More

    2.50 ಲಕ್ಷ ಹೆಕ್ಟೇರ್ ಭೂಮಿ ನೀರಾವರಿ

    ಬೆಳಗಾವಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೇರಿ ಎರಡೂವರೆ ವರ್ಷದಲ್ಲಿ ಹೊಸದಾಗಿ 2.50 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಿದ್ದು, ಇದು ಬಿಜೆಪಿ ಸರ್ಕಾರದ ಸಾಧನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.

    ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ 74ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 28 ಲಕ್ಷ ಹೆಕ್ಟೇರ್ ನೀರಾವರಿ ಪ್ರದೇಶವಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬರೊಬ್ಬರಿ 2.50 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿದ್ದೇವೆ. ಇನ್ನೂ 10 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದು ಬಾಕಿ ಉಳಿದಿದೆ. ಇದರಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಒಳಗೊಂಡಿದೆ ಎಂದು ವಿವರಿಸಿದರು.

    ನೀರಾವರಿ (ಉತ್ತರ) ವಲಯ ವ್ಯಾಪ್ತಿಯಲ್ಲಿ ಪ್ರಮುಖವಾಗಿ ಘಟಪ್ರಭಾ, ಮಾರ್ಕಂಡೇಯ, ಬಳ್ಳಾರಿ ನಾಲಾ, ಕಿಣಿಯೆ ಯೋಜನೆ, ಧೂದಗಂಗಾ ಹಾಗೂ ಹಿಪ್ಪರಗಿ ಯೋಜನೆಗಳ ವ್ಯಾಪ್ತಿಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಪ್ರಸ್ತುತ ತುಬಚಿ-ಬಬಲೇಶ್ವರ, ಬಸವೇಶ್ವರ (ಕೆಂಪವಾಡ), ವೆಂಕಟೇಶ್ವರ, ಗೊಡಚಿನಮಲ್ಕಿ, ಚಚಡಿ, ಮುರಗೋಡ, ಶ್ರೀರಾಮೇಶ್ವರ, ವೀರಭದ್ರೇಶ್ವರ, ಸಾಲಾಪುರ ಹೀಗೆ ಒಟ್ಟು 9 ಏತ ನೀರಾವರಿ ಯೋಜನೆಗಳು ಚಾಲ್ತಿಯಲ್ಲಿವೆ. ಈ 9 ನೀರಾವರಿ ಯೋಜನೆಗಳಿಂದ ಬೆಳಗಾವಿ ಜಿಲ್ಲೆಯ 6 ತಾಲೂಕುಗಳ 80,162 ಹೆಕ್ಟೇರ್, ಬಾಗಲಕೋಟೆಯ ಮೂರು ತಾಲೂಕುಗಳ 13,869 ಹೆಕ್ಟೇರ್ ಹಾಗೂ ವಿಜಯಪುರ ಜಿಲ್ಲೆಯ 44,375 ಹೆಕ್ಟೇರ್ ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ. ಈ ಮೇಲ್ಕಂಡ ಏತ ನೀರಾವರಿ ಯೋಜನೆಗಳಿಗೆ ಈವರೆಗೆ 5380 ಕೋಟಿ ರೂಪಾಯಿ ವೆಚ್ಚವಾಗಿದೆ. ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ 5 ಕೆರೆ ತುಂಬುವ ಯೋಜನೆಗೆ 273 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದರು.

    ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿ ಶಿಕ್ಷಣ ಪಡೆಯುತ್ತಿರುವ 99952 ರೈತ ಮಕ್ಕಳಿಗೆ ಒಟ್ಟು 38.46 ಕೋಟಿ ರೂ. ಶಿಷ್ಯವೇತನವನ್ನು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರ ನಗದು ಹಣ ವರ್ಗಾಗಣೆ ಮಾಡಲಾಗಿದೆ. ರೈತರ ಆದಾಯ ಹೆಚ್ಚಿಸಲು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯಡಿ, 11ನೇ ಕಂತಿನಲ್ಲಿ ಜಿಲ್ಲೆಯ ಒಟ್ಟು 5.59 ಲಕ್ಷ ರೈತ ಕುಟುಂಬಗಳಿಗೆ 111.78 ಕೋಟಿ ರೂ. ಖಾತೆಗಳಿಗೆ ಜಮೆ ಮಾಡಲಾಗಿದೆ. ಪ್ರಧಾನ ಮಂತ್ರಿ ಆತ್ಮನಿರ್ಭರ ಯೋಜನೆಯಡಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಉತ್ತೇಜನಕ್ಕೆ ಜಿಲ್ಲೆಯಲ್ಲಿ ಇಲ್ಲಿಯವರೆಗೆ 236 ಘಟಕಗಳಿಗೆ ಬ್ಯಾಂಕ್ ನಿಂದ ಸಾಲ ಸೌಲಭ್ಯ ಒದಗಿಸಲಾಗಿದೆ ಎಂದು ವಿವರಿಸಿದರು.

    ಶಾಸಕ ಅನಿಲ ಬೆನಕೆ, ಪ್ರಾದೇಶಿಕ ಆಯುಕ್ತ ಎಂ.ಜಿ.ಹಿರೇಮಠ, ಉತ್ತರ ವಲಯ ಐಜಿಪಿ ಎನ್.ಸತೀಶ್ ಕುಮಾರ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಎಸ್‌ಪಿ ಸಂಜೀವ ಪಾಟೀಲ, ಸಿಇಒ ದರ್ಶನ್. ಹೆಚ್.ವಿ ಇತರರಿದ್ದರು.

    279.95 ಎಕರೆ ಅಭಿವೃದ್ಧಿ

    ಕೆಐಎಡಿಬಿ ವತಿಯಿಂದ ಇಲ್ಲಿಯವರೆಗೆ ಕಿತ್ತೂರು ಕೈಗಾರಿಕಾ ಪ್ರದೇಶದಲ್ಲಿ 275.12 ಎಕರೆ ಜಮೀನು ಅಭಿವೃದ್ಧಿಪಡಿಸಲಾಗಿದ್ದು, 135 ಉದ್ಯಮಿಗಳಿಗೆ 83.18 ಎಕರೆ ಹಂಚಿಕೆ ಮಾಡಲಾಗಿದೆ. ಕಣಗಲಾ ಕೈಗಾರಿಕಾ ಪ್ರದೇಶದಲ್ಲಿ 818 ಎಕರೆ ಜಮೀನು ಅಭಿವೃದ್ಧಿಪಡಿಸಲಾಗಿದ್ದು, ಒಟ್ಟಾರೆ 104 ಉದ್ಯಮಿಗಳಿಗೆ 279.95 ಎಕರೆ ಹಂಚಿಕೆ ಮಾಡಲಾಗಿದೆ.ಪ್ರಧಾನ ಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆಗಳ ಮಾರ್ಗಸೂಚಿಯಂತೆ ಜಿಲ್ಲೆಯಲ್ಲಿನ ಗಣಿ ಬಾಧಿತ ಪ್ರದೇಶಗಳಿಗೆ, ಮೂಲಸೌಕರ್ಯ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಡಿ.ಎಂ.ಎಫ್. ಅನುದಾನದಿಂದ ಇದುವರೆಗೆ 24.95 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿ ವೆಚ್ಚ ಮಾಡಲಾಗಿದೆ ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts