More

    ವಿಜೃಂಭಣೆಯಿಂದ ನಡೆದ ಬೆಂಗಳೂರು ಕರಗ ಉತ್ಸವ: ಧರೆಗಿಳಿದ ದ್ರೌಪದಿ… ಅಪೂರ್ವ ಸಂದರ್ಭಕ್ಕೆ ಬಿಡುವು ಕೊಟ್ಟ ಮಳೆರಾಯ

    ಬೆಂಗಳೂರು: ಝಗಮಗಿಸುವ ಬೆಳಕು, ಎಲ್ಲಿ ನೋಡಿದಲ್ಲಿ ಜನಸಾಗರ.. ಎಲ್ಲರ ಮೊಗದಲ್ಲೂ ಭಕ್ತಭಾವ.. ಗೆಜ್ಜೆನಾದ.. ಜಾನಪದ ಕಲಾ ತಂಡಗಳ ಪ್ರದರ್ಶನ.. ಓಲಗದ ಸದ್ದು.. ‘ಗೋವಿಂದ… ಗೋವಿಂದ…’ ನಾಮಸ್ಮರಣೆ… ಚೈತ್ರ ಪೌಣಿರ್ಮೆಯ ಶನಿವಾರ ತಡರಾತ್ರಿ ತಿಗಳರಪೇಟೆ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಕಂಡುಬಂದ ಚಿತ್ರಣವಿದು. ಕರೊನಾ ಕಾರಣದಿಂದ 2 ವರ್ಷದಿಂದ ಕಳೆಗುಂದಿದ್ದ ಐತಿಹಾಸಿಕ ಬೆಂಗಳೂರು ಕರಗ ಉತ್ಸವ ಈ ಭಾರಿ ವಿಜೃಂಭಣೆಯಿಂದ ನಡೆಯಿತು.

    ಧರ್ಮರಾಯಸ್ವಾಮಿ ದೇವಸ್ಥಾನದಿಂದ ನಸುಕಿನ 2.40ಕ್ಕೆ ಕರಗ ಹೊರಬರುತ್ತಿದ್ದಂತೆ ಭಕ್ತರ ಹಷೋದ್ಘಾರ ಮುಗಿಲು ಮುಟ್ಟಿತು. ನಗರದ ನಾಲ್ಕೂ ದಿಕ್ಕಿನಲ್ಲಿ ಮೆರವಣಿಗೆ ಸಾಗಿ ಬೆಳಗ್ಗೆ 10 ಗಂಟೆಗೆ ದೇವಾಲಯ ಸೇರುವ ಮೂಲಕ ವಿಶ್ವಪ್ರಸಿದ್ಧ ಕರಗ ಶಕ್ತ್ಯೋತ್ಸವ ಸಂಪನ್ನಗೊಂಡಿತು. ನಾಲ್ಕು ದಿನಗಳಿಂದ ಸುರಿಯುತ್ತಿದ್ದ ಮಳೆರಾಯ ಈ ಅಪೂರ್ವ ಸಂದರ್ಭಕ್ಕೆ ಬಿಡುವು ನೀಡಿದ್ದು ವಿಶೇಷ.

    ಶನಿವಾರ ಸಂಜೆ ಸುರಿದ ಭಾರಿ ಮಳೆ ನಡುವೆಯೂ ಧರ್ಮರಾಯಸ್ವಾಮಿ ದೇವಸ್ಥಾನ ದೇವಾಲಯದಲ್ಲಿ ಹೋಮ ಹವನ ಸೇರಿ ಧಾಮಿರ್ಕ ವಿಧಿವಿಧಾನಗಳು ಸಾಂಗವಾಗಿ ನಡೆದವು. ಇಕ್ಕಟ್ಟಾದ ಬೀದಿಗಳಲ್ಲಿ ಜನಸಾಗರ ತುಂಬಿ ತುಳುಕುತ್ತಿತ್ತು. ಕರಗ ಪೂಜಾ ವಿಧಿ ವಿಧಾನಗಳು ತಡವಾದ್ದರಿಂದ ಹೂವಿನಿಂದ ಅಲಂಕೃತಗೊಂಡಿದ್ದ ಕರಗಧಾರಿ ಜ್ಞಾನೇಂದ್ರ ನಸುಕಿನ 3.08ರ ಹೊತ್ತಿಗೆ ಮೂರು ಪ್ರದಕ್ಷಿಣೆ ಹಾಕಿ ಮೆರವಣಿಗೆ ಶುರುಮಾಡಿದರು. ಈ ವೇಳೆ ದರ್ಶನಕ್ಕಾಗಿ ಕಾಯುತ್ತಿದ್ದ ಭಕ್ತರು 11ನೇ ಬಾರಿ ಕರಗ ಹೊತ್ತ, 44 ವರ್ಷದ ಜ್ಞಾನೇಂದ್ರ ಬಿನ್​ ಅರ್ಜುನಪ್ಪ ಅವರ ಮೇಲೆ ಹೂವಿನ ಮಳೆಗರೆದರು.

    ಧರ್ಮರಾಯಸ್ವಾಮಿ ದೇವಸ್ಥಾನದಿಂದ ಹಲಸೂರುಪೇಟೆ ಆಂಜನೇಯ ಮತ್ತು ಪ್ರಸನ್ನ ಗಂಗಾಧರೇಶ್ವರಸ್ವಾಮಿ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಿ ಮುಂದೆ ಸಾಗಿತು. ಹೂವು ಮತ್ತು ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದ ಈ ರಥದೊಂದಿಗೆ ಉತ್ಸವಮೂರ್ತಿಗಳ ಮೆರವಣಿಗೆ ಸಾಗಿತು. ವೀರಕುಮಾರರು ರಕ್ಷಕರಾಗಿ ನಿದಿರ್ಷ್ಟ ಸ್ಥಳಗಳಲ್ಲಿ ಅಲಗು ಸೇವೆ ಮಾಡುತ್ತ ಕರಗದೊಂದಿಗೆ ಸಾಗಿದರು. ಕರಗಧಾರಿಗಳ ಸ್ವಾಗತಕ್ಕೆ ಮನೆಗಳ ಮುಂದೆ ರಂಗೋಲಿ, ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು. ನಗರ್ತಪೇಟೆಯ ವೇಣುಗೋಪಾಲಸ್ವಾಮಿ, ಸಿದ್ದಣ್ಣ ಗಲ್ಲಿಯ ಭೈರೇಶ್ವರ ದೇವಸ್ಥಾನ, ಕಬ್ಬನ್​ಪೇಟೆಯ ರಾಮಸೇವಾ ಮಂದಿರ, ಬಸವನಗುಡಿ, ಗಾಣಿಗರಪೇಟೆಯ ಚನ್ನರಾಯಸ್ವಾಮಿ, ಚಾಮುಂಡೇಶ್ವರಿ ದೇವಸ್ಥಾನದ ಮೂಲಕ ನಗರದ ನಾಲ್ಕೂ ದಿಕ್ಕುಗಳಲ್ಲಿ ಕರಗ ಸಂಚರಿಸಿತು.

    ವಿಜೃಂಭಣೆಯಿಂದ ನಡೆದ ಬೆಂಗಳೂರು ಕರಗ ಉತ್ಸವ: ಧರೆಗಿಳಿದ ದ್ರೌಪದಿ... ಅಪೂರ್ವ ಸಂದರ್ಭಕ್ಕೆ ಬಿಡುವು ಕೊಟ್ಟ ಮಳೆರಾಯ

    ಧರೆಗಿಳಿಯುವ ದ್ರೌಪದಿದೇವಿ: ತ್ರಿಪುರಾಸುರನೆಂಬ ರಾಕ್ಷಸನು ಲೋಕಕಂಟಕನಾಗಿ ಮೆರೆಯುತ್ತಿದ್ದು, ಅವನ ಸಂಹಾರಕ್ಕಾಗಿ ದ್ರೌಪದಿ ಶಕ್ತಿದೇವತೆಯ ಅವತಾರ ತಾಳಿದಳು ಎಂಬ ಪ್ರತೀತಿ ಇದೆ. ರಾಕ್ಷಸ ಸಂಹಾರದ ವೇಳೆ ಈಗಿನ ವೀರಕುಮಾರರನ್ನು ದ್ರೌಪದಿಯು ಸೈನಿಕ ಪಡೆಯನ್ನೂ ಸೃಷ್ಟಿಸಿಕೊಂಡಿದ್ದಳಂತೆ. ಯುದ್ಧ ಮುಗಿದ ಬಳಿಕ ದ್ರೌಪದಿ ಲೋಕಕಲ್ಯಾಣ ಮುಗಿಸಿ ಪೂರ್ವಾಶ್ರಮಕ್ಕೆ ತೆರಳುವಾಗ ವೀರಕುಮಾರರಿಗೆ ದುಃಖವಾಗುತ್ತದೆ. ಆಗ ಪ್ರತಿ ಸಂವತ್ಸರದ ಮೊದಲ ಹುಣ್ಣಿಮೆಯಂದು ನಿಮ್ಮಲ್ಲಿಗೆ ಬರುತ್ತೇನೆಂದು ಹೇಳುತ್ತಾಳೆ. ಹೀಗಾಗಿ, ಚೈತ್ರ ಮಾಸದ ಮೊದಲ ಹುಣ್ಣಿಮೆಯ ದಿನ ದ್ರೌಪದಿ ಧರೆಗಿಳಿದು ಬರುತ್ತಾಳೆ ಎಂಬುದು ಭಕ್ತರ ನಂಬಿಕೆ. ಈ ಸಂದರ್ಭದಲ್ಲಿ ಕರಗ ಮಹೋತ್ಸವ ಆಚರಿಸಲಾಗುತ್ತದೆ.

    2 ವರ್ಷಗಳ ಬಳಿಕ ಮರುಕಳಿಸಿದ ವೈಭವ: ಕೋವಿಡ್​ನಿಂದ ಕಳೆದ ಎರಡು ವರ್ಷ ದೇವಸ್ಥಾನಕ್ಕೆ ಸೀಮಿತಗೊಂಡು ಪೂಜೆ-ಪುನಸ್ಕಾರ ಮತ್ತು ಹೋಮ ಹವನಗಳೊಂದಿಗೆ ಸರಳವಾಗಿ ನಡೆದಿದ್ದ ಕರಗ ಮಹೋತ್ಸವ, ಈ ವರ್ಷ ಅದ್ದೂರಿಯಾಗಿ ನಡೆಯಿತು. ಉತ್ಸವ ಸಾಗಿದ ರಸ್ತೆಗಳಲ್ಲಿ ಸಾಲುಗಟ್ಟಿ ನಿಂತಿದ್ದ ಭಕ್ತರು ಕರಗದ ದರ್ಶನ ಪಡೆದು, ವಿವಿಧ ಬಗೆಯ ಹೂಗಳನ್ನು ಅರ್ಪಿಸಿದರು. ರಾಜ್ಯದ ವಿವಿಧೆಡೆ ಹಾಗೂ ನೆರೆ ರಾಜ್ಯಗಳಿಂದಲೂ ಭಕ್ತರು ಆಗಮಿಸಿ ಕೃತಾರ್ಥ ಭಾವ ಅನುಭವಿಸಿದರು.

    ಮಸ್ತಾನ್​ಸಾಬ್​ ದರ್ಗಾಗೂ ಭೇಟಿ: “ಕರಗ ಮೆರವಣಿಗೆ ಅಕ್ಕಿಪೇಟೆಯಲ್ಲಿರುವ ಮಸ್ತಾನ್​ ಸಾಬ್​ ದರ್ಗಾಕ್ಕೆ ಹೋಗದಂತೆ ತಡೆಯುತ್ತೇವೆ” ಎಂದು ಕೆಲವರು ಹೇಳಿಕೆ ನೀಡಿದ್ದರಿಂದ ಈ ವಿಚಾರದಲ್ಲಿ ಆತಂಕ ನಿರ್ಮಾಣವಾಗಿತ್ತು. ಆದರೆ ಪೊಲೀಸರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಹಾಗೆ ಹೇಳಿಕೆ ನೀಡಿದವರೊಂದಿಗೆ ಚರ್ಚೆ ನಡೆಸಿ ಧಾರ್ಮಿಕ ಆಚರಣೆಗೆ ಚ್ಯುತಿ ತರದಂತೆ ಎಚ್ಚರಿಕೆ ನೀಡಿದ್ದರು. ಶನಿವಾರ ತಡರಾತ್ರಿ ಹೊರಟ ಕರಗ ಮೆರವಣಿಗೆ ಹಿಂದಿನ ಸಂಪ್ರದಾಯದಂತೆ ಮಸ್ತಾನ್​ಸಾಬ್​ ದರ್ಗಾಕ್ಕೆ ಭೇಟಿ ನೀಡಿತು. ಈ ಮೂಲಕ ಕರಗ ಮಹೋತ್ಸವ ಭಾವೈಕ್ಯತೆಗೆ ಸಾಕ್ಷಿಯಾಯಿತು.

    ಉಕ್ಕಿಬಂದ ‘ಅಪ್ಪು’ ನೆನಪು: ನಟ ಪುನೀತ್​ ರಾಜ್​ಕುಮಾರ್​ ಅಗಲಿಕೆಯನ್ನು ಅವರ ಅಭಿಮಾನಿಗಳಿಗೆ ಈಗಲೂ ಅರಗಿಸಿಕೊಳ್ಳಲಾಗುತ್ತಿಲ್ಲ. ಅದರ ಪ್ರತೀಕವೆಂಬಂತೆ ರಾಜ್ಯದಲ್ಲೆಡೆ ನಡೆಯುವ ಜಾತ್ರೆ, ಉತ್ಸವಗಳಲ್ಲಿ “ಅಪ್ಪು” ಭಾವಚಿತ್ರ ಪ್ರದರ್ಶಿಸಿ ತಮ್ಮ ನೆಚ್ಚಿನ ನಟನಿಗೆ ಗೌರವ ಸಲ್ಲಿಸುತ್ತ ಅವರ ನೆನಪನ್ನು ಸಂಭ್ರಮಿಸುತ್ತಿದ್ದಾರೆ. ಕರಗ ಉತ್ಸವದಲ್ಲೂ ಅದು ಮರುಕಳಿಸಿದ್ದು ವಿಶೇಷ. ವೀರಕುಮಾರರು ಪುನೀತ್​ ಫೋಟೋ ಪ್ರದರ್ಶಿಸಿ, ಜೈಕಾರ ಹಾಕುತ್ತಿದ್ದರು.

    ಉತ್ಸವ ಇಂದು ಸಂಪನ್ನ: ಭಾನುವಾರ ಇಡೀ ದಿನ ಕರಗ ಉತ್ಸವದಲ್ಲಿ ಗಾವು ನಡೆಯುತ್ತದೆ. ಅಂದರೆ ಪೋತರಾಜನಿಗೆ ಶಾಂತಿ ಪೂಜೆ ಮಾಡಲಾಗುತ್ತದೆ. ನಂತರ ಸೋಮವಾರ ರಾತ್ರಿ ಕರಗದ ಧ್ವಜಸ್ಥಾಪನೆ ಮಾಡಿದ ಮಾದರಿಯಲ್ಲಿಯೇ ಧ್ವಜಾವರೋಹಣ ಮೂಲಕ ಉತ್ಸವವನ್ನು ಸಂಪನ್ನಗೊಳಿಸಲಾಗುತ್ತದೆ. ಒಟ್ಟಾರೆ 11 ದಿನಗಳ ಮಹೋತ್ಸವದಲ್ಲಿ 6 ದಿನಗಳ ಕಾಲ ವೀರಕುಮಾರರು ಮತ್ತು ಎಲ್ಲ ಅರ್ಚಕರು ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿರುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts