More

    ಆಧಾರ್​ ವಿಳಾಸ ಬದಲಾವಣೆ ಇನ್ನಷ್ಟು ಸರಳ! ಇನ್ನು ‘ಕುಟುಂಬದ ಮುಖ್ಯಸ್ಥನ’ ಒಪ್ಪಿಗೆ ಪಡೆದರೆ ಸಾಕು…

    ನವದೆಹಲಿ: ಇನ್ನುಮುಂದೆ ವಿಳಾಸಕ್ಕೆ ಪುರಾವೆ ಇಲ್ಲ ಎಂಬ ಕಾರಣಕ್ಕೆ ಆನ್‌ಲೈನ್‌ನಲ್ಲಿ ಆಧಾರ್ ವಿಳಾಸ ಬದಲಾವಣೆಗೆ ಪರದಾಡಬೇಕಾಗಿಲ್ಲ.
    ನಿಮ್ಮ ಕುಟುಂಬದ ಯಾವುದಾದರೂ ಒಬ್ಬ ಸದಸ್ಯನ ಹೆಸರಿನಲ್ಲಿ ವಿಳಾಸ ಪುರಾವೆ ಇದ್ದರೆ ಸಾಕು. ಅವರನ್ನೇ ‘ಕುಟುಂಬದ ಮುಖ್ಯಸ್ಥ’ ಎಂದು ಹೇಳಿ ವಿಳಾಸ ಬದಲಿಸಬಹುದು. ಈ ಆಯ್ಕೆಯನ್ನು ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರ ಈಗ ಜನರಿಗೆ ನೀಡಿದೆ.

    ಕುಟುಂಬದ ಮುಖ್ಯಸ್ಥರ ಜತೆಗಿನ ತನ್ನ ಸಂಬಂಧವನ್ನು ನಿರೂಪಿಸಲು ಪಡಿತರ ಚೀಟಿ, ಅಂಕ ಪಟ್ಟಿ, ವಿವಾಹ ಪ್ರಮಾಣ ಪತ್ರ, ಪಾಸ್‌ಪೋರ್ಟ್​ನಂತಹ ದಾಖಲೆಗಳನ್ನು ನೀಡುವ ಮೂಲಕ ಅರ್ಜಿದಾರರು ಆನ್​ಲೈನ್‌ನಲ್ಲಿ ತಮ್ಮ ವಿಳಾಸವನ್ನು ಬದಲಿಸಿಕೊಳ್ಳಬಹುದು. ಒಂದು ವೇಳೆ, ಇಂತಹ ಯಾವುದೇ ದಾಖಲೆಗಳೂ ಕುಟುಂಬ ಸದಸ್ಯರ ಬಳಿ ಇರದಿದ್ದಲ್ಲಿ, ಪ್ರಾಧಿಕಾರವೇ ನಿಗದಿತ ನಮೂನೆಯಲ್ಲಿ ಕುಟುಂಬದ ಮುಖ್ಯಸ್ಥರಿಗೆ ಸ್ವಯಂ ಘೋಷಣೆ ಮಾಡುವ ಅವಕಾಶ ನೀಡುತ್ತದೆ. ಅದನ್ನು ಅರ್ಜಿದಾರರು ಬಳಸಿಕೊಳ್ಳಬಹುದು.

    ಕುಟುಂಬದ ಮುಖ್ಯಸ್ಥರ ಹೆಸರಿನಲ್ಲಿ ಬಹುತೇಕ ದಾಖಲೆಗಳು ಇರುತ್ತವೆ. ಆದರೆ ಮಕ್ಕಳು, ಪತಿ/ಪತ್ನಿ, ಪೋಷಕರಂತಹ ಬಂಧುಗಳ ಬಳಿ ವಿಳಾಸ ಪುರಾವೆ ದಾಖಲೆಗಳು ಇರದಿದ್ದರೆ ಅವರಿಗೆ ಈ ಸೌಲಭ್ಯದಿಂದ ಬಹಳಷ್ಟು ಅನುಕೂಲ ಆಗಲಿದೆ. ಪದೇ ಪದೇ ನಗರದಿಂದ ನಗರಕ್ಕೆ ವಲಸೆ ಹೋಗುವವರಿಗೂ ಇದರಿಂದ ಪ್ರಯೋಜನವಾಗಲಿದೆ ಎಂದು ಪ್ರಾಧಿಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

    ಆಧಾರ್ ವಿಳಾಸ ತಿದ್ದುಪಡಿ ಮಾಡೋದು ಹೇಗೆ?
    18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಗೂ ‘ಕುಟುಂಬದ ಮುಖ್ಯಸ್ಥ’ ಆಗುವ ಅವಕಾಶ ಇರುತ್ತದೆ. ಕುಟುಂಬದ ಮುಖ್ಯಸ್ಥರು, ತಮ್ಮ ವಿಳಾಸವನ್ನು ತಮ್ಮ ಬಂಧುಗಳ ಜತೆ ಹಂಚಿಕೊಳ್ಳಬಹುದು. ಇದಕ್ಕಾಗಿ ಅರ್ಜಿದಾರರು ಮಾಡಬೇಕಿರುವುದು ಇಷ್ಟೇ. ‘ಮೈ ಆಧಾರ್’ ವೆಬ್ ಸೈಟ್‌ಗೆ ಹೋಗಿ ಕುಟುಂಬದ ಮುಖ್ಯಸ್ಥರ ಆಧಾರ್ ಸಂಖ್ಯೆ ನಮೂದಿಸಬೇಕು.

    ಈ ಆಧಾರ್​ ಸಂಖ್ಯೆ ದೃಢೀಕರಣವಾದ ಬಳಿಕ ಕುಟುಂಬದ ಮುಖ್ಯಸ್ಥನ ಜತೆ ಇರುವ ಸಂಬಂಧ ರುಜುವಾತುಪಡಿಸಬೇಕು. ಇದಕ್ಕಾಗಿ ಸಹಾಯಕ ದಾಖಲೆಯನ್ನು ಅರ್ಜಿದಾರ ಅಪ್‌ಲೋಡ್ ಮಾಡಬೇಕು. ಇದೇ ಸಂದರ್ಭ 50 ರು. ಸೇವಾ ಶುಲ್ಕವನ್ನು ಅರ್ಜಿದಾರ ಪಾವತಿಸಬೇಕು.

    ಶುಲ್ಕ ಪಾವತಿ ಬಳಿಕ ಸೇವಾ ಕೋರಿಕೆ ಸಂಖ್ಯೆ (ಎಸ್‌ಆರ್‌ನ್) ಅರ್ಜಿದಾರನಿಗೆ ಬರುತ್ತದೆ. ಇದೇ ಸಂದರ್ಭ, ಕುಟುಂಬದ ಮುಖ್ಯಸ್ಥನ ಮೊಬೈಲ್‌ಗೂ ವಿಳಾಸ ಬದಲಾವಣೆ ಕೋರಿಕೆ ಬಂದಿದೆ ಎಂದು ಸೂಚಿಸುವ ಎಸ್​ಎಂಎಸ್ ರವಾನೆಯಾಗಲಿದೆ.

    ಕುಟುಂಬದ ಮುಖ್ಯಸ್ಥ, ಮೈ ಆಧಾ‌ರ್​ ವೆಬ್‌ಸೈಟ್‌ಗೆ ಹೋಗಿ ನೀವು ಕಳಿಸಿರುವ ವಿಳಾಸ ಬದಲಾವಣೆ ಕೋರಿಕೆಗೆ 30 ದಿನಗಳ ಒಳಗೆ ಅದಕ್ಕೆ ಒಪ್ಪಿಗೆ ಸೂಚಿಸಬೇಕು. ಒಂದು ವೇಳೆ ಆತ ತಿರಸ್ಕರಿಸಿದರೆ ಅಡ್ರೆಸ್ ಬದಲಾಗುವುದಿಲ್ಲ, ಅದಲ್ಲದೇ, ನೀವು ಪಾವತಿಸಿದ 50 ರು. ಶುಲ್ಕವನ್ನು ಕೂಡ ಮರಳಿಸಲಾಗುವುದಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts