More

    ಮಗಳ ಭವಿಷ್ಯಕ್ಕೆ ಟೊಮ್ಯಾಟೊ ತುಲಾಭಾರ ನೆರವೇರಿಸಿದ ದಂಪತಿ

    ಪ್ರತಿ ವರ್ಷ ತರಕಾರಿ ಮತ್ತು ಅಂಕಪಲ್ಲಿ ಬೆಲ್ಲ ಬಳಕೆ ಈ ವರ್ಷ ಸುದ್ದಿಯಲ್ಲಿರುವ ಕಾರಣಕ್ಕೆ ಬದಲಾವಣೆ

    ಅಂಕಪಲ್ಲಿ (ಆಂಧ್ರ ಪ್ರದೇಶ): ಟೊಮ್ಯಾಟೊ ಬೆಲೆ ಏರಿಕೆ ನಂತರ ಏನೆಲ್ಲ ಅನಾಹುತಗಳಾಗಿವೆ. ಎಂತಹ ತಮಾಷೆ ಪ್ರಸಂಗಗಳು ವರದಿಯಾಗಿವೆ. ಎಷ್ಟು ಕೊಲೆಗಳಾಗಿವೆ ಎಂಬ ಸುದ್ದಿಗಳನ್ನು ಓದಿದ್ದೀರಿ. ಈಗ ತಮಾಷೆಯ ಪ್ರಕರಣಗಳ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದೆ. ದಂಪತಿ ತಮ್ಮ ಪುತ್ರಿ ಭವಿಷ್ಯಳ ಭವಿಷ್ಯ ಉಜ್ವಲವಾಗಲಿ ಎಂದು ಪ್ರಾರ್ಥಿಸಿ ಟೊಮ್ಯಾಟೊದಲ್ಲಿ ತುಲಾಭಾರ ಮಾಡಿದ್ದಾರೆ.

    ಮಲ್ಲ ಜಗ್ಗ ಅಪ್ಪಾ ರಾವ್ ಮತ್ತು ಮೋಹಿನಿ ಎಂಬ ದಂಪತಿ ತಮ್ಮ ಮಗಳು ಭವಿಷ್ಯಳ ಹೆಸರಿನಲ್ಲಿ ಟೊಮಾಟೊದಿಂದ ತುಲಾಭಾರ ಮಾಡಿಸಿದ್ದು ಈಗ ಆಂದ್ರಪ್ರದೇಶದಲ್ಲಿ ಮನೆ ಮಾತಾಗಿದೆ. ಅಂಕಪಲ್ಲಿಯ ಗಾವರ ವೀಧಿಯಲ್ಲಿರುವ ಶ್ರೀ ನೂಕಾಂಬಿಕಾ ಅಮ್ಮವಾರಿ ದೇವಸ್ಥಾನದಲ್ಲಿ ಈ ದಂಪತಿ, ಭವಿಷ್ಯಳ ತೂಕಕ್ಕೆ ಸಮನಾದ ಟೊಮ್ಯಾಟೊಗಳಿಂದ ತುಲಾಭಾರ ಮಾಡಿದ್ದಾರೆ. ಒಂದು ಕೆಜಿ ಟೊಮ್ಯಾಟೊ ಬೆಲೆ 150ರಿಂದ 200 ರೂಪಾಯಿವರೆಗೆ ಇದ್ದರೂ ವಾರ್ಷಿಕ ಸಾಂಪ್ರದಾಯಿಕ ತುಲಾಭಾರಕ್ಕೆ ಈ ಬಾರಿ ಬಹುರ್ಚಚಿತ ಟೊಮಾಟೊ ಬಳಸಲು ನಿರ್ಧರಿಸಿದ ದಂಪತಿ, ಪುತ್ರಿ ಭವಿಷ್ಯಳ ತೂಕದ 51 ಕೆಜಿ ಟೊಮಾಟೊ ಖರೀದಿಸಿ ವಿಧಿಯನ್ನು ಪೂರೈಸಿದರು.

    ಪ್ರತಿ ವರ್ಷ ತರಕಾರಿ ಮತ್ತು ಸ್ಥಳೀಯವಾಗಿ ಜನಪ್ರಿಯವಾದ ಅಂಕಪಲ್ಲಿ ಬೆಲ್ಲದಿಂದ ತುಲಾಭಾರ ನಡೆಸುತ್ತಿದ್ದು ಈ ಬಾರಿ ಬಹಳ ದುಬಾರಿಯಾಗಿರುವ ಟೊಮಾಟೊ ಬಳಸಲು ಸಂಕಲ್ಪ ಮಾಡಿದ್ದಾಗಿ ಅಪ್ಪಾ ರಾವ್ ಹೇಳಿದ್ದಾರೆ. ತುಲಾಭಾರ ಮಾಡಿರುವ ಟೊಮ್ಯಾಟೊವನ್ನು ಅನ್ನದಾನದಲ್ಲಿ ಬಳಸುವಂತೆ ಅವರು ದೇವಸ್ಥಾನದ ಅಧಿಕಾರಿಗಳನ್ನು ಕೋರಿದ್ದಾರೆ.

     ಇನ್ನೂ ಹೆಚ್ಚು ಸಬ್ಸಿಡಿ

    ಬೆಲೆಯೇರಿಕೆಯಿಂದ ಕಂಗಾಲಾಗಿರುವ ಗ್ರಾಹಕರಿಗೆ ಸಬ್ಸಿಡಿ ದರದಲ್ಲಿ ಒದಗಿಸಲಾಗುತ್ತಿರುವ ಟೊಮಾಟೊ ಬೆಲೆಯನ್ನು ಕೇಂದ್ರ ಸರ್ಕಾರ ಇನ್ನಷ್ಟು ತಗ್ಗಿಸಿ ಜನರ ಹೊರೆಯನ್ನು ಸ್ಪಲ್ಪ ಮಟ್ಟಿಗೆ ಕಡಿಮೆ ಮಾಡಿ ಸಮಾಧಾನ ಪಡುವಂತೆ ಮಾಡಿದೆ. ಕೆಲವು ದಿನಗಳಿಂದ ಒಂದು ಕೆಜಿಗೆ 80 ರೂಪಾಯಿ ಸಬ್ಸಿಡಿ ದರದಲ್ಲಿ ಟೊಮಾಟೊವನ್ನು ಪೂರೈಸಲಾಗುತ್ತಿದ್ದು ಇದೀಗ 70 ರೂಪಾಯಿಗೆ ಇಳಿಸಲಾಗಿದೆ.

     ದುಬೈನಿಂದ ಬಂದ ಉಡುಗೊರೆ

    ಅನೇಕ ಪ್ರಸಂಗಗಳಲ್ಲಿ ಸ್ನೇಹಿತರು, ಬಂಧುಗಳಿಗೆ ಏನು ಉಡುಗೊರೆ ಕೊಡಬೇಕು ಎಂಬ ಚಿಂತೆ ಕಾಡುವುದು ಸಹಜ. ಉಡುಗೊರೆ ಕೊಡಲು ಕಾರಣವೇ ಬೇಕು ಎಂದೇನಿಲ್ಲ. ದುಬೈಯಲ್ಲಿರುವ ಮಹಿಳೆ ಭಾರತದಲ್ಲಿರುವ ತನ್ನ ತಾಯಿಗೆ 10 ಕೆಜಿ ಟೊಮ್ಯಾಟೊ ಉಡುಗೊರೆಯಾಗಿ ಕಳಿಸಿದ್ದಾರೆ. ಈ ಉಡುಗೊರೆ ಕಳುಹಿಸಲು ನಿರ್ಧಿಷ್ಟ ಕಾರಣ ಇಲ್ಲ. ಸಹೋದರಿ ಭಾರತಕ್ಕೆ ಬರುತ್ತಿದ್ದಾಳೆ. ನಿನಗೇನಾದರೂ ಕಳಿಸಬೇಕೇ ಎಂದು ಯುಎಇನಲ್ಲಿ ನೆಲೆಸಿರುವ ಮಗಳು ಭಾರತದಲ್ಲಿರುವ ತನ್ನ ತಾಯಿಗೆ ಕೇಳಿದ್ದಳು. ಆದರೆ ತಾಯಿಯ ಬೇಡಿಕೆ ಕೇಳಿ ಮಗಳಿಗೆ ಅಚ್ಚರಿಯಾಯಿತು. ಏಕೆಂದರೆ ಅರಬ್ ದೇಶದ ವಸ್ತುಗಳನ್ನೇನಾದರೂ ತಾಯಿ ಉಡುಗೊರೆ ಕೇಳಬಹುದು ಎಂದು ಮಗಳು ನಿರೀಕ್ಷೆಯಲ್ಲಿದ್ದಳು. ಆದರೆೆ ತಾಯಿ ಕೇಳಿದ್ದು ಟೊಮ್ಯಾಟೊ. ‘ಮಗಳೇ ನನಗೆ ಬೇರೇನೂ ಬೇಡ. 10 ಕೆಜಿ ಟೊಮ್ಯಾಟೊ ಕಳಿಸಿಕೊಡು’ ಎಂದು ಕೋರಿಕೆ ಸಲ್ಲಿಸಿದ್ದಳು. ಅಮ್ಮನ ವಿನಂತಿಗೆ ಸ್ಪಂದಿಸಿದ ಮಗಳು, ಮಾರುಕಟ್ಟೆಯಿಂದ 10 ಕೆಜಿ ಟೊಮ್ಯಾಟೊ ಖರೀದಿಸಿ ಸೂಟ್​ಕೇಸ್​ನಲ್ಲಿಟ್ಟು ಸೋದರಿಯೊಂದಿಗೆ ಭಾರತಕ್ಕೆ ಕಳಿಸಿದ್ದಾಳೆ.

     ಇದುವರೆಗಿನ ಅವಾಂತರಗಳು

    • ಪತಿ ತನ್ನನ್ನು ಕೇಳದೆಯೇ ಸಾಂಬಾರಿಗೆ 2 ಟೊಮ್ಯಾಟೊ ಬಳಸಿದ ಎಂದು ಮುನಿಸಿಕೊಂಡು ಸಹೋದರಿ ಮನೆಗೆ ಹೋಗಿದ್ದ ಪುಟ್ಟ ಹೋಟೆಲ್ ಮಾಲೀಕನ ಪತ್ನಿ. ಕಡೆಗೆ 2 ಕೆಜಿ ಟೊಮ್ಯಾಟೊ ಕೊಟ್ಟು ಪತ್ನಿಯನ್ನು ಪೊಲೀಸ್ ಮಧ್ಯಸ್ಥಿಕೆಯಲ್ಲಿ ವಾಪಸ್ ಮನೆಗೆ ಕರೆತಂದ ಹೋಟೆಲ್ ಮಾಲೀಕ.
    • ಟೊಮ್ಯಾಟೋ ಮಾರಾಟ ಮಾಡಿ ದೊಡ್ಡ ಮೊತ್ತದ ಹಣ ಗಳಿಸಿದ ರೈತ ಹಾಗೂ ಹೊಲದಲ್ಲಿ ಟೊಮ್ಯಾಟೊ ಕಾವಲು ಕಾಯುತ್ತಿದ್ದ ರೈತನ ಹತ್ಯೆ
    • ದುಬಾರಿ ಬೆಲೆಯ ಟೊಮ್ಯಾಟೊ ಕಾವಲು ಕಾಯಲು ಭದ್ರತಾ ಸಿಬ್ಬಂದಿ ನೇಮಕ ಮಾಡಿಕೊಂಡಿದ್ದ ಮಾರಾಟಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts