More

    ಹುಣಸೂರು: ಕರ್ನಾಟಕ ದಲಿತಾ ಚಳವಳಿ ನವನಿರ್ಮಾಣ ವೇದಿಕೆಯಿಂದ ದಲಿತರು ಮತ್ತು ಆದಿವಾಸಿಗಳ ಭೂಮಿ ಕುರಿತಾಗಿನ ಸಮಸ್ಯೆಗಳನ್ನು ಬಗೆಹರಿಸುವ ಉದ್ದೇಶದಿಂದ ನಮ್ಮ ಭೂಮಿ ನಮ್ಮ ಹಕ್ಕು ಎಂಬ ಭೂ ಚಳವಳಿಯನ್ನು ಹಮ್ಮಿಕೊಳ್ಳಲಾಗುವುದು ಎಂದು ವೇದಿಕೆಯ ಮುಖ್ಯಸ್ಥ ಹರಿಹರ ಆನಂದಸ್ವಾಮಿ ಹೇಳಿದರು.

    ನಗರದ ಡೀಡ್ ತರಬೇತಿ ಕೇಂದ್ರದಲ್ಲಿ ಗುರುವಾರ ಹುಣಸೂರು ಭೂ ಸಮಸ್ಯೆಗಳ ಒಂದು ನೋಟ ವಿಷಯ ಕುರಿತಾಗಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಹುಣಸೂರು ದಲಿತ ಚಳವಳಿ ಹಾಗೂ ಆದಿವಾಸಿ ಚಳವಳಿಗಳ ತವರು ಭೂಮಿಯಾಗಿದೆ. ದೇವರಾಜ ಅರಸರು ಶೋಷಿತ ಸಮುದಾಯಗಳಿಗೆ ದನಿಯಾಗಿ ಉಳುವವನೇ ಭೂಮಿ ಒಡೆಯ ಕಾಯ್ದೆಯ ಮೂಲಕ ಭೂಮಿ ನೀಡಿದ್ದರು. ಆದರೆ 4-5 ದಶಕಗಳೇ ಕಳೆದರೂ ಇಂದಿಗೂ ಭೂಮಿಯ ಹಕ್ಕನ್ನು ಪಡೆಯಲು ದಲಿತರು ಮತ್ತು ಆದಿವಾಸಿಗಳು ಪಡೆಯುವಲ್ಲಿ ವಿಫಲರಾಗಿದ್ದೇವೆ. ಸಮಸ್ಯೆಯ ಪರಿಹಾರಕ್ಕಾಗಿ ಎಲ್ಲರೂ ಒಂದಾಗಿ ಹೋರಾಡುವ ಅವಶ್ಯಕತೆಯಿದೆ ಎಂದರು.

    ಆದಿಜಾಂಬವ ಸಂಘದ ಮುಖಂಡ ಡಿ. ಕುಮಾರ್ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡದ ಕೆಲ ಸಮುದಾಯಗಳು ಮೀಸಲಾತಿಯ ಲಾಭವನ್ನು ಪರಿಶಿಷ್ಟರ ಒಳಗಿನ ಬಲಿಷ್ಠ ಕೋಮುಗಳ ಆರ್ಭಟದಿಂದ ಮೀಸಲಾತಿಯನ್ನು ದಕ್ಕಿಸಿಕೊಳ್ಳಲು ಆಗುತ್ತಿಲ್ಲ. ಇದು ನಿಲ್ಲಬೇಕೆಂದರೆ ಒಳಮೀಸಲಾತಿಯೊಂದೇ ಪರಿಹಾರ ಎಂದರು.

    ಆದಿವಾಸಿ ಮುಖಂಡರಾದ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಪಿ.ಕೆ. ರಾಮು ಮಾತನಾಡಿ, ಆದಿವಾಸಿಗಳು ಸಲ್ಲಿಸಿರುವ ಅರಣ್ಯ ಭೂಮಿ ಹಕ್ಕುಗಳ ಪ್ರಸ್ತಾವಗಳನ್ನು ಕಾನೂನುಬಾಹಿರವಾಗಿ ಉಪವಿಭಾಗದ ಅರಣ್ಯ ಹಕ್ಕು ಸಮಿತಿ ತಿರಸ್ಕರಿಸಿರುವುದರಿಂದ ನಾವು ಮೇಲ್ಮನವಿ ಸಲ್ಲಿಸಿದ್ದರೂ ಹಕ್ಕುಪತ್ರ ನೀಡುವಲ್ಲಿ ಅನ್ಯಾಯವಾಗುತ್ತಿದೆ ಎಂದು ಬೇಸರಿಸಿದರು.

    ಸಭೆಯಲ್ಲಿ ಮುಖಂಡರಾದ ಶಿವಣ್ಣ, ಜಯಣ್ಣ, ವಿಠಲ್ ನಾಣ್ಣಾಚ್ಚಿ ಮಾತನಾಡಿದರು. ಡೀಡ್ ಸಂಸ್ಥೆಯ ನಿರ್ದೇಶಕ ಎಸ್.ಶ್ರೀಕಾಂತ್, ಬೊಮ್ಮಿ, ಶೇಖರ್, ಮನು, ದರ್ಶನ್, ಸ್ವಾಮಿ, ಗೋವಿಂದ, ವೆಂಕಟೇಶ್, ಸುರೇಶ್, ಬಾಬು, ಜವರಯ್ಯ, ಕೃಷ್ಣ ಮುಂತಾದವರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts