More

    7 ಬಾರಿ ಎಂಎಲ್‌ಎ ಅಮೆರಿಕಾದಲ್ಲೋ, ರಷ್ಯಾದಲ್ಲೋ

    ಚಿತ್ರದುರ್ಗ: ಅಮೆರಿಕಾದಲ್ಲೋ, ರಷ್ಯಾದಲ್ಲೋ, ಎಲ್ಲಿ 7 ಬಾರಿ ಎಂಎಲ್‌ಎ ಆಗಿದ್ದೀಯಾ ಎಂದು ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ವಿರುದ್ಧ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ವಾಗ್ದಾಳಿ ನಡೆಸಿದರು.

    ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು, ನನ್ನ ಮಗ ಪೋತಪ್ಪ ನಾಯಕರೇ. ಸೊಸೈಟಿಯಲ್ಲಿ ಸೀಮೆಎಣ್ಣೆ, ಸಕ್ಕರೆ ಮಾರಾಟ ಮಾಡಿ ಜೀವನ ನಡೆಸಿದ್ದೇನೆ. ನನಗೆ ಕಷ್ಟ, ಬಡತನದ ಅರಿವಿದೆ. ಹಂತ-ಹಂತವಾಗಿ ಮೇಲೆ ಬಂದಿದ್ದೇನೆ ಹೊರತು ನಿನ್ನಂತೆ ಬಂಗಾರದ ಸ್ಪೂನಿನವನಲ್ಲ ಎಂದು ಟಾಂಗ್ ನೀಡಿದರು.

    50ವರ್ಷ ಕಾಂಗ್ರೆಸ್‌ನಲ್ಲಿದ್ದ ಅವನಿಗೆ ಟಿಕೆಟ್ ಸಿಗಲಿಲ್ಲ. ಹೀಗಾಗಿ ಎರಡು ಬಾರಿ ಪಕ್ಷೇತರನಾಗಿ ಅಲ್ಪಸಂಖ್ಯಾತರ ವಿರುದ್ಧ ಗೆದ್ದಿದ್ದು, 5 ಬಾರಿ ಎಂಎಲ್‌ಎ ಆಗಿದ್ದ ಆತನ ಅಣ್ಣನಿಂದ. ಸಿದ್ದೇಶಣ್ಣ, ನಾನೂ ಎಂಎಲ್ಸಿ ಮಾಡಲು ಓಡಾಡಿದ್ದೇವೆ. ಅದನ್ನು ಮರೆತಿರಬಹುದು. ಸೋತ ವೇಳೆ ನಾನೂ ಗೆದ್ದಿದ್ದಕ್ಕಿಂತ ಹೆಚ್ಚು ಮತ ಪಡೆದಿದ್ದೇನೆ. ಈ ಬಾರಿ ಜನ ವಿರೋಧಿಸಿದ್ದರಿಂದ 90 ಸಾವಿರ ಮತಗಳ ಅಂತರದಿಂದ ಸೋತಿದ್ದಾನೆ ಎಂದು ತಿಪ್ಪಾರೆಡ್ಡಿ ಕಾಲೆಳೆದರು.

    ಯಡಿಯೂರಪ್ಪ ನನ್ನ ತಂದೆ. ಅವರನ್ನು ಪ್ರಶ್ನಿಸುವ ಅಧಿಕಾರವಿದೆ. ನನ್ನ ನೋವು ತೋಡಿಕೊಂಡಿದ್ದೇನೆ. ಅದನ್ನು ಕೇಳಲು ಇವನ್ಯಾರೂ. ಅವನ ಮನೆ ಬಾಗಿಲ ಕೆಲಸಗಾರ ಅಂದುಕೊಂಡಿದ್ದಾನಾ. ಹೊಳಲ್ಕೆರೆಯಲ್ಲಿ ಬಿಜೆಪಿಯಿಂದ ಯಾರೇ ಸ್ಪರ್ಧಿಸಿದರೂ ಗೆಲ್ಲುತ್ತಾರೆ ಎಂದಿದ್ದಾನೆ. ಹಾಗಾದರೆ, 2013ರಲ್ಲಿ ಏಕೆ ಕಣದಲ್ಲಿದ್ದವರು ಕೇವಲ ಆರೇಳು ಸಾವಿರ ಮತ ಪಡೆದರು ಎಂದು ಪ್ರಶ್ನಿಸಿದರು.

    10 ವರ್ಷದ ಹಿಂದೆ ಮಾಡಿರುವ ಕಾಮಗಾರಿ ಅದಾಗಿಯೇ ಸವಿಯಬೇಕು. ಕಳಪೆ ಕೆಲಸ ಎಂದೂ ಮಾಡಿಲ್ಲ. ಸೋತರೆ ಜನರೇ ಪಶ್ಚಾತ್ತಾಪ ಪಡಬೇಕು. ಯಾರಾದರೂ ಹೋದರೆ, ಗದರಿ ಕಳಿಸುವ ಸಂಸ್ಕೃತಿ ನನ್ನಲ್ಲಿಲ್ಲ ಎಂದು ಹೇಳಿದರು.

    ಈ ಹಿಂದೆ ಸಚಿವ ಸ್ಥಾನಕ್ಕಾಗಿ ಗಲಾಟೆ ಮಾಡಿಸಿದ್ದು, ಹಳೆಯ ದ್ವಿಚಕ್ರ ವಾಹನಗಳನ್ನು ಸುಡಿಸಿ, ಪ್ರತಿಭಟನೆಗೆ ಕುಮ್ಮಕ್ಕು ನೀಡಿದ್ದು, ಬಿಎಸ್‌ವೈ ವಿರುದ್ಧ ಹೇಳಿಕೆ ನೀಡಿ ಪಕ್ಷ ವಿರೋಧಿ ಚಟುವಟಿಕೆ ಯಾರು ನಡೆಸಿದ್ದು. ಕಮ್ಮಾರೆಡ್ಡಿ ಸಮುದಾಯ ಇಬ್ಬಾಗವಾಗಿದ್ದು, ಯಾರಿಂದ. ಗುತ್ತಿಗೆದಾರರಾದ ಕೆಂಪಣ್ಣ, ಮಂಜುನಾಥ್ ಭ್ರಷ್ಟಾಚಾರದ ಆರೋಪ ಮಾಡಿದ್ದು, ಯಾರಿಗೆ. ನನ್ನ ಬಗ್ಗೆ ಮಾತನಾಡುವಾಗ ಎಚ್ಚರವಿರಲಿ. ಹಿರಿಯ ರಾಜಕಾರಣಿ ಎಂಬ ಗೌರವ ಉಳಿಸಿಕೊಳ್ಳಿ ಎಂದರು.

    ನನ್ನ ಮನೆಯಲ್ಲಿ ಬಿ.ಎಸ್.ಯಡಿಯೂರಪ್ಪ, ಬಿ.ಟಿ.ಚನ್ನಬಸಪ್ಪ ಇಬ್ಬರ ಫೋಟೋಗಳಿವೆ. ಆದರೆ, ನಿಮ್ಮ ಕುಟುಂಬಕ್ಕೆ ರಾಜಕೀಯ ಶಕ್ತಿ ತುಂಬಿದ ಮಾಜಿ ಶಾಸಕ ಉಮಾಪತಿ ಫೋಟೋ ಮನೆಯಲ್ಲೇಕೆ ಇಟ್ಟಿಲ್ಲ ಎಂದು ಎಂಎಲ್ಸಿ ಕೆ.ಎಸ್.ನವೀನ್‌ಗೆ ಪ್ರಶ್ನಿಸಿದರು.

    3ರಂದು ನಾಮಪತ್ರ ಸಲ್ಲಿಕೆ: ಎಂಎಲ್ಸಿ ಎನ್.ರವಿಕುಮಾರ್ ಅವರು ಮನೆಗೆ ಭೇಟಿ ನೀಡಿ ಸಂಧಾನಕ್ಕೆ ಪ್ರಯತ್ನಿಸಿದ್ದಾರೆ. ಆದರೆ, ನಾವೀಗ ಯಾವುದಕ್ಕೂ ಬಗ್ಗುವ ಸ್ಥಿತಿಯಲಿಲ್ಲ. ಎಂ.ಸಿ.ರಘುಚಂದನ್ ಏ.3ರಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದು ಖಚಿತ ಎಂದು ಚಂದ್ರಪ್ಪ ಸ್ಪಷ್ಟಪಡಿಸಿದರು.

    ವಿವಿಧ ಸಮುದಾಯದ ಮುಖಂಡರಾದ ಸಂಜೀವ್‌ಕುಮಾರ್, ಲವಕುಮಾರ್, ಮೋಹನ್, ತಿಪ್ಪೇಸ್ವಾಮಿ, ಬಸವರಾಜ್, ಮುರುಗೇಶ್, ಈಶಣ್ಣ, ಮಹಂತೇಶ್, ಬಸವಯ್ಯ, ಸಿದ್ದರಾಮಣ್ಣ, ನಗರಸಭೆ ಸದಸ್ಯರಾದ ಭಾಸ್ಕರ್, ಶಶಿ, ಬಿಜೆಪಿಯ ರತ್ಮಮ್ಮ, ಮಂಡಲ ಅಧ್ಯಕ್ಷ ಸಿದ್ದೇಶ್, ಜಿಪಂ ಮಾಜಿ ಸದಸ್ಯ ಮಹೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts