More

    74000 ಗಡಿ ದಾಟಿದ ಬಿಎಸ್​ಇ ಸೂಚ್ಯಂಕ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೊಸ ದಾಖಲೆ ಸೃಷ್ಟಿ

    ಮುಂಬೈ: ಬುಧವಾರದ ಆರಂಭಿಕ ವಹಿವಾಟಿನಲ್ಲಿ ಹಿನ್ನಡೆ ಕಂಡ ಭಾರತೀಯ ಷೇರು ಮಾರುಕಟ್ಟೆಯು ನಂತರ ಚೇತರಿಸಿಕೊಂಡು ಉನ್ನತ ಮಟ್ಟವನ್ನು ತಲುಪಿ ದಾಖಲೆ ಬರೆಯಿತು. ಖಾಸಗಿ ಬ್ಯಾಂಕ್ ಮತ್ತು ಆಯ್ದ ಐಟಿ ಷೇರುಗಳಲ್ಲಿ ಖರೀದಿ ವಹಿವಾಟು ಹೆಚ್ಚಿದ ಹಿನ್ನೆಲೆಯಲ್ಲಿ ಬುಧವಾರ ಬಿಎಸ್​ಇ ಮತ್ತು ನಿಫ್ಟಿ ಸೂಚ್ಯಂಕಗಳು ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡು ಹೊಸ ದಾಖಲೆಯ ಉನ್ನತ ಮಟ್ಟ ಮುಟ್ಟಿದವು. ಬಿಎಸ್​ಇ ಸೂಚ್ಯಂಕವು 74 ಸಾವಿರ ಅಂಕಗಳ ಗಡಿಯನ್ನು ದಾಟಿ ದಾಖಲೆ ಸೃಷ್ಟಿಸಿತು.

    30-ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 408.86 ಅಂಕಗಳು ಅಥವಾ ಶೇಕಡಾ 0.55 ಜಿಗಿದು ಹೊಸ ದಾಖಲೆಯ 74,085.99 ಕ್ಕೆ ನೆಲೆಸಿತು. ದಿನದ ಅವಧಿಯಲ್ಲಿ, ಇದು 474.14 ಅಂಕಗಳಷ್ಟು ಏರಿಕೆಯಾಗಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 74,151.27 ಅಂಕಗಳನ್ನು ತಲುಪಿತ್ತು. ದಿನದ ಮೊದಲಾರ್ಧದಲ್ಲಿ ಸೂಚ್ಯಂಕವು 73,321.48 ಅಂಕಗಳ ಕುಸಿದಿತ್ತು.

    ನಿಫ್ಟಿ ಸೂಚ್ಯಂಕವು 117.75 ಅಂಕಗಳು ಅಥವಾ ಶೇಕಡಾ 0.53 ರಷ್ಟು ಏರಿಕೆಯಾಗಿ 22,474.05 ಜೀವಿತಾವಧಿಯ ಗರಿಷ್ಠ ಮಟ್ಟವನ್ನು ಮುಟ್ಟಿತು. ದಿನದ ವಹಿವಾಟಿನಲ್ಲಿ, ಇದು 140.9 ಅಂಕಗಳಷ್ಟು ಜಿಗಿದು 22,497.20 ರ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿತ್ತು.

    ದಿನದ ಮೊದಲಾರ್ಧದಲ್ಲಿ ಬೆಂಚ್‌ಮಾರ್ಕ್ ಸೂಚ್ಯಂಕಗಳು ಕಡಿಮೆ ವಹಿವಾಟು ನಡೆಸಿದವು. ಆದರೆ, ಖಾಸಗಿ ಬ್ಯಾಂಕ್‌ಗಳು ಮತ್ತು ಫಾರ್ಮಾ ಷೇರುಗಳು ನಷ್ಟವನ್ನು ಅಳಿಸಲು ಸಹಾಯ ಮಾಡಿದವು ಎಂದು ವಿಶ್ಲೇಷಕರು ಹೇಳಿದ್ದಾರೆ.

    ಪ್ರಮುಖ ಷೇರುಗಳ ಪೈಕಿ ಕೋಟಕ್ ಮಹೀಂದ್ರಾ ಬ್ಯಾಂಕ್ ಶೇ. 2.47ರಷ್ಟು ಏರಿಕೆ ಕಂಡಿದೆ. ಆಕ್ಸಿಸ್ ಬ್ಯಾಂಕ್, ಭಾರ್ತಿ ಏರ್‌ಟೆಲ್, ಸನ್ ಫಾರ್ಮಾ, ಎಚ್‌ಸಿಎಲ್ ಟೆಕ್ನಾಲಜೀಸ್, ಮಹೀಂದ್ರ ಆ್ಯಂಡ್ ಮಹೀಂದ್ರಾ, ಟೈಟಾನ್ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಷೇರುಗಳು ಪ್ರಮುಖವಾಗಿ ಲಾಭ ಗಳಿಸಿದವು. ಅಲ್ಟ್ರಾಟೆಕ್ ಸಿಮೆಂಟ್, ಎನ್‌ಟಿಪಿಸಿ, ಮಾರುತಿ, ಜೆಎಸ್‌ಡಬ್ಲ್ಯೂ ಸ್ಟೀಲ್, ಪವರ್ ಗ್ರಿಡ್ ಮತ್ತು ಟಾಟಾ ಮೋಟಾರ್ಸ್ ಸ್ಟಾಕ್​ಗಳು ಹಿನ್ನಡೆ ಅನುಭವಿಸಿದವು.

    “ದೇಶೀಯ ಮಾರುಕಟ್ಟೆಯು ದ್ವಿತೀಯಾರ್ಧದಲ್ಲಿ ಚುರುಕಾದ ಚೇತರಿಕೆಯನ್ನು ಪ್ರದರ್ಶಿಸಿತು, ದೊಡ್ಡ-ಕ್ಯಾಪ್ ಸ್ಟಾಕ್‌ಗಳಲ್ಲಿ ಖರೀದಿಯು ಆರಂಭಿಕ ನಷ್ಟವನ್ನು ಹಿಮ್ಮೆಟ್ಟಿಸಿತು” ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದರು.

    ಬಿಎಸ್‌ಇ ಸ್ಮಾಲ್‌ಕ್ಯಾಪ್ ಸೂಚ್ಯಂಕವು ಶೇಕಡಾ 1.91 ರಷ್ಟು ಮತ್ತು ಮಿಡ್‌ಕ್ಯಾಪ್ ಸೂಚ್ಯಂಕ ಶೇಕಡಾ 0.65 ರಷ್ಟು ಕುಸಿಯಿತು. ವಿವಿಧ ವಲಯಗಳ ಸೂಚ್ಯಂಕಗಳ ಪೈಕಿ, ಬ್ಯಾಂಕೆಕ್ಸ್ ಶೇಕಡಾ 0.99, ಟೆಕ್ 0.87 ಶೇಕಡಾ, ಐಟಿ (ಶೇ 0.66), ಗ್ರಾಹಕ ಬಾಳಿಕೆ ಬರುವ ವಸ್ತುಗಳು ಲಾಭ ಗಳಿಸಿದವು. ಸೇವೆಗಳು ಶೇಕಡಾ 2.03, ರಿಯಾಲ್ಟಿ ಶೇಕಡಾ 1.40, ವಿದ್ಯುತ್ (1.07 ಶೇಕಡಾ), ತೈಲ ಮತ್ತು ಅನಿಲ (0.85 ಶೇಕಡಾ) ಮತ್ತು ಸರಕುಗಳು (0.76 ಶೇಕಡಾ) ಕುಸಿದವು.

    ಏಷ್ಯಾದ ಮಾರುಕಟ್ಟೆಗಳ ಪೈಕಿ, ಸಿಯೋಲ್, ಟೋಕಿಯೊ ಮತ್ತು ಶಾಂಘೈ ಕುಸಿತ ಕಂಡವು. ಹಾಂಗ್ ಕಾಂಗ್ ಲಾಭ ಗಳಿಸಿತು. ಐರೋಪ್ಯ ಷೇರು ಮಾರುಕಟ್ಟೆಗಳಲ್ಲಿ ಲಾಭದ ವಹಿವಾಟು ನಡೆಯಿತು. ಮಂಗಳವಾರ ಅಮೆರಿಕದ ಮಾರುಕಟ್ಟೆಗಳು ಹಿನ್ನಡೆ ಕಂಡಿದ್ದವು.

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಮಂಗಳವಾರ 574.28 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ.

    ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕವು ಮಂಗಳವಾರ 195.16 ಅಂಕಗಳು ಅಥವಾ ಶೇಕಡಾ 0.26 ರಷ್ಟು ನಷ್ಟ ಕಂಡು 73,677.13 ಕ್ಕೆ ಸ್ಥಿರವಾಗಿತ್ತು. ನಿಫ್ಟಿ ಸೂಚ್ಯಂಕವು 49.30 ಅಂಕಗಳು ಅಥವಾ 0.22 ರಷ್ಟು ಕುಸಿದು 22,356.30 ಕ್ಕೆ ತಲುಪಿತ್ತು.

     

    ಈ ಷೇರಿನ ಬೆಲೆ ಕೇವಲ 5 ದಿನಗಳಲ್ಲಿ 2500 ರೂಪಾಯಿ ಹೆಚ್ಚಳ: ಸ್ಟಾಕ್​ ದರ ಗಗನಕ್ಕೇರಲು ಕಾರಣವೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts