ಬೆಂಗಳೂರು: ಮಹಿಳೆಯ ಫೋಟೋವನ್ನು ಅಶ್ಲೀಲವಾಗಿ ಮಾರ್ಫಿಂಗ್ ಮಾಡಿ ಆಕೆಗೆ ಕಳುಹಿಸಿ ಮಾನಸಿಕವಾಗಿ ಹಿಂಸಿಸಿದ್ದ ಕಾಮುಕನನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.
ದಾಸರಹಳ್ಳಿಯ ನಿವಾಸಿ ಪ್ರವಿಣ್ ರಾವ್ (40) ಬಂಧಿತ. ದಾಸರಹಳ್ಳಿಯ 38 ವರ್ಷದ ಮಹಿಳೆ ದೂರು ನೀಡಿದವರು. ಮಹಿಳೆಯ ಮನೆ ಪಕ್ಕದ ಖಾಲಿ ನಿವೇಶನದಲ್ಲಿ ಪ್ರವಿಣ್, ಶೆಡ್ ಹಾಕಿ ಚೀಟಿ ವ್ಯವಹಾರ ಮಾಡುತ್ತಿದ್ದ. ಜತೆಗೆ ಲ್ಯಾಪ್ಟಾಪ್ ರಿಪೇರಿ ಮಾಡುತ್ತಿದ್ದ. ಆರೋಪಿಯ ಪರಿಚಯವಿದ್ದರಿಂದ ಕೆಲ ದಿನಗಳ ಹಿಂದೆ ಹಾಳಾಗಿದ್ದ ಲ್ಯಾಪ್ಟಾಪ್ ಸರಿಪಡಿಸಲು ಆತನನ್ನು ಮಹಿಳೆಯು ಮನೆಗೆ ಕರೆಸಿದ್ದರು. ಲ್ಯಾಪ್ಟಾಪ್ ಸರಿಪಡಿಸುವ ವೇಳೆ ಅದರಲ್ಲಿದ್ದ ಮಹಿಳೆಯ ಖಾಸಗಿ ಫೋಟೋ ಮತ್ತು ಕುಟುಂಬಸ್ಥರ ಜತೆಗೆ ತೆಗೆಸಿಕೊಂಡಿದ್ದ ಫೋಟೋಗಳನ್ನು ಮಹಿಳೆಗೆ ಗೊತ್ತಾಗದಂತೆ ಆರೋಪಿ ತನ್ನ ಮೊಬೈಲ್ಗೆ ಕಳುಹಿಸಿಕೊಂಡಿದ್ದ.
ಬಳಿಕ ಮಹಿಳೆಯ ಫೋಟೋಗೆ ಬೇರೆ ಫೋಟೋ ಅಂಟಿಸಿ ಅಶ್ಲೀಲವಾಗಿ ಮಾರ್ಫಿಂಗ್ ಮಾಡಿ ಆಕೆಯ ಮೊಬೈಲ್ಗೆ ಕಳುಹಿಸಿದ್ದ. ಇದನ್ನು ನೋಡಿ ಭಯಗೊಂಡ ಮಹಿಳೆಯು ಪತಿಗೆ ತಿಳಿಸಿ ಬಳಿಕ ಪೊಲೀಸರಿಗೆ ದೂರು ನೀಡಿದ್ದರು. ಇದರಿಂದ ಕೆರಳಿದ ಪ್ರವಿಣ್, ಮಹಿಳೆಯ ಮನೆಗೆ ಬಂದು ಹಲ್ಲೆ ನಡೆಸಿದ್ದ. ಚೂರಿ ತೋರಿಸಿ ಬೆದರಿಸಿದ್ದ. ಗಾಲಟೆಯ ಶಬ್ಧ ಕೇಳಿ ನೆರೆಹೊರೆಯವರು ಸ್ಥಳಕ್ಕೆ ಬರುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಬಾಗಲಗುಂಟೆ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
https://www.vijayavani.net/a-lover-life-is-tragic-end-in-car-udupi/