More

    ಸಚಿನ್​ ತೆಂಡೂಲ್ಕರ್ ಬಳಿ 4.5 ಲಕ್ಷ ಷೇರು: ಒಂದೇ ತಿಂಗಳಲ್ಲಿ 44ರಷ್ಟು ಏರಿಕೆ, ದೊಡ್ಡ ಒಪ್ಪಂದದ ನಂತರ ಟಾರ್ಗೆಟ್​ ಪ್ರೈಸ್​ ಹೆಚ್ಚಳ

    ಮುಂಬೈ: ಆಜಾದ್ ಇಂಜಿನಿಯರಿಂಗ್ ಲಿಮಿಟೆಡ್ (Azad Engineering Ltd.) ಬುಧವಾರದಂದು ದೊಡ್ಡ ವ್ಯವಹಾರದ ಬಗ್ಗೆ ಮಾಹಿತಿ ನೀಡಿದೆ. ತೈಲ ಮತ್ತು ಅನಿಲ ವಲಯಕ್ಕೆ ಘಟಕಗಳ ಪೂರೈಕೆಗಾಗಿ Nuovo Pignone Srl ಜತೆ ಒಪ್ಪಂದ ಮಾಡಿಕೊಂಡಿದೆ ಎಂದು ಕಂಪನಿ ಬುಧವಾರ ತಿಳಿಸಿದೆ.

    ಬುಧವಾರದಂದು ಆಜಾದ್ ಇಂಜಿನಿಯರಿಂಗ್ ಲಿಮಿಟೆಡ್ ಷೇರುಗಳ ಬೆಲೆ 4% ರಷ್ಟು ಕುಸಿದು 1298.15 ರೂಪಾಯಿಗೆ ತಲುಪಿತು. ಈ ಷೇರಿನ ಬೆಲೆ ಒಂದು ವಾರದಲ್ಲಿ ಶೇ. 10; ಒಂದು ತಿಂಗಳಲ್ಲಿ ಶೇ. 44 ಮತ್ತು ಈ ವರ್ಷದ ಆರಂಭದಿಂದ ಇದುವರೆಗೆ ಶೇ. 87ರಷ್ಟು ಏರಿಕೆ ಕಂಡಿದೆ.

    ಆಜಾದ್ ಇಂಜಿನಿಯರಿಂಗ್ ಮಾರ್ಚ್ 6 ರಂದು ಫೈಲಿಂಗ್ನಲ್ಲಿ ಷೇರು ವಿನಿಮಯ ಕೇಂದ್ರಗಳಿಗೆ ಮಾಹಿತಿ ನೀಡಿದೆ. ಮೆಷಿನ್ ಕಾಂಪೊನೆಂಟ್ ತಯಾರಕ Nuovo Pignone Srl ಜತೆ ದೀರ್ಘಾವಧಿಯ ಕಾರ್ಯತಂತ್ರದ ಪೂರೈಕೆದಾರರ ಒಪ್ಪಂದಕ್ಕೆ ಸಹಿ ಹಾಕಿದ್ದಾಗಿ ಮಾಹಿತಿ ನೀಡಿದೆ. ಈ ಒಪ್ಪಂದವು ತೈಲ ಮತ್ತು ಅನಿಲ ವಲಯಕ್ಕೆ ಸಂಕೀರ್ಣ ಮತ್ತು ನಿರ್ಣಾಯಕ ಘಟಕಗಳ ಅಭಿವೃದ್ಧಿಯನ್ನು ಸಕ್ರಿಯಗೊಳಿಸುತ್ತದೆ.

    ಮುಂದಿನ 5 ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದೆ. ಆಜಾದ್ ಇಂಜಿನಿಯರಿಂಗ್ ಇಂಧನ, ಏರೋಸ್ಪೇಸ್ ಮತ್ತು ರಕ್ಷಣೆ, ತೈಲ ಮತ್ತು ಅನಿಲ ಉದ್ಯಮದಲ್ಲಿ ತೊಡಗಿಸಿಕೊಂಡಿದೆ.
    ಜಾಗತಿಕ ಮೂಲ ಸಲಕರಣೆ ತಯಾರಕರಿಗೆ (OEMs) ಅರ್ಹ ಉತ್ಪನ್ನಗಳನ್ನು ತಯಾರಿಸಿ ಕೊಡುತ್ತದೆ. ಕಂಪನಿಯ ಷೇರುಗಳನ್ನು 2023 ರಲ್ಲಿ ಪಟ್ಟಿ ಮಾಡಲಾಗಿದೆ.

    ಆಜಾದ್ ಇಂಜಿನಿಯರಿಂಗ್‌ನ ನಿವ್ವಳ ಲಾಭವು ಡಿಸೆಂಬರ್ 2023 ರಲ್ಲಿ ಮೂರು ಪಟ್ಟು ಹೆಚ್ಚಾಗಿದ್ದು, 16.8 ಕೋಟಿ ರೂ. ತಲುಪಿದೆ. ಹೈದರಾಬಾದ್ ಮೂಲದ ಕಂಪನಿಯು ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ ರೂ.3.83 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ, ಕಂಪನಿಯ ಆದಾಯವು ವರ್ಷದಿಂದ ವರ್ಷಕ್ಕೆ (YoY) 49 ಪ್ರತಿಶತದಷ್ಟು ಹೆಚ್ಚಿ 89.23 ಕೋಟಿ ರೂ. ಆಗಿದೆ. ವರ್ಷದ ಹಿಂದೆ ಕಂಪನಿಯ ಆದಾಯವು 68.8 ಕೋಟಿ ಇತ್ತು. ಆಜಾದ್ ಇಂಜಿನಿಯರಿಂಗ್ ಡಿಸೆಂಬರ್ 31, 2023 ಕ್ಕೆ ಕೊನೆಗೊಂಡ ಒಂಬತ್ತು ತಿಂಗಳಿಗೆ ರೂ 43.65 ಕೋಟಿ ನಿವ್ವಳ ಲಾಭವನ್ನು ವರದಿ ಮಾಡಿದೆ. ಕಂಪನಿಯು ಹಿಂದಿನ ವರ್ಷದ ಅವಧಿಯಲ್ಲಿ 6.35 ಕೋಟಿ ರೂ.ಗಳ ನಿವ್ವಳ ನಷ್ಟವನ್ನು ದಾಖಲಿಸಿತ್ತು.

    ಅನೇಕ ಸೆಲೆಬ್ರಿಟಿಗಳ ಬೆಟ್:

    ಆಜಾದ್ ಇಂಜಿನಿಯರಿಂಗ್‌ನ ಷೇರುಗಳನ್ನು ಡಿಸೆಂಬರ್ 2023 ರಲ್ಲಿ ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ಪಟ್ಟಿ ಮಾಡಲಾಗಿದೆ. ಕ್ರಿಕೆಟ್​ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಈ ಕಂಪನಿಯು ಅಂದಾಜು 4.5 ಲಕ್ಷ ಷೇರುಗಳನ್ನು ಹೊಂದಿದ್ದಾರೆ. ಕಂಪನಿಯ ಷೇರುದಾರರಲ್ಲಿ ವಿವಿಎಸ್ ಲಕ್ಷ್ಮಣ್ ಮತ್ತು ಸೈನಾ ನೆಹ್ವಾಲ್ ಕೂಡ ಇದ್ದಾರೆ.

    ಏರೋಸ್ಪೇಸ್ ಮತ್ತು ರಕ್ಷಣಾ ವಿಭಾಗದಲ್ಲಿ ಅದರ ಬೆಳವಣಿಗೆಯ ಕಾರ್ಯಕ್ಷಮತೆಯಿಂದಾಗಿ ಆಜಾದ್ ಎಂಜಿನಿಯರಿಂಗ್ ಷೇರುಗಳಿಗೆ ‘ಖರೀದಿ’ ರೇಟಿಂಗ್ ಅನ್ನು ಐಸಿಐಸಿಐ ಸೆಕ್ಯುರಿಟೀಸ್ ಬ್ರೋಕರೇಜ್​ ಸಂಸ್ಥೆ ನೀಡಿದೆ. ಈ ಸ್ಟಾಕ್​ನ್ ಗುರಿ ಬೆಲೆಯನ್ನು (ಟಾರ್ಗೆಟ್​ ಪ್ರೈಸ್​) 1,400 ರೂಪಾಯಿಗೆ ನಿಗದಿಪಡಿಸಿದೆ.

     


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts