More

    ನಮ್ಮ ನಡೆ ಮತಗಟ್ಟೆ ಕಡೆಗೆ ಅಭಿಯಾನ ಯಶಸ್ವಿಯಾಗಲಿ

    ಹುಣಸೂರು: ಏ.21ರಂದು ಆಯೋಜನೆಗೊಂಡಿರುವ ನಮ್ಮ ನಡೆ ಮತಗಟ್ಟೆ ಕಡೆಗೆ ಅಭಿಯಾನವನ್ನು ಪರಿಣಾಮಕಾರಿಯಾಗಿ ಆಯೋಜಿಸುವ ಮೂಲಕ ತಾಲೂಕಿನಲ್ಲಿ ಪ್ರತಿಶತ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಕೆಲಸ ಮಾಡಬೇಕಿದೆ ಎಂದು ತಾಲೂಕು ಚುನಾವಣಾ ನೋಡಲ್ ಅಧಿಕಾರಿ ಶಿವಕುಮಾರ್ ಹೇಳಿದರು.

    ನಗರದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಚುನಾವಣಾ ಆಯೋಗ ಮತ್ತು ಸ್ವೀಪ್ ಸಮಿತಿ ವತಿಯಿಂದ ತಾಲೂಕಿನ 274 ಮತಗಟ್ಟೆಯ ಮತಗಟ್ಟೆ ಅಧಿಕಾರಿಗಳಿಗೆ(ಬಿಎಲ್‌ಒ) ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು .

    ಏ.21ರಂದು ಪ್ರತಿ ಮತಗಟ್ಟೆಯಲ್ಲೂ ನಮ್ಮ ನಡೆ ಮತಗಟ್ಟೆ ಕಡೆಗೆ ಅಭಿಯಾನ ನಡಸಬೇಕು. ಅಂದು ಬೆಳಗ್ಗೆ ಮತಗಟ್ಟೆಯಲ್ಲಿ ಚುನಾವಣಾ ಆಯೋಗ ರೂಪಿಸಿರುವ ಧ್ವಜದ ಆರೋಹಣ ಮಾಡಬೇಕು. ಧ್ವಜಾರೋಹಣದ ವೇಳೆ ಚುನಾವಣಾ ಆಯೋಗ ರೂಪಿಸಿರುವ ನಾ ಭಾರತ ಹಾಡನ್ನು ಹಾಡಬೇಕು. ಈ ವೇಳೆ ಮತದಾರರು ಹಾಜರಿರಬೇಕು. ಮತಗಟ್ಟೆಯ ಬಾಗಿಲು ತೆರೆದಿರಬೇಕು. ಅಂದು ದಿನವಿಡೀ ಬಿಎಲ್‌ಒಗಳು ಮತಗಟ್ಟೆಯಲ್ಲಿ ಕುಳಿತು ಮತದಾರರು ಹೊತ್ತು ತರುವ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯ ಮಾಡಬೇಕು. ಪ್ರತಿ ಮತದಾರರಿಗೂ ತಮ್ಮ ಮತಗಟ್ಟೆ ಯಾವುದೆಂದು ಸಮರ್ಪಕವಾಗಿ ತಿಳಿಸಬೇಕು. ಬಿಎಲ್‌ಒಗಳು ಪ್ರತಿ ಮನೆಗೂ ತೆರಳಿ ಮತದಾರರ ಪಟ್ಟಿ ಮತ್ತು ಬುಕ್‌ಲೆಟ್ ನೀಡುವ ಮೂಲಕ ಅವರಲ್ಲಿ ಮತದಾನದ ಮಹತ್ವದ ಕುರಿತು ಮಾಹಿತಿ ನೀಡಬೇಕು. ತಾಲೂಕಿನಲ್ಲಿ 212 ಮತಗಟ್ಟೆಗಳಲ್ಲಿ ಒಂದೇ ಮತಗಟ್ಟೆ ಇದ್ದು, 9 ಮತಗಟ್ಟೆಗಳಲ್ಲಿ 2ಕ್ಕಿಂತ ಹೆಚ್ಚು ಮತಗಟ್ಟೆಗಳಿವೆ. ಹಾಗಾಗಿ ಮತದಾರರರಿಗೆ ಮತದಾನದ ದಿನ ಯಾವುದೇ ಕಾರಣಕ್ಕೂ ಗೊಂದಲ ಆಗದಂತೆ ನೋಡಿಕೊಳ್ಳಬೇಕು ಎಂದು ಅಸೂಚಿಸಿದರು.

    ಕಳೆದ ಚುನಾವಣೆಯಲ್ಲಿ ತಾಲೂಕಿನಲ್ಲಿ ಶೇ.77.24ರಷ್ಟು ಮತದಾನವಾಗಿದ್ದು, ಈ ಪೈಕಿ ಮಹಿಳಾ ಮತದಾರರು ಶೇ.75.99 ಮತ್ತು ಪುರುಷ ಮತದಾರರು ಶೇ.77.81ರಷ್ಟು ಮತ ಚಲಾಯಿಸಿದ್ದಾರೆ. ಈ ಬಾರಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಪ್ರೇರೇಪಿಸಿಬೇಕು ಎಂದು ಹೇಳಿದರು.

    ಮಾಸ್ಟರ್ ಟ್ರೈನರ್ ಸಂತೋಷ್‌ಕುಮಾರ್ ಮಾತನಾಡಿ, ತಾಲೂಕಿನಲ್ಲಿ ಏ.15 ಮತ್ತು 16ರಂದು ಮನೆಯಲ್ಲಿ ಮತದಾನ ಕಾರ್ಯ ನಡೆಸಲಾಗುವುದು. ತಾಲೂಕಿನಲ್ಲಿ 85 ವರ್ಷ ಮೇಲ್ಪಟ್ಟ 2000ಕ್ಕೂ ಹೆಚ್ಚು ಜನರಿದ್ದರೂ 149 ಜನರು ಮಾತ್ರ ದೈಹಿಕವಾಗಿ ಮತಗಟ್ಟೆಗೆ ತೆರಳಿ ಮತದಾನ ಮಾಡಲು ಶಕ್ತರಲ್ಲ ಎಂಬುದನ್ನು ಬಿಎಲ್‌ಒಗಳು ಗುರುತಿಸಿದ್ದಾರೆ. ಇವರು ಮತದಾನಕ್ಕಾಗಿ 15 ಮತ್ತು 16ರಂದು ಒಟ್ಟು 10 ತಂಡಗಳು ಆಯಾ ಗ್ರಾಮಕ್ಕೆ ಭೇಟಿ ನೀಡಿ ಮತದಾರರ ಮನೆಯಲ್ಲಿಯೇ ವಯೋವೃದ್ಧರಿಂದ ಮತಚಲಾವಣೆಗೆ ಅವಕಾಶ ನೀಡಲಾಗುತ್ತಿದೆ. ಪ್ರತಿ ಮನೆಯಲ್ಲೂ ತಾತ್ಕಾಲಿಕವಾದ ಮತಗಟ್ಟೆಯನ್ನು ಸ್ಥಾಪಿಸಿ ಮತಚಲಾವಣೆಯ ವಿಡಿಯೋ ಮಾಡಿಕೊಳ್ಳಲಾಗುವುದು. ಹಾಗಾಗಿ ಬಿಎಲ್‌ಒಗಳು ಗುರುತಿಸಿದ ಮನೆಯ ಮತದಾರರಿಗೆ ತಮ್ಮ ಮನೆಯಲ್ಲೇ ಇರುವಂತೆ ಕ್ರಮ ವಹಿಸುಬೇಕು. ಮನೆಯೊಂದರ ಮತದಾರ ಎರಡು ದಿನವೂ ಮನೆಯಲ್ಲಿ ಅಲಭ್ಯವಾದರೆ ಅಂತಹ ಮನೆಯ ಪಂಚನಾಮೆಯನ್ನು ಮಾಡಿ ಚುನಾವಣಾ ಆಯೋಗಕ್ಕೆ ವರದಿ ನೀಡಲಾಗುವುದು. ಮತದಾನದ ದಿನ ಮತಗಟ್ಟೆಯಿಂದ 100ಮೀಟರ್ ದೂರದಲ್ಲಿ ಹೆಲ್ಪ್‌ಡೆಸ್ಕ್ ಸ್ಥಾಪಿಸಿ ಬಿಎಲ್‌ಒಗಳು ಮತದಾರರಿಗೆ ಅರಿವು ಮೂಡಿಸುವ, ಮತದಾರರ ಪಟ್ಟಿಯ ಚೀಟಿ ನೀಡುವ ಕಾರ್ಯ ಮಾಡಬೇಕು ಎಂದರು.

    ಸಭೆಯಲ್ಲಿ ಉಪತಹಸೀಲ್ದಾರ್ ನರಸಿಂಹಯ್ಯ, ಪ್ರಕಾಶ್ ಸೇರಿದಂತೆ ಬಿಎಲ್‌ಒಗಳು ಹಾಜರಿದ್ದರು. ಕಡ್ಡಾಯ ಮತದಾನದ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು.

    ಕೆವೈಸಿ ಆ್ಯಪ್ ಬಳಸಿ: ನೋಡಲ್ ಅಧಿಕಾರಿ ಶಿವಕುಮಾರ್ ಮಾತನಾಡಿ, ಮತದಾರರು ತಮ್ಮ ಮೊಬೈಲ್‌ನಲ್ಲಿ ಕೆವೈಸಿ(ನೋ ಯುವರ್ ಕ್ಯಾಂಡಿಡೇಟ್) ಆಪ್ ಡೌನ್‌ಲೋಡ್ ಮಾಡಿಕೊಂಡು ಪರಿಶೀಲಿಸಿದಲ್ಲಿ ತಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಪ್ರತಿಯೊಬ್ಬ ಅಭ್ಯರ್ಥಿಯ ಕುರಿತಾದ ಸಮಗ್ರ ಮಾಹಿತಿ ಲಭ್ಯವಾಗಲಿದೆ. ಆ ಮೂಲಕ ನಿಮ್ಮ ಅಭ್ಯರ್ಥಿಯ ಕುರಿತು ನೀವೂ ತಿಳಿದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts