More

    ಮಹಿಳಾ ಆಯೋಗದ ಕಚೇರಿಗೆ ಬೀಗ ಜಡಿದು ಎಎಪಿ ಪ್ರತಿಭಟನೆ: ಪ್ರಮೀಳಾ ನಾಯ್ಡು ವಜಾಗೆ ಆಗ್ರಹ

    ಬೆಂಗಳೂರು: ರಾಜ್ಯದಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದರೂ ಮಹಿಳಾ ಆಯೋಗ ಕಣ್ಮುಚ್ಚಿ ಕುಳಿತಿದೆ ಎಂದು ಆರೋಪಿಸಿ ಆಯೋಗದ ಕಚೇರಿಗೆ ಮಂಗಳವಾರ ಬೀಗ ಜಡಿದ ಆಮ್‌ ಆದ್ಮಿ ಪಾರ್ಟಿ, ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿತು.

    ಬೆಂಗಳೂರು ನಗರ ಆಮ್‌ ಆದ್ಮಿ ಪಾರ್ಟಿಯ ಮಹಿಳಾ ಘಟಕದ ಅಧ್ಯಕ್ಷೆ ಕುಶಲಾ ಸ್ವಾಮಿ ಮಾತನಾಡಿ, ರಾಜ್ಯದಲ್ಲಿ ತಿಂಗಳಿಗೆ ಸರಾಸರಿ 42 ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿವೆ. 2018ರ ಜನವರಿಯಿಂದ 2021ರ ಜುಲೈವರೆಗೆ ರಾಜ್ಯದಲ್ಲಿ 1,759 ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. 2021ರ ಮೊದಲ 7 ತಿಂಗಳಲ್ಲೇ 307 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಅದೇ ಅವಧಿಯಲ್ಲಿ 1,300 ಆರೋಪಿಗಳ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದ್ದರೂ ಶಿಕ್ಷೆಯಾಗಿರುವುದು 6 ಆರೋಪಿಗಳಿಗೆ ಮಾತ್ರ. ಇವೆಲ್ಲವನ್ನೂ ನೋಡಿಕೊಂಡು ಸುಮ್ಮನೆ ಕುಳಿತಿರುವ ಮಹಿಳಾ ಆಯೋಗದ ಅಧ್ಯಕ್ಷರಿಗೆ ನಾಚಿಕೆಯಾಗಬೇಕು ಎಂದರು.

    ಇತ್ತೀಚೆಗೆ ಬಿಡುಗಡೆಯಾದ ಎನ್‌ಸಿಆರ್‌ಬಿ ಮಾಹಿತಿ ಪ್ರಕಾರ, 2020ರಲ್ಲಿ ರಾಜ್ಯದಲ್ಲಿ 3,246 ಮಹಿಳೆಯರ ಮೇಲೆ ಹಲ್ಲೆ ಹಾಗೂ 47 ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. 8 ಮಹಿಳೆಯರನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಲಾಗಿದೆ. 178 ಮಹಿಳೆಯರು ವರದಕ್ಷಿಣೆ ಕಿರುಕುಳಕ್ಕೆ ಬಲಿಯಾಗಿದ್ದಾರೆ. ಮಾನಸಿಕ ಕಿರುಕುಳ ಹಾಗೂ ಬೆದರಿಕೆಗೆ ಹೆದರಿ 263 ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 6 ಮಹಿಳೆಯರ ಮೇಲೆ ಆಸಿಡ್‌ ದಾಳಿ ನಡೆದಿದೆ. ಅಶ್ಲೀಲ ವಿಡಿಯೋ ಚಿತ್ರೀಕರಣಕ್ಕೆ 55 ಹೆಣ್ಣು ಮಕ್ಕಳನ್ನು ಬಳಸಿಕೊಳ್ಳಲಾಗಿದೆ. ಈ ಪೈಕಿ ಮಹಿಳಾ ಆಯೋಗದ ಅಧ್ಯಕ್ಷರು ಎಷ್ಟು ಸಂತ್ರಸ್ತರನ್ನು ಭೇಟಿಯಾಗಿದ್ದಾರೆ? ಅವರು ಸಕ್ರಿಯರಾಗಲು ಇನ್ನೂ ಎಷ್ಟು ಮಹಿಳೆಯರು ಶೋಷಣೆಗೆ ಒಳಗಾಗಬೇಕು? ಎಂದು ಕುಶಲಾ ಸ್ವಾಮಿ ಆಕ್ರೋಶ ಹೊರಹಾಕಿದರು.

    ಮಹಿಳಾ ಆಯೋಗದ ಕಚೇರಿಗೆ ಬೀಗ ಜಡಿದು ಎಎಪಿ ಪ್ರತಿಭಟನೆ: ಪ್ರಮೀಳಾ ನಾಯ್ಡು ವಜಾಗೆ ಆಗ್ರಹ

    ಆಪ್ ಮುಖಂಡರಾದ ಉಷಾ ಮೋಹನ್‌ ಮಾತನಾಡಿ, ಪ್ರಮೀಳಾ ನಾಯ್ಡು ಅವರು ಆಯೋಗದ ಅಧ್ಯಕ್ಷರೋ ಅಥವಾ ಬಿಜೆಪಿಯ ಏಜೆಂಟರೋ ಎಂಬ ಅನುಮಾನ ಕಾಡುತ್ತಿದೆ. ಮಹಿಳಾ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದರೆ, ಪ್ರಕರಣಗಳು ಜನರ ಗಮನಕ್ಕೆ ಬಂದು ಸರ್ಕಾರದ ಮಾನ ಬೀದಿ ಪಾಲಾಗುತ್ತದೆ ಎಂಬ ಕಾರಣಕ್ಕೆ ಅವರು ನಿಷ್ಕ್ರಿಯರಾಗಿದ್ದಾರೆ. ಮಹಿಳೆಯರ ಬಗ್ಗೆ ಕಾಳಜಿ ಹೊಂದಿರುವ ದಿಟ್ಟ ಮಹಿಳೆಯ ನೇತೃತ್ವದಲ್ಲಿ ಆಯೋಗದ ಪುನಾರಚನೆ ಆಗಲಿ ಎಂದು ಆಗ್ರಹಿಸಿದರು.

    ಜಾರಕಿಹೊಳಿ ಪ್ರಕರಣದಲ್ಲಿ ವಿಡಿಯೋ ನಕಲಿ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದರು. ನಂತರ ಅದು ಹನಿಟ್ರಾಪ್‌ ಎಂದು ಜಾರಕಿಹೊಳಿಯವರೇ ಹೇಳಿದರು. ಇದರಿಂದ ವಿಡಿಯೋ ನಕಲಿ ಅಲ್ಲವೆಂದು ಸಾಬೀತಾದಂತಾಯಿತು. ಹಾಗಾದರೆ ವಿಡಿಯೋ ನಕಲಿ ಎಂದು ಬಿಜೆಪಿ ನಾಯಕರು ಹೇಳಿದ್ದೇಕೆ? ಅದು ಕಾಮುಕರನ್ನು ರಕ್ಷಿಸುವ ಪ್ರಯತ್ನವಲ್ಲವೇ? ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ಸರ್ಕಾರವು ಸಂತ್ರಸ್ತೆಯ ಪರ ನಿಲ್ಲಬೇಕು. ಆದರೆ ಅಧಿಕಾರ ದುರ್ಬಳಕೆ ಮಾಡಿಕೊಂಡು ಯುವತಿಯನ್ನು ಜಾರಕಿಹೊಳಿ ದುರ್ಬಳಕೆ ಮಾಡಿಕೊಂಡ ಪ್ರಕರಣದಲ್ಲಿ ಇಡೀ ಸರ್ಕಾರವೇ ಆರೋಪಿಯ ರಕ್ಷಣೆಗೆ ನಿಂತಿದೆ ಎಂದು ಎಎಪಿಯ ರಾಜ್ಯ ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡ ಕಿಡಿಕಾರಿದರು.

    ಆಮ್‌ ಆದ್ಮಿ ಪಾರ್ಟಿಯ ಕಚೇರಿ ಕಾರ್ಯದರ್ಶಿ ವೀಣಾ ಸೆರ್ರಾವ್‌ರವರು ಮಾತನಾಡಿ, ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ನಿಯಂತ್ರಿಸಲು ಬಳಕೆಯಾಗುತ್ತಿದ್ದ 71 ಸಾಂತ್ವನ ಕೇಂದ್ರಗಳನ್ನು ಏಪ್ರಿಲ್‌ನಲ್ಲಿ ಸ್ಥಗಿತಗೊಳಿಸಲಾಗಿದೆ. ರಾಜ್ಯದಲ್ಲಿದ್ದ 194 ಸಾಂತ್ವನ ಕೇಂದ್ರಗಳ ಪೈಕಿ 123 ಮಾತ್ರ ಪ್ರಸ್ತುತ ಕಾರ್ಯನಿರ್ವಹಿಸುತ್ತಿದೆ. ಜನಸಂಖ್ಯೆ ಜಾಸ್ತಿಯಿರುವ ಹಾಗೂ ಲೈಂಗಿಕ ಕಿರುಕುಳ ಪ್ರಕರಣಗಳ ಹೆಚ್ಚು ದಾಖಲಾಗುವ ಬೆಂಗಳೂರಿನಲ್ಲೇ ಎಲ್ಲ ಸಾಂತ್ವನ ಕೇಂದ್ರಗಳೂ ಸ್ಥಗಿತಗೊಂಡಿವೆ. ಕೇಂದ್ರ ಸರ್ಕಾರದ ಕೌಟುಂಬಿಕ ಸಲಹಾ ಕೇಂದ್ರಗಳು ನಿರುಪಯೋಗಿಯಾಗಿದ್ದು, ನೊಂದ ಮಹಿಳೆಯರಿಗೆ ಅಗತ್ಯವಿರುವ ಯಾವ ಸೇವೆಯೂ ಅಲ್ಲಿಲ್ಲ ಎಂದು ಬೇಸರ ವ್ಯಕ್ಯಪಡಿಸಿದರು.

    ಎಎಪಿ ಮುಖಂಡೆ ಪುಷ್ಪಾ ಕೇಶವ್‌ ಮಾತನಾಡಿ, ಅತ್ಯಾಚಾರದಂತಹ ಗಂಭೀರ ಪ್ರಕರಣಗಳಲ್ಲೂ ರಾಜಿ ಮಾಡಿಸಲು ಕೆಲ ಪೊಲೀಸರು ಮುಂದಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಒಂದು ವೇಳೆ ಎಫ್‌ಐಆರ್‌ ದಾಖಲಿಸಿಕೊಂಡರೂ ಆರೋಪಿ ವಿರುದ್ಧ ಸಾಕ್ಷಿ ಸಂಗ್ರಹಕ್ಕೆ ಉದಾಸೀನ ತೋರುತ್ತಾರೆ ಎಂದು ಆರೋಪಿಸಿದರು.

    ಮುಖಂಡ ರಾಜಶೇಖರ್‌ ದೊಡ್ಡಣ್ಣ ಮಾತನಾಡಿ, ಮಹಿಳೆಯರು ಹಾಗೂ ಮಕ್ಕಳ ಮೇಲೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಸ್ವಲ್ಪವೂ ಕಾಳಜಿಯಿಲ್ಲ. 2014ರಲ್ಲಿ ಅವರ ಕ್ಷೇತ್ರ ತೀರ್ಥಹಳ್ಳಿಯಲ್ಲಿ ನಡೆದ ನಂದಿತಾ ಪ್ರಕರಣದಲ್ಲೇ ಇದು ಸಾಬೀತಾಗಿದೆ. ನಂದಿತಾ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಸಲ್ಲದ ಕಥೆಕಟ್ಟಿ ಕೋಮುಗಲಭೆ ಸೃಷ್ಟಿಸಲು ಯತ್ನಿಸಿದ ಕೆಟ್ಟ ಹಿನ್ನೆಲೆ ಅವರಿಗೆ ಇದೆ. ಅಂಥವರು ರಾಜ್ಯದ ಗೃಹಸಚಿವರಾಗಿರುವುದು ದುರಂತ ಎಂದು ಕಿಡಿಕಾರಿದರು.

    ಆಮ್‌ ಆದ್ಮಿ ಪಾರ್ಟಿಯ ಮುಖಂಡರಾದ ಯೋಗಿತಾ ರೆಡ್ಡಿ, ಪ್ರಶಾಂತಿ, ಅಶೋಕ್‌ ಮತ್ಯುಂಜಯ, ಶಾಶಾವಲಿ, ಫಿರೋಜ್‌ ಖಾನ್ ಹಾಗೂ ಅನೇಕ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

    ಗಂಡಂದಿರನ್ನ ಕಳ್ಕೊಂಡು ತವರಿಗೆ ಬಂದ ಮಗಳ ಕಣ್ಣಿಗೆ ಬಿತ್ತು ತಾಯಿ-ದೊಡ್ಡಪ್ಪನ ಲವ್ವಿಡವ್ವಿ… ಮುಂದಾಗಿದ್ದು ದುರಂತ

    ಪ್ರಿಯಕರನ ಕೊಲ್ಲಲು ಮತ್ತೊಬ್ಬನೊಂದಿಗೆ ವಿವಾಹಿತೆಯ ಕಾಮದಾಟ: ಬೆಚ್ಚಿಬೀಳಿಸುತ್ತೆ ಇವಳ ಅಸಲಿ ಮುಖ!

    ರಾತ್ರಿಯಾದ್ರೂ ಪಾರ್ಕ್​ನಲ್ಲೇ ಇದ್ದ ಜೋಡಿ, ಬುದ್ಧಿ ಹೇಳಿದ ಪೊಲೀಸ್​ಗೆ ಹೀಗಾ ಮಾಡ್ಹೋದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts