More

    ಬಿಗ್ಗನಹಳ್ಳಿಯಲ್ಲೇ ಬಿಡುಬಿಟ್ಟ ಕಾಡಾನೆಗಳ ಹಿಂಡು

    ಚಿಕ್ಕಮಗಳೂರು: ಕಾಫಿ ನಾಡಿನಲ್ಲಿ ದಿನೇದಿನೆ ಕಾಡಾನೆಗಳ ಹಾವಳಿ ಹೆಚ್ಚಲಾರಂಭಿಸಿದೆ. ಶನಿವಾರದಿಂದ ಕೆ.ಆರ್.ಪೇಟೆ ಸಮೀಪದ ಬಿಗ್ಗನಹಳ್ಳಿಯಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳ ತಂಡ ಭಾನುವಾರವೂ ಅಲ್ಲಿಯೇ ವಾಸ್ತವ್ಯ ಹೂಡಿವೆ. ಹೀಗಾಗಿ ಸ್ಥಳೀಯರು, ಅಕ್ಕಪಕ್ಕದ ಗ್ರಾಮದ ಜನತೆ ಆತಂಕದಲ್ಲಿಯೇ ದಿನ ದೂಡುವಂತಾಗಿದೆ.

    ಬಿಗ್ಗನಹಳ್ಳಿಯ ತೋಟವೊಂದರಲ್ಲಿ ಆಶ್ರಯ ಪಡೆದಿರುವ ಆನೆಗಳು ಹೊರಬರುತ್ತಲೇ ಇಲ್ಲ. ಇದು ಕಾಡಿಗಟ್ಟುವ ಕಾರ್ಯಾಚರಣೆಗೆ ತೊಡಕಾಗಿದೆ. ದೈತ್ಯಗಾತ್ರದ ಭೀಮ ಆನೆಯು ಈ ತಂಡದಲ್ಲಿ ಇರುವುದರಿಂದ ಜನರ ಆತಂಕ ಹೆಚ್ಚಾಗಿದೆ. ಕಾಫಿ ತೋಟದಲ್ಲಿಯೇ ಆಗೊಮ್ಮೆ, ಈಗೊಮ್ಮೆ ಕಾಣಿಸಿಕೊಳ್ಳುವ ಭೀಮ ಸೇರಿ ಇತರೆ ಆನೆಗಳು ಯಾವ ಕ್ಷಣದಲ್ಲಿ ಕಾಫಿ ತೋಟದಿಂದ ಹೊರಬರುತ್ತವೆ ಎಂಬುದನ್ನು ಕಾಯುವುದೇ ಅರಣ್ಯ ಇಲಾಖೆ ಸಿಬ್ಬಂದಿ ಕೆಲಸವಾಗಿದೆ. ಅಲ್ಲದೆ ಆನೆಗಳು ಕಂಚೇನಹಳ್ಳಿ ಅರಣ್ಯದತ್ತ ಹೋಗದಂತೆ ತಡೆಯಲು ಪಟಾಕಿ ಸಿಡಿಸಲಾಗುತ್ತಿದೆ. ಏಕೆಂದರೆ ಆನೆಗಳನ್ನು ಅವುಗಳ ಮೂಲ ಆವಾಸ ಸ್ಥಾನಕ್ಕೆ ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ.
    ಎರಡು ತಂಡಗಳಾಗಿರುವ ಶಂಕೆ: ಬೀಟಮ್ಮ ಆನೆಯ ನೇತೃತ್ವದಲ್ಲಿ ಭೀಮ ಸೇರಿ 25ಕ್ಕೂ ಹೆಚ್ಚು ಆನೆಗಳು ಬಿಗ್ಗನಹಳ್ಳಿ ಸಮೀಪ ಶನಿವಾರ ಬೆಳಗ್ಗೆ ಕಾಣಿಸಿಕೊಂಡಿದ್ದವು. ಬಳಿಕ ಬಿಕ್ಕನಹಳ್ಳಿ ಸಮೀಪದ ಪ್ಲಾಂಟೇಶನ್‌ನಲ್ಲಿ ಆಶ್ರಯ ಪಡೆದಿದ್ದ ಆನೆಗಳು, ರಾತ್ರಿಯಾದರೂ ಹೊರಬಂದಿರಲಿಲ್ಲ. ಭಾನುವಾರ ಬೆಳಗ್ಗೆ 15ಕ್ಕೂ ಹೆಚ್ಚು ಆನೆಗಳು ಬಿಗ್ಗನಹಳ್ಳಿಯ ಕಾಫಿ ತೋಟವೊಂದರಲ್ಲಿ ಕಾಣಿಸಿಕೊಂಡಿವೆ. ಈ ಆನೆಗಳ ತಂಡದಲ್ಲಿಯೇ ನರಹಂತಕ ಭೀಮನೂ ಇದ್ದಾನೆ. ಹೀಗಾಗಿ ಶನಿವಾರ ಬಂದಿದ್ದ ಕಾಡಾನೆಗಳ ಗುಂಪು ಭಾನುವಾರ ಎರಡು ತಂಡಗಳಾಗಿ ವಿಭಜನೆ ಆಗಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಬಿಗ್ಗನಹಳ್ಳಿಯ ಕಾಫಿ ತೋಟದಲ್ಲಿ 15 ಆನೆಗಳಿರಬಹುದು. ಇಷ್ಟೇ ಸಂಖ್ಯೆಯ ಆನೆಗಳು ಇನ್ನೊಂದು ತಂಡವಾಗಿ ಎಲ್ಲಿಗೆ ಹೋಗಿರಬಹುದು ಎಂಬುದನ್ನು ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಡುತ್ತಿದ್ದಾರೆ.
    ಹುಲ್ಲಿನ ಬಣವೆ ಚೆಲ್ಲಾಪಿಲ್ಲಿ: ಕೆ.ಆರ್.ಪೇಟೆ ಸಮೀಪದ ಹಲುವಳ್ಳಿ ಗ್ರಾಮದಲ್ಲಿ ಕಾಡಾನೆಗಳ ದಾಳಿಗೆ ಭತ್ತದ ಹುಲ್ಲಿನ ಬಣವೆಗಳು ನಾಶವಾಗಿವೆ. ಶನಿವಾರ ರಾತ್ರಿ ಪ್ಲಾಂಟೇಶನ್‌ನಿಂದ ಹೊರಬಂದಿದ್ದ ಕಾಡಾನೆಗಳು ಹಲುವಳ್ಳಿ ಗ್ರಾಮದ ಹೊಲದಲ್ಲಿ ಹಾಕಿದ್ದ ಹುಲ್ಲಿನ ಬಣವೆಗಳನ್ನು ಕಿತ್ತುಹಾಕಿವೆ. ಹುಲ್ಲು ಜಮೀನಿನಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಆನೆಗಳು ಮನಬಂದಂತೆ ನುಗ್ಗುತ್ತಿರುವುದರಿಂದ ರೈತರು ಜಮೀನುಗಳಿಗೆ ತೆರಳಲು ಭಯಪಡುತ್ತಿದ್ದಾರೆ.
    ಕಾಳುಮೆಣಸು ಕೊಯ್ಲಿಗೆ ಬರುತ್ತಿಲ್ಲ ಜನ: ಕಾಫಿ ಕೊಯ್ಲು ಈಗಷ್ಟೇ ಮುಗಿದಿದ್ದು ಇನ್ನೇನು ಕಾಳುಮೆಣಸು ಕೊಯ್ಲಿಗೆ ರೈತರು ಮುಂದಾಗಿದ್ದರು. ಇದೇ ಸಂದರ್ಭ ಕಾಡಾನೆಗಳು ಕಾಣಿಸಿಕೊಂಡಿದ್ದರಿಂದಾಗಿ ಕಾಳುಮೆಣಸು ಕೊಯ್ಲಿಗೆ ಕಾರ್ಮಿಕರು ಬರಲು ಹಿಂದೇಟು ಹಾಕುತ್ತಿದ್ದಾರೆ. ಕಾಫಿ ತೋಟಗಳಲ್ಲಿ ಆನೆಗಳು ಇದ್ದರೆ ತಿಳಿಯುವುದಿಲ್ಲ ಹೀಗಾಗಿ ಕಾಫಿ ತೋಟಗಳಲ್ಲಿ ಕಾಳುಮೆಣಸು ಕೊಯ್ಲಿಗೆ ಹೋದಾಗ ಏಕಾಏಕಿ ಆನೆಗಳು ದಾಳಿ ಮಾಡಬಹುದು ಎಂಬ ಭಯದಿಂದಾಗಿ ಕಾರ್ಮಿಕರು ಕೊಯ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಇನ್ನೊಂದು ಕಡೆಯಿಂದ ನಷ್ಟ ಅನುಭವಿಸುವ ಆತಂಕ ರೈತರದು.
    ಕಂಚೇನಹಳ್ಳಿ ಕಡೆ ಹೋಗದಂತೆ ತಡೆ: ಕೆ.ಆರ್.ಪೇಟೆ ಸುತ್ತಮುತ್ತ ಕಾಣಿಸಿಕೊಂಡಿರುವ ಕಾಡಾನೆಗಳ ಗುಂಪು ಕಂಚೇನಹಳ್ಳಿ ಕಾಡಿನತ್ತ ಹೋಗದಂತೆ ಅರಣ್ಯ ಇಲಾಖೆ ತಡೆಯುತ್ತಿದ್ದಾರೆ. ಒಂದು ವೇಳೆ ಕಾಡಾನೆಗಳ ತಂಡ ಕಂಚೇನಹಳ್ಳಿ ಕಾಡಿನತ್ತ ತೆರಳಿದರೆ ಅವುಗಳನ್ನು ಮತ್ತೆ ಓಡಿಸಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ಇದೆ. ಜತೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆಗಳ ಉಪಟಳ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿಯೇ ಸಕಲೇಶಪುರ ಭಾಗದಿಂದ ಬಂದಿರುವ ಆನೆಗಳ ತಂಡ ಕಂಚೇನಹಳ್ಳಿ ಕಾಡಿನತ್ತ ಹೋಗದಂತೆ ಪಟಾಕಿ ಸಿಡಿಸಿ ಓಡಿಸುವ ಕೆಲಸ ಮಾಡಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts