More

    ಬರ ಘೋಷಣೆಗೆ ಕೇಂದ್ರ ಅಡ್ಡಿ; ಸಚಿವ ಕೃಷ್ಣಬೈರೇಗೌಡ

    ಬೆಂಗಳೂರು ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದರಿಂದ 120 ತಾಲೂಕುಗಳಲ್ಲಿ ಬರ ಆವರಿಸಿದೆ. ಬಹಳಷ್ಟು ಕಡೆ ಬಿತ್ತಿದ ಬೆಳೆಗಳು ಒಣಗಲಾರಂಭಿಸಿವೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿದರು.

    ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಮಂಗಳವಾರ ನಡೆದ ಸಚಿವ ಸಂಪುಟದ ಉಪಸಮಿತಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ನಂತರ ಸುದ್ದಿಗಾರರಿಗೆ ವಿವರಿಸಿ, ಕೇಂದ್ರ ಸರ್ಕಾರ ವಿಧಿಸಿದ ಮಾನದಂಡಗಳ ಪ್ರಕಾರ ತಕ್ಷಣಕ್ಕೆ ಬರ ಘೋಷಣೆ ಅಸಾಧ್ಯ ಎಂದರು.

    ಅಧಿಕೃತ ಬರ ೋಷಣೆಗೆ ನಿರ್ದಿಷ್ಟ ಮಾರ್ಗಸೂಚಿ, ಅರ್ಜಿ ನಮೂನೆಯನ್ನು ಒದಗಿಸಿದೆ. ಆ ಪ್ರಕಾರ ಬರಪೀಡಿತ ತಾಲೂಕುಗಳ ಆಯ್ದ 10 ಗ್ರಾಮಗಳಲ್ಲಿ ತಲಾ ಐದು ಬೆಳೆಗಳ ಸ್ಥಳ ಸಮೀಕ್ಷೆ ನಡೆಸಿ, ಶೇ.60ಕ್ಕಿಂತ ಹೆಚ್ಚು ಬೆಳೆ ಹಾನಿಯಾಗಿದ್ದರೆ ಬರಪೀಡಿತವೆಂದು ಪರಿಗಣಿಸಬೇಕಾಗುತ್ತದೆ.

    ಕಳವಳಕಾರಿ ಸ್ಥಿತಿ

    ಮುಂಗಾರು ಹಂಗಾಮಿನ ಬಿತ್ತನೆ ಗುರಿಗೆ ಹೋಲಿಸಿದರೆ ಬಿತ್ತನೆ ಕಡಿಮೆಯಾಗಿದೆ. ಬಿತ್ತಿದ ಬೆಳೆಗಳು ಬಹಳಷ್ಟು ಕಡೆಗಳಲ್ಲಿ ಒಣಗಲಾರಂಭಿಸಿದ್ದು, ಬರ ಪರಿಹಾರ ಕ್ರಮಕೈಗೊಳ್ಳಲು ಸರ್ಕಾರಕ್ಕೆ ರೈತರು ಮನವಿ ಮಾಡಿದ್ದಾರೆ.

    ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಸೆಪ್ಟೆಂಬರ್ 30ರವರೆಗೂ ವಾಡಿಕೆಗಿಂತ ಕಡಿಮೆ ಪ್ರಮಾಣದ ಮಳೆಯಾಗಲಿದೆ. ಸಂಭಾವ್ಯ ಕಳವಳಕಾರಿ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಸನ್ನದ್ಧವಾಗಿದೆ.

    ಕುಡಿಯುವ ನೀರಿನ ಅಭಾವ ತಲೆದೋರಿದ ಗ್ರಾಮಗಳು, ನಗರ-ಪಟ್ಟಣಗಳ ವಾರ್ಡ್‌ಗಳಲ್ಲಿ ಪರ್ಯಾಯ ವ್ಯವಸ್ಥೆಯಾಗಿದೆ. ಕೆಲವು ತಾಲೂಕುಗಳಲ್ಲಿ 15 ವಾರಗಳು, ಇನ್ನೂ ಕೆಲವು ತಾಲೂಕುಗಳಲ್ಲಿ 34 ವಾರಗಳಿಗೆ ಆಗುವಷ್ಟು ಮೇವಿನ ದಾಸ್ತಾನಿದೆ.

    10 ದಿನಗಳಲ್ಲಿ ವರದಿ

    ಕೇಂದ್ರ ಸರ್ಕಾರದ ನೀಡಿದ ನಿರ್ದಿಷ್ಟ ಅರ್ಜಿ ನಮೂನೆಯಂತೆ ಬರ ಆವರಿಸಿದ ತಾಲೂಕುಗಳಲ್ಲಿ ಕಂದಾಯ ಮತ್ತು ಕೃಷಿ ಇಲಾಖೆಗಳ ಅಧಿಕಾರಿಗಳಿಗೆ ಜಂಟಿಯಾಗಿ ಸ್ಥಳ, ಬೆಳೆ ಸಮೀಕ್ಷೆ ನಡೆಸಲು ಸೂಚಿಸಲಾಗಿದೆ.

    ಬರಗಾಲದ ಛಾಯೆ ಆವರಿಸಿರುವ ಎಲ್ಲ 120 ತಾಲೂಕುಗಳು ಬದಲು 75 ತಾಲೂಕುಗಳ ಆಯ್ದ 10 ಗ್ರಾಮಗಳಲ್ಲಿ ತಲಾ ಐದು ಬೆಳೆಗಳ ಸಮೀಕ್ಷೆ ನಡೆಯಲಿದೆ.

    ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿ ವರದಿ ಸಲ್ಲಿಸುವುದಕ್ಕೆ 10 ದಿನಗಳ ಗಡುವು ವಿಧಿಸಿದೆ. ವರದಿ ಪ್ರಕಾರ ಬೆಳೆ ಹಾನಿಯು ಶೇ.50ಕ್ಕಿಂತ ಅಧಿಕವಾಗಿದ್ದರೆ ಬರ ಘೋಷಣೆಗೆ ಕೇಂದ್ರಕ್ಕೆ ಪತ್ರ ಬರೆಯಲು ತೀರ್ಮಾನಿಸಲಾಗಿದೆ ಎಂದು ಕೃಷ್ಣಬೈರೇಗೌಡ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts