More

    ಶೇ.25 ಕಬ್ಬು ನಾಟಿ ಹೆಚ್ಚಳ

    ಬೆಳಗಾವಿ: ಅತಿವೃಷ್ಟಿ, ಕೋವಿಡ್-19 ಹಾಗೂ ಸಮರ್ಪಕ ಬೆಲೆ ಸಮಸ್ಯೆಗಳ ನಡುವೆಯೂ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಕಬ್ಬು ಬೆಳೆಯುವ ಪ್ರದೇಶ ಶೇ.25 ಏರಿಕೆಯಾಗಿದೆ. ಬರೋಬ್ಬರಿ 96 ಸಾವಿರ ಹೆಕ್ಟೇರ್ ಭೂ ಪ್ರದೇಶದಲ್ಲಿ ಹೊಸದಾಗಿ ಕಬ್ಬು ನಾಟಿಯಾಗಿದೆ.

    ರಾಜ್ಯದಲ್ಲಿ ಉತ್ತಮ ಮಳೆ, ಅಂತರ್ಜಲ ಮಟ್ಟ ಹೆಚ್ಚಳ ಮತ್ತು ಜಲಾಶಯಗಳ ಭರ್ತಿಯಿಂದ ಕಾಲುವೆಗಳಿಗೆ ನಿರಂತರವಾಗಿ ನೀರು ಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಬ್ಬಿನ ಪ್ರದೇಶ ವಿಸ್ತರಣೆಗೊಂಡಿದೆ. ವಾರ್ಷಿಕ ಸರಾಸರಿ 1.90 ರಿಂದ 2.36 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಈ ವರ್ಷ ನೀರಿನ ಸೌಲಭ್ಯ ಹೆಚ್ಚಾಗಿದ್ದರಿಂದ ಹೊಸದಾಗಿ 96,659 ಹೆಕ್ಟೇರ್ ಪ್ರದೇಶದಲ್ಲಿ ರೈತರು ಕಬ್ಬು ನಾಟಿ ಮಾಡಿದ್ದಾರೆ.

    ಕೃಷಿ ವಿಸ್ತರಣೆ: 2019-20ನೇ ಸಾಲಿನ ಅವಧಿಯಲ್ಲಿ ಜಿಲ್ಲೆಯ 2.36 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿತ್ತು. ಅದರಲ್ಲಿ ಕುಳೆ ಕಬ್ಬು- 1,65,398 ಹೆಕ್ಟೇರ್, ಹೊಸ ಕಬ್ಬು 70,753 ಹೆಕ್ಟೇರ್ ಪ್ರದೇಶಲ್ಲಿ ಬೆಳೆಯಲಾಗಿತ್ತು. 2020-21ನೇ ಸಾಲಿನ ಅವಧಿಯಲ್ಲಿ 2.64 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಅದರಲ್ಲಿ ಕುಳೆ ಕಬ್ಬು 1.68 ಲಕ್ಷ ಹೆಕ್ಟೇರ್, ಹೊಸ ಕಬ್ಬು 96.65 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 25 ಸಾವಿರ ಹೆಕ್ಟೇರ್ ಕಬ್ಬು ಪ್ರದೇಶ ವಿಸ್ತರಣೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಅಪಾರ ಬೆಳೆಹಾನಿ: ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ ರೈತರು ಮುಂಗಡವಾಗಿ ಸಕ್ಕರೆ ಕಾರ್ಖಾನೆಗಳಿಂದ ಕಬ್ಬಿನ ಬೀಜ, ರಸಗೊಬ್ಬರ ಪಡೆದು 70,753 ಹೆಕ್ಟೇರ್ ಪ್ರದೇಶದಲ್ಲಿ ಹೊಸದಾಗಿ ಕಬ್ಬು ನಾಟಿ ಮಾಡಿದ್ದರು. ಆದರೆ, ಅತಿವೃಷ್ಟಿಯಿಂದ ಕಬ್ಬು ಜಲಾವೃತಗೊಂಡು ಹಾನಿಯಾಗಿದ್ದರಿಂದ ಬೆಳೆಯುವ ಪ್ರದೇಶ ಕಡಿಮೆಯಾಗಿತ್ತು. ಈ ವರ್ಷ ನದಿ, ಕೊಳವೆ, ತೆರೆದ ಬಾವಿ ಅವಲಂಬಿತ ರೈತರೇ ಹೆಚ್ಚು ಪ್ರಮಾಣದಲ್ಲಿ ಕಬ್ಬು ನಾಟಿ ಮಾಡಿರುವುದು ವಿಶೇಷ.

    ಕಾರ್ಖಾನೆಗಳ ನುರಿಸುವ ಮಿತಿಯೂ ಹೆಚ್ಚಳ ಸಾಧ್ಯತೆ

    ಕಳೆದ ನಾಲ್ಕೈದು ವರ್ಷಗಳ ಅವಧಿಯಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದಾಗಿ ಕಬ್ಬು ಬೆಳೆ ಇಳುವರಿ ಕಡಿಮೆಯಾಗಿದೆ. 2018-19ನೇ ಸಾಲಿನಲ್ಲಿ ಜಿಲ್ಲೆಯ 25 ಸಕ್ಕರೆ ಕಾರ್ಖಾನೆಗಳು 15,806,272 ಮೆಟ್ರಿಕ್ ಟನ್ ಕಬ್ಬು ನುರಿಸಿ 17,92,341 ಮೆ.ಟನ್ ಸಕ್ಕರೆ ಉತ್ಪಾದನೆ ಮಾಡಿದ್ದವು. ಆದರೆ, 2019-20ನೇ ಸಾಲಿನಲ್ಲಿ ಸಂಭವಿಸಿದ್ದ ಪ್ರವಾಹದಿಂದಾಗಿ ಶೇ. 22ರಷ್ಟು ಕಬ್ಬು ಜಲಾವೃತಗೊಂಡಿತ್ತು. ಇದರ ಪರಿಣಾಮದಿಂದ ಸಕ್ಕರೆ ಕಾರ್ಖಾನೆಗಳು ಸುಮಾರು 11,054,345 ಮೆಟ್ರಿಕ್ ಟನ್ ಕಬ್ಬು ನುರಿಸಿದ್ದವು. ಆದರೆ, ಪ್ರಸಕ್ತ ವರ್ಷ ಶೇ. 25ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆಯುತ್ತಿರುವುದರಿಂದ ಕಟಾವಿನ ಬಳಿಕ ನುರಿಸುವ ಮಿತಿಯೂ ಹೆಚ್ಚಾಗಲಿದೆ ಎನ್ನುತ್ತಾರೆ ಕೃಷಿ ಅಧಿಕಾರಿಗಳು.

    ಪ್ರಸಕ್ತ ವರ್ಷ ಉತ್ತಮ ಮಳೆ ಮತ್ತು ಕಾಲುವೆಗಳಿಗೆ ನಿರಂತವಾಗಿ ನೀರು ಬಿಟ್ಟಿರುವುದರಿಂದ ಜಿಲ್ಲೆಯಲ್ಲಿ ಕಬ್ಬು ಬೆಳೆಯುವ ಪ್ರದೇಶ ವಿಸ್ತರಣೆಯಾಗಿದೆ. ಹೊಸದಾಗಿ 96 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಟಿಯಾಗಿದೆ. ಕಬ್ಬು ವಾರ್ಷಿಕ ಬೆಳೆಯಾಗಿರುವುದರಿಂದ ಆದಾಯಕ್ಕಾಗಿ ಕಬ್ಬಿನ ಜತೆಗೆ ಇತರ ಬೆಳೆಯನ್ನೂ ಬೆಳೆಯಲು ಮುಂದಾಗಬೇಕು.
    | ಶಿವನಗೌಡ ಪಾಟೀಲ ಕೃಷಿ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕ, ಬೆಳಗಾವಿ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts