More

    ಸಚಿನ್ ತೆಂಡುಲ್ಕರ್ ಮೊದಲ ಶತಕಕ್ಕೆ 30 ವರ್ಷದ ಸಂಭ್ರಮ

    ನವದೆಹಲಿ: ದಿಗ್ಗಜ ಬ್ಯಾಟ್ಸ್‌ಮನ್ ಸಚಿನ್ ತೆಂಡುಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭರ್ತಿ 100 ಶತಕ ಸಿಡಿಸಿ ನಿವೃತ್ತಿ ಹೊಂದಿದ್ದರು. ಈ ಪೈಕಿ ಅವರ ಮೊದಲ ಶತಕ ಸಾಧನೆ ಇಂದಿಗೂ ವಿಶೇಷವಾದುದು. ಅವರ ಆ ಚೊಚ್ಚಲ ಶತಕ ಸಾಧನೆಗೆ ಶುಕ್ರವಾರ ಭರ್ತಿ 30 ವರ್ಷ ಪೂರ್ಣಗೊಂಡಿದೆ. ಮ್ಯಾಂಚೆಸ್ಟರ್‌ನಲ್ಲಿ ಸಿಡಿದ ಆ ಮೊದಲ ಶತಕಕ್ಕೆ 8 ತಿಂಗಳು ಮುನ್ನ ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ಬೀಜ ಬಿತ್ತಿದ್ದೆ ಎಂದು ಸಚಿನ್ ತೆಂಡುಲ್ಕರ್ ಈಗ ಹೇಳಿದ್ದಾರೆ.

    1990ರ ಆಗಸ್ಟ್ 14ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಚಿನ್ ತೆಂಡುಲ್ಕರ್ ಅವರ ಚೊಚ್ಚಲ ಶತಕ ದಾಖಲಾಗಿತ್ತು. 189 ಎಸೆತಗಳ ಇನಿಂಗ್ಸ್‌ನಲ್ಲಿ 17 ಬೌಂಡರಿ ಒಳಗೊಂಡ ಅಜೇಯ 119 ರನ್ ಬಾರಿಸಿದ್ದರು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ 5ನೇ ದಿನ ಈ ಅಮೋಘ ಶತಕ ಸಿಡಿಸುವ ಮೂಲಕ ಸಚಿನ್, ಭಾರತ ತಂಡವನ್ನು ಸೋಲಿನಿಂದ ಪಾರು ಮಾಡಿ, ಡ್ರಾ ಸಾಧಿಸಲು ನೆರವಾಗಿದ್ದರು. ಇಂಗ್ಲೆಂಡ್ ನೀಡಿದ 408 ರನ್ ಸವಾಲಿಗೆ ಪ್ರತಿಯಾಗಿ ಭಾರತ ತಂಡ, 6 ವಿಕೆಟ್‌ಗೆ 343 ರನ್ ಗಳಿಸಿ ಡ್ರಾ ಸಾಧಿಸಿತ್ತು. 183 ರನ್‌ಗೆ 6 ವಿಕೆಟ್ ಕಳೆದುಕೊಂಡು ಭಾರತ ಸೋಲಿನ ಭೀತಿಯಲ್ಲಿದ್ದಾಗ ಸಚಿನ್, ಮನೋಜ್ ಪ್ರಭಾಕರ್ (67*) ಜತೆಗೂಡಿ ಮುರಿಯದ 7ನೇ ವಿಕೆಟ್‌ಗೆ 160 ರನ್ ಜತೆಯಾಟವಾಡಿದ್ದರು.ಸಚಿನ್ ತೆಂಡುಲ್ಕರ್ ಮೊದಲ ಶತಕಕ್ಕೆ 30 ವರ್ಷದ ಸಂಭ್ರಮ

    ‘ನಾನು ಆಗಸ್ಟ್ 14ರಂದು ಶತಕ ಬಾರಿಸಿದ್ದೆ. ಮರುದಿನ ಸ್ವಾತಂತ್ರ್ಯ ದಿನವಾಗಿತ್ತು. ಹೀಗಾಗಿ ಆ ಶತಕ ವಿಶೇಷವಾಗಿತ್ತು. ನನ್ನ ಆ ಶತಕದಿಂದಾಗಿ ಸರಣಿ ಮುಂದಿನ ಓವಲ್ ಟೆಸ್ಟ್ ಪಂದ್ಯದವರೆಗೆ ಜೀವಂತವಾಗಿತ್ತು. ಟೆಸ್ಟ್ ಪಂದ್ಯವನ್ನು ರಕ್ಷಿಸುವ ಆ ಅನುಭವ ನನಗೆ ಹೊಸದಾಗಿತ್ತು’ ಎಂದು ಸಚಿನ್ ಚೊಚ್ಚಲ ಶತಕವನ್ನು ನೆನಪಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಇಂಗ್ಲೆಂಡ್ ಮಹಿಳಾ ಕ್ರಿಕೆಟರ್ ಲೌರಾ ಮಾರ್ಷ್ ವಿದಾಯ

    ‘ಆ ಶತಕಕ್ಕೆ ಮುನ್ನ ಸಿಯಾಲ್‌ಕೋಟ್‌ನಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ನಾನು 57 ರನ್ ಬಾರಿಸಿದ್ದೆ. ಭಾರತ ತಂಡ 38 ರನ್‌ಗೆ 4 ವಿಕೆಟ್ ಕಳೆದುಕೊಂಡಿದ್ದ ವೇಳೆ ನಾನು ಕ್ರೀಸ್‌ಗೆ ಇಳಿದು ಭಾರತಕ್ಕೆ ಪಂದ್ಯ ಡ್ರಾ ಸಾಧಿಸಲು ನೆರವಾಗಿದ್ದೆ. ಆ ಪಂದ್ಯದಲ್ಲಿ ವಕಾರ್ ಯೂನಿಸ್‌ರ ಎಸೆತ ನನ್ನ ಮೂಗಿಗೆ ಬಡಿದಿತ್ತು. ಆಗ ರಕ್ತವನ್ನು ಜೆರ್ಸಿಗೆ ಒರೆಸಿಕೊಂಡು ನಾನು ಬ್ಯಾಟಿಂಗ್ ಮುಂದುವರಿಸಿದ್ದೆ. ನೋವಿನ ನಡುವೆ ಆಡಿದ ಆ ಇನಿಂಗ್ಸ್ ನನಗೆ ಧೈರ್ಯ ತುಂಬಿತ್ತು. ಅದರಿಂದ ನಾನು ಇನ್ನಷ್ಟು ಬಲಿಷ್ಠವಾಗಿದ್ದೆ’ ಎಂದು ಸಚಿನ್ ತೆಂಡುಲ್ಕರ್ ವಿವರಿಸಿದ್ದಾರೆ.

    ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲೂ ಸಚಿನ್ ಆಗಿನ ಪ್ರಚಂಡ ವೇಗದ ಬೌಲರ್‌ಗಳಲ್ಲಿ ಒಬ್ಬರೆನಿಸಿದ್ದ ಡೆವೋನ್ ಮಾಲ್ಕಂ ಅವರನ್ನು ದಿಟ್ಟವಾಗಿ ಎದುರಿಸಿ ನಿಂತಿದ್ದರು. ಮಾಲ್ಕಂರ ಎಸೆತವೊಂದು ಸಚಿನ್ ತಲೆಗೆ ಬಡಿದಿತ್ತು. ಆದರೆ ಆಗ ಅವರು ಫಿಸಿಯೋರನ್ನು ಕರೆಯದೆ ಬ್ಯಾಟಿಂಗ್ ಮುಂದುವರಿಸಿದ್ದರು. ನಾನು ನನ್ನ ನೋವನ್ನು ಬೌಲರ್‌ಗೆ ತೋರಿಸಿಕೊಳ್ಳಲು ಬಯಸಿರಲಿಲ್ಲ ಎಂದು ಸಚಿನ್ ಹೇಳಿದ್ದಾರೆ.

    ಇಂಗ್ಲೆಂಡ್ ಪ್ರವಾಸಕ್ಕೆ ಮುನ್ನ ಶಿವಾಜಿ ಪಾಕ್ ಜಿಮ್ಖಾನದಲ್ಲಿ ಕೋಚ್ ರಮಾಕಾಂತ್ ಆಚ್ರೇಕರ್ ತಮ್ಮನ್ನು ಅಂಥದ್ದೇ ಪಿಚ್‌ನಲ್ಲಿ 25 ದಿನಗಳ ಕಾಲ ತರಬೇತಿ ನೀಡಿ ಸಜ್ಜುಗೊಳಿಸಿದ್ದರು ಎಂದೂ ಹೇಳಿಕೊಂಡಿರುವ ಸಚಿನ್, ಆಗಲೂ ಚೆಂಡಿನಿಂದ ಸಾಕಷ್ಟು ಏಟುಗಳನ್ನು ತಿಂದಿದ್ದೆ ಎಂದಿದ್ದಾರೆ.

    ಪಂದ್ಯದ ಮೊದಲ ಇನಿಂಗ್ಸ್‌ನಲ್ಲೂ 68 ರನ್ ಬಾರಿಸಿದ್ದ ಸಚಿನ್ ತೆಂಡುಲ್ಕರ್, ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಆಗ ಅವರಿಗೆ 17 ವರ್ಷವಾಗಿದ್ದ ಕಾರಣ, ಪಂದ್ಯಶ್ರೇಷ್ಠ ಪ್ರಶಸ್ತಿಯಾಗಿ ಲಭಿಸಿದ ಶಾಂಪೇನ್ ಬಾಟಲಿಯನ್ನು ಕುಡಿಯಲು ಸ್ಥಳೀಯ ಕಾನೂನಿನ ಅನ್ವಯ ಅವಕಾಶ ಇರಲಿಲ್ಲ. ಆ ಪಂದ್ಯದ ಬಳಿಕ ಸಹ-ಆಟಗಾರ ಸಂಜಯ್ ಮಂಜ್ರೇಕರ್ ತಮಗೆ ಬಿಳಿ ಶರ್ಟ್ ಒಂದನ್ನು ಉಡುಗೊರೆಯಾಗಿ ನೀಡಿದ್ದರು ಎಂದೂ ಸಚಿನ್ ನೆನಪಿಸಿಕೊಂಡಿದ್ದಾರೆ.

    ಚೆಂಡಿನಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಫೀಲ್ಡರ್ಸ್, ಟ್ರೋಲ್​ ಮಾಡಿದ ರಮೀಜ್​ ರಾಜಾ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts