯಾವ ಸಂದರ್ಭದಲ್ಲಿ ಅವರು, ‘ಅಭಿಮಾನಿ ದೇವರುಗಳು’ ಎಂದು ಸಂಬೋಧಿಸಿದರು ಎಂಬ ಕುತೂಹಲ ಸಹಜವಾಗಿ ಇರುತ್ತದೆ. ಆ ಘಟನೆಯನ್ನು ಹಿರಿಯ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಅವರು, ಡಾ. ರಾಜಕುಮಾರ್ ಅವರ 15ನೇ ಪುಣ್ಯಸ್ಮರಣೆಯ ಸಂದರ್ಭದಲ್ಲಿ ನೆನಪು ಮಾಡಿಕೊಂಡಿದ್ದಾರೆ.

    ಡಾ. ರಾಜಕುಮಾರ್ ಅವರು ಮೊಟ್ಟಮೊದಲು ‘ಅಭಿಮಾನಿ ದೇವರುಗಳೇ’ ಎಂದು ಬಹಿರಂಗವಾಗಿ ಸಂಬೋಧಿಸಿದ್ದು ಅವರಿಗೆ ‘ಕರ್ನಾಟಕ ರತ್ನ’ ಗೌರವ ಪ್ರದಾನ ಮಾಡಿದ ಸಂದರ್ಭದಲ್ಲಿ. ಈ ಘಟನೆಯ ಬಗ್ಗೆ ಮಾತನಾಡುವ ಬರಗೂರರು, ‘ಎಸ್. ಬಂಗಾರಪ್ಪನವರು ಮುಖ್ಯಮಂತ್ರಿಗಳಾಗಿದ್ದ ಕಾಲ ಅದು. ಅಷ್ಟರಲ್ಲಾಗಲೇ ಅವರು ತಮ್ಮ ಪದವಿಗೆ ರಿಸೈನ್ ಮಾಡಿದ್ದರು. ಇನ್ನೆರೆಡು ದಿನಗಳಲ್ಲಿ ಪದವಿಯಿಂದ ಅವರು ಕೆಳಗಿಳಿಯಬೇಕಿತ್ತು. ಅದಕ್ಕೂ ಮುನ್ನವೇ, ಕುವೆಂಪು ಮತ್ತು ಡಾ. ರಾಜಕುಮಾರ್ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಘೊಷಿಸಲಾಗಿತ್ತು. ನಾನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷನಾಗಿದ್ದರಿಂದ, ‘ಕರ್ನಾಟಕ ರತ್ನ’ ಪ್ರಶಸ್ತಿ ಸ್ಥಾಪನೆ ಮಾಡಬೇಕು ಎಂಬ ಸಭೆಯಿಂದ ಹಿಡಿದು ಎಲ್ಲ ಸಭೆಗಳಲ್ಲೂ ಭಾಗವಹಿಸಿದ್ದೆ. ಅದರಂತೆ ವಿಧಾನಸೌಧದ ಮುಂಭಾಗದಲ್ಲಿ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿತ ವಾಗಿತ್ತು. ಅಂದು ಸಮಾರಂಭದಲ್ಲಿ ಬಂಗಾರಪ್ಪನವರು ತಮ್ಮ ರಾಜಕೀಯ ವಿರೋಧಿಗಳಿಗೆ ಉತ್ತರ ಕೊಡುವ ಸಲುವಾಗಿ, ‘ಯಾರೇ ಕೂಗಾಡಲಿ ಊರೇ ಹೋರಾಡಲಿ ನನ್ನ ನೆಮ್ಮದಿಗೆ ಭಂಗವಿಲ್ಲ …’ ಎಂದು ಹಾಡು ಹೇಳಿದರು. ಆಗ ಗದ್ದಲ ಶುರುವಾಯಿತು. ಅವರ ರಾಜಕೀಯ ವಿರೋಧಿ ಗಳಲ್ಲಿ ಗುರುತಿಸಿಕೊಂಡಿದ್ದ ಕೆಲವರು, ಕೈಗೆ ಸಿಕ್ಕಿದ್ದನ್ನು ಎಸೆಯುವುದಕ್ಕೆ ಪ್ರಾರಂಭಿಸಿದರು. ಆಗ ಡಾ. ರಾಜಕುಮಾರ್ ಅವರು ಎದ್ದು ನಿಂತು ಎರಡೂ ಕೈಮುಗಿದು, ‘ಅಭಿಮಾನಿ ದೇವರುಗಳೇ’ ಎಂದು ಹೇಳಿ, ತಮ್ಮ ತಲೆಯ ಮೇಲೆ ಎಸೆಯಿರಿ ಎಂದು ಸಂಜ್ಞೆ ಮಾಡಿದರು. ಯಾವಾಗ ಡಾ. ರಾಜ್ ಅವರು ‘ಅಭಿಮಾನಿ ದೇವರುಗಳೇ’ ಎಂದರೋ, ಆಗ ಸಭೆ ಸ್ತಬ್ಧವಾಯಿತು. ಅಲ್ಲೇ ಅವರು ಮೊದಲ ಬಾರಿಗೆ ‘ಅಭಿಮಾನಿ ದೇವರುಗಳೇ’ ಎಂದು ಸಂಬೋಧಿಸಿದ್ದು. ಆಗ ಜನ ಪ್ರತಿಕ್ರಿಯಿಸಿದ ರೀತಿ ಇದೆಯಲ್ಲ, ಅದು ಅವರ ಮೇಲೆ ಜನ ಅದೆಷ್ಟು ಪ್ರೀತಿ ಮತ್ತು ಗೌರವ ಇಟ್ಟಿದ್ದಾರೆ ಎಂದು ತೋರಿಸುವಂತಿತ್ತು. ಅಲ್ಲಿಂದ ಅವರು ‘ಅಭಿಮಾನಿ ದೇವರುಗಳೇ’ ಎಂದು ಹೇಳುವುದಕ್ಕೆ ಶುರು ಮಾಡಿದರು’ ಎಂದು ನೆನಪಿಸಿಕೊಳ್ಳುತ್ತಾರೆ ಡಾ. ಬರಗೂರು ರಾಮಚಂದ್ರಪ್ಪ.

    ಡಾ. ರಾಜಕುಮಾರ್ ಹಾಗೆ ಹೇಳುವುದಕ್ಕೆ ಒಂದು ಹಿನ್ನೆಲೆಯೂ ಇದೆ. ಅದನ್ನು ಸ್ವತಃ ಅವರೇ ತಮ್ಮ ಬಳಿ ಹೇಳಿಕೊಂಡಿದ್ದರು ಎನ್ನುತ್ತಾರೆ ಬರಗೂರು ರಾಮಚಂದ್ರಪ್ಪ. ತೆಲುಗಿನ ಖ್ಯಾತ ನಟ ಎನ್.ಟಿ. ರಾಮರಾವ್ ಅವರು ಆಂಧ್ರದ ಮುಖ್ಯಮಂತ್ರಿಯಾಗಿದ್ದಾಗ ಡಾ. ರಾಜಕುಮಾರ್ ಮತ್ತು ರಜನಿಕಾಂತ್ ಅವರನ್ನು ತಿರುಪತಿ ಟ್ರಸ್ಟ್​ನ ಟ್ರಸ್ಟಿಯನ್ನಾಗಿ ನೇಮಿಸಿದ್ದರು. ಒಮ್ಮೆ ಟ್ರಸ್ಟ್​ನ ಸಭೆಗೆ ಹೋಗಿದ್ದಾಗ, ತಿರುಪತಿ ತಿಮ್ಮಪ್ಪನ ದರ್ಶನ ಮಾಡಲು ಸಾಮಾನ್ಯ ಜನರ ಜತೆಗೆ ಡಾ. ರಾಜಕುಮಾರ್ ಅವರು ಕ್ಯೂನಲ್ಲಿ ನಿಂತುಕೊಂಡರಂತೆ. ಡಾ. ರಾಜ್ ಒಬ್ಬ ವಿಐಪಿ. ಅವರನ್ನು ನೇರವಾಗಿ ಗರ್ಭಗುಡಿಗೆ ಕರೆದುಕೊಂಡು ಹೋಗುತ್ತಿದ್ದರಾದರೂ, ಅದಕ್ಕೆ ಅವರು ಒಪ್ಪಲಿಲ್ಲ. ಭಕ್ತಿಯೆನ್ನುವುದು ವಿಶೇಷ ಸವಲತ್ತುಗಳಲ್ಲಿ ಪಡೆಯುವ ದರ್ಶನವಲ್ಲ ಎಂಬುದು ಡಾ. ರಾಜ್ ಅವರ ನಂಬಿಕೆಯಾಗಿತ್ತು. ನಿಜವಾದ ಭಕ್ತಿ ಇದ್ದರೆ, ತಾನೂ ಎಲ್ಲರಂತೆ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯಬೇಕು ಎಂದು ಅವರು ಭಾವಿಸಿದ್ದರು. ಹೀಗೆ ಕ್ಯೂನಲ್ಲಿ ನಿಂತಿದ್ದಾಗ ಅವರನ್ನು ಗುರುತಿಸಿದ ಜನ, ‘ಅಣ್ಣಾವ್ರೆ, ನೀವು ನಮ್ಮಂತೆ ಸಾಲಿನಲ್ಲಿ ನಿಂತಿದ್ದೀರಿ. ನಿಜವಾಗಲೂ ನಿಮ್ಮಲ್ಲೇ ದೇವರು ನೋಡಿದಂತಾ ಯಿತು ಎಂದರಂತೆ. ‘ಈ ಘಟನೆಯನ್ನು ನನ್ನಲ್ಲಿ ಹಂಚಿಕೊಂಡಿದ್ದ ಡಾ. ರಾಜ್, ‘ಆ ಜನರು ನನ್ನಲ್ಲಿ ದೇವರನ್ನು ಕಾಣಬೇಕಾದರೆ ಅವರಲ್ಲೂ ದೇವರಿರಬೇಕು. ಅವರಲ್ಲಿ ದೇವರು ಇರುವುದ ರಿಂದಲೇ ನನ್ನಲ್ಲಿ ದೇವರನ್ನು ಕಂಡರು. ಆಗಲೇ ನನಗೆ ಈ ಜನರೇ ದೇವರು ಅಂತನಿಸಿತು. ಹಾಗಾಗಿ, ನಾನು ಅಭಿಮಾನಿಗಳನ್ನು ‘ಅಭಿಮಾನಿ ದೇವರುಗಳೇ’ ಅಂತ ಸಂಬೋಧನೆ ಮಾಡಲು ಶುರು ಮಾಡಿದೆ’ ಎಂದು ರಾಜಕುಮಾರ್ ಹೇಳಿಕೊಂಡಿದ್ದರು’ ಎನ್ನುತ್ತಾರೆ ಬರಗೂರು.

    ಪ್ರಿಯ ಬೆಂಗಳೂರಿಗರೇ.. ಮನೆಯ ಹೆಂಗಸರ ಮಾತು ಕೇಳಿ: ಎಡಿಜಿಪಿ ಭಾಸ್ಕರ್ ರಾವ್

    ಹೆಂಡತಿಯ ಊರಿಗೆ ಬಂದಿದ್ದವ ಜೀವವನ್ನೇ ಕಳೆದುಕೊಂಡ; ವಾಪಸ್​ ಹೊರಟಾಗ ಎದುರಾದ ಯಮರಾಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts