More

    ಯಲಹಂಕ ಜನಸ್ಪಂದನದಲ್ಲಿ ಹರಿದುಬಂತು ದೂರುಗಳ ಮಹಾಪೂರ

    ಬೆಂಗಳೂರು: ಸೂರು ಕೋರಿ ಬಂದವರಿಗೆ ವಸತಿ ನೀಡುವ ಭರವಸೆ, ಬಡ ರೈತನಿಗೆ ಸೇರಿದ ಜಾಗಕ್ಕೆ ರಕ್ಷಣೆ ನೀಡದ ಅಧಿಕಾರಿಗಳಿಗೆ ತರಾಟೆ, ದಾಖಲೆ ಇದ್ದರೂ ಖಾತೆ ಮಾಡಿಕೊಡದ ಕಂದಾಯ ಅಧಿಕಾರಿ ನಡೆಗೆ ಆಕ್ಷೇಪ . . .
    ಇವು ‘ಬಾಗಿಲಿಗೆ ಬಂತು ಸರ್ಕಾರ, ಸೇವೆ ಇರಲಿ ಸಹಕಾರ’ ಕಾರ್ಯಕ್ರಮದ 2ನೇ ಭಾಗವಾಗಿ ಯಲಹಂಕದಲ್ಲಿ ಶುಕ್ರವಾರ ಆಯೋಜಿಸಿದ್ದ ಜನಸ್ಪಂದನಾ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನಾಗರಿಕರಿಂದ ಅಹವಾಲು ಆಲಿಸಿ ನೀಡಿದ ಭರವಸೆ.

    ಡಿಸಿಎಂ ಸತತ ನಾಲ್ಕು ತಾಸು ಜನರಿಂದ ವಿವಿಧ ರೂಪದ ಅಹವಾಲು ಆಲಿಸಿದರು. 3 ಸಾವಿರಕ್ಕೂ ಹೆಚ್ಚು ದೂರುಗಳ ಪೈಕಿ ಬಿಬಿಎಂಪಿ, ಬಿಡಿಎ, ಕಂದಾಯ ಇಲಾಖೆಗೆ ಸಂಬಂಧಿಸಿದ್ದಾಗಿತ್ತು. ಹಲವು ಜನರು ಒಂದೇ ರೀತಿಯ ದೂರು ಸಲ್ಲಿಸಿದ್ದನ್ನು ಗಮನಿಸಿ, ಏನ್ರಿ ಈ ಭಾಗದಲ್ಲಿ ಇಷ್ಟೊಂದು ಸಮಸ್ಯೆ ಇದೆಯಾ? ದಾಖಲೆ ಇದ್ದರೂ ಖಾತೆ ಮಾಡಿಕೊಡಲು ನಿಮಗೆ (ಅಧಿಕಾರಿ ವರ್ಗ) ಏನು ಕಷ್ಟ. ಜನರನ್ನು ವೃಥಾ ಕಚೇರಿಗೆ ಏಕೆ ಅಲೆದಾಡಿಸುವಿರಿ ಎಂದು ತರಾಟೆಗೆ ತೆಗೆದುಕೊಂಡರು.

    ಇವುಗಳ ಮಧ್ಯೆ ಅಧಿಕ ಸಂಖ್ಯೆಯಲ್ಲಿ ಬಂದಿದ್ದ ಮಹಿಳೆಯರಿಗೆ ತಮಗೆ ಸರ್ಕಾರಿ ಮನೆ ಮಂಜೂರು ಮಾಡುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ, ಸರ್ಕಾರ ಈಗಾಗಲೇ ಹೆಚ್ಚಿನ ಜನರಿಗೆ ಮನೆ, ಸೈಟ್ ನೀಡಿದೆ. ನೀವೂ ಅರ್ಹರಿದ್ದಲ್ಲಿ ಖಂಡಿತಾ ಮನೆ ಕೊಡಲಾಗುವುದು. ಆದರೆ, ಅವುಗಳನ್ನು ಬೇರೆಯವರಿಗೆ ಮಾರಾಟ ಮಾಡಬೇಡಿ. ರೈತರು ಕೂಡ ಯಾರೋ ಜಮೀನು ಕಿತ್ತುಕೊಳ್ಳುತ್ತಾರೆ ಎಂಬ ಭಯದಲ್ಲಿ ಅನ್ಯರಿಗೆ ಬಿಟ್ಟುಕೊಡಬೇಡಿ. ಎಷ್ಟೇ ಒತ್ತಡ ಬಂದರೂ ನಿಮ್ಮ ಜಮೀನನ್ನು ನೀವೇ ಇಟ್ಟುಕೊಳ್ಳಿ. ರಕ್ಷಣೆ ಬೇಕಿದ್ದಲ್ಲಿ ಸಂಬಂಧಿಸಿದ ಕಚೇರಿಗೆ ಹೋಗಿ, ಇಲ್ಲವೇ ನನ್ನ ಬಳಿ ಬನ್ನಿ ಎಂದು ಸಾಂತ್ವನ ಹೇಳಿದರು.

    ಕಿರುಕುಳ ನೀಡಿದವನ ವಿರುದ್ಧ ಎಫ್ಐಆರ್ ಹಾಕಿ:

    ರಿಂಗ್ ರಸ್ತೆಯ ದೇವಿನಗರದ ನಿವಾಸಿ ಅನಸೂಯ ಕೃಷ್ಣೇಗೌಡ ತನ್ನ 6 ಚದರಡಿ ಸ್ವತ್ತನ್ನು ಅನ್ಯ ವ್ಯಕ್ತಿಯೊಬ್ಬ ಒತ್ತುವರಿ ಮಾಡಿ ಲಪಟಾಯಿಸಲು ಹುನ್ನಾರ ನಡೆಸಿದ್ದು, ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದರೂ ಯಾವುದೇ ಕ್ರಮ ಆಗಿಲ್ಲ ಎಂದು ಕಣ್ಣೀರು ಹಾಕಿದರು. ಸ್ವತ್ತಿನ ಅರ್ಧ ಭಾಗ ಮನೆ ಇದ್ದು, ಉಳಿದ ಭಾಗ ಬಿಟ್ಟುಕೊಡುವಂತೆ ಒತ್ತಡ ಹಾಕುತ್ತಿದ್ದಾರೆ. ಮನೆ ಖಾಲಿ ಮಾಡುವಂತೆ ಕಿಟಕಿ ಬಾಗಿಲು ಹೊಡೆದುಹಾಕಿದ್ದಾರೆ ಎಂದರು. ಇದಕ್ಕೆ ಸ್ಪಂದಿಸಿದ ಡಿಸಿಎಂ, ಯಾವುದೇ ಕಾರಣಕ್ಕೂ ನಿನ್ನ ಮನೆಯನ್ನು ಬಿಟ್ಟುಕೊಡಬೇಡ. ದಾಖಲೆಗಳನ್ನು ಭದ್ರವಾಗಿಟ್ಟುಕೊಳ್ಳಿ. ನಿನಗೆ ರಕ್ಷಣೆ ಕೊಡಿಸುತ್ತೇನೆ ಎಂದು ಧೈರ್ಯ ತುಂಬಿದರು. ಜತೆಗೆ ಹಿರಿಯ ಪೊಲೀಸ್ ಅಧಿಕಾರಿಯನ್ನು ಕರೆದು ಕಿರುಕುಳ ನೀಡಿದಾತನ ಮೇಲೆ ಎಫ್ಐಆರ್ ಹಾಕಿ ಮಹಿಳೆಗೆ ರಕ್ಷಣೆ ನೀಡುವಂತೆ ಸೂಚಿಸಿದರು.

    ಕಾರ್ಯಕ್ರಮದಲ್ಲಿ ಸಚಿವ ಕೃಷ್ಣಬೈರೇಗೌಡ, ಶಾಸಕರಾದ ಎಸ್​​.ಆರ್​. ವಿಶ್ವನಾಥ್​, ಎಸ್​.ಮುನಿರಾಜು, ಮೇಲ್ಮನೆ ಸದಸ್ಯ ಸೀತಾರಾಮ್, ಮಾಜಿ ಸಂಸದ ಪ್ರೊ.ರಾಜಿವ್​ ಗೌಡ, ನಗರಾಭಿವೃದ್ಧಿ ಇಲಾಖೆಯ ಎಸಿಎಸ್ ರಾಕೇಶ್‌ಸಿಂಗ್, ನಗರ ಜಿಲ್ಲಾಧಿಕಾರಿ ದಯಾನಂದ್, ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬಿಡಿಎ ಆಯುಕ್ತ ಎನ್.ಜಯರಾಂ, ಜಲಮಂಡಲಿ ಅಧ್ಯಕ್ಷ ಡಾ. ರಾಮ್ ಪ್ರಸತ್ ಹಾಗೂ ಇತರ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.

    ಜನರೇ ನಮ್ಮ ಪಾಲಿನ ದೇವರು. ಜನರ ಸಮಸ್ಯೆ ಸರ್ಕಾರದ ಸಮಸ್ಯೆ, ಜನರ ಪರಿಹಾರವೇ ರಾಜ್ಯದ ಪರಿಹಾರ. ಜನರ ಸೇವೆಗೆ ನಾವು ಸದಾ ಬದ್ಧ. ಜನ ನಮಗೆ ಅಧಿಕಾರ ನೀಡಿದ್ದು, ಅವರ ಋಣ ತೀರಿಸಲು ಜನಸ್ಪಂದನಾ ಕಾರ್ಯಕ್ರಮ ನಡೆಸಿ ಸಮಸ್ಯೆಗೆ ಪರಿಹಾರ ಒದಗಿಸುತ್ತಿದ್ದೇವೆ. ಕಾಲಮಿತಿಯಲ್ಲಿ ಅರ್ಜಿಗಳ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು.
    – ಡಿ.ಕೆ. ಶಿವಕುಮಾರ್, ಡಿಸಿಎಂ

    ಬಿಡಿಎಯಿಂದ ಕೆಂಪೇಗೌಡ ಲೇಔಟ್‌ನಲ್ಲಿ 20/30 ಅಡಿ ಸೈಟ್ ಮಂಜೂರಾಗಿತ್ತು. ಗಡುವಿನೊಳಗೆ ಹಣ ಪಾವತಿಸಿಲ್ಲವೆಂಬ ಕಾರಣಕ್ಕೆ ನಿವೇಶನ ನೋಂದಣಿ ಮಾಡಿಕೊಡುತ್ತಿಲ್ಲ. ಪತಿ ಅನಾರೋಗ್ಯಕ್ಕೆ ಈಡಾಗಿದ್ದು, ಪ್ರಾಧಿಕಾರಕ್ಕೆ ಹಲವು ಬಾರಿ ಅಲೆದಾಡಿದರೂ ಪರಿಹಾರ ಸಿಕ್ಕಿಲ್ಲ. ಈಗಲಾದರೂ ಡಿಸಿಎಂ ನಮ್ಮ ಅಹವಾಲಿಗೆ ಸ್ಪಂದಿಸಲಿ.
    – ಚಂದ್ರಕಾ, ಸುಂಕದಕಟ್ಟೆ (ದಾಸರಹಳ್ಳಿ ಕ್ಷೇತ್ರ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts