More

    ಜಿಲ್ಲೆಯಲ್ಲಿ 146 ನೀರಿನ ಘಟಕ ಬಂದ್

    ಹಾವೇರಿ: ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಗ್ರಾಮೀಣ ಭಾಗದಲ್ಲಿ ನಾಲ್ಕೈದು ವರ್ಷಗಳ ಹಿಂದೆ ಆರಂಭಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ವಹಣೆಯಿಲ್ಲದೇ ಬಾಗಿಲು ಹಾಕುತ್ತಿವೆ. ಇದರಿಂದ ಗ್ರಾಮೀಣ ಜನರಿಗೆ ಕುಡಿಯಲು ಅಶುದ್ಧ ನೀರೇ ಗತಿಯಾಗಿದೆ.

    ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಅಂದಿನ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಕಟ್ಟಕಡೆಯ ವ್ಯಕ್ತಿಯೂ ಕುಡಿಯುವ ನೀರನ್ನು ಅತಿಕಡಿಮೆ ದರದಲ್ಲಿ ಕುಡಿಯಬೇಕು ಎಂಬ ಉದ್ದೇಶದಿಂದ ಎಲ್ಲ ಗ್ರಾಮಗಳಲ್ಲಿಯೂ ಶುದ್ಧ ನೀರಿನ ಘಟಕ ಸ್ಥಾಪಿಸಿದ್ದರು. ಈ ಘಟಕಗಳಿಗೆ ಲಕ್ಷಾಂತರ ರೂ.ಗಳ ವೆಚ್ಚವೇನೋ ಆಯಿತು. ಆದರೆ, ಅನುಷ್ಠಾನ ಅಧಿಕಾರಿಗಳ ನಿರ್ಲಕ್ಷ್ಯಂದ ಅದರ ನೈಜ ಉದ್ದೇಶ ಮಾತ್ರ ಈಡೇರದಂತಾಗಿದೆ. ಇದರಿಂದ ಗ್ರಾಮೀಣ ಜನರು ಅಶುದ್ಧ ನೀರು ಸೇವಿಸಿ ನಿತ್ಯವೂ ಒಂದಿಲ್ಲೊಂದು ಕಾಯಿಲೆಗಳಿಂದ ಬಳಲುವಂತಾಗಿದೆ.

    1 ಘಟಕಕ್ಕೆ 3ರಿಂದ 5 ಲಕ್ಷ ವೆಚ್ಚ: ಪ್ರತಿಯೊಂದು ಘಟಕ ಸ್ಥಾಪನೆಗೆ ಕನಿಷ್ಠ 3ರಿಂದ 5 ಲಕ್ಷ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಆದರೆ, ಅವುಗಳು ಕಾರ್ಯಾರಂಭ ಮಾಡಿ ವರ್ಷ ಕಳೆಯುವುದರೊಳಗಾಗಿ ಬಂದ್ ಆಗುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ಗ್ರಾಪಂನಿಂದಲೇ ಘಟಕಗಳಿಗೆ ನೀರು ಪೂರೈಸಲಾಗುತ್ತಿದೆ. ಅಲ್ಲದೆ, 20 ಲೀಟರ್ ಕ್ಯಾನ್​ಗೆ 5 ರೂ. ದರವನ್ನು ನಿರ್ವಹಣೆಗಾಗಿ ಪಡೆಯಲಾಗುತ್ತಿದೆ. ಆದರೂ ಅವುಗಳ ನಿರ್ವಹಣೆ ಮಾತ್ರ ಸಾಧ್ಯವಾಗದೇ ಇರುವುದು ಜನರ ಬಗೆಗೆ ಸರ್ಕಾರ ಹಾಗೂ ಅಧಿಕಾರಿಗಳಿಗೆ ಇರುವ ಕಾಳಜಿಯನ್ನು ತೋರಿಸುತ್ತಿದೆ.

    ಸಚಿವರ ಸೂಚನೆ ನಂತರ ಪರಿಶೀಲನೆ: ಗ್ರಾಮೀಣ ಜನರಿಗೆ ಸ್ಥಾಪಿಸಿದ್ದ ಶುದ್ಧ ನೀರಿನ ಘಟಕಗಳು ಸರಿಯಾಗಿಲ್ಲ ಎಂಬ ದೂರು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಬಂದಿತ್ತು. ಇತ್ತೀಚೆಗೆ ಜಿಲ್ಲೆಯಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಎಷ್ಟು ಸ್ಥಗಿತಗೊಂಡಿವೆ. ಎಷ್ಟು ಚಾಲ್ತಿಯಿವೆ ಎಂಬ ಮಾಹಿತಿಯನ್ನು ಸಮೀಕ್ಷೆ ನಡೆಸಿ ಕೊಡಬೇಕು. ಪಿಡಿಒಗಳೇ ಸಮೀಕ್ಷೆ ನಡೆಸಬೇಕು. ಅದರ ಪರಿಶೀಲನೆ ವೇಳೆಯಲ್ಲಿ ತಪ್ಪು ಕಂಡು ಬಂದರೆ ಕ್ರಮ ಕೈಗೊಳ್ಳುತ್ತೇನೆ ಎಂಬ ಎಚ್ಚರಿಕೆ ನೀಡಿದ್ದರು. ಅವರ ಸೂಚನೆಯಂತೆ ಜಿಲ್ಲೆಯಲ್ಲಿ ಪರಿಶೀಲನೆ ನಡೆಸಿದಾಗ ಒಟ್ಟು 727 ಘಟಕಗಳಲ್ಲಿ 146 ಘಟಕಗಳು ಸ್ಥಗಿತಗೊಂಡಿರುವ ಮಾಹಿತಿ ಬೆಳಕಿಗೆ ಬಂದಿದೆ. ಇದಕ್ಕೂ ಮುನ್ನ ಅಧಿಕಾರಿಗಳು ಪ್ರತಿಯೊಂದು ಪ್ರಗತಿ ಪರಿಶೀಲನಾ ಸಭೆಯಲ್ಲಿ ಸ್ಥಗಿತಗೊಂಡ ಘಟಕಗಳ ಸಂಖ್ಯೆ ಕೇವಲ 97ರಷ್ಟು ಮಾತ್ರ ಇತ್ತು. ಇದರಿಂದ ಅಧಿಕಾರ ನಿಜಬಣ್ಣವೂ ಬಯಲಾಗಿದೆ.

    ಜಿಲ್ಲೆಗೆ ಒಟ್ಟು 772 ಶುದ್ಧ ಕುಡಿಯುವ ನೀರಿನ ಘಟಕಗಳು ಮಂಜೂರಾಗಿದ್ದು, ಇದರಲ್ಲಿ 727 ಘಟಕಗಳನ್ನು ಆರಂಭಿಸಲಾಗಿದೆ. ಇದರಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಿಂದ 289, ಕೆಆರ್​ಐಡಿಎಲ್(ಲ್ಯಾಂಡ್ ಆರ್ವಿು) 213, ಸಹಕಾರ ಇಲಾಖೆಯಿಂದ 139 ಹಾಗೂ ಇನ್ನಿತರ ಇಲಾಖೆಗಳಿಂದ 131 ಘಟಕಗಳನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿ ಈಗ 146 ಘಟಕಗಳು ಬಂದ್ ಆಗಿವೆ. ಪಿಆರ್​ಇಡಿ ಇಲಾಖೆಯ 40, ಕೆಆರ್​ಐಡಿಎಲ್ ವಿಭಾಗದ 71, ಸಹಕಾರ ಇಲಾಖೆಯಡಿಯಲ್ಲಿರುವ 18 ಇತರೆ ಇಲಾಖೆಗಳಿಂದ ಅಳವಡಿಸಿದ್ದ 17 ಆರ್​ಒ ಪ್ಲಾಂಟ್​ಗಳು ಬಾಗಿಲು ಮುಚ್ಚಿವೆ.

    ನಿರ್ವಹಣೆಯೇ ಇಲ್ಲ: ಸ್ಥಗಿತಗೊಂಡಿರುವ ಘಟಕಗಳನ್ನು ದುರಸ್ತಿಗೊಳಿಸುವ ಕಾರ್ಯವೇ ಆಗುತ್ತಿಲ್ಲ ಎಂಬುದು ಜನರ ಆರೋಪವಾಗಿದೆ. ಸಂಬಂಧಪಟ್ಟ ಇಲಾಖೆಗಳು ಸ್ಥಳೀಯ ಸಂಸ್ಥೆಗಳಿಗೆ ವಾರ್ಷಿಕ ನಿರ್ವಹಣೆ ಗುತ್ತಿಗೆ ಕೊಡುತ್ತಿವೆ. ಈಗ ಮತ್ತೆ 420 ಘಟಕಗಳ ನಿರ್ವಹಣೆಗೆ ಟೆಂಡರ್ ಕರೆಯಲಾಗಿದೆ. ಪ್ರತಿ ತಿಂಗಳು ಸರಾಸರಿ 3 ಸಾವಿರ ರೂ.ಗಳನ್ನು ನಿರ್ವಹಣೆಗೆ ನೀಡಲಾಗುತ್ತಿದೆ. ಆದರೂ ಘಟಕಗಳು ಬಂದ್ ಆಗುತ್ತಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಈ ಹಿಂದೆ 20 ಲೀಟರ್ ನೀರಿಗೆ 2 ರೂ. ಪಡೆಯುತ್ತಿದ್ದುದನ್ನು 5 ರೂ.ಗೆ ಹೆಚ್ಚಿಸಿದ್ದಕ್ಕೆ ಅನೇಕ ಗ್ರಾಮಗಳಲ್ಲಿ ಘಟಕ ಬಂದ್ ಆಗಿವೆ ಎನ್ನುತ್ತಾರೆ ಅಧಿಕಾರಿಗಳು.

    ಜಿಲ್ಲೆಯಲ್ಲಿ 146 ಶುದ್ಧ ನೀರಿನ ಘಟಕಗಳನ್ನು ಪುನರಾರಂಭಿಸಲು ಮತ್ತು ನಿರ್ವಹಣೆಗೆ ನಾಲ್ಕು ಖಾಸಗಿ ಏಜೆನ್ಸಿಗಳಿಗೆ ಗುತ್ತಿಗೆ ನೀಡಲಾಗಿದೆ. ಘಟಕಗಳ ದುರಸ್ತಿಗೆ 12 ಲಕ್ಷ ರೂ.ಗಳ ಅನುದಾನ ಬಂದಿದೆ. ಶೀಘ್ರದಲ್ಲಿಯೇ ಎಲ್ಲ ಘಟಕಗಳು ಕಾರ್ಯಾರಂಭಗೊಳ್ಳಲಿವೆ.

    | ರಮೇಶ ದೇಸಾಯಿ, ಜಿಪಂ ಸಿಇಒ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts