More

    90 ಜನ ಗುಣ, 85 ಮಂದಿಗೆ ಸೋಂಕು

    ಕಾರವಾರ ಜಿಲ್ಲೆಯಲ್ಲಿ ಭಾನುವಾರ ಕರೊನಾದಿಂದ ಗುಣ ಹೊಂದಿ 90 ಜನ ಬಿಡುಗಡೆಯಾಗಿದ್ದು, 85 ಜನರಿಗೆ ಹೊಸದಾಗಿ ಸೋಂಕು ತಗುಲಿದೆ. ಎರಡು ದಿನದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

    ಕಾರವಾರದ ಮತ್ತು ಕುಮಟಾದ ತಲಾ 13, ದಾಂಡೇಲಿ ಮತ್ತು ಹಳಿಯಾಳ ಸೇರಿ 26, ಭಟ್ಕಳದ 11, ಶಿರಸಿಯ 9, ಅಂಕೋಲಾದ 5, ಹೊನ್ನಾವರದ 4, ಮುಂಡಗೋಡಿನ ಮೂವರಿಗೆ ಹಾಗೂ ಯಲ್ಲಾಪುರದ ಒಬ್ಬ ವ್ಯಕ್ತಿಗೆ ಕೋವಿಡ್ ಪತ್ತೆಯಾಗಿದೆ.

    ಕುಮಟಾದ 18, ಹೊನ್ನಾವರದ 13, ಹಳಿಯಾಳ ಹಾಗೂ ದಾಂಡೇಲಿಯ 44, ಸಿದ್ದಾಪುರ ಹಾಗೂ ಯಲ್ಲಾಪುರದ ತಲಾ 4, ಮುಂಡಗೋಡಿನ 3, ಜೊಯಿಡಾ ಹಾಗೂ ಕಾರವಾರದ ತಲಾ ಇಬ್ಬರು ಗುಣ ಹೊಂದಿದ್ದು, ಕೋವಿಡ್ ಕೇರ್ ಸೆಂಟರ್​ನಿಂದ ಬಿಡುಗಡೆ ಹೊಂದಿದ್ದಾರೆ.

    ಒಟ್ಟಾರೆ ಸೋಂಕಿತರಲ್ಲಿ 26 ಜನರ ಸೋಂಕಿನ ಮೂಲ ಪತ್ತೆಯಾಗಿಲ್ಲ. 14 ಜನರಲ್ಲಿ ಜ್ವರ (ಐಎಲ್​ಐ) ಲಕ್ಷಣ ಕಾಣಿಸಿಕೊಂಡಿತ್ತು. ಇನ್ನುಳಿದವರಿಗೆ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ ರೋಗ ಬಂದಿದೆ. 11 ವೃದ್ಧರು, 7 ಮಕ್ಕಳೂ ರೋಗಕ್ಕೊಳಗಾಗಿದ್ದಾರೆ.

    ಶಿರಸಿಯ ಮೇಲಿನ ಓಣಿಕೇರಿಯಲ್ಲಿ ಇಬ್ಬರು, ಹೆಬ್ಬತ್ತಿಯ, ಕಸ್ತೂರಬಾ ನಗರ, ನೀರ್ನಳ್ಳಿ ಯಲ್ಲಿ ತಲಾ ಒಬ್ಬರಿಗೆ ಸೋಂಕು ಖಚಿತವಾಗಿದೆ. ದುಬೈನಿಂದ ಆಗಮಿಸಿದ ಇಬ್ಬರಲ್ಲೂ ಸೋಂಕು ಕಂಡುಬಂದಿದೆ.

    ಹೊನ್ನಾವರದ ಸಾಲ್ಕೋಡು, ಕಾನಕ್ಕಿ, ಮುಗ್ವಾ, ಆರೊಳ್ಳಿ, ಹಾಗೂ ಹೊನ್ನಾವರ ಪಟ್ಟಣದಲ್ಲಿ ತಲಾ ಒಂದೊಂದು ಪ್ರಕರಣ ಪತ್ತೆಯಾಗಿದೆ.

    ಮೃತರಲ್ಲಿ ವೈರಾಣು ಪತ್ತೆ: ದಾಂಡೇಲಿಯಲ್ಲಿ ಜ್ವರದಿಂದ ಬಳಲುತ್ತಿದ್ದ 14 ನೇ ಬ್ಲಾಕ್​ನ 66 ವರ್ಷದ ವ್ಯಕ್ತಿಗೆ ಕರೊನಾ ಇರುವುದು ಶುಕ್ರವಾರ ಖಚಿತವಾಗಿತ್ತು. ಶನಿವಾರ ಅವರು ಮೃತಪಟ್ಟಿದ್ದಾರೆ. ಕಾಮಾಲೆಯಿಂದ ಬಳಲುತ್ತಿದ್ದ ಮಾರುತಿ ನಗರದ 80 ವರ್ಷದ ಅಜ್ಜಿ ಶನಿವಾರ ಮೃತಪಟ್ಟಿದ್ದು, ಅವರ ಗಂಟಲ ದ್ರವ ಪರೀಕ್ಷೆ ಮಾಡಿದಾಗ ಅವರಲ್ಲೂ ಸೋಂಕು ಇರುವುದು ಖಚಿತವಾಗಿದೆ. ಸರ್ಕಾರದ ನಿಯಮಾವಳಿಯಂತೆ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

    ಕರೊನಾದಿಂದ ಬಳಲುತ್ತಿದ್ದ ಶಿರಸಿ ಮೂಲದ 65 ವರ್ಷದ ವ್ಯಕ್ತಿಯೊಬ್ಬರು ಜು.25 ರಂದು ಉಸಿರಾಟದ ಸಮಸ್ಯೆಯಿಂದ ಕ್ರಿಮ್್ಸ ಆಸ್ಪತ್ರೆ ಸೇರಿದ್ದು, ಭಾನುವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ. ಅವರಿಗೆ ಬಿಪಿ, ನ್ಯುಮೋನಿಯಾ ಇತ್ತು ಹೃದಯಾಘಾತವೂ ಆಗಿತ್ತು ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಅವರ ಶವವನ್ನು ಶಿರಸಿಗೆ ಕೊಂಡೊಯ್ಯಲಾಗಿದೆ.

    ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಕುಮಟಾ ಅಘನಾಶಿನಿಯ 35 ವರ್ಷದ ವ್ಯಕ್ತಿ ಮಣಿಪಾಲ ಆಸ್ಪತ್ರೆಯಲ್ಲಿ ಶನಿವಾರ ಕೊನೆಯುಸಿರೆಳೆದಿದ್ದು, ಅವರಲ್ಲೂ ಕರೊನಾ ಸೋಂಕು ಇರುವುದು ಪತ್ತೆಯಾಗಿದೆ. ಆದರೆ, ಅವರ ಸಾವು ಉಡುಪಿ ಜಿಲ್ಲೆಯಲ್ಲಿ ಆಗಿರುವುದರಿಂದ ಜಿಲ್ಲೆಯ ಲೆಕ್ಕಕ್ಕೆ ಅದು ಬರುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕಾರವಾರ ಕ್ರಿಮ್್ಸ ಆಸ್ಪತ್ರೆಯಲ್ಲಿ ಕರೊನಾದಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಕಾರವಾರದ ಇಬ್ಬರು ಪುರುಷರಿದ್ದಾರೆ. ಹೊನ್ನಾವರದ 78 ವರ್ಷದ ವೃದ್ಧನೊಬ್ಬನ ಪರಿಸ್ಥಿತಿ ಗಂಭೀರವಾಗಿದೆ.

    ಕೇರ್ ಸೆಂಟರ್​ಗೆ ದಾಖಲಾಗಲು ವಿರೋಧ ಕರೊನಾಕ್ಕೆ ಒಳಗಾಗಿರುವ ನಗರದ ಕೋಣೆವಾಡದ ವ್ಯಕ್ತಿಗಳು ಕೇರ್ ಸೆಂಟರ್​ಗೆ ದಾಖಲಾಗಲು ವಿರೋಧಿಸಿದ ಘಟನೆ ಭಾನುವಾರ ನಡೆದಿದೆ. ಹೆಸ್ಕಾಂ ಕಚೇರಿಯ ಎದುರಿನಲ್ಲಿರುವ ಮನೆಯೊಂದರ ವ್ಯಕ್ತಿಗೆ ಕೆಲ ದಿನಗಳ ಹಿಂದೆ ಸೋಂಕು ತಗುಲಿತ್ತು. ಆತ ಕೋವಿಡ್ ಕೇರ್ ಸೆಂಟರ್​ಗೆ ತೆರಳಿ ಗುಣ ಹೊಂದಿ ವಾಪಸಾಗಿದ್ದ. ಆತನ ಇಬ್ಬರು ಮಕ್ಕಳು ಸೇರಿ ಒಟ್ಟಾರೆ ಐದು ಜನರಿಗೆ ಸೋಂಕು ಇರುವುದು ಖಚಿತವಾಗಿದೆ. ಇದರಿಂದ ಅವರನ್ನು ಕರೆದೊಯ್ಯಲು ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಆಗಮಿಸಿದ್ದರು. ಆದರೆ, ಸ್ಥಳೀಯರು ಗುಂಪು ಗೂಡಿ ಸೋಂಕಿತ ಮಕ್ಕಳನ್ನು ಕಳಿಸುವುದಿಲ್ಲ ಎಂದು ಪಟ್ಟು ಹಿಡಿದರು. ಕರೊನಾ ಕೇರ್ ಸೆಂಟರ್​ನಲ್ಲಿ ಊಟದ ವ್ಯವಸ್ಥೆ ಸರಿ ಇಲ್ಲ. ಮಕ್ಕಳನ್ನು ಕಳಿಸಲು ಸಾಧ್ಯವಿಲ್ಲ ಎಂದರು. ಸ್ಥಳಕ್ಕೆ ಆಗಮಿಸಿದ ಸಿಪಿಐ ಸಂತೋಷ ಶೇಟ್ಟಿ, ಪಿಎಸ್​ಐ ಸಂತೋಷಕುಮಾರ್, ಮನವೊಲಿಸಿದರು. ಮಕ್ಕಳೊಟ್ಟಿಗೆ ಅವರ ತಾಯಿಯನ್ನೂ ಹಾಗೂ ಇನ್ನುಳಿದ ಇಬ್ಬರು ಸೋಂಕಿತರನ್ನೂ ಕೇರ್ ಸೆಂಟರ್​ಗೆ ಕಳಿಸಿಕೊಡಲಾಯಿತು.

    ಸ್ವಯಂಪ್ರೇರಿತ ಲಾಕ್​ಡೌನ್ ಹಳಿಯಾಳ: ತೇರಗಾಂವ ಗ್ರಾಮಸ್ಥರು ಜು.31 ರವರೆಗೆ ಸ್ವಯಂಪ್ರೇರಿತ ಲಾಕ್​ಡೌನ್ ಮಾಡುವ ತೀರ್ಮಾನ ಕೈಗೊಂಡಿದ್ದಾರೆ. ಗ್ರಾಮದಲ್ಲಿ ಈವರೆಗೆ 14 ಪ್ರಕರಣಗಳು ದಾಖಲಾಗಿವೆ. ಇಬ್ಬರು ಗುಣವಾಗಿದ್ದಾರೆ. ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಗ್ರಾಮಸ್ಥರು ಗ್ರಾಪಂ ಹಾಗೂ ನೋಡಲ್ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಈ ನಿರ್ಣಯ ಕೈಗೊಂಡಿದ್ದಾರೆ. ಗ್ರಾಮದ ಅಗಸಿ ಬಾಗಿಲನ್ನು, ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳನ್ನು ಮುಚ್ಚಲಾಗಿದೆ. ಗ್ರಾಮದಿಂದ ಹೊರ ಹೋಗುವುದನ್ನು ಹಾಗೂ ಗ್ರಾಮಕ್ಕೆ ಬರುವುದನ್ನು ನಿಷೇಧಿಸಲಾಗಿದೆ. ಗ್ರಾಮ ಸುಧಾರಣಾ ಸಮಿತಿ ಹಾಗೂ ಯುವಕ ಮಂಡಳಿ ಸದಸ್ಯರು ಕಾವಲು ಕಾಯಲಿದ್ದಾರೆ ಎಂದು ಜಿಪಂ ಉಪಾಧ್ಯಕ್ಷ ಸಂತೋಷ ರೇಣಕೆ ಪತ್ರಿಕೆಗೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts