More

    ದಾವಣಗೆರೆಯಲ್ಲಿ ಮೊದಲ ಮಳೆಯ ಸಂತಸ

    ದಾವಣಗೆರೆ: ಬಿಸಿಲಿನಿಂದ ಬೆಂಗಾಡಾಗಿದ್ದ ದಾವಣಗೆರೆ ಜಿಲ್ಲೆಯಲ್ಲಿ ವರ್ಷದ ಮೊದಲ ಮಳೆ ಹನಿದಿದೆ. ಅಲ್ಲಲ್ಲಿ ಇಣುಕಿದ ಮೋಡ ಕವಿದ ವಾತಾವರಣ, ಬೀಸಿದ ತಂಗಾಳಿ ಜಿಲ್ಲೆಯ ಜನರಲ್ಲಿ ಸಂತಸ ಮೂಡಿಸಿತು.
    ಹಲವು ದಿನಗಳಿಂದ 38ರಿಂದ 40 ಡಿಗ್ರಿ ಸೆಲ್ಸಿಯಸ್‌ವರೆಗೆ ದಾಟಿದ್ದ ಬಿಸಿಲಿನ ತಾಪದಿಂದ ಜನರು ಹೈರಾಣಾಗಿದ್ದರು. ಮನೆ-ಕಚೇರಿಗಳಲ್ಲಿ ಹಗಲು-ರಾತ್ರಿ ಫ್ಯಾನ್, ಏರ್‌ಕೂಲರ್‌ಗಳ ಅವಲಂಬನೆ ಹೆಚ್ಚಿತ್ತು.  
    ಶುಕ್ರವಾರ ಸಂಜೆ ಹೊತ್ತಿಗೆ ವರುಣದೇವ ಇಳೆಗೆ ಇಳಿಯುತ್ತಿದ್ದಂತೆ ಅನೇಕರು ಮನೆಯಿಂದ ಹೊರಗೆ ಬಂದು ಮೊದಲ ಮಳೆ ಅನುಭವ ಕಣ್ತುಂಬಿಕೊಂಡರು. ದೇವರ ಪೂಜೆ ಜತೆಗೆ ನಿತ್ಯ ವರುಣನಿಗೆ ಮೊರೆಯಿಡುತ್ತಿದ್ದವರ ಕಣ್ಣುಗಳಲ್ಲಿ ಆನಂದ ಅರಳಿತು. ಯುವಕರು ಮಳೆಯ ಸೆಲ್ಫೀ, ಫೋಟೋ ಹಾಗೂ ವಿಡಿಯೋ ಮಾಡುತ್ತಿದ್ದರು.
    ದಿಢೀರ್ ಮಳೆಯ ಸಿಂಚನ ಆಗುತ್ತಿದ್ದಂತೆ ಪಾದಚಾರಿಗಳು, ವಾಹನ ಸವಾರರು ಮರ, ಅಂಗಡಿ ಮುಂಗಟ್ಟುಗಳ ಬಳಿ ಆಶ್ರಯ ಪಡೆದರೆ,  ಕೆಲವೆಡೆ ಚೆಕ್‌ಪೋಸ್ಟ್ ಸಿಬ್ಬಂದಿ ಕೂಡ ಮಳೆಯಲ್ಲಿ ತೊಯ್ದು ಮನಸ್ಸು ಹಗುರ ಮಾಡಿಕೊಂಡರು.
    ದಾವಣಗೆರೆ ನಗರದಲ್ಲಿ 40 ನಿಮಿಷಕ್ಕೂ ಹೆಚ್ಚು ಕಾಲ ಸುರಿದ ರೇವತಿ ಮಳೆಯನ್ನು ಸ್ವಾಗತಿಸಲಾಯಿತು. ಹರಿಹರ ತಾಲೂಕಿನ ಮಲೇಬೆನ್ನೂರು, ಜಗಳೂರು ತಾಲೂಕಿನ ಬಿಳಿಚೋಡು, ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಹೋಬಳಿಗಳ ಸುತ್ತಮುತ್ತ ಗುಡುಗು ಮಿಂಚು ಸಹಿತ ಉತ್ತಮ ಮಳೆಯಾಗಿದೆ. ಚನ್ನಗಿರಿಯಲ್ಲಿಯೂ ಜಿಟಿಜಿಟಿ ಮಳೆ ಸದ್ದಾಯಿತು.ಹೊನ್ನಾಳಿ ನಗರಗಳಲ್ಲಿ ಕೆಲ ನಿಮಿಷಕ್ಕೆ ಮಳೆ ಸ್ತಬ್ಧವಾಯಿತಾದರೂ ನೆಲ ತಂಪಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts