ಚುನಾವಣೆ ಬಳಿಕ ಕಾಂಗ್ರೆಸ್‌ನಲ್ಲಿ ಮಹಾಸ್ಫೋಟ: ಸಿ.ಟಿ.ರವಿ

ಕಡೂರು: ಸಹಜವಾದ ಮೈತ್ರಿಯಿಂದ ಜೆಡಿಎಸ್ ಪಕ್ಷವು ಎನ್‌ಡಿಎಗೆ ಕೈ ಬಲಪಡಿಸುತ್ತಿದೆ. ಲೋಕಸಭಾ ಚುನಾವಣೆ ಮುಗಿದ ಬಳಿಕ ಯಾರು ಕಾಂಗ್ರೆಸ್‌ನಲ್ಲಿರುತ್ತಾರೆ ಎಂಬುದೇ ದೊಡ್ಡ ಪ್ರಶ್ನೆ ಎಂದು ಮಾಜಿ ಸಚಿವ ಸಿ.ಟಿ.ರವಿ ಸ್ಫೋಟಕ ಭವಿಷ್ಯ ನುಡಿದರು.

ತಾಲೂಕಿನ ಸಖರಾಯಣದಲ್ಲಿ ಭಾನುವಾರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಕ್ತಿಕೇಂದ್ರದ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಈ ಹಿಂದೆ ಸಂವಿಧಾನಕ್ಕೆ ಆಪತ್ತು ಬಂದಾಗ ಜನತಾ ಪರಿವಾರ ಒಂದಾಗಿತ್ತು. ಇದೀಗ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂಬ ಉದ್ದೇಶದಿಂದ, ದೇಶದಲ್ಲಿ ಪ್ರಬಲ ನಾಯಕತ್ವ ಉಳಿಸಲು ದೇಶಭಕ್ತಿ ಮತ್ತು ದೇಶದ್ರೋಹಿಗಳ ನಡುವಿನ ಚುನಾವಣೆ ಏರ್ಪಟ್ಟಿದೆ. ಭಾರತವನ್ನು ವಿಶ್ವಗುರುವನ್ನಾಗಿಸಲು ಮೋದಿ ಗ್ಯಾರಂಟಿಗೆ ಎನ್‌ಡಿಎ ಭಾಗವಾಗಿ ಜನತಾ ಪರಿವಾರವೇ ಒಗ್ಗಟ್ಟು ಪ್ರದರ್ಶಿಸಿದೆ ಎಂದರು.
ರಾಜ್ಯದಲ್ಲಿ ದಲಿತ ಸಿಎಂ ಆಗಬೇಕು ಎಂಬ ಒತ್ತಾಯಗಳು ಬಿಜೆಪಿ-ಜೆಡಿಎಸ್‌ನಲ್ಲಿ ಕೇಳುತ್ತಿಲ್ಲ. ಅವರದೇ ಪಕ್ಷದಲ್ಲಿ ಅವಿಶ್ವಾಸದ ಮಾತುಗಳು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವಾಗಲೇ ನಂಬಿಕೆ ಇಲ್ಲದ ಮಾತುಗಳು ವ್ಯಕ್ತವಾಗುತ್ತಿವೆ. ಈ ನಿಟ್ಟಿನಲ್ಲಿ ಚುನಾವಣೆ ನಂತರ ರಾಜಕಾರಣದ ವ್ಯವಸ್ಥೆ ಬದಲಾಗಲಿದೆ. ಈ ಬಾರಿ ಮೋದಿ ಗ್ಯಾರಂಟಿ ಮತ್ತು ಕಾಂಗ್ರೆಸ್ ನಡುವಿನ ಚುನಾವಣೆಯ ಕದನ ನಡೆಯಲಿದೆ. ದೇಶದ್ರೋಹಿಗಳು ವಿಧಾನಸೌಧದಲ್ಲಿ ಪಾಕ್ ಪರ ಕೂಗುವ ಘೋಷಣೆಗಳಿಗೆ ಸಮರ್ಥನೆ ಮಾಡಿಕೊಳ್ಳುವ ಕಾಂಗ್ರೆಸ್ ನೀತಿ ಮುಂದೆ ಪಂಚಾಯಿತಿಯ ಕಚೇರಿವರೆಗೂ ಪಾಕ್ ಪರ ಘೋಷಣೆಗಳನ್ನು ಕೂಗುವ ದೇಶದ್ರೋಹಿಗಳನ್ನು ಮಟ್ಟ ಹಾಕಬೇಕಿದೆ. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಹಾಕಲು ಮಾಸ್ಟರ್ ಮೈಂಡ್ ಹೊಂದಿದ್ದ ಚಿಕ್ಕಮಗಳೂರಿನ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ದೇಶಭಕ್ತ ಮತ್ತು ದೇಶದ್ರೋಹಿಗಳ ನಡುವಿನ ಚುನಾವಣೆಗೆ ನಾವೆಲ್ಲರೂ ಸಂಘಟಿತರಾಗಬೇಕಿದೆ ಎಂದರು.
ಕರೊನಾ ಕಾಲಘಟ್ಟದಲ್ಲಿ ದೇಶದ ಪ್ರತಿ ಪ್ರಜೆಗೂ ಉಚಿತವಾಗಿ ಕರೊನಾ ಲಸಿಕೆಯನ್ನು ನೀಡುವ ಮೂಲಕ ದೇಶದ ಜನತೆಯೇ ನನ್ನ ಪರಿವಾರ ಎಂದು ಮೋದಿಯೇ ಘೋಷಿಸಿಕೊಂಡಿದ್ದಾರೆ. ಕೇಂದ್ರದ ಹಲವಾರು ಯೋಜನೆಗಳು ಜನಪರ ಕಲ್ಯಾಣಕ್ಕಾಗಿ ಅನುಷ್ಠಾನಗೊಂಡಿದೆ. 84 ಕೋಟಿಗೂ ಅಧಿಕ ಜನತೆ ಗರೀಬ್ ಕಲ್ಯಾಣ ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಕಾಲ್ಗುಣದಿಂದ ಮಳೆ-ಬೆಳೆ ಇಲ್ಲದ ಸ್ಥಿತಿಗೆ ತಲುಪಿದ್ದೇವೆ. ಗ್ಯಾರಂಟಿ ಕೊಟ್ಟ ಮೇಲೆ ಜನರ ಬಳಿಯೇ ಪಿಕ್‌ಪ್ಯಾಕೆಟ್ ದಂಧೆಗೆ ಇಳಿದು ಬಿಟ್ಟಿದ್ದಾರೆ. ಜತೆಯಲ್ಲಿ ಕೊಳವೆಬಾವಿ ಕೊರೆಸಲು ಲಕ್ಷಗಟ್ಟಲೇ ಹಣ ನೀಡಬೇಕಾದ ಪರಿಸ್ಥಿತಿಗೆ ತಂದಿರುವ ಕಾಂಗ್ರೆಸ್ ಸರ್ಕಾರ ಜನರ ಹಣವನ್ನು ದರೋಡೆ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, 146 ಕೋಟಿ ಜನತೆಗೆ ನೆಮ್ಮೆದಿಯ ಬದುಕು ರೂಪಿಸಲು ದೇಶದ ಚುನಾವಣೆ ಎದುರಾಗಿದೆ. ಭಾರತದಲ್ಲಿ ನೆಮ್ಮೆದಿ ಜೀವನ ಕೊಡಲು ಉತ್ತಮ ಆಡಳಿತ ನೀಡುವ ಮೋದಿ ನಾಯಕತ್ವಕ್ಕೆ ಜನ ಮತ್ತೊಮ್ಮೆ ಅಪೇಕ್ಷೆ ಪಡುತ್ತಿದ್ದಾರೆ. ಗಡಿ ಕಾಯುವ ಸೈನಿಕರಿಗೆ ದೇಶದ ಭದ್ರತೆಯಲ್ಲಿ ಬಲವನ್ನು ತುಂಬುವ ಕೆಲಸ ಮೋದಿ ನಾಯಕತ್ವ ಮಾಡಿದೆ. ಒಂದು ಕಾಲದಲ್ಲಿ ಆರ್ಥಿಕ ವ್ಯವಸ್ಥೆಯಲ್ಲಿ ಚಿನ್ನವನ್ನು ಅಡವಿಟ್ಟ ಭಾರತ ಇಂದು ಹಲವು ರಾಷ್ಟ್ರಗಳಿಗೆ ಸಾಲವನ್ನು ಕೊಡುವ ಮಟ್ಟಕ್ಕೆ ಬೆಳೆದು ನಿಂತಿರುವುದು ಹೆಮ್ಮೆಯ ಸಂಗತಿ ಎಂದರು.
ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆಗಳು ವ್ಯಾಪಿಸುತ್ತಿದೆ. ಅವುಗಳ ಮಟ್ಟ ಹಾಕಲು ಏ.26ಕ್ಕೆ ರಾಷ್ಟ್ರ ಭಕ್ತರ ಬಳಗದ ಶಕ್ತಿ ಏನೆಂಬುದನ್ನು ನಿರೂಪಿಸಬೇಕಿದೆ. ಶ್ರೀರಾಮ ಎಂಬುದೇ ಕಾಲ್ಪನಿಕ ಎಂದು ಸುಪ್ರಿಂಕೋರ್ಟ್‌ಗೆ ಅರ್ಜಿ ಹಾಕಿದ ಕಾಂಗ್ರೆಸ್ ಇಂದು ಅದೇ ರಾಮನಿಗೆ ಜೈಕಾರ ಹಾಕುವ ಮನಸ್ಥಿತಿಗೆ ಬಂದಿರುವ ಬದಲಾವಣೆಗಳನ್ನು ಕಂಡಿದ್ದೇವೆ. ರಾಜ್ಯದಲ್ಲಿ ಬರಗಾಲ ತಾಂಡವಾಡುತ್ತಿದೆ. ನೀರಿನ ಸಮಸ್ಯೆಗಳು ದಿನೇ ದಿನೆ ಹೆಚ್ಚಾಗುತ್ತಿದೆ. ಕಾವೇರಿ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಇವುಗಳನ್ನು ಸರಿ ಪಡಿಸಿಕೊಡಿ ಇಲ್ಲವಾದರೆ ರಾಜೀನಾಮ ನೀಡಲಿ ಎಂದರೆ, ಅರಣ್ಯ ಮಂತ್ರಿಗಳು ಹುಲಿ ಉಗರಿನ ವಿಚಾರದಲ್ಲಿ ಕಾಲಹರಣ ಮಾಡಿ ಹಳ್ಳಿಗಾಡಿನ ಜನರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತ ದಿನ ದೂಡಿದರು. ಇಂತಹ ಕೆಟ್ಟ ವ್ಯವಸ್ಥೆಯ ರಾಜಕಾರಣ ಮಾಡುವ ಕಾಂಗ್ರೆಸ್ ರಾಜ್ಯದ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ದೂರಿದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ, ಸರಳೀಕರಣದ ಬದುಕು ಅಳವಡಿಸಿಕೊಂಡಿರುವ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಸಜ್ಜನಿಕೆಯ ಪ್ರಾಮಾಣಿಕ ವ್ಯಕ್ತಿಯಾಗಿ ಜನಾನುರಾಗಿದ್ದಾರೆ. ದೇಶಕ್ಕಾಗಿ ಮೋದಿ ಬೇಕು ಎಂಬ ಉದ್ದೇಶ ಇಟ್ಟುಕೊಂಡು ಬಿಜೆಪಿ ಜತೆ ಜೆಡಿಎಸ್ ಕೈಜೋಡಿಸಿದೆ. ದೇಶದ ಜನತೆ ಮೋದಿಯ ಮೇಲೆ ವಿಶ್ವಾಸವನ್ನು ಇಟ್ಟುಕೊಂಡಿದ್ದಾರೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪೂಜಾರಿ ಗೆಲುವು ಪಡೆದುಕೊಳ್ಳಲು, ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸಲು ನಾವೆಲ್ಲರೂ ಕೈ ಜೋಡಿಸಬೇಕಿದೆ ಎಂದರು.
ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ ಮಾತನಾಡಿ, ಉತ್ತಮ ಪ್ರಬುದ್ಧತೆ ಹೊಂದಿರುವ ರಾಜಕಾರಣಿಯಾಗಿ ಪೂಜಾರಿ ಹೊರಹೊಮ್ಮಿದ್ದಾರೆ. ಪೂಜಾರಿಗೆ ಮತದ ಜತೆಗೆ ಹಣವನ್ನು ಕೊಟ್ಟು ಚುನಾವಣೆಯಲ್ಲಿ ಮತದಾರರು ಆಶೀರ್ವದಿಸುತ್ತಿದ್ದಾರೆ. ನಾವುಗಳು ನಮ್ಮ ಭಾಗದ ಮತಗಟ್ಟೆಯಲ್ಲಿ ಹೆಚ್ಚು ಮತವನ್ನು ಬಿಜೆಪಿಗೆ ಕೊಡಿಸಲು ಕಂಕಣಬದ್ಧರಾಗಿ ನಿಲ್ಲಬೇಕಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಈಶ್ವರಹಳ್ಳಿ ಮಹೇಶ್, ಮುಖಂಡರಾದ ಸುಧಾಕರ್ ಶೆಟ್ಟಿ, ಜಿ.ಎನ್.ವಿಜಯ್‌ಕುಮಾರ್, ಕುರುವಂಗಿ ವೆಂಕಟೇಶ್, ಟಿ.ಆರ್.ಲಕ್ಕಪ್ಪ, ಸೋಮಶೇಖರ್, ಲಕ್ಷ್ಮಣನಾಯ್ಕ, ಹಳೇಹಟ್ಟಿ ಆನಂದ್‌ನಾಯ್ಕ, ಜಗನ್ನಾಥ್, ರಂಗನಾಥ್, ನಂದೀಶ್ ಮದಕರಿ, ರಾಜಮ್ಮ, ಉಮೇಶ್, ಪ್ರದೀಪ್ ನಾಯ್ಕ, ಸತೀಶ್ ಇತರರಿದ್ದರು.

ದೇವಸ್ಥಾನದ ಪೂಜಾರಿಯಲ್ಲ ಬಡವರ ಆರಾಧಕ
ಸಖರಾಯಪಟ್ಟಣದ ಮಹಾಶಕ್ತಿ ಕೇಂದ್ರದ ವ್ಯಾಪ್ತಿಯ 26 ಬೂತ್‌ನಲ್ಲಿ ಕನಿಷ್ಠ 15 ಸಾವಿರ ಮತಗಳನ್ನು ಬಿಜೆಪಿ ಅಭ್ಯರ್ಥಿಗೆ ದೊರಕಿಸಿಕೊಡಬೇಕಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಭೋಜೆಗೌಡರ ಪ್ರಭಾವದಿಂದ 10 ಬೂತ್‌ನಲ್ಲಿ ನಿರೀಕ್ಷಿತವಾಗಿ ಬಿಜೆಪಿಗೆ ಮತ ಲಭಿಸಿರಲಿಲ್ಲ. ಗ್ರಹಚಾರ ಕೆಟ್ಟಾಗ ಎಲ್ಲ ಗ್ರಹಗತಿಗಳೂ ಒಂದಾಗುತ್ತವೆ. ಈಗ ಬಿಜೆಪಿ-ಜೆಡಿಎಸ್ ಹೊಂದಾಣಿಕೆಯ ಕೆಲಸವನ್ನು 10 ತಿಂಗಳು ಹಿಂದೆಯೇ ಮಾಡಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುತ್ತಿರಲಿಲ್ಲ. ನಮ್ಮ ಟೈಂ ಸರಿ ಇಲ್ಲದಾಗ ಪರಿಸ್ಥಿತಿಗಳು ಬದಲಾಗುತ್ತವೆ. ಮತ್ತೊಮ್ಮೆ ಮೋದಿ ಆಡಳಿತ ಬರಲು ಕಾರ್ಯಕರ್ತರು ಸನ್ನದ್ಧರಾಗಬೇಕಿದೆ ಎಂದು ಸಿ.ಟಿ.ರವಿ ಹೇಳಿದರು. ಈ ನಿಟ್ಟಿನಲ್ಲಿ ಸಜ್ಜನಿಕೆ ರಾಜಕಾರಣಿಯಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರು ದೇವಸ್ಥಾನದ ಪೂಜಾರಿ ಅಲ್ಲ, ಬಡ ಜನರ ಸೇವೆಯ ಪೂಜಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಪೂಜಾರಿಗೆ ಮಂಗಳಾರತಿ ತಟ್ಟೆನೂ ಇಲ್ಲ, ತಟ್ಟೆಯನ್ನೂ ನೀವೇ ಕೊಡಬೇಕು. ವೋಟನ್ನೂ ಹಾಕಬೇಕು ಎಂದು ಹಾಸ್ಯ ಚಟಾಕಿ ಹಾರಿಸಿದರು.
ಹಿಂದಿನ ಅನುದಾನಕ್ಕೆ ಇಂದು ಗುದ್ದಲಿಪೂಜೆ
ರಾಜ್ಯ ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ. ಕ್ಷೇತ್ರದಲ್ಲಿ ಆಯ್ಕೆಯಾದ ಶಾಸಕರಿಗೆ 10 ಮೀಟರ್ ರಸ್ತೆ ಮಾಡಲು ಆಗಿಲ್ಲ. ಹಿಂದಿನ ಶಾಸಕರು ಕೊಟ್ಟಿರುವ ಅನುದಾನದಲ್ಲಿ ಇಂದಿನ ಶಾಸಕರು ಶಂಕುಸ್ಥಾಪನೆ ಮಾಡುವುದೇ ದೊಡ್ಡ ಕೆಲಸವಾಗಿದೆ. ಸರ್ಕಾರ ಬಡವರ ಧ್ವನಿಯಾಗಿರದೆ ಸಮಸ್ಯೆಯನ್ನು ಕೇಳದೆ ಜನವಿರೋಧಿ ಸರ್ಕಾರವಾಗಿ ಮಾರ್ಪಟ್ಟಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಲೇವಡಿ ಮಾಡಿದರು.
Share This Article

ಅಕ್ಕಿ ತೊಳೆದ ನೀರನ್ನು ಚೆಲ್ಲಬೇಡಿ.. ಈ ನೀರಿನಿಂದ ದೇಹದ ತೂಕ ಇಳಿಸಿಕೊಳ್ಳಬಹುದು! Interesting information

ಬೆಂಗಳೂರು:  ಅಕ್ಕಿ ತೊಳೆದರೆ ಬರುವ ನೀರನ್ನು ( rice washed water) ಅನೇಕರು ಬಿಸಾಡುತ್ತಾರೆ. ಆದರೆ…

ತಂಪು ತಂಪಾದ​​ ಎಳನೀರನ್ನು ವಿಪರೀತವಾಗಿ ಕುಡಿಯಬೇಡಿ! ಮಾರಣಾಂತಿಕ ರೋಗಕ್ಕೆ ತುತ್ತಾಗೋದು ಖಚಿತ..Coconut Water Side Effects

ಬೆಂಗಳೂರು:  ಅತಿಯಾದರೆ ಅಮೃತವೂ ವಿಷ ಎಂಬಂತೆ, ಎಳನೀರನ್ನು ಮಿತಿಗಿಂತ ( Coconut Water Side Effects…

ಬೇಯಿಸಿದ ಆಲೂಗಡ್ಡೆ ಸಿಪ್ಪೆ ತೆಗೆಯುವುದು ಕಷ್ಟವೆ!; ಸಿಂಪಲ್​ ಈ ಟ್ರಿಕ್ಸ್​​ ಬಳಸಿ | Life Style

ಆಲೂಗಡ್ಡೆ ತಿನಿಸುಗಳು ಬೇಡ ಎಂದು ಯಾರು ಹೇಳುವುದಿಲ್ಲ. ನಮ್ಮ ಅಡುಗೆಮನೆಯಲ್ಲಿ ಪ್ರಮುಖ ಆಹಾರ ಎಂದರೆ ತಪ್ಪಲ್ಲ.…