ನವದೆಹಲಿ: ಸೋಮವಾರ (ಮಾರ್ಚ್ 25) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪ್ರಸಕ್ತ ಐಪಿಎಲ್ ಟೂರ್ನಿಯ 6ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) 4 ವಿಕೆಟ್ಗಳ ಗೆಲುವು ಸಾಧಿಸಿತು. ಕೊನೆಯ ಓವರ್ವರೆಗೂ ನಡೆದ ಈ ಪಂದ್ಯದಲ್ಲಿ ಆರ್ಸಿಬಿ ರೋಚಕ ಜಯ ಸಾಧಿಸಿತು.
ಇದೇ ಪಂದ್ಯದಲ್ಲಿ ಪಂಜಾಬ್ ಬ್ಯಾಟಿಂಗ್ ಮಾಡುವಾಗ ಆಟಗಾರನೊಬ್ಬನ ಅಬ್ಬರದ ಬ್ಯಾಟಿಂಗ್ ಎಲ್ಲರ ಗಮನ ಸೆಳೆಯಿತು. ಮೊದಲ ಇನ್ನಿಂಗ್ಸ್ ಕೊನೆಯ ಓವರ್ ಅನ್ನು ಆರ್ಸಿಬಿ ಸ್ಟಾರ್ ಬೌಲರ್ ಅಲ್ಜಾರಿ ಜೋಸೆಫ್ ಎಸೆದರು. ಈ ಓವರ್ನಲ್ಲಿ ಅಬ್ಬರ ಬ್ಯಾಟಿಂಗ್ ಮಾಡಿ 20 ರನ್ ಗಳಿಸಿದರು. ಆ ಬ್ಯಾಟರ್ ಹೆಸರು ಶಶಾಂಕ್ ಸಿಂಗ್. ಐಪಿಎಲ್ 2024ರ ಆವೃತ್ತಿಗಾಗಿ 2023, ಡಿಸೆಂಬರ್ 19ರಂದು ದುಬೈನಲ್ಲಿ ನಡೆದ ಹರಾಜಿನಲ್ಲಿ 32 ವರ್ಷದ ಆಲ್ರೌಂಡರ್ ಶಶಾಂಕ್ ಸಿಂಗ್ರನ್ನು ಪಂಜಾಬ್ ಕಿಂಗ್ಸ್ ಮ್ಯಾನೇಜ್ಮೆಂಟ್ ತಪ್ಪಾಗಿ ಖರೀದಿಸಿತು. ಆದರೆ ಈಗ ಪಂಜಾಬ್ ಪಾಲಿಗೆ ಶಶಾಂಕ್ ಬಲಿಷ್ಠ ಆಟಗಾರನಂತೆ ಕಾಣುತ್ತಿದ್ದಾರೆ.
ದೇಶೀಯ ಆಟಗಾರರ ಮಾರಾಟದ ಕೊನೇ ಸುತ್ತಿನಲ್ಲಿ ಶಶಾಂಕ್ ಸಿಂಗ್ ಎಂಬ ಆಟಗಾರ ಹರಾಜಿಗೆ ಬಂದಾಗ ಪಂಜಾಬ್ ಕಿಂಗ್ಸ್ ತಂಡದ ಸಹ-ಮಾಲಕಿ ಪ್ರೀತಿ ಝಿಂಟಾ 20 ಲಕ್ಷ ರೂ. ಮೂಲಬೆಲೆಗೆ ಬಿಡ್ ಸಲ್ಲಿಸಿದರು. ಆದರೆ ಆ ಶಶಾಂಕ್ ಸಿಂಗ್ ತಾನು ಕಣ್ಣಿಟ್ಟಿದ್ದ ಆಟಗಾರ ಅಲ್ಲ ಎಂಬುದು ಪಂಜಾಬ್ ತಂಡಕ್ಕೆ ಬಿಡ್ ಪ್ರಕ್ರಿಯೆ ಮುಗಿದ ನಂತರ ಗೊತ್ತಾಯಿತು. ಹರಾಜುಗಾರ್ತಿ ಮಲ್ಲಿಕಾ ಸಾಗರ್ಗೆ ಪಂಜಾಬ್ ತಂಡ ಈ ಬಗ್ಗೆ ಮಾಹಿತಿ ನೀಡಿದರೂ, ಅವರು ಬಿಡ್ ವಾಪಸ್ ಪಡೆಯಲು ಅಥವಾ ಶಶಾಂಕ್ ಸಿಂಗ್ರನ್ನು ಮರು ಹರಾಜಿಗೆ ಒಳಪಡಿಸಲು ನಿರಾಕರಿಸಿದರು.
ಅಂದಹಾಗೆ ಪಂಜಾಬ್ ತಂಡ ಬಿಡ್ ಸಲ್ಲಿಸಿದ್ದು ಛತ್ತೀಸ್ಗಢದ 32 ವರ್ಷದ ಆಲ್ರೌಂಡರ್ ಶಶಾಂಕ್ ಸಿಂಗ್ಗೆ ಆಗಿತ್ತು. ಆದರೆ ಅದು ಖರೀದಿಸಲು ಬಯಸಿದ್ದು ಬಂಗಾಳದ 20 ವರ್ಷದ ಬ್ಯಾಟರ್ ಶಶಾಂಕ್ ಸಿಂಗ್ ಆಗಿತ್ತು. ಅವರೂ 20 ಲಕ್ಷ ರೂ. ಮೂಲಬೆಲೆ ಹೊಂದಿದ್ದರು. ಆದರೆ ಹರಾಜಿನಲ್ಲಿ ಗೊಂದಲ ಮಾಡಿಕೊಂಡಿರುವ ವರದಿಯನ್ನು ತಳ್ಳಿಹಾಕಿದ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ, ತನಗೆ ಬೇಕಾದ ಆಟಗಾರನನ್ನೇ ಖರೀದಿಸಿರುವುದಾಗಿ ಸ್ಪಷ್ಟನೆ ನೀಡುವ ಮೂಲಕ ಮುಜಗರಕ್ಕೀಡಾಗುವುದನ್ನು ತಪ್ಪಸಿಕೊಂಡಿತು.
ಇದೇ ಶಶಾಂಕ್ ಸಿಂಗ್ರನ್ನು 2019ರಲ್ಲಿ ರಾಜಸ್ಥಾನ ರಾಯಲ್ಸ್ 30 ಲಕ್ಷ ರೂ.ಗೆ ಖರೀದಿ ಮಾಡಿತ್ತು. 2020 ಆವೃತ್ತಿಯಲ್ಲೂ ಅದೇ ತಂಡದಲ್ಲಿ ಮುಂದುವರಿದಿದ್ದರು. ಆದರೆ, ಎರಡೂ ಸೀಸನ್ನಲ್ಲೂ ಶಶಾಂಕ್ಗೆ ಆಡಲು ಅವಕಾಶ ಸಿಗಲಿಲ್ಲ. 2022ರಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ 20 ಲಕ್ಷಕ್ಕೆ ಶಶಾಂಕ್ರನ್ನು ಖರೀದಿ ಮಾಡಿತ್ತು. ಈ ಸೀಸನ್ನಲ್ಲಿ 10 ಪಂದ್ಯಗಳನ್ನು ಆಡಿದ್ದ ಶಶಾಂಕ್ ಕೇವಲ 69 ರನ್ ಗಳಿಸಿದ್ದರು. ಈ ವಿಚಾರ ತಿಳಿದು ಪಂಜಾಬ್ ಕೂಡ ಬೇಸರ ಮಾಡಿಕೊಂಡಿದೆ. ಆದರೆ, ಅದನ್ನು ಹೊರಗೆ ತೋರಿಸಿಕೊಂಡಿಲ್ಲ.
ಪ್ರಸಕ್ತ ಐಪಿಎಲ್ ಹರಾಜಿನಲ್ಲಿ ಶಶಾಂಕ್ ತಪ್ಪಾಗಿ ಪಂಜಾಬ್ ತಂಡಕ್ಕೆ ಸೇರಿದರು. ಆದರೆ, ಸೋಮವಾರ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಧೂಳೆಬ್ಬಿಸಿದರು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ 19 ಓವರ್ಗಳ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತ್ತು. ಇದು ದೊಡ್ಡ ಸ್ಕೋರ್ ಅಲ್ಲ. ಆದರೆ, ಆರ್ಸಿಬಿ ಸ್ಟಾರ್ ಬೌಲರ್ ಅಲ್ಜಾರಿ ಜೋಸೆಫ್ ಎಸೆದ ಕೊನೆಯ ಓವರ್ನ ಮೊದಲ ಮತ್ತು ಮೂರನೇ ಎಸೆತದಲ್ಲಿ ಶಶಾಂಕ್ ಸಿಕ್ಸರ್ ಸಿಡಿಸಿದರು. ಅಲ್ಲದೆ, ನಾಲ್ಕನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಪಂಜಾಬ್ ತಂಡ ಬೃಹತ್ ಸ್ಕೋರ್ ಗಳಿಸುವ ನೆರವಾದರು. ಶಶಾಂಕ್ ಒಂದೇ ಓವರ್ನಲ್ಲಿ 20 ರನ್ ಗಳಿಸಿದರು. ವೈಯಕ್ತಿಕವಾಗಿ 21 ರನ್ ಗಳಿಸಿ ಅಜೇಯರಾಗಿ ಉಳಿದರು.
ಇದೀಗ ಬೈ ಮಿಸ್ಟೇಕ್ ಆಗಿ ಖರೀದಿಸಿದರೂ ಒಳ್ಳೆಯದೇ ಆಯಿತು ಎಂದು ಪಂಜಾಬ್ ಕಿಂಗ್ಸ್ ಖುಷಿಯಾಗಿದೆ. ಆದರೆ, ಆರ್ಸಿಬಿ ವಿರುದ್ಧ ಗೆಲುವು ಸಾಧಿಸಿದ್ದರೆ ಶಶಾಂಕ್ ಆಡಿದ ಇನ್ನಿಂಗ್ಸ್ ಇನ್ನೂ ಫೇಮಸ್ ಆಗುತ್ತಿತ್ತು. (ಏಜೆನ್ಸೀಸ್)
ಐಪಿಎಲ್ ಹರಾಜಿನಲ್ಲಿ ಯಾಮಾರಿತೇ ಪಂಜಾಬ್ ಕಿಂಗ್ಸ್? ತಪ್ಪಾಗಿ ಬೇರೆ ಆಟಗಾರನಿಗೆ ಬಿಡ್; ಒಂದೇ ಹೆಸರಿನಿಂದ ಗೊಂದಲ!
ಕ್ರಿಕೆಟ್ ಬಿಟ್ಟು 2 ತಿಂಗಳು ಕೊಹ್ಲಿ ಹೇಗಿದ್ರು ಗೊತ್ತಾ? ನಿಜಕ್ಕೂ ಅದ್ಭುತ ಅನುಭವ ಎಂದ ವಿರಾಟ್
ರೋಹಿತ್ಗೆ ವರವಾಯ್ತು ಮುಂಬೈ ಇಂಡಿಯನ್ಸ್ ನಾಯಕತ್ವ ಬದಲಾವಣೆ! ಇದಕ್ಕಿಂತ ಸಾಕ್ಷಿ ಬೇಕಾ?